ಸ್ವಚ್ಛ ಗ್ರಾಮ ಕನಸಿನ ಸಾಕಾರಕ್ಕೆ ಯೋಜನೆ

ಗಂಗಾಧರ ಕಲ್ಲಪಳ್ಳಿ ಸುಳ್ಯ

ಸ್ವಚ್ಛ ಭಾರತ ಕಲ್ಪನೆಯ ಸಾಕಾರಕ್ಕೆ ಮುಂದಾಗಿರುವ ಅರಂತೋಡು ಗ್ರಾಮ ಪಂಚಾಯಿತಿ ಕ್ರಿಯಾತ್ಮಕ ಕಾರ್ಯಾಚರಣೆ ಮೂಲಕ ಗ್ರಾಮವನ್ನು ಸ್ವಚ್ಛ ಗ್ರಾಮವಾಗಿಸುವತ್ತ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಕಾರ್ಯಪ್ರವೃತ್ತವಾಗಿರುವ ಗ್ರಾಮ ಪಂಚಾಯಿತಿ ಸ್ವಚ್ಛತೆ ಆಂದೋಲನ ಜತೆಗೆ ವೈಜ್ಞಾನಿಕ ಕಸ ವಿಲೇವಾರಿ ಕ್ರಮ ಕೈಗೊಂಡಿದ್ದು ಗ್ರಾಮದ ಮನೆ, ಮನೆಯಲ್ಲೂ ಸ್ವಚ್ಛತೆಗೆ ಮುನ್ನುಡಿ ಬರೆದಿದೆ.

ಸಂಗ್ರಹ ವಿಧಾನ: ಕಸ ವಿಲೇವಾರಿಗೆ ವ್ಯವಸ್ಥಿತವಾದ ಯೋಜನೆ ರೂಪಿಸಿಕೊಳ್ಳಲಾಗಿದ್ದು, ಹಸಿ ಕಸ, ಒಣ ಕಸ ಎಂದು ಬೇರ್ಪಡಿಸಿ ಮನೆ ಮನೆಗಳಿಂದ ಸಂಗ್ರಹಿಸಲಾಗುತ್ತಿದೆ. ಹಸಿ ಕಸವನ್ನು ಮನೆಗಳಲ್ಲಿಯೇ ಬೇರ್ಪಡಿಸಿ ಹಸಿ ಕಸವನ್ನು ಅಲ್ಲಿಯೇ ಗೊಬ್ಬರ ಮಾಡಬೇಕು. ಅದಕ್ಕೆ ಪೈಪ್ ಕಾಂಪೋಸ್ಟ್ ವ್ಯವಸ್ಥೆ ಅಳವಡಿಸಲಾಗಿದೆ. ಸುಮಾರು 150 ಬಿಪಿಎಲ್ ಮನೆಗಳಿಗೆ ಪಂಚಾಯಿತಿ ವತಿಯಿಂದಲೇ ಪೈಪ್ ಕಾಂಪೋಸ್ಟ್ ವ್ಯವಸ್ಥೆ ನೀಡಲಾಗಿದ್ದು, ಉಳಿದ ಸುಮಾರು 400 ಮನೆಯವರು ಸ್ವಯಂಪ್ರೇರಿತರಾಗಿ ಪೈಪ್ ಕಾಂಪೋಸ್ಟ್ ಅಳವಡಿಸಿಕೊಂಡಿದ್ದಾರೆ. ಒಣ ಕಸವನ್ನು ಮನೆಯವರು ತೆಗೆದಿರಿಸಲು ಪ್ರತಿ ಮನೆಗೂ ಪಂಚಾಯಿತಿ ವತಿಯಿಂದ ಚೀಲ ನೀಡಲಾಗಿದೆ. ಪ್ರತಿ ಚೀಲಕ್ಕೂ ನಂಬರ್ ನೀಡಲಾಗಿದ್ದು, ಕಸ ಸಂಗ್ರಹದ ದಾಖಲೆಯನ್ನೂ ಮಾಡಲಾಗುತ್ತದೆ. 1340 ಮನೆಯಿಂದ ಸಂಗ್ರಹಿಸಿದ ಪ್ರತಿ ಮನೆಯ ಕಸಕ್ಕೂ ಲೆಕ್ಕವಿರಿಸಿ ಕಸ ಸಂಗ್ರಹದ ಕೋಷ್ಠಕವನ್ನೂ ತಯಾರಿಸಲಾಗುತ್ತದೆ. ಈ ಚೀಲದಲ್ಲಿ ಸಂಗ್ರಹಿಸಿಟ್ಟ ಒಣ ಕಸವನ್ನು ಗ್ರಾಮಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ವಾಹನ ಕಳಿಸಿ ತಂದು ಅರಂತೋಡಿನ ಪ್ಲಾಸ್ಟಿಕ್ ಸೌಧದಲ್ಲಿ ಶೇಖರಿಸಲಾಗುತ್ತದೆ. ಪೇಟೆಗಳ ಅಂಗಡಿಗಳಿಗೂ ಕಸ ಹಾಕಲು ಚೀಲ ಅಳವಡಿಸಲಾಗಿದ್ದು, ಪ್ರತಿ ವಾರಕ್ಕೊಮ್ಮೆ ಅದನ್ನು ಸಂಗ್ರಹಿಸಲಾಗುತ್ತದೆ. ಕಸದ ನಿರ್ವಹಣೆಗೆ ಮನೆಗಳಿಂದ 20 ರೂ. ಮತ್ತು ವಾಣಿಜ್ಯ ಸಂಸ್ಥೆಗಳಿಂದ 50 ರೂ. ಶುಲ್ಕ ಪಡೆದುಕೊಳ್ಳಲಾಗುತ್ತದೆ.

ಕಸವನ್ನು ಸಂಪನ್ಮೂಲವಾಗಿಸುವ ಗುರಿ: ಕಸ ಬೇರ್ಪಡಿಸಲು ಒಂದು ಕಟ್ಟಡವನ್ನು ಮೀಸಲಿರಿಸಿ ಪ್ಲಾಸ್ಟಿಕ್ ಸೌಧ ಮಾಡಲಾಗಿದೆ. ಕಸ ವಿಲೇವಾರಿ ಕಾರ್ಯ ತಂಡವನ್ನು ರಚಿಸಲಾಗಿದ್ದು, ಮನೆ ಮನೆಗಳಿಂದ ಸಂಗ್ರಹಿಸಿ ತರುವ ಕಸವನ್ನು ಈ ಪ್ಲಾಸ್ಟಿಕ್ ಸೌಧದಲ್ಲಿ ಬೇರ್ಪಡಿಸಲಾಗುತ್ತದೆ. ನಾಲ್ಕು ಮಂದಿಯನ್ನು ಇದಕ್ಕಾಗಿ ನಿಯೋಜಿಸಲಾಗಿದ್ದು, ಅವರು ಕಸವನ್ನು ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲಿ, ಗಾಜು, ಲೋಹ, ರಟ್ಟು, ಕಾಗದ, ತಾಮ್ರ, ಬ್ಯಾಟರಿ, ಪ್ಲಾಸ್ಟಿಕ್ ಕವರ್ ಹೀಗೆ ಒಂಬತ್ತು ವಿಧಗಳಾಗಿ ಬೇರ್ಪಡಿಸಿ ಅದನ್ನು ಸ್ವಚ್ಛಗೊಳಿಸಿ ಚೀಲದಲ್ಲಿ ತುಂಬಿ ಪ್ರತ್ಯೇಕ ಸಂಗ್ರಹಿಸುತ್ತಾರೆ. ವ್ಯವಸ್ಥಿತವಾಗಿ ಬೇರ್ಪಡಿಸಿದ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಮುಂದೆ ಇದನ್ನು ಮಾರಾಟ ಮಾಡಿ ಪಂಚಾಯಿತಿಗೆ ಆದಾಯ ಗಳಿಸುವುದು ಉದ್ದೇಶ.

ಸಿದ್ಧವಾಗಿದೆ ತ್ಯಾಜ್ಯ ಘಟಕ: ಗ್ರಾಮ ಪಂಚಾಯಿತಿ ವತಿಯಿಂದ ಅರಂತೋಡಿನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ 50 ಸೆಂಟ್ಸ್ ಜಾಗದಲ್ಲಿ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತಿದೆ. ಕಸ ಸಾಗಾಟ ವಾಹನ ಮತ್ತಿತರ ಕೆಲಸ ಸೇರಿ ಸುಸಜ್ಜಿತ ಘಟಕ ತಯಾರಾಗಲಿದೆ. ಬಳಿಕ ಇಲ್ಲಿ ಹಸಿ ಕಸವನ್ನು ಬಳಸಿ ಗೊಬ್ಬರ ತಯಾರಿಸುವ ಯೋಜನೆ ಇದೆ. ಅದಕ್ಕಾಗಿ ಗೊಬ್ಬರ ತೊಟ್ಟಿ ನಿರ್ಮಿಸಲಾಗಿದೆ. ಅಲ್ಲದೆ ಒಣ ಕಸ ಬೇರ್ಪಡಿಸಲು, ಸಂಗ್ರಹಿಸಿಡಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಘಟಕ ನಿರ್ಮಾಣವಾದ ಮೇಲೆ ಬೇರೆ ಕಡೆಗಳಿಂದಲೂ ಕಸವನ್ನು ತರಿಸಿ ಅದನ್ನು ಸಂಪನ್ಮೂಲವಾಗಿಸುವ ಯೋಜನೆ ಪಂಚಾಯಿತಿ ಆಡಳಿತ ಮಂಡಳಿಯದ್ದು.

ಸ್ವಚ್ಛತಾ ಆಂದೋಲನ: ಕಸ ಸಂಗ್ರಹ, ಬೇರ್ಪಡಿಸುವ ಜತೆಗೆ ರಸ್ತೆ ಬದಿ, ಪೇಟೆಯಲ್ಲಿ ಸ್ವಚ್ಛತಾ ಕಾರ್ಯವನ್ನೂ ನಡೆಸಲಾಗುತ್ತದೆ. ಮಂಗಳೂರಿನ ರಾಮಕೃಷ್ಣ ಮಿಷನ್ ಸಹಕಾರದೊಂದಿಗೆ ಪ್ರತಿ ತಿಂಗಳ ಪ್ರಥಮ ಭಾನುವಾರ ತೊಡಿಕಾನದಲ್ಲಿ ಮತ್ತು ಕೊನೆಯ ಭಾನುವಾರ ಅರಂತೋಡಿನಲ್ಲಿ ಸ್ವಚ್ಛತಾ ಆಂದೋಲನವನ್ನು ನಡೆಸುತ್ತಾ ಬಂದಿದ್ದಾರೆ. ಇದರಿಂದ ಸಾರ್ವಜನಿಕ ಸ್ಥಳಗಳು ಕೂಡ ಸ್ವಚ್ಛತೆಯತ್ತ ಮುಖ ಮಾಡಿದೆ. ಅಕ್ಟೋಬರ್‌ವರೆಗೆ ಈ ಸ್ವಚ್ಛತಾ ಆಂದೋಲನ ಮುಂದುವರಿಸಲು ಯೋಚಿಸಲಾಗಿದೆ. ಪೇಟೆಯಲ್ಲಿ ಪ್ಲಾಸ್ಟಿಕ್ ಬಾಟಲಿ ಹಾವಳಿಯನ್ನು ತಪ್ಪಿಸಲು ಶುದ್ಧ ಕುಡಿಯುವ ನೀರಿನ ಘಟಕವನ್ನೂ ಸ್ಥಾಪಿಸಲಾಗಿದೆ. ಇದರಿಂದ ನೀರಿನ ಬಾಟಲಿ ಸಿಕ್ಕ ಸಿಕ್ಕಲ್ಲಿ ಎಸೆಯುವುದು ಕಡಿಮೆ ಆಗಿದೆ. ರಸ್ತೆ ಬದಿ ಹಸಿ ಕಸ ಮತ್ತು ಒಣ ಕಸಕ್ಕೆ ಪ್ರತ್ಯೇಕ ಡಬ್ಬ ಇರಿಸಲಾಗಿದೆ.

ವಂಡ್ಸೆ ಗ್ರಾಪಂ ಮಾದರಿ:ಅರಂತೋಡು ಗ್ರಾಪಂ ಕಸ ವಿಲೇವಾರಿಗೆ ನೂತನ ಹೆಜ್ಜೆಯನ್ನಿಡಲು ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮವನ್ನು ಮಾದರಿಯಾಗಿಸಿದ್ದೇವೆ ಎನ್ನುತ್ತಾರೆ ಅರಂತೋಡು ಗ್ರಾಪಂ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ. ಅಲ್ಲಿನ ಕಸ ವಿಲೇವಾರಿ ಮಾದರಿಯನ್ನು ಅಧ್ಯಯನ ನಡೆಸಲು ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವಂಡ್ಸೆ ಗ್ರಾಪಂಗೆ ಭೇಟಿ ನೀಡಿದ್ದರು.

ಸಹಕಾರಿ ಸಂಘ ಸ್ಥಾಪನೆ ಯೋಜನೆ: ಕಸವನ್ನು ಸಂಪನ್ಮೂಲವಾಗಿಸಿ ಅದರಿಂದ ನಿರಂತರ ಆದಾಯ ಪಡೆಯವುದು ಪಂಚಾಯಿತಿ ಯೋಜನೆ. ಈಗ ಗ್ರಾಪಂ ನೇತೃತ್ವದಲ್ಲಿಯೇ ತ್ಯಾಜ್ಯ ವಿಲೇವಾರಿ ಕಾರ್ಯಕರ್ತರ ತಂಡ ಇದರ ಕೆಲಸವನ್ನು ಮಾಡುತ್ತಿದ್ದಾರೆ. ಮುಂದೆ ಇದನ್ನು ಸಹಕಾರಿ ಕಾನೂನು ಪ್ರಕಾರ ನೋಂದಣಿ ಮಾಡಿ ಸಹಕಾರಿ ಸಂಘ ಸ್ಥಾಪಿಸಿ ಪಂಚಾಯಿತಿಯೊಂದಿಗೆ ಒಪ್ಪಂದ ಮಾಡಿ ಸಂಘದ ಮೂಲಕ ತ್ಯಾಜ್ಯ ವಿಲೇವಾರಿ ಯೋಜನೆಯನ್ನು ಮುಂದುವರಿಸುವ ಶಾಶ್ವತ ಯೋಜನೆ ರೂಪಿಸಲಾಗುವುದು

ಗ್ರಾಮ ಪಂಚಾಯಿತಿ ಹಮ್ಮಿಕೊಂಡ ಸ್ವಚ್ಛತಾ ಆಂದೋಲನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಬೆಂಬಲ ಬಂದಿದೆ. ಇದನ್ನು ಯಶಸ್ವಿಯಾಗಿ ಮುಂದುವರಿಸಿ ಸ್ವಚ್ಛ ಮತ್ತು ಮಾದರಿ ಗ್ರಾಮ ಪಂಚಾಯಿತಿ ಮಾಡುವ ಕನಸು ಆಡಳಿತ ಮಂಡಳಿಯದ್ದಾಗಿದೆ.
|ಲೀಲಾವತಿ ಕೊಡೆಂಕೇರಿ, ಅರಂತೋಡು ಗ್ರಾಪಂ ಅಧ್ಯಕ್ಷೆ

ನಮ್ಮ ಅಧಿಕಾರ ಅವಧಿ ಆರಂಭಗೊಂಡಾಗ ಏನಾದರೂ ವಿಶೇಷವಾದ ಯೋಜನೆಯನ್ನು ಗ್ರಾಮ ಪಂಚಾಯಿತಿಯಲ್ಲಿ ಮಾಡಬೇಕೆಂಬ ಕನಸಿತ್ತು. ಈ ಹಿನ್ನೆಲೆಯಲ್ಲಿ ಸ್ವಚ್ಛ ಗ್ರಾಮದ ಕನಸನ್ನು ಸಾಕಾರಗೊಳಿಸಬೇಕು ಮತ್ತು ತ್ಯಾಜ್ಯವನ್ನು ಸಂಪನ್ಮೂಲವಾಗಿಸಬೇಕೆಂಬ ದೃಷ್ಟಿಯಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
|ಶಿವಾನಂದ ಕುಕ್ಕುಂಬಳ, ಅರಂತೋಡು ಗ್ರಾಪಂ ಉಪಾಧ್ಯಕ್ಷ