ನುಗ್ಗಿಕೇರಿ ಆಂಜನೇಯ ದರ್ಶನ

ಧಾರವಾಡ: ಸಂಸದೆ ಸುಮಲತಾ ಅಂಬರೀಷ್ ಅವರು ಪುತ್ರ ಅಭಿಷೇಕ್ ಜತೆ ಶನಿವಾರ ಧಾರವಾಡದ ಪ್ರಸಿದ್ಧ ನುಗ್ಗಿಕೇರಿ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಜಯಕ್ಕಾಗಿ ಪ್ರಾರ್ಥಿಸಿಕೊಂಡಿದ್ದ ಅಂಬರೀಷ್ ಅವರ ಆಪ್ತ, ಉದ್ಯಮಿ ನಾರಾಯಣ ಕಲಾಲ, ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಕರೆಸಿ ವಿಶೇಷ ಪೂಜೆ ಸಲ್ಲಿಸಿ, ಸಕ್ಕರೆ- ತುಪ್ಪದ ತುಲಾಭಾರ ಮಾಡಿಸುವುದಾಗಿ ಸಂಕಲ್ಪ ಮಾಡಿದ್ದರು.

ಅದರಂತೆ ದೇವಸ್ಥಾನಕ್ಕೆ ಆಗಮಿಸಿದ ಸುಮಲತಾ, ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡರು. ನಂತರ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಸುಮಲತಾ ಅವರಿಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪ, ಅಭಿಷೇಕ ಅವರಿಗೆ 100 ಕೆಜಿ ಸಕ್ಕರೆ ಹಾಗೂ 15 ಕೆಜಿ ತುಪ್ಪದ ತುಲಾಭಾರ ನಡೆಸಲಾಯಿತು.

ನಟ ದೊಡ್ಡಣ್ಣ, ನಿರ್ವಪಕ ರಾಕ್​ಲೈನ್ ವೆಂಕಟೇಶ್, ನಿರ್ದೇಶಕರಾದ ಯೋಗರಾಜ್ ಭಟ್, ನಾಗಶೇಖರ, ಉದ್ಯಮಿ ನಾರಾಯಣ ಕಲಾಲ, ಇತರರು ಇದ್ದರು. ಸುಮಲತಾ, ಅಭಿಷೇಕ ಅವರನ್ನು ದೇವಸ್ಥಾನ ವತಿಯಿಂದ ಸನ್ಮಾನಿಸಲಾಯಿತು.

ಸೆಲ್ಪಿಗೆ ಮುಗಿಬಿದ್ದ ಜನ: ಸುಮಲತಾ ಮತ್ತು ಪುತ್ರ ಅಭಿಷೇಕ ಹಾಗೂ ಚಿತ್ರನಟರು ದೇವಸ್ಥಾನಕ್ಕೆ ಆಗಮಿಸುವ ವಿಷಯ ತಿಳಿದು ನೂರಾರು ಜನ ಜಮಾಯಿಸಿದ್ದರು. ಹಲವರು ಮೊಬೈಲ್​ಗಳಲ್ಲಿ ಭಾವಚಿತ್ರ ಸೆರೆಹಿಡಿಯಲು ಮುಗಿಬಿದ್ದಿದ್ದರು. ಅನೇಕರು ಸೆಲ್ಪಿ ತೆಗೆದುಕೊಂಡರು.

ದೇವಸ್ಥಾನ ಟ್ರಸ್ಟ್​ನ ಕೃಷ್ಣ ದೇಸಾಯಿ, ಶ್ರೀಕಾಂತ ದೇಸಾಯಿ, ಪ್ರಲ್ಹಾದ ದೇಸಾಯಿ, ರಾಘವೇಂದ್ರ ದೇಸಾಯಿ, ನರಸಿಂಹ ದೇಸಾಯಿ, ಸಂಜೀವ ದೇಸಾಯಿ, ಋತ್ವಿಜರಾದ ಯೋಗೇಶ ಭಟ್, ಕಾಂತೇಶ ಆಚಾರ್ಯ, ಹೋಳಿಕಟ್ಟಿ ಆಚಾರ್ಯ, ಇತರರು ಇದ್ದರು.

ಬಹಳ ವರ್ಷಗಳ ಹಿಂದೆ ಬಂದಿದ್ದೆ:ಆರೇಳು ವರ್ಷಗಳ ಹಿಂದೆ ಅಂಬರೀಷ್ ಅವರ ಜೊತೆಗೆ ಹು-ಧಾ ನಗರಕ್ಕೆ ಭೇಟಿ ನೀಡಿದ್ದೆ. ಅದಾದ ಬಳಿಕ ಇಂದೇ ಭೇಟಿ ನೀಡುತ್ತಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಈ ಭಾಗದ ಜನರೂ ಮಂಡ್ಯಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದರು. ಎಲ್ಲ ಕಡೆಗಳಲ್ಲೂ ನನ್ನ ಗೆಲುವಿಗೆ ಪೂಜೆ, ಪುನಸ್ಕಾರ ನಡೆಸಿದ್ದರು. ಇದೇ ಸಂದರ್ಭದಲ್ಲಿ ಅಭಿ ಅಭಿನಯದ ಅಮರ ಚಲನಚಿತ್ರ ಸಹ ಬಿಡುಗಡೆಯಾಗಿದೆ. ಹೀಗಾಗಿ ಈ ಭಾಗದಿಂದಲೇ ಚಿತ್ರದ ಪ್ರಚಾರ ಪ್ರಾರಂಭಿಸುತ್ತಿದ್ದೇನೆ. ಅಭಿಮಾನಿಯ ಆಸೆಯಂತೆ ಇಲ್ಲಿ ತುಲಾಭಾರ ಸೇವೆ ಸಲ್ಲಿಸಿದ್ದೇವೆ. ನಮ್ಮಿಬ್ಬರ ತುಲಾಭಾರ ನಡೆಸಿದ್ದು ಮೊದಲ ಬಾರಿಗೆ ಎಂದು ಸಂಸದೆ ಸುಮಲತಾ ಹೇಳಿದರು.

ಮೊದಲ ಬಾರಿ ಬಂದಿದ್ದೇನೆ:ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ತುಲಾಭಾರದ ಹರಕೆ ಹೊತ್ತಿದ್ದರು. ಅಭಿಮಾನಿ ನಾರಾಯಣ ಕಲಾಲ ಅವರು ತುಲಾಭಾರ ಸೇವೆ ಆಯೋಜಿಸಿದ್ದು ಇಲ್ಲಿಗೆ ಬಂದ ನಂತರವೇ ನನಗೆ ತಿಳಿದಿದೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡಕ್ಕೆ ಬಂದಿದ್ದೇನೆ. ಅಮರ ಚಿತ್ರದ ಪ್ರಚಾರ ನಡೆಸಲಿದ್ದು, ಉತ್ತರ ಕರ್ನಾಟಕದ ಜನ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ನಟ ಅಭಿಷೇಕ ಅಂಬರೀಷ್ ಹೇಳಿದರು.

Leave a Reply

Your email address will not be published. Required fields are marked *