ನದಿ ತಟ ಡಂಪಿಂಗ್ ಯಾರ್ಡ್!

ಗಂಗಾಧರ ಕಲ್ಲಪಳ್ಳಿ ಸುಳ್ಯ

ಸ್ವಚ್ಛ ಭಾರತ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿದ್ದು, ಸುಳ್ಯ ನಗರವನ್ನು ಸ್ವಚ್ಛವಾಗಿಸಬೇಕೆಂಬ ಪ್ರಯತ್ನ ನಿರಂತರವಾಗಿದ್ದರೂ ರಸ್ತೆ ಬದಿ ಮತ್ತು ನದಿ ತಟಗಳಲ್ಲಿ ರಾಶಿರಾಶಿ ಕಸ ರಾರಾಜಿಸುತ್ತಿದೆ. ರಸ್ತೆ ಬದಿ ಮತ್ತು ನದಿ ತಟ ಡಂಪಿಂಗ್ ಯಾರ್ಡ್‌ನಂತಾಗಿ ಸ್ವಚ್ಛತೆಯ ಕಲ್ಪನೆಯನ್ನೇ ಅಣಕಿಸುತ್ತಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಹಲವೆಡೆ ತ್ಯಾಜ್ಯ ರಾಶಿ ತುಂಬಿದೆ. ಪಯಸ್ವಿನಿ ನದಿ ತಟದಲ್ಲೂ ಕಸ ಸುರಿಯಲಾಗಿದೆ. ಎಗ್ಗಿಲ್ಲದೆ ಎಸೆಯುತ್ತಿರುವ ಕಸ ರಸ್ತೆ ಬದಿ ಮತ್ತು ನದಿ ತಟದ ಅಂದ ಕೆಡಿಸಿ ಪರಿಸರ ಮಲಿನಗೊಳಿಸುತಿದೆ.

ರಸ್ತೆಯ ಇಕ್ಕೆಲ ಕಸದ ಡಬ್ಬಿ: ಸುಳ್ಯ ತಾಲೂಕಿನಲ್ಲಿ ಸಂಪಾಜೆಯಿಂದ ಕನಕಮಜಲುವರೆಗೆ 37 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲ ಪ್ಲಾಸ್ಟಿಕ್ ತೊಟ್ಟೆಗಳು, ಬಾಟಲಿಗಳು, ಪ್ಲೇಟ್, ಇತರ ಕವರ್‌ಗಳು ಸೇರಿ ಎಲ್ಲೆಂದರಲ್ಲಿ ಕಸದ ರಾಶಿಯೇ ಕಂಡುಬರುತ್ತಿದೆ. ವಾಹನಗಳಲ್ಲಿ ಪ್ರಯಾಣಿಸುವವರೂ ರಸ್ತೆ ಬದಿಗೆ ಕಸ ಎಸೆಯುತ್ತಾರೆ. ಅದು ರಸ್ತೆಯ ಎರಡೂ ಬದಿ ಸಂಗ್ರಹವಾಗಿದ್ದು ಕೆಲವೆಡೆ ಆಹಾರ ಸೇವಿಸಿ ಎಸೆದು ಹೋದ ತಟ್ಟೆಗಳು, ಪ್ಲಾಸ್ಟಕ್ ಬಾಟಲಿಗಳು ರಾಶಿ ಬಿದ್ದಿವೆ. ರಸ್ತೆ ಬದಿ ಎಸೆಯುವ ಆಹಾರ ವಸ್ತುಗಳಿಂದ ದುರ್ನಾತ ಬರುತ್ತಿದ್ದು, ಪ್ರಾಣಿಗಳು ಇದನ್ನು ಕಚ್ಚಿ ರಸ್ತೆಗೆ ಎಳೆದು ತಂದು ಹಾಕುವುದು, ಪ್ರದೇಶದೆಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಹರಡಿರುವುದು ಕಂಡು ಬರುತ್ತದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಾಲು ಸಾವಿರಾರು ವಾಹನಗಳು ಓಡಾಡುತ್ತವೆ. ವಾಹನಗಳಿಂದ ಎಸೆಯಲ್ಪಡುವ ತ್ಯಾಜ್ಯ ರಸ್ತೆ ಬದಿಯನ್ನೇ ಮಲಿನಗೊಳಿಸುತ್ತಿದೆ. ಕೆಲವೆಡೆ ತ್ಯಾಜ್ಯ ರಾಶಿ, ಕೋಳಿ ತ್ಯಾಜ್ಯ ಕಟ್ಟುಗಳನ್ನಾಗಿಸಿ ತಂದು ಸುರಿಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪಂಚಾಯಿತಿಗಳಿಗೂ ಇದು ದೊಡ್ಡ ತಲೆ ನೋವಾಗಿದೆ. ಸಿಸಿ ಕ್ಯಾಮರಾ ಅಳವಡಿಸಿ ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ದಂಡ ವಿಧಿಸುವುದು ಮಾಡಿದರೆ ಸ್ವಲ್ಪಮಟ್ಟನ ಕಡಿವಾಣ ಹಾಕಬಹುದು. ಅಲ್ಲಲ್ಲಿ ಫಲಕ ಹಾಕಿ ಕಸ ಹಾಕುವುದರ ವಿರುದ್ಧ ಎಚ್ಚರಿಕೆಯನ್ನೂ ನೀಡಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ನದಿ ನೀರೂ ಕಲುಷಿತ: ರಸ್ತೆ ಬಿಟ್ಟರೆ ಕಸ ಎಸೆಯಲು ಬಳಕೆಯಾಗುವ ಇನ್ನೊಂದು ನೆಚ್ಚಿನ ತಾಣ ನದಿ ಬದಿ. ಪಯಸ್ವಿನಿ ನದಿ ಬದಿಯಲ್ಲಿ ಹಲವು ಕಡೆ ತ್ಯಾಜ್ಯ ತುಂಬಿದೆ. ನದಿ ಬದಿಗೆ ವಿಹಾರಕ್ಕೆ, ಆಹಾರ ಸೇವನೆಗೆ ಬರುವವರು ಅಲ್ಲೇ ಕಸ, ತ್ಯಾಜ್ಯ ಎಸೆದು ಹೋಗುತ್ತಾರೆ. ವಾಹನದಲ್ಲಿ ಪ್ರಯಾಣಿಸುವವರು ಆಹಾರ ಸೇವನೆಗೆಂದು ನದಿ ಬದಿಗೆ ಬಂದು ಆಹಾರ ಸೇವಿಸಿ ಅಲ್ಲೇ ಕಸ ಬಿಟ್ಟು ಹೋಗುತ್ತಾರೆ. ಈ ರೀತಿ ಬಿಟ್ಟು ಹೋಗುವ ಕಸದಿಂದ ನದಿ, ಹಳ್ಳಗಳ ಬದಿ ತುಂಬಿ ಪರಿಸರ ಮಾಲಿನ್ಯವಾಗಿ ನದಿಯ ನೀರೂ ಕಲುಷಿತಗೊಳ್ಳುತ್ತದೆ.

ಸುಳ್ಯ ಬಸ್ ನಿಲ್ದಾಣ ಬದಿ ತ್ಯಾಜ್ಯ ರಾಶಿ: ಸುಳ್ಯ ಬಸ್ ನಿಲ್ದಾಣ ಸಮೀಪದಲ್ಲೇ ತ್ಯಾಜ್ಯ ರಾಶಿ ತುಂಬಿದೆ. ಬಸ್ ನಿಲ್ದಾಣ ಕೆಳಭಾಗದ ರಸ್ತೆಯ ಮೂಲಕ ಸ್ವಲ್ಪ ಮುಂದೆ ಸಾಗಿದರೆ ಮೂರು ರಸ್ತೆ ಸೇರುವ ಸ್ಥಳ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದೆ. ಎಲ್ಲ ರೀತಿಯ ತ್ಯಾಜ್ಯಗಳೂ ಇಲ್ಲಿ ತುಂಬಿ ತುಳುಕಿದ್ದು ಸ್ವಚ್ಛ ನಗರದ ಕಲ್ಪನೆಯನ್ನೇ ಅಣಕಿಸುವಂತಿದೆ. ಸುತ್ತಲೂ ಜನವಸತಿ ಪ್ರದೇಶಕ್ಕೆ ಹೋಗುವ ಮತ್ತು ನಗರಕ್ಕೆ ಬರುವ ಬಹುಮುಖ್ಯ ರಸ್ತೆಗಳು ಸೇರುವಲ್ಲಿ ಕಸ ತುಂಬಿದ್ದು ತ್ಯಾಜ್ಯ ಎಲ್ಲಡೆ ಹರಡಿ ದುರ್ನಾತ ಬೀರುತ್ತಿದೆ.