ಜೀವ ಉಳಿಸುವ ರಕ್ತದಾನದಲ್ಲಿ ಸುಧಾಕರ ರೈ ಶತಕದ ಹಿರಿಮೆ

ಗಂಗಾಧರ ಕಲ್ಲಪಳ್ಳಿ ಸುಳ್ಯ
ಮನುಷ್ಯನ ಜೀವ ಉಳಿಸುವ ರಕ್ತದಾನವನ್ನೇ ಹವ್ಯಾಸವಾಗಿಸಿಕೊಂಡವರು ಸುಳ್ಯ ವರ್ತಕರ ಸಂಘ ಅಧ್ಯಕ್ಷ ಪಿ.ಬಿ.ಸುಧಾಕರ ರೈ. 41 ವರ್ಷಗಳಿಂದ ವರ್ಷಕ್ಕೆ ಮೂರು-ನಾಲ್ಕು ಬಾರಿಯಂತೆ 105 ಸಲ ರಕ್ತದಾನ ಮಾಡಿದ್ದು ಹಲವರ ಜೀವ ಉಳಿಸಲು ನೆರವು ನೀಡಿದ್ದಾರೆ.

ದೇಶ ವಿದೇಶದಲ್ಲಿ ರಕ್ತದಾನ ಮಾಡಿರುವ ಹಿರಿಮೆ ಇವರದು. 17ನೇ ವಯಸ್ಸಿನಲ್ಲಿ ಆರಂಭಗೊಂಡ ರಕ್ತದಾನ ಸೇವೆ 58ನೇ ವರ್ಷದಲ್ಲೂ ಮುಂದುವರಿದಿದೆ. ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ಇವರು ತಪ್ಪದೆ ರಕ್ತದಾನ ಮಾಡುತ್ತಾರೆ. ತನ್ನ ಮತ್ತು ಮಕ್ಕಳ ಜನ್ಮದಿನದಂದೂ ರಕ್ತದಾನ ಮಾಡುವ ಹವ್ಯಾಸ ಇವರದು. ರಕ್ತ ಬೇಕಾಗಿದೆ ಎಂಬ ಮಾಹಿತಿ ಎಲ್ಲಿಂದ ಬಂದರೂ ಸ್ಪಂದಿಸುವ ಇವರು ರೋಗಿಗಳಿಗೆ ರಕ್ತದ ವ್ಯವಸ್ಥೆ ಮಾಡಲು ಮುಂಚೂಣಿಯಲ್ಲಿರುತ್ತಾರೆ.

ರಕ್ತದ ಗುಂಪು ಗೊತ್ತಿಲ್ಲದೆ ಮೊದಲ ರಕ್ತದಾನ: ಪಿಯುಸಿಯಲ್ಲಿದ್ದಾಗ ತನ್ನ ಸಹಪಾಠಿಯ ಸಹೋದರಿಯ ಜೀವ ಉಳಿಸಲು ಸುಳ್ಯದಿಂದ ಲಾರಿ ಹತ್ತಿ ಮಂಗಳೂರಿಗೆ ತೆರಳಿ ಪ್ರಥಮವಾಗಿ ರಕ್ತದಾನ ಮಾಡಿದ್ದರು ಸುಧಾಕರ ರೈ. ಆಗ ಅವರಿಗೆ ರಕ್ತದಾನದ ಮಹತ್ವ, ತನ್ನ ರಕ್ತದ ಗುಂಪು ಗೊತ್ತಿರಲಿಲ್ಲ. ಬಳಿಕ ಪದವಿಗಾಗಿ ಮಂಗಳೂರಿಗೆ ಹೋದಾಗ ಅಲ್ಲಿ ಬಂಟ್ಸ್‌ಹಾಸ್ಟೆಲ್‌ನಲ್ಲಿ ವಾಸವಿದ್ದಾಗ ನಿರಂತರ ರಕ್ತ ನೀಡುವ ಹವ್ಯಾಸ ಬೆಳೆಸಿಕೊಂಡು, ಮಿತ್ರರನ್ನೂ ರಕ್ತದಾನಕ್ಕೆ ಪ್ರೇರೇಪಿಸಿದರು. 1985ರಲ್ಲಿ ವೃತ್ತಿಗಾಗಿ ದುಬೈಗೆ ತೆರಳಿದರು. ಅಲ್ಲಿ ರಕ್ತದಾನ ಮಾಡುವವರ ಸಂಖ್ಯೆ ತೀರ ಕಡಿಮೆ. ರಕ್ತದಾನ ಮಾಡುವವರಿಗೆ ಸ್ವಾಗತ ಎಂಬ ಬೋರ್ಡ್ ಆಸ್ಪತ್ರೆಗಳಲ್ಲಿ, ಕಂಪನಿಗಳಲ್ಲಿ ಹಾಕುತ್ತಿದ್ದರು. ಇದನ್ನು ಗಮನಿಸಿದ ಸುಧಾಕರ ರೈ ಅಲ್ಲಿ ರಕ್ತದಾನಕ್ಕೆ ಆರಂಭಿಸಿದರು. 40ಕ್ಕೂ ಹೆಚ್ಚು ಮಂದಿಯ ರಕ್ತದಾನಿಗಳ ಗುಂಪು ಕಟ್ಟಿದ್ದರು. ದುಬೈ ಸರ್ಕಾರ ನೀಡುತ್ತಿದ್ದ ರಕ್ತದಾನಿಗಳ ಕಾರ್ಡ್ ಇವರಲ್ಲಿ ಈಗಲೂ ಇದೆ. ವಿದೇಶದಲ್ಲಿದ್ದ 15 ವರ್ಷವೂ ತಪ್ಪದೆ ರಕ್ತದಾನ ಮಾಡುತ್ತ ಬಂದಿದ್ದರು.

ಸುಳ್ಯದಲ್ಲಿ ವಿದ್ಯಾರ್ಥಿಗಳ ತಂಡ ಕಟ್ಟಿ ರಕ್ತದಾನ: 2000ದಲ್ಲಿ ವಿದೇಶದಿಂದ ಬಂದು ಸುಳ್ಯದ ಕುರುಂಜಿಭಾಗ್‌ನಲ್ಲಿ ಉದ್ಯಮ ಆರಂಭಿಸಿದ ಬಳಿಕ ಕೆ.ವಿ.ಜಿ ಕ್ಯಾಂಪಸ್ ವಿದ್ಯಾರ್ಥಿಗಳ ತಂಡ ಕಟ್ಟಿ ರಕ್ತದಾನ ಮಾಡುತ್ತ ಬಂದರು. ಕೆ.ವಿ.ಜಿ ಮೆಡಿಕಲ್ ಕಾಲೇಜು ಆರಂಭವಾದ ಮೇಲೆ ನಿರಂತರ ರಕ್ತದಾನ ಮಾಡುತ್ತಿದ್ದಾರೆ. ಪುಸ್ತಕದಲ್ಲಿ ರಕ್ತದಾನ ಮಾಡುವವರ ಹೆಸರು ವಿಳಾಸ, ರಕ್ತದ ಗುಂಪು, ರಕ್ತದಾನ ಮಾಡಿದ ದಿನಾಂಕ ದಾಖಲಿಸಲು ಆರಂಭಿಸಿದರು. ಕೆ.ವಿ.ಜಿ ಮೆಡಿಕಲ್ ಕಾಲೇಜು ವತಿಯಿಂದ ಪ್ರತಿ ಬಾರಿ ರಕ್ತದಾನ ಮಾಡಿದಾಗಲೂ ಪ್ರಮಾಣ ಪತ್ರ ನೀಡುತ್ತಿದ್ದರು. ಹಲವಾರು ರಕ್ತದಾನ ಕ್ಯಾಂಪ್‌ಗಳನ್ನೂ ಇವರ ನೇತೃತ್ವದಲ್ಲಿ ಸಂಘಟಿಸಿದ್ದಾರೆ. ವಾಟ್ಸಾಪ್ ಬಂದ ಮೇಲಂತೂ ಇವರ ರಕ್ತದಾನ ಕಾರ್ಯ ಇನ್ನಷ್ಟು ವಿಸ್ತಾರಗೊಂಡಿದೆ. ವಾಟ್ಸಾಪ್ ಗ್ರೂಪಲ್ಲಿ ಹಾಕಿದರೆ ಹಲವರು ಯುವಕರು ರಕ್ತ ನೀಡಲು ಮುಂದೆ ಬರುತ್ತಾರೆ. ವಾಟ್ಸಾಪ್ ಗ್ರೂಪ್‌ಗಳು ಬಂದ ಮೇಲೆ ಇದಕ್ಕೆ ಒಂದು ಶಿಸ್ತು ಬಂದಿದೆ ಎನ್ನುತ್ತಾರೆ ಸುಧಾಕರ ರೈ.

ಇಂದು ರೆಡ್‌ಕ್ರಾಸ್ ವತಿಯಿಂದ ಸನ್ಮಾನ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆ ವತಿಯಿಂದ ಜೂನ್ 14ರಂದು ಬೆಂಗಳೂರಿನಲ್ಲಿ ನಡೆಯುವ ರಕ್ತದಾನಿಗಳ ದಿನಾಚರಣೆಯಲ್ಲಿ ಸುಧಾಕರ ರೈ ಅವರನ್ನು ಸನ್ಮಾನಿಸಲಾಗುತ್ತದೆ. ಸುಧಾಕರ ರೈ ಮಾತ್ರವಲ್ಲದೆ ಇವರ ಕುಟುಂಬದ ಎಲ್ಲರೂ ರಕ್ತದಾನಿಗಳಾಗಿದ್ದಾರೆ. ಇವರ ಹಿರಿಯ ಸಹೋದರ ಪಿ.ಬಿ.ದಿವಾಕರ ರೈ ಸೇರಿ ನಾಲ್ವರು ಸಹೋದರರು ಮತ್ತು ಮೂವರು ಸಹೋದರಿಯರು ಹಲವು ಬಾರಿ ರಕ್ತದಾನ ಮಾಡಿದ್ದಾರೆ. ಸುಧಾಕರ ರೈ ಪುತ್ರ ಸ್ವಸ್ತಿಕ್ ಕೂಡ ರಕ್ತದಾನ ಆರಂಭಿಸಿದ್ದಾರೆ.

ರಕ್ತದಾನ ಮಾಡಲು ಹಲವು ಮಂದಿ ಹಿಂಜರಿಯುವುದು ನೋಡಿದ್ದೇನೆ. ರಕ್ತದಾನದಿಂದ ಸಮಸ್ಯೆ ಇಲ್ಲ ಎಂಬುದು ನನ್ನ ಅನುಭವ. ಆರೋಗ್ಯವಂತ ವ್ಯಕ್ತಿ 18ರಿಂದ 60 ವರ್ಷವರೆಗೆ ರಕ್ತದಾನ ಮಾಡಬಹುದು. 60 ವರ್ಷದವರೆಗೆ ರಕ್ತದಾನ ಮುಂದುವರಿಸಬೇಕು ಎಂಬ ಬಯಕೆ ಇದೆ. ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ಮಂದಿ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಸಂತಸದ ವಿಚಾರ.
ಪಿ.ಬಿ.ಸುಧಾಕರ ರೈ ರಕ್ತದಾನಿ

Leave a Reply

Your email address will not be published. Required fields are marked *