ಮತಯಾಚನೆಗೂ ಷರತ್ತು ಅನ್ವಯ!

ಗಂಗಾಧರ ಕಲ್ಲಪಳ್ಳಿ ಸುಳ್ಯ

‘ನಾನು ಹೇಳುವ ಷರತ್ತುಗಳಿಗೆ ನೀವು ಒಪ್ಪುವುದಾದರೆ ಮಾತ್ರ ಮನೆಗೆ ಬಂದು ಮತ ಕೇಳಿ’.

– ಇದು ಮಕ್ಕಳ ತಜ್ಞ ಡಾ.ಬಿ.ಎನ್.ಶ್ರೀಕೃಷ್ಣ ತಮ್ಮ ಮನೆಯ ಗೇಟಿನಲ್ಲಿ ಹಾಕಿದ ಬ್ಯಾನರ್! ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಸಾರ್ವಜನಿಕವಾಗಿಯೇ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದ ಅವರು, ಈ ಬಾರಿಯೂ ಗಮನ ಸೆಳೆದಿದ್ದಾರೆ.

ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಅಭ್ಯರ್ಥಿ, ಪ್ರಚಾರಕರಿಗೆ ಅವರು ವಿಧಿಸಿದ ಷರತ್ತುಗಳು ಹೀಗಿವೆ-
ಪಕ್ಷದ ಚುನಾವಣಾ ಪ್ರಣಾಳಿಕೆಯ ಅನುಷ್ಠಾನ, ರಾಷ್ಟ್ರ ರಕ್ಷಣೆ ಮತ್ತು ಹಿತಾಸಕ್ತಿ ಬಗೆಗಿನ ಬದ್ಧತೆ, ಸಂಸ್ಕೃತಿ ಮತ್ತು ಪರಂಪರೆಗೆ ಬದ್ಧತೆ, ದ್ವಂದ್ವ ನೀತಿ ಸಲ್ಲ, ಅಪರಾಧಿಗಳು, ಉಗ್ರರು, ದೇಶದ್ರೋಹಿಗಳು, ಭ್ರಷ್ಟಾಚಾರಿಗಳನ್ನು ಬೆಂಬಲ ಇಲ್ಲ, ಭ್ರಷ್ಟಾಚಾರ ಇಲ್ಲ, ದುಷ್ಟದ್ರವ್ಯ ಮುಟ್ಟಲಾರೆ, ಎಲ್ಲರ ಕಡೆಗೂ ಸಮಾನ ದೃಷ್ಟಿ, ಪಕ್ಷಪಾತ ರಹಿತ ಧೋರಣೆ, ಸ್ವಚ್ಛತಾ ಅಭಿಯಾನದಲ್ಲಿ ಕ್ರಿಯಾತ್ಮಕ ಭಾಗವಹಿಸುವಿಕೆ, ಗೋ ರಕ್ಷಣೆ, ಗೋಹತ್ಯೆ ನಿಷೇಧ, ಜನಸೇವೆಯ ಸೋಗಿನಲ್ಲಿ ದ್ವಂದ್ವ ನೀತಿ ಇಲ್ಲ, ಜನರ ಬೇಡಿಕೆ ಮತ್ತು ಭಾವನೆಗಳಿಗೆ ಸ್ಪಂದನೆ….ಇಷ್ಟು ಷರತ್ತು ಗಳಿಗೆ ನಾನು ಮತ್ತು ನನ್ನ ಪಕ್ಷ ಬದ್ಧ ಎನ್ನುವ ಭರವಸೆ ನೀಡುವವರು ಮಾತ್ರ ಮತ ಕೇಳಲು ಮನೆಗೆ ಬರಬಹುದು ಎಂದು ಬ್ಯಾನರ್‌ನಲ್ಲಿ ಹೇಳಲಾಗಿದೆ.

ಮೊದಲ ಬ್ಯಾನರ್‌ನಲ್ಲೇನಿತ್ತು?: ಚುನಾವಣೆ ಘೋಷಣೆ ನಂತರ ಡಾ.ಬಿ.ಎನ್.ಶ್ರೀಕೃಷ್ಣ ತಮ್ಮ ಮನೆ ಗೇಟಿನಲ್ಲಿ ಈ ರೀತಿಯ ಬ್ಯಾನರ್ ಅಳವಡಿಸುತ್ತಿರುವುದು ಎರಡನೇ ಬಾರಿ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಆದ್ಯತೆ ನೀಡಿದ್ದರು. ಕನ್ನಡ ಭಾಷೆ, ಸಂಸ್ಕೃತಿಗೆ ಬದ್ಧನಾಗಿರಬೇಕು, ದ್ವಂದ್ವ ನೀತಿ ಅನುಸರಿಸಲಾರೆ, ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಪ್ರಾಥಮಿಕ ಶಾಲಾ ಶಿಕ್ಷಣ ಕೊಡಿಸುತ್ತೇನೆ ಮತ್ತಿತರ ಷರತ್ತುಗಳನ್ನು ಒಪ್ಪಬೇಕು ಎಂದು ಆ ಬ್ಯಾನರ್‌ನಲ್ಲಿ ಹೇಳಲಾಗಿತ್ತು.

ಜನರ ಪ್ರಣಾಳಿಕೆಯನ್ನು ಒಪ್ಪಿ ಪಕ್ಷದ ಪ್ರತಿನಿಧಿಗಳು ಮತ ಕೇಳುವಂತಾಗಬೇಕು. ಸ್ಪರ್ಧಿಸುವವರಿಗೆ ಬದ್ಧತೆ ಬರಲಿ ಎಂಬ ಉದ್ದೇಶದಿಂದ ಬ್ಯಾನರ್ ಹಾಕಿದ್ದೇನೆ. ಎಲ್ಲರೂ ಈ ರೀತಿಯ ಸಂದೇಶ ನೀಡಿದರೆ ಉತ್ತಮ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬ್ಯಾನರ್ ವೈರಲ್ ಆಗಿದೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮವಾಗಿ ಸ್ಪಂದಿಸಿದ್ದಾರೆ.
|ಶ್ರೀಕೃಷ್ಣ. ಬಿ.ಎನ್. ವೈದ್ಯರು, ಸುಳ್ಯ

Leave a Reply

Your email address will not be published. Required fields are marked *