Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಬದಲಾಯ್ತು ಜೀವನಶೈಲಿ, ಬರಡಾಯ್ತು ಬದುಕು!

Saturday, 17.03.2018, 3:03 AM       No Comments

| ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ಇಂದಿನ ಯುವಪೀಳಿಗೆೆ ಪಾಶ್ಚಾತ್ಯರನ್ನು ನೋಡಿ ಅವರ ವಿಕೃತಿಯನ್ನು ರೂಢಿಸಿಕೊಂಡು ಸಾವಿನ ಕಡೆಗೆ ಹೋಗುವುದನ್ನು ಬಿಟ್ಟು ನಮ್ಮ ಪೂರ್ವಜರಂತೆ ಯೋಗ, ಧ್ಯಾನ, ಸಾತ್ವಿಕ ಸಸ್ಯಾಹಾರ, ಶ್ರಮದ ಜೀವನ ನಡೆಸಿ ಸಾಧಕರಾಗಿ ಸಂತೃಪ್ತಿಯ ಜೀವನ ನಡೆಸಿ ವಿಶ್ವಕ್ಕೆ ಮಾದರಿಯಾಗುತ್ತೇವೆಂದು ಈ ಯುಗಾದಿಗೆ ಪಣತೊಡುವಂತಾಗಲಿ!

ಆಧುನಿಕ ಜೀವನಶೈಲಿಯ ಭರಾಟೆಯಲ್ಲಿ ಮಹಿಳೆಯರು ಶರವೇಗದಲ್ಲಿ ಬದಲಾಗುತ್ತಿದ್ದಾರೆ. ಅವರ ಆಚಾರ, ವಿಚಾರ, ನಡೆ, ನುಡಿ, ಬದುಕುವ ರೀತಿನೀತಿ ಸಂಪೂರ್ಣ ಬದಲಾಗಿದೆ. ಪಾಶ್ಚಾತ್ಯರ ಸ್ವೇಚ್ಛಾಚಾರದ ಬದುಕಿಗೆ ಮಾರುಹೋದ ಹೊಸಪೀಳಿಗೆಯ ಯುವತಿಯರು ಬದುಕನ್ನು ಬರಡು ಮಾಡಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಯರು ಶಾಲೆ-ಕಾಲೇಜಿಗೆ ಹೋಗದಿದ್ದರೂ ಪ್ರಜ್ಞಾವಂತರಾಗಿ ಕುಟುಂಬದ ಅಡಿಗಲ್ಲಿನಂತೆ ಭಾರಹೊತ್ತು ಗಾಣದ ಎತ್ತಿನಂತೆ ಜೀವನ ನಡೆಸಿ ‘ಪಾಲಿಗೆ ಬಂದದ್ದು ಪಂಚಾಮೃತ’ವೆಂದು ಸಂತೃಪ್ತಿಯ ಬದುಕು ನಡೆಸುತ್ತಿದ್ದರು.

‘ಜೀವನ ಇರುವುದು ಬದುಕುವುದಕ್ಕೇ ಹೊರತು ಸಾಯುವುದಕ್ಕಲ್ಲ’ ಎಂದು ತತ್ತ್ವಜ್ಞಾನಿ ಸಾಕ್ರೆಟಿಸ್ ಹೇಳಿದ್ದರು. ಮಹಾಜ್ಞಾನಿಯಾಗಿದ್ದ ಅವರು ಸದಾ ಶಿಷ್ಯರಿಂದ ಸುತ್ತುವರಿಯಲ್ಪಟ್ಟು ಗಂಭೀರ ಚಿಂತನೆಗಳಲ್ಲಿ ಮುಳುಗಿರುತ್ತಿದ್ದರು. ಆದರೆ ಹೆಂಡತಿ ಸಂಪೂರ್ಣ ವ್ಯಾವಹಾರಿಕವಾಗಿ ಯೋಚಿಸುವ ಸಾಮಾನ್ಯರಲ್ಲಿ ಅತಿಸಾಮಾನ್ಯ ಜಗಳಗಂಟಿಯಾಗಿದ್ದಳು! ಒಂದು ದಿನ ಮನೆಖರ್ಚಿಗೆ ಹಣವಿಲ್ಲದೆ ಮನೆ ನಿರ್ವಹಣೆ ಅಸಾಧ್ಯವೆಂದೆನಿಸಿದಾಗ ರೊಚ್ಚಿಗೆದ್ದ ಹೆಂಡತಿ ಮುಸುರೆ ತುಂಬಿದ ಪಾತ್ರೆ ತಂದು ಶಿಷ್ಯರ ಸಮ್ಮುಖದಲ್ಲಿಯೇ, ಸಾಕ್ರೆಟಿಸ್​ರ ತಲೆಯ ಮೇಲೆ ಸುರಿದೇಬಿಟ್ಟಳು! ಶಿಷ್ಯರು ಗಾಬರಿಗೊಂಡು, ‘ಸ್ವಾಮಿ, ಇಂಥ ಗಂಡುಬೀರಿ ಹೆಂಡತಿಯಿಂದ ನಿಮಗೆ ಎಷ್ಟೊಂದು ಅವಮಾನವಾಗುತ್ತದೆ. ಯಾಕೆ ವಿವಾಹ ವಿಚ್ಛೇದನ ಮಾಡಿಕೊಂಡು ದೂರಾಗಬಾರದು? ಆಗ ನೀವು ಶಾಂತಿ-ನೆಮ್ಮದಿಯಿಂದ ಇರಬಹುದು. ಇದರಿಂದ ನಿಮ್ಮ ಜ್ಞಾನ ವೃದ್ಧಿಯಾಗಿ, ನೀವು ಹೆಚ್ಚೆಚ್ಚು ಸಿದ್ಧಿ ಸಾಧಿಸಬಹುದು’ ಎಂದರಂತೆ! ಮುಸುರೆಯ ಅಭಿಷೇಕವಾಗಿದರೂ ತಡಬಡಿಸದೆ ವಿಚಲಿತರಾಗದೆ ಕುಳಿತಿದ್ದ ಸಾಕ್ರೆಟಿಸ್, ‘ಅಲ್ಲಪ್ಪಾ, ಅವಳಿಂದಲೇ ನಾನು ತತ್ತ್ವಜ್ಞಾನಿ ಆಗಿರುವುದು. ಅವಳು ಕೂಗಾಡಿದಷ್ಟೂ ನಾನು ಮನಸ್ಸು ಗಟ್ಟಿಮಾಡಿಕೊಂಡು ನನ್ನನ್ನು ನಿಗ್ರಹಿಸಿಕೊಳ್ಳುವುದನ್ನು ಕಲಿತದ್ದು. ಒಂದು ರೀತಿ ಅವಳೇ ನನ್ನ ಗುರು’ ಎಂದು ನಸುನಕ್ಕರಂತೆ!

ಇಂಥ ಸ್ಥಿತಪ್ರಜ್ಞರಾದ ಸಾಕ್ರೆಟಿಸ್​ಗೆ ಹೇಳಿ ಪ್ರಯೋಜನವಿಲ್ಲವೆಂದು ಭಾವಿಸಿದ ಶಿಷ್ಯರು, ಸದ್ಯ ಈ ಬಾಯಿಬಡುಕಿ ಬಿಟ್ಟುಹೋದರೆ ತಮ್ಮ ಗುರುಗಳು ಶಾಂತವಾಗಿರಬಹುದೆಂದು ಯೋಚಿಸಿ ಅವರ ಹೆಂಡತಿಯನ್ನುದ್ದೇಶಿಸಿ- ‘ತಾಯಿ, ಇಂಥ ಅಪ್ರಯೋಜಕ, ಮನೆ ಖರ್ಚಿಗೆ ಹಣ ಕೊಡದ, ನಿಮಗಾವ ಉಡುಗೊರೆಯನ್ನೂ ಕೊಡದ ಗಂಡನನ್ನು ಬಿಟ್ಟುಬಿಡಿ. ಇಂಥ ಗಂಡ ಇದ್ದರೆಷ್ಟು, ಬಿಟ್ಟರೆಷ್ಟು?’ ಎಂದು ಪುಸಲಾಯಿಸಿದರಂತೆ. ಆದರೆ ಅದಕ್ಕೆ ಆಕೆ ನೀಡಿದ ಉತ್ತರ ಕೇಳಿ ದಂಗುಬಡಿದವರಂತಾದರಂತೆ! ಆಕೆ ಹೇಳಿದ್ದಿಷ್ಟು- ‘ಅಯ್ಯೋ ಹುಚ್ಚಪ್ಪಗಳಿರಾ, ನಾನು ಎಷ್ಟು ಕೂಗಾಡಿದರೂ ತಿರುಗಿ ಉತ್ತರ ಕೊಡದೆ, ನಾನು ಎಷ್ಟು ರೇಗಾಡಿದರೂ ಹೊಡೆಯಲು ಕೈಎತ್ತದೆ, ನನ್ನ ಎಲ್ಲ ಆಟಾಟೋಪಗಳಿಗೂ ಉಸಿರುಬಿಡದೆ ತಡೆದುಕೊಳ್ಳುವ ಇಂಥ ಶಾಂತಮೂರ್ತಿ ಗಂಡ ಎಲ್ಲಿ ಸಿಗುತ್ತಾನ್ರಪ್ಪ. ಜನ್ಮಜನ್ಮಕ್ಕೂ ಸಾಕ್ರೆಟಿಸ್ಸೇ ನನಗೆ ಗಂಡನಾಗಲಿ ಎಂದು ದೇವರಲ್ಲಿ ಸದಾ ಪ್ರಾರ್ಥಿಸುತ್ತೇನೆ!’.

ಆದರೆ ಇಂದು ಜನರು ಅಂತರಂಗದ ಸದ್ಗುಣಗಳನ್ನು ಗುರುತಿಸದೆ ಬಾಹ್ಯದ ಆಡಂಬರಕ್ಕೆ ತುತ್ತಾಗಿ, ಎಷ್ಟಿದ್ದರೂ ಸಾಲದು ಇನ್ನೂ ಬೇಕು ಎಂದು ಎಲ್ಲೆ ಇಲ್ಲದ ಆಸೆಗೆ ತುತ್ತಾಗಿ ಮಾನಸಿಕ ಒತ್ತಡಕ್ಕೊಳಗಾಗುತ್ತಿದ್ದಾರೆ. ಅತೃಪ್ತ ಆತ್ಮಗಳಾದಾಗ ಯಾವುದರಲ್ಲೂ ಸುಖ ಸಿಗುವುದಿಲ್ಲ. ಮನಸ್ಸಿನ ಕ್ಷೋಭೆಯಿಂದ ಬಾಹ್ಯ ಸೌಂದರ್ಯಕ್ಕಾಗಿ ಹಾತೊರೆಯುತ್ತ ಬದುಕನ್ನು ಬರಡು ಮಾಡಿಕೊಳ್ಳುತ್ತಿದ್ದಾರೆ ಹಲವು ಮಹಿಳೆಯರು.

ನನಗೆ ನೆನಪಿದ್ದಂತೆ ನನ್ನ ಇಬ್ಬರೂ ಅಜ್ಜಿಯಂದಿರು (ನನ್ನ ತಂದೆಯ ತಾಯಿ ಮತ್ತು ತಾಯಿಯ ತಾಯಿ) ತ್ರಿಪುರ ಸುಂದರಿಯರು. ಸ್ನಾನ ಮಾಡಿಕೊಂಡು ಬಂದು ದೇವರ ಮುಂದೆ ದೀಪ ಹಚ್ಚಲು ಕುಳಿತರೆ ಸ್ವರ್ಣಗೌರಿಯರಂತೆ ಕಂಗೊಳಿಸುತ್ತಿದ್ದರು! ಹಬ್ಬ-ಹರಿದಿನಗಳಲ್ಲಂತೂ ಒಡವೆ ಹಾಕಿಕೊಂಡು ಹೂಮುಡಿದುಕೊಂಡರೆ ಸಾಕ್ಷಾತ್ ಲಕ್ಷ್ಮಿಯರಂತೆ ಕಾಣುತ್ತಿದ್ದರು. ಮಕ್ಕಳು ಮೊಮ್ಮಕ್ಕಳಿಗೆ ತಿಂಡಿ-ತಿನಿಸು ಕೊಡುವುದೇ ಸಂಭ್ರಮ ಸಂತೋಷ! ಚಿತ್ರನಟಿ ಶ್ರೀದೇವಿ ಕೂಡ ತ್ರಿಪುರ ಸುಂದರಿ ಎಂದು ಕರೆಸಿಕೊಂಡಳು. ಆದರೆ ಭಗವಂತ ಕೊಟ್ಟ ಸೌಂದರ್ಯ ಸಾಲದು ಅಂತ ಕೃತ್ರಿಮವಾಗಿ ಸೌಂದರ್ಯವರ್ಧನೆಗೆ ಬರೋಬ್ಬರಿ 24 ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಳು! ಇದು ಬದಲಾದ ಆಧುನಿಕ ಜೀವನಶೈಲಿಯ ಅತಿರೇಕದ ಪ್ರತೀಕವಾಗಿದೆ.

ಕಾಸ್ಮೆಟಿಕ್ ಸರ್ಜರಿ ಅಂದರೆ ಏನು?: ಸೌಂದರ್ಯವೃದ್ಧಿಯ ಭ್ರಮೆಯಿಂದ/ಹೆಚ್ಚೆಚ್ಚು ಆಕರ್ಷಕವಾಗಿ ಕಾಣಲು ಮುಖ ಮಾತ್ರವಲ್ಲದೆ, ಸ್ತನ, ಸೊಂಟ, ಹೊಟ್ಟೆ, ತೊಡೆಗಳ ಮೇಲೆ ಮಾಡಿಸಿಕೊಳ್ಳುವ ಹಲವು ಶಸ್ತ್ರಚಿಕಿತ್ಸೆಗಳಿಗೆ ಕಾಸ್ಮೆಟಿಕ್ ಸರ್ಜರಿ ಎಂದು ಕರೆಯುತ್ತೇವೆ. ಇದರಲ್ಲಿ ‘Face Lifting’ ಅಂದರೆ ಮುಖವನ್ನು ಸುಂದರಗೊಳಿಸಲು ಗದ್ದ, ಕೆನ್ನೆ, ಕಣ್ಣುರೆಪ್ಪೆ, ಮೂಗು, ತುಟಿ, ಸುಕ್ಕುಹಿಡಿದ ಮುಖದ ಚರ್ಮ ಸರಿಪಡಿಸುವುದು ಪ್ರಮುಖವಾದುದು. ಇದರಿಂದ ಮುದುಕಿಯರು ಯುವತಿಯರಾಗುವರೇ? ಖಂಡಿತ ಇಲ್ಲ. ಆದರೆ ಇರುವುದಕ್ಕಿಂತ ಸರಾಸರಿ 7.2 ವರ್ಷ ಚಿಕ್ಕವರ ಹಾಗೆ ಕಾಣಬಹುದು, ಅಷ್ಟೇ.

ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಿಂದ ಸಾವೂ ಸಂಭವಿಸಬಹುದು. ಲಿಪೋಸಕ್ಷನ್ ಬೇಡ ಅಂದರೆ ಮಿತಿಮೀರಿ ಬೊಜ್ಜು ಬೆಳೆದು ಶರೀರ ಕಾಯಿಲೆಯ ಗೂಡಾಗಿ ಸಾಯಬಹುದು. ಇದಕ್ಕೆ ಕಾರಣ ಮಹಿಳೆಯರು ಕುಂತಲ್ಲಿ ಕುಳಿತು ‘ಜಂಕ್​ಫುಡ್’ ಹೆಚ್ಚಾಗಿ ತಿನ್ನುವುದು. ಜಂಕ್ ಅಂದರೆ ಮೂರು ಬಿಳಿವಿಷಗಳಾದ ಮೈದಾ, ಸಕ್ಕರೆ, ಉಪು್ಪ ಹೆಚ್ಚಾಗಿರುವ, ದಿಢೀರ್ ಸಿಗುವ ಪಾಶ್ಚಾತ್ಯ ತಿಂಡಿ ತಿನಿಸುಗಳು. ಇಂದು ಕೆಲವರು ‘ Keto-diet’ ಅಥವಾ ‘Keto-diet’ ಆಹಾರ ಸೇವನೆಗೆ ಮುಂದಾಗಿದ್ದಾರೆ!

‘Keto-diet’ ಅಂದರೆ ಏನು?: ಇಲ್ಲಿಯವರೆಗೂ ನಾವು ಸಮತೋಲ ಆಹಾರವೆಂದು ಬೋಧಿಸುತ್ತಿದ್ದ Food pyramidನ ಉಲ್ಟಾ ಈ ಕೀಟೋ ಡಯಟ್! ಸಮತೋಲ ಆಹಾರದ ಪಿರಮಿಡ್​ನಲ್ಲಿ ಎಲ್ಲ ಪೌಷ್ಟಿಕಾಂಶಗಳು ಶರೀರಕ್ಕೆ ಬೇಕಾದ ಯೋಗ್ಯ ಅನುಪಾತದಲ್ಲಿರುವುದು. ಇದರಲ್ಲಿ ಸಿರಿಧಾನ್ಯ, ಬೇಳೆಕಾಳು, ಹಾಲು ಮತ್ತು ಹಾಲಿನ ಉತ್ಪನ್ನ, ಹಣ್ಣು-ತರಕಾರಿ, ಒಳಬೀಜ ಮತ್ತು ಎಣ್ಣೆ ಇದ್ದು ಪಿಷ್ಟ (Carbohydrates) ಹೆಚ್ಚಾಗಿದ್ದು, ಪ್ರೋಟೀನ್ ಸ್ವಲ್ಪ ಕಡಿಮೆ ಮತ್ತು ಜಿಡ್ಡು ತುಂಬ ಕಡಿಮೆ ಇರುತ್ತದೆ. ಆದರೆ ಕೀಟೋ ಡಯಟ್​ನಲ್ಲಿ ಸಮತೋಲ ಆಹಾರದ ಉಲ್ಟಾ ಅಂದರೆ ಜಿಡ್ಡು ಶೇ. 70, ಪ್ರೋಟೀನ್ ಶೇ. 25, ಪಿಷ್ಟ ಕೇವಲ ಶೇ. 5ರಷ್ಟು ಇರುತ್ತದೆ. ಅಂದರೆ ಅಕ್ಕಿ, ಗೋಧಿ, ರಾಗಿ ಎಲ್ಲವನ್ನೂ ಕಡಿಮೆ ಮಾಡಿ ಹೊಟ್ಟೆಗಿಲ್ಲದವರಂತೆ ಊಟಮಾಡುವುದು. ತೂಕ ಕಡಿಮೆ ಮಾಡಿಕೊಂಡು ಬಳುಕುವ ಶರೀರಕ್ಕಾಗಿ ಕೀಟೋ ಡಯಟ್ ಮಾಡುವುದು ಫ್ಯಾಷನ್ ಆಗಿದೆ.

ಸಾಮಾನ್ಯವಾಗಿ ನಮಗೆ ಶಕ್ತಿಯು ಪಿಷ್ಟದಿಂದ ಬರುತ್ತದೆ. ಆದರೆ ಕೀಟೋ ಡಯಟ್​ನಲ್ಲಿ ಜಿಡ್ಡಿನಿಂದ ಬರುತ್ತದೆ. ಅಂದರೆ ಶಕ್ತಿಗೆ ಗ್ಲೂಕೋಸ್ ಇಲ್ಲದಾಗ ನಮ್ಮ ಯಕೃತ್​ನಲ್ಲಿ ಜಿಡ್ಡು ‘ಕೀಟೋನ್’ ಆಗಿ ಪರಿವರ್ತನೆಗೊಂಡು ಅದರಿಂದ ಶಕ್ತಿ ಕೊಡುತ್ತದೆ. ನಮ್ಮ ಪೂರ್ವಜರು ಬಡತನ, ಬರಗಾಲದಿಂದ ಹೊಟ್ಟೆಗಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾಗ ಅನಿವಾರ್ಯವಾಗಿ ಇಂಥ ಕೀಟೋ ಡಯಟ್ ಮಾಡುತ್ತಿದ್ದರು. ಮುಂದೆ ಸುಭಿಕ್ಷರಾದಾಗ ಒಪ್ಪತ್ತು ಅಂತ ಒಂದು ಹೊತ್ತು ಊಟಮಾಡಿ ಉಪವಾಸವೆಂದು ಲಘು ಫಲಾಹಾರವನ್ನು ಏಕಾದಶಿ ಇಲ್ಲವೇ ವಾರದಲ್ಲಿ ಒಂದು ದಿನ ಒಪ್ಪತ್ತು ಮಾಡುತ್ತಿದ್ದರು. ಇಲ್ಲಿ ಉಪವಾಸ ಆಧ್ಯಾತ್ಮೀಕರಣಗೊಂಡಿದ್ದರಿಂದ- ‘ಉಪ’ ಎಂದರೆ ಲಘು ಅಥವಾ ಚಿಕ್ಕದು, ‘ವಾಸ’ ಎಂದರೆ ದೇವರ ಧ್ಯಾನದಲ್ಲಿರುವುದು. ಇದರಿಂದ ಮನಸ್ಸು ಶಾಂತಿಗೊಂಡು ‘Feelgood harmone’ಗಳಾದ ಎಂಡಾರ್ಫಿನ್ ಮತ್ತು ನ್ಯೂರೋಪೆಪ್ಟೆ ೖಡ್​ಗಳು ಮಿದುಳಿನಿಂದ ಉತ್ಪತ್ತಿಯಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡೂ ಉತ್ತಮವಾಗುತ್ತಿತ್ತು. ಆದರೆ ಇಂದು ಉಪವಾಸ ಮಾಡದೇ ಕೀಟೋ ಡಯಟ್ ಅಂತ ಮಾಡಿ ಸದಾ ಹಸಿದ ಸ್ಥಿತಿಯಲ್ಲಿದ್ದು ಜಿಡ್ಡು ಕರಗಿಸಿ ಶಕ್ತಿ ಪಡೆಯಲು ಯತ್ನಿಸುತ್ತಿದ್ದಾರೆ.

ನಮ್ಮ ಪೂರ್ವಜರು ಹೊಸವರ್ಷದ ಮಹತ್ವ ತಿಳಿಸಿ ಯುಗಾದಿ ಪ್ರಾರಂಭದಲ್ಲಿಯೇ ‘ಶತಾಯುರ್ ವಜ್ರದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಷ್ಟ ನಿವಾರಾಯ ನಿಂಬಕಂ ದಳ ಭಕ್ಷಣಂ’ ಎಂದು ಹೇಳುವ ಆರೋಗ್ಯದ ಪರಿಕಲ್ಪನೆ ಅದ್ಭುತವಾಗಿತ್ತು! ಬೆಲ್ಲ ಬೇಳೆಯಲ್ಲಿ ಮಾಡಿದ ಪಾಯಸ ಸ್ವಲ್ಪ ಬಲಗಡೆಗೆ ಮೊದಲು ಸೇವಿಸಿ ಹೊಟ್ಟೆ ಹಸಿವು ಕಡಿಮೆ ಮಾಡಿ, ಅನ್ನ (ಪಿಷ್ಟ), ತೊವ್ವೆ/ಬೇಳೆ (ಪ್ರೋಟೀನ್) ಮೇಲೆ ತುಪ್ಪ (Fat), 2-3 ಕೋಸಂಬರಿ (ಬಿ.ಪಿ. ಕಡಿಮೆ ಮಾಡುತ್ತಿದ್ದವು), 2-3 ತರಕಾರಿ ಹೃದಯಾಘಾತ ಮತ್ತು ಕ್ಯಾನ್ಸರ್ ಅನ್ನು ಶೇ. 28ರಷ್ಟು ಕಡಿಮೆ ಮಾಡುತ್ತಿದ್ದವು. ಉಪು್ಪ, ಉಪ್ಪಿನಕಾಯಿ ಎಡಗಡೆಗೆ ಬಾಳೆ ಎಲೆಯ ಕೊನೆಗೆ ಹಾಕಿ, ಮುಟ್ಟಬೇಡಿ ಹೆಚ್ಚು ತೆಗೆದುಕೊಂಡರೆ ಬಿ.ಪಿ. ಹೆಚ್ಚುತ್ತದೆ ಎಂದು! ಕೊನೆಗೆ ಮೊಸರು, ಮಜ್ಜಿಗೆ ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಬಾಳೆಹಣ್ಣು ಹೊಟ್ಟೆಹುಣ್ಣು ಮಾಯುವಂತೆ ಮಾಡಿ ಅದರಲ್ಲಿರುವ Serotonin ಮಾನಸಿಕ ದುಗುಡ ಬರದಂತೆ ಮಾಡುತ್ತಿದ್ದವು. ರಾತ್ರಿ ಮಲಗುವಾಗ ಒಂದು ಲೋಟ ಹಾಲು ನಿದ್ರೆ ಚೆನ್ನಾಗಿ ಬರುವಂತೆ ಮಾಡಿ ಹೊಟ್ಟೆಯಲ್ಲಿನ ಹೈಡ್ರೋಕ್ಲೋರಿಕ್ ಆಮ್ಲವನ್ನು ತಟಸ್ಥಗೊಳಿಸಿ ಗ್ಯಾಸ್ಟ್ರಿಕ್ ಅಲ್ಸರ್ ಆಗದಂತೆ ತಡೆಯುತ್ತಿತ್ತು. ಆದರೆ ದುರಂತವೆಂದರೆ, ಇಂದು ಜನ ಹಾಲು ಬಿಟ್ಟು ಆಲ್ಕೋಹಾಲ್ ಸೇವಿಸಿ ಮಲಗುವುದರಿಂದ ಆಲ್ಕೋಹಾಲಿಕ್ ಗ್ಯಾಸ್ಟ್ರೈಟಿಸ್ ಆಗಿ ಯಕೃತ್ತು, ಹೃದಯ, ಮಿದುಳು ನಾಶಮಾಡಿಕೊಳ್ಳುತ್ತಿದ್ದಾರೆ. ಡಾ. ಪು.ತಿ.ನ. ಹೇಳಿದಂತೆ- ‘ಹಗುರಾಗಿಹ ಮೈ, ಕೆಸರಿಲ್ಲದ ಮನ, ಹಂಗಿಲ್ಲದ ಬದುಕು, ಕೇಡಿಲ್ಲದ ನುಡಿ, ಕೇಡೆನಿಸದ ನಡೆ, ಸಾಕಿದು ಇಹಕೂ ಪರಕೂ, ಮೇಲೇನಿದೆ ಇದಕೂ’ ರೀತಿ ಮಹಿಳೆಯರು ಬದುಕಬೇಕು.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top