ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ಪಂಚಭೂತಗಳಲ್ಲಿ ಲೀನ

ತುಮಕೂರು: ದೇಶದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.

ತುಮಕೂರು ನಗರದಿಂದ ಮೆರವಣಿಗೆ ಹೊರಟು ಗಂಗಸಂದ್ರದ ಸರ್ಕಾರಿ ಜಮೀನಿನಲ್ಲಿ ಜಿಲ್ಲಾಡಳಿತವು ಅಂತ್ಯ ಸಂಸ್ಕಾರ ನೆರವೇರಿಸಿ ಅಂತಿಮ ವಿದಾಯ ಹೇಳಿತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 98 ವರ್ಷದ ನರಸಮ್ಮ ಅವರು ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದರು.

ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ನರಸಮ್ಮ ಅವರಿಗೆ ಸೋಮವಾರ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. (ದಿಗ್ವಿಜಯ ನ್ಯೂಸ್)