ಸುಲ್ತಾನ್ ಬತ್ತೇರಿ ಡಂಪಿಂಗ್ ಯಾರ್ಡ್

ಭರತ್‌ರಾಜ್ ಸೊರಕೆ ಮಂಗಳೂರು

ರಾಷ್ಟ್ರೀಯ ಸಂರಕ್ಷಿತ ಸ್ಮಾರಕ ಬೋಳೂರಿನ ಸುಲ್ತಾನ್ ಬತ್ತೇರಿ ಡಂಪಿಂಗ್ ಯಾರ್ಡ್ ಆಗಿ ಬದಲಾಗುತ್ತಿದೆ. ಒಂದೆಡೆ ಗಲೀಜು ಗುಡ್ಡೆ ಬೀಳುತ್ತಿದ್ದರೆ, ಭಾರತೀಯ ಪುರಾತತ್ವ ಇಲಾಖೆ ಕೋಟೆಯ ಸುತ್ತ ಕಬ್ಬಿಣದ ಬೇಲಿ ಅಳವಡಿಸಲು ಮುಂದಾಗಿದೆ.

ಐತಿಹಾಸಿಕ ಕೋಟೆಯ ಸುತ್ತ ಕಟ್ಟ್ಟಡ ತ್ಯಾಜ್ಯ, ಪ್ಲಾಸ್ಟಿಕ್, ಮಣ್ಣು ಸುರಿಯಲಾಗುತ್ತಿದೆ. ಬತ್ತೇರಿಗೆ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಕೋಟೆ ಹತ್ತಿ ನದಿಯ ಸೌಂದರ್ಯ ಸವಿಯುತ್ತಾರೆ. ಸ್ಥಳೀಯರು ಮತ್ತು ಮನರಂಜನೆಗಾಗಿ ಬರುವವರು ದೋಣಿ ಮೂಲಕ ಇನ್ನೊಂದ ದಡಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ಪ್ರವಾಸಿಗರನ್ನು ಸ್ವಾಗತಿಸುವುದು ತ್ಯಾಜ್ಯ ರಾಶಿ.

ರಾತ್ರೋ ರಾತ್ರಿ ವಿವಿಧೆಡೆಗಳಿಂದ ಬಂದು ಕಸ ಸುರಿಯುತ್ತಿದ್ದು, ಯಾರು ಕಸ ಹಾಕುತ್ತಿದ್ದಾರೆ ಎಂದು ತಿಳಿಯುವುದೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ಒಡೆದ ಟೈಲ್ಸ್, ದೊಡ್ಡ ದೊಡ್ಡ ಕಲ್ಲು, ತುಂಡಾದ ಕಲ್ಲುಬೆಂಚು, ಬೇಸಿನ್‌ಗಳು ಸುತ್ತ ಹರಡಿಕೊಂಡಿವೆ.

ಗುರುಪುರ ನದಿ ಮೂಲಕ ಯುದ್ಧ ನೌಕೆಗಳು ಬರುವುದನ್ನು ತಡೆಯಲು ಟಿಪ್ಪುಸುಲ್ತಾನ್ ಸೂಚನೆಯಂತೆ ಕಾವಲುಗಾಗಿ 1784ರಲ್ಲಿ ಸುಲ್ತಾನ್ ಬತ್ತೇರಿ ನಿಮಿಸಲಾಗಿತ್ತು. ಫಿರಂಗಿಗಳಿಂದ ಮದ್ದುಗುಂಡುಗಳನ್ನು ಹಾರಿಸಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ. ಕೋಟೆ ಈಗ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ರಾಷ್ಟ್ರೀಯ ಸಂರಕ್ಷಿತ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿದೆ.

ನದಿಗೆ ತ್ಯಾಜ್ಯ: ತ್ಯಾಜ್ಯವನ್ನು ಫಲ್ಗುಣಿ ನದಿ ಅಂಚಿನಲ್ಲೇ ಗುಡ್ಡೆ ಹಾಕುತ್ತಿರುವುದರಿಂದ ಕಲ್ಲು ಮಣ್ಣು ನದಿಗೆ ಬೀಳುತ್ತಿದೆ. ವಿಸ್ತಾರವಾಗಿದ್ದ ನದಿ ಪಾತ್ರ ಈಗಾಗಲೇ ಕಿರಿದಾಗಿದೆ. ಕೆಲವೆಡೆ ಸ್ವಲ್ಪ ಸ್ವಲ್ಪವೇ ನದಿಯಂಚಿಗೆ ಮಣ್ಣು ಸುರಿದು ಗಟ್ಟಿ ಮಾಡಿ ಅದರ ಮೇಲೆ ರೆಸಾರ್ಟ್, ದೋಣಿ ವಿಹಾರ ಕೇಂದ್ರ, ಸಭಾಂಗಣಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಸುಲ್ತಾನ್ ಬತ್ತೇರಿಯಲ್ಲೂ ಇದೇ ರೀತಿ ಮಣ್ಣನ್ನು ನದಿಗೆ ಸುರಿಯಲಾಗುತ್ತಿದೆ. ಮಳೆ ನೀರಿನೊಂದಿಗೆ ಗಲೀಜು ತ್ಯಾಜ್ಯ ನದಿಗೆ ಹರಿಯುತ್ತಿದ್ದು ಜಲಚರಗಳಿಗೆ ಮಾರಕವಾಗುತ್ತಿದೆ. ಹಿಂದೆ ಗುರುಪುರ ನದಿಯಲ್ಲಿ ಹೇರಳವಾಗಿ ಮೀನು ಲಭ್ಯವಾಗುತ್ತಿತ್ತು. ಆದರೆ ಈಗ ನದಿಗೆ ನಿರಂತರ ಗಲೀಜು ಸೇರುವುದರಿಂದ ಜಲಚರಗಳಿಗೂ ಮಾರಕವಾಗಿ ಪರಿಣಮಿಸಿದೆ.

ಕೋಟೆ ರಕ್ಷಣೆಗೆ ಬೇಲಿ: ಒಂದೆಡೆ ಕೋಟೆಯ ಆಸುಪಾಸು ಗಲೀಜು ಗುಡ್ಡೆ ಬೀಳುತ್ತಿದ್ದರೆ ಭಾರತೀಯ ಪುರಾತತ್ವ ಇಲಾಖೆ ಕೋಟೆಯ ಸುತ್ತ ಕಬ್ಬಿಣದ ಬೇಲಿ ಅಳವಡಿಸಲು ಮುಂದಾಗಿದೆ. ಈಗಾಗಲೇ ಕಬ್ಬಿಣದ ಬೃಹತ್ ತಡೆಗಳನ್ನು ರಾಶಿ ಹಾಕಿದ್ದಾರೆ. ಕೋಟೆಯ ಗೋಡೆಗೆ ಒಂದಡಿ ಬಿಟ್ಟು ಗುಂಡಿ ತೋಡಲಾಗಿದೆ. ಕೋಟೆಯ ಸುತ್ತ ತ್ಯಾಜ್ಯ ರಾಶಿ ಹಾಕಿದ್ದರೂ ಕೋಟೆಯ ಗೋಡೆ ರಕ್ಷಣೆಗೆ ಬೇಲಿ ಹಾಕಿದಂತಿದೆ ಎನ್ನುತ್ತಾರೆ ಸ್ಥಳೀಯರಾದ ಶಿವರಾಮ್.

ನಿರ್ವಹಣೆ ಕೊರತೆ: ಕೋಟೆಯ ಮೇಲೆ ಕುಡುಕರು ಬಾಟಲಿ ಒಡೆದು ಗಲೀಜು ಮಾಡಿದ್ದಾರೆ. ರಾತ್ರಿ ವೇಳೆ ಅಕ್ರಮ ಚಟುವಟಿಕೆಯೂ ನಡೆತಯುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲಲ್ಲಿ ಗಿಡಗಳು ಬೆಳೆದು ಅಕ್ರಮ ಕೆಲಸಗಳಿಗೆ ಈ ತಾಣ ಹೇಳಿ ಮಾಡಿಸಿದಂತಿದೆ. ಗೋಡೆಯ ಸಿಮೆಂಟ್ ಕಿತ್ತು ಅಲ್ಲಲ್ಲಿ ಬಿರುಕುಬಿಟ್ಟಿದೆ. ಸೂಕ್ತ ಕಾವಲುಗಾರರಿಲ್ಲದೆ ಪ್ರವಾಸಿಗರಿಗೆ ಮತ್ತು ಪ್ರಾಚ್ಯ ಕಟ್ಟಡಕ್ಕೆ ರಕ್ಷಣೆ ಇಲ್ಲ. ಕೋಟೆಯ ಬಗ್ಗೆ ಮಾಹಿತಿ ಕೊಡಲು ಗೈಡ್ ಕೂಡ ಇಲ್ಲಿ ಅಲಭ್ಯ.

ಸುಲ್ತಾನ್ ಬತ್ತೇರಿ ಸೌಂದರ್ಯ ಸವಿಯಲು ಸೂಕ್ತ ಪ್ರದೇಶ. ಆದರೆ ಇಲ್ಲಿ ಗಲೀಜು ಮಾಡಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗಿದೆ. ಬಾಟಲಿಗಳನ್ನು ಒಡೆದು ಹಾಕಿರುವುದರಿಂದ ಅಪಾಯಕಾರಿಯಾಗಿದೆ. ಈ ಸ್ಥಳ ಪ್ರವಾಸಿಗರ ಮೆಚ್ಚಿನ ತಾಣವಾಗಿ ಉಳಿಯಬೇಕಿದೆ. ಪಾರಂಪರಿಕ ಕಟ್ಟಡ ಮುಂದಿನ ಜನರಿಗೂ ಉಳಿಯಬೇಕು.
ಗಜೇಶ್ ಕುಮಾರ್ ಪ್ರವಾಸಿಗ

Leave a Reply

Your email address will not be published. Required fields are marked *