ಬರಿಗಾಲಿನಲ್ಲಿ ಓಡಿ ಅಂತಾರಾಷ್ಟ್ರೀಯ ಪದಕ ಪಡೆದ ವಿದ್ಯಾ

ಸುಳ್ಯ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ತರಬೇತಿ, ಅಭ್ಯಾಸ ಇಲ್ಲದೆ ಛಲ ಮತ್ತು ಆತ್ಮಸ್ಥೈರ್ಯದಿಂದ ಬರಿಗಾಲಿನಲ್ಲೇ ಓಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಪದಕ ಪಡೆದು ಗಮನ ಸೆಳೆದಿದ್ದಾರೆ ಸುಳ್ಯ ಸಮೀಪದ ಪೆರಾಜೆ ಬಂಗಾರಕೋಡಿಯ ಬಿ.ಎಚ್.ವಿದ್ಯಾ.

ಇಂಡೋನೇಷಿಯಾದ ಜಕಾರ್ತದಲ್ಲಿ ನಡೆದ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಮತ್ತು ಮೂರು ಬೆಳ್ಳಿ ಪದಕ ಪಡೆಯುವ ಮೂಲಕ ವಿದ್ಯಾ ಸಾಧನೆ ಮೆರೆದಿದ್ದಾರೆ. 35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಪಡೆದ ವಿದ್ಯಾ 400 ಮೀ, 1500 ಮೀ, ಮತ್ತು 3000 ಮೀ. ಓಟದಲ್ಲಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಪಡೆದಿದ್ದಾರೆ.

ಬರಿಗಾಲ ಸಾಧನೆ: ಅ.28ರ ಚಾಂಪಿಯನ್‌ಷಿಪ್‌ನಲ್ಲಿ ಬರಿಗಾಲಿನಲ್ಲಿ ಓಡಿ ನಾಲ್ಕು ಪದಕ ಪಡೆದಿರುವುದು ವಿದ್ಯಾ ಸಾಧನೆ. ಶೂ ಧರಿಸದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದಿದ್ದರೂ ಕೊನೆಗೆ ವಿಶೇಷ ಅನುಮತಿ ಪಡೆದಿದ್ದರು. ಸಾಮಾನ್ಯ ಕೃಷಿ ಕುಟುಂಬದ ಗೃಹಿಣಿಯಾಗಿರುವ ವಿದ್ಯಾ, ಹಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಹಲವು ವರ್ಷಗಳಿಂದ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಬಾರಿ ಭಾಗವಹಿಸಿ, ಮೊದಲ ಪ್ರಯತ್ನವನ್ನೇ ಅವಿಸ್ಮರಣೀಯವಾಗಿಸಿದ್ದಾರೆ.

ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಬಂಗಾರಕೋಡಿಯ ಕೃಷಿಕ ಹರೀಶ್ ಪತ್ನಿ ವಿದ್ಯಾ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ರಂಗತ್ತಮಲೆಯ ಕೂಸಪ್ಪ ಗೌಡ-ಸಣ್ಣಮ್ಮ ದಂಪತಿ ಪುತ್ರಿ. ಮೂರು ಮಕ್ಕಳ ತಾಯಿಯಾಗಿರುವ ಈಕೆ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣದ ಸಂದರ್ಭ ಓಟಗಳಲ್ಲಿ ಭಾಗವಹಿಸುತ್ತಿದ್ದರು. ಬಳಿಕ ಇವರಿಗೆ ಓಟದ ಅಭ್ಯಾಸ ಸಾಧ್ಯವಾಗಿರಲಿಲ್ಲ. ತರಬೇತಿಯನ್ನೂ ಪಡೆದವರಲ್ಲ. ಕೃಷಿ, ಸಂಸಾರದಲ್ಲಿ ತಲ್ಲೀನರಾಗಿದ್ದ ಈಕೆ ಪ್ರಸ್ತುತ ಹಿರಿಯರ ಕ್ರೀಡಾಕೂಟದ ಮೂಲಕ ಪ್ರತಿಭೆ ಪ್ರದರ್ಶಿಸಿದ್ದಾರೆ.

ವಿದ್ಯುತ್, ರಸ್ತೆ ಇಲ್ಲ: ಪೆರಾಜೆ ಸಮೀಪದ ಬಂಗಾರಕೋಡಿಯ ವಿದ್ಯಾ ಮನೆಗೆ ರಸ್ತೆಯೇ ಇಲ್ಲ. 1.5 ಕಿ.ಮೀ.ಕಾಲುದಾರಿಯಲ್ಲಿ ಸಾಗಬೇಕು. ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳನ್ನು ಬೇರೆ ಬೇರೆ ಕಡೆಗಳಲ್ಲಿ ಶಾಲೆಗೆ ಕಳುಹಿಸುತ್ತಿದ್ದಾರೆ. ವಿದ್ಯುತ್ ಸಂಪರ್ಕವೂ ದೊರೆತಿಲ್ಲ. ಈ ಪ್ರದೇಶದ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಸುಳ್ಯದಲ್ಲಿ ಅದ್ದೂರಿ ಸ್ವಾಗತ: ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕ ಪಡೆದು ತವರಿಗೆ ಆಗಮಿಸಿದ ಸಂದರ್ಭ ಬಿ.ಎಚ್.ವಿದ್ಯಾರಿಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಶಾಸಕ ಎಸ್.ಅಂಗಾರ ನೇತೃತ್ವದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿ ಸನ್ಮಾನಿಸಲಾಯಿತು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನಪಂ ಅಧ್ಯಕ್ಷೆ ಶೀಲಾವತಿ ಮಾಧವ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಎ.ಪಿ.ಎಂ.ಸಿ ಅಧ್ಯಕ್ಷ ಅಡ್ಡಂತ್ತಡ್ಕ ದೇರಣ್ಣ ಗೌಡ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಚಂದ್ರಾ ಕೋಲ್ಚಾರ್, ಪಿ.ಎಸ್.ಗಂಗಾಧರ, ಆರ್.ಸಿ.ಅರುಣ್ ರಂಗತ್ತಮಲೆ, ಹರೀಶ್ ರೈ ಉಬರಡ್ಕ, ರಶೀದ್ ಜಟ್ಟಿಪಳ್ಳ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪೆರಾಜೆ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.