ಕಾಂಗ್ರೆಸ್ ಪಕ್ಷನಾ, ಪಕ್ಷೇತರನಾ? ಎನ್ನುವ ಗೊಂದಲ ಬಿಟ್ಟರೆ ನನ್ನ ಸ್ಪರ್ಧೆ ಖಚಿತ ಎಂದ ಸುಮಲತಾ

ಮಂಡ್ಯ: ‘ನನ್ನ ಸ್ಪರ್ಧೆ ಖಚಿತ’. ನನ್ನ ಸ್ಪರ್ಧೆ ಬಗ್ಗೆ ಸಾಕಷ್ಟು ಊಹಾಪೋಹ ಹಬ್ಬಿರುವುದರಿಂದ ಫೇಸ್‌ಬುಕ್‌ ಮೂಲಕ ಸ್ಪಷ್ಟನೆ ನೀಡಿದ್ದೇನೆ ಎಂದು ಸುಮಲತಾ ಅಂಬರೀಷ್‌ ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯನ್ನು ವಿರೋಧಿಸಿ ಡಾ.ರವೀಂದ್ರ ಉಪವಾಸ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ನನಗೆ ಸಾಕಷ್ಟು ಫೋನ್‌ ಕರೆಗಳು ಬರುತ್ತಿವೆ. ನನ್ನ ಶಕ್ತಿಯಾಗಿ ನಿಂತಿರುವ ಜನಕ್ಕೆ‌ ಈ ರೀತಿಯ ಸುಳ್ಳು ಸುದ್ದಿ ಆತಂಕ ತರುತ್ತದೆ. ಕೆಲವೊಂದು ಸಲ‌ ಊಹಾಪೋಹದ ಸುದ್ದಿಗಳು ಬರುತ್ತದೆ. ಆ ಸುದ್ದಿ ನಿಜವೇನೋ ಎನ್ನುವ ಭಾವನೆ ಜನರಲ್ಲಿ ಬಂದುಬಿಡುತ್ತದೆ. ಅವರಿಗೆ ನಾನು ಭರವಸೆ ಕೊಡಬೇಕಾಗಿದೆ. ಅದಕ್ಕಾಗಿ ಫೇಸ್‌ಬುಕ್‌ ಮೂಲಕ ಸ್ಪಷ್ಟನೆ ನೀಡಿದ್ದೇನೆ. ನಾವೂ ಅಂತಹ ಸುಳ್ಳು ಸುದ್ದಿಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದಷ್ಟೂ ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಇನ್ನು ಐದು ದಿನ ಸಮಯ ಇದೆ. ಅಲ್ಲಿವರೆಗೂ ಕಾಯಬೇಕಿದೆ. ಆ ಬಳಿಕ ಯಾರ್ಯಾರ ನಿಲುವು ಏನು ಎನ್ನುವುದು ತಿಳಿಯುತ್ತದೆ. ಕೆಲದಿನಗಳಲ್ಲಿ ಟಿಕೆಟ್ ಗೊಂದಲಕ್ಕೆ ತೆರೆಬೀಳಲಿದೆ. ನನಗೆ ಕಾಂಗ್ರೆಸ್ ಪಕ್ಷನಾ ಅಥವಾ ಪಕ್ಷೇತರನಾ ಎನ್ನುವ ಗೊಂದಲವಿದೆ ಅಷ್ಟೆ. ಆದರೆ ನನ್ನ ಸ್ಪರ್ಧೆ ಮಾತ್ರ ಖಚಿತ ಎಂದು ತಿಳಿಸಿದರು.

‘ನನ್ನ ಜನರಿಗಾಗಿ ನನ್ನ ಹೆಜ್ಜೆ’

ಮಂಡ್ಯ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸುಮಲತಾ ಅಂಬರೀಷ್‌ ಸ್ಪರ್ಧೆ ಖಚಿತ ಎಂದು ಈಗಾಗಲೇ ಹೇಳಿದ್ದು, ಫೇಸ್‌ಬುಕ್‌ನಲ್ಲಿ ಸಂಕಲ್ಪದ ಮೂಲಕ ವಿರೋಧಿಗಳಿಗೆ ಸುಮಲತಾ ತಿರುಗೇಟು ನೀಡಿದ್ದಾರೆ. ನನ್ನ ಜನರಿಗಾಗಿ ನನ್ನ ಹೆಜ್ಜೆ’. ನಾವೇನಾದರೂ ಒಳ್ಳೆಯದನ್ನು ಬಯಸಿದಾಗ ಆ ಒಳ್ಳೆಯತನಕ್ಕೆ ಅಡೆ ತಡೆಗಳು ಸಹಜವಾಗಿ ಬರುತ್ತವೆ. ಆದರೆ ಅಡೆತಡೆಗಳನ್ನು ಮೆಟ್ಟಿ ಮುಂದಕ್ಕೆ ಸಾಗುವ ಶಕ್ತಿ ನನಗೆ ಮಂಡ್ಯದ ಜನ ಮತ್ತು ನನ್ನ ಅಂಬರೀಶ್ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)