ಸುಳ್ವಾಡಿ ಮಾರಮ್ಮ ದೇವಿ ಪ್ರಸಾದಕ್ಕೆ ವಿಷ ಹಾಕಿದ್ದು ಅರ್ಚಕ?

ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಟ್ವಿಸ್ಟ್​ ಸಿಕ್ಕಿದೆ. ಅರ್ಚಕ ದೊಡ್ಡಯ್ಯ ಎಂಬುವರು ತಾವೇ ವಿಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ನಾಗರಕೋಯಿಲು ದೇವಸ್ಥಾನದ ಅರ್ಚಕರಾಗಿರುವ ದೊಡ್ಡಯ್ಯ ಪೊಲೀಸರ ವಿಚಾರಣೆ ವೇಳೆ ತಾನೇ ವಿಷ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಪೊಲೀಸ್​ ತನಿಖೆ ಅಂತಿಮ ಘಟ್ಟಕ್ಕೆ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್​ ತನಿಖೆ ಅಂತಿಮ ಘಟ್ಟಕ್ಕೆ ತಲುಪಿದ್ದು ಆರೋಪಿಗಳಾದ ಟ್ರಸ್ಟ್​ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ವ್ಯವಸ್ಥಾಪಕ ಮಾದೇಶ್​, ಮಾದೇಶ್​ ಅವರ ಪತ್ನಿ ಅಂಬಿಕಾ, ನಾಗರಕೋಯಿಲು ದೇವಾಲಯದ ಅರ್ಚಕ ದೊಡ್ಡಯ್ಯ ಅವರನ್ನು ಇಂದು ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಕೊಳ್ಳೇಗಾಲ ಡಿವೈಎಸ್​ಪಿ ಕಚೇರಿ ಎದುರು ಹಲವು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಡಿವೈಎಸ್​ಪಿ ಕಚೇರಿ ಹಾಗೂ ನ್ಯಾಯಾಲಯದ ಸುತ್ತಮುತ್ತ ಪೊಲೀಸ್​ ಭದ್ರತೆ ನಿಯೋಜಿಸಲಾಗಿದೆ. ಇನ್ನು ಆರೋಪಿಗಳನ್ನು ರಕ್ಷಿಸಲು ರಾಜಕೀಯ ಒತ್ತಡ ಬರುತ್ತಿದೆ ಎಂದು ಆರೋಪ ಮಾಡಿರುವ ಸ್ಥಳೀಯರು, ಯಾವುದೇ ಒತ್ತಡಕ್ಕೂ ಮಣಿಯದೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂದು 20 ಜನರು ಡಿಸ್ಚಾರ್ಜ್​
ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ತಿಂದು ತೀವ್ರ ಅಸ್ವಸ್ಥರಾಗಿ ಮೈಸೂರಿನ ಕೆಆರ್​ಎಸ್​ ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 20 ಜನರು ಇಂದು ಡಿಸ್ಚಾರ್ಜ್​ ಆಗುವ ಸಾಧ್ಯತೆ ಇದೆ.

ಕಪಾಳಮೋಕ್ಷ ಮಾಡಿದ್ದ ಕಾವಿಧಾರಿ
ಇನ್ನು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿ ಅಲಿಯಾಸ್​ ದೇವಾನ್​ ಬುದ್ಧಿ ಇಂದಿಗೆ ಒಂದು ವರ್ಷಗಳ ಹಿಂದೆ ಮಠದಲ್ಲಿ ಗೂಂಡಾಗಿರಿ ನಡೆಸಿದ್ದು ಸಿಸಿಟಿವಿ ಫೂಟೇಜ್​ನಿಂದ ತಿಳಿದು ಬಂದಿದೆ. ಮಠದಲ್ಲೇ ಸಾರ್ವಜನಿಕವಾಗಿ ಸಂಗಮೇಶ್​ ಎಂಬ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ಹಲ್ಲೆ ನಡೆಸಿದ್ದ. ಕತ್ತಿನ ಪಟ್ಟಿ ಹಿಡಿದು ಎಳೆದಾಡಿದ್ದ ದೃಶ್ಯಗಳು ಈಗ ವೈರಲ್​ ಆಗಿವೆ. (ದಿಗ್ವಿಜಯ ನ್ಯೂಸ್​)