Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಮಾತೆಯ ಮಾತೇ ಮಕ್ಕಳಿಗೆ ಮಾಣಿಕ್ಯ

Saturday, 23.06.2018, 3:03 AM       No Comments

| ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ 

ಮಮತಾಮಯಿ ಮಾತೆ ಮಗುವಿಗೆ ಜನ್ಮಕೊಟ್ಟರೆ, ಆ ಮಗುವಿಗೆ ಮಾತೆಯೇ ಜಗತ್ತು! ಮುತ್ತಿನಂಥ ತೊದಲುವ ಮೊದಲಮಾತು ಕಲಿಸಿಕೊಡುವ ತಾಯಿ ಮಗುವಿಗೆ ಮೊದಲ ಗುರು. ಗಾದೆಮಾತು ಹೇಳಿದಂತೆ ‘ಮನೆಯೇ ಮೊದಲ ಪಾಠಶಾಲೆ, ಜನನಿ ಮೊದಲ ಗುರು’. ಒಂದು ಕಾಲಕ್ಕೆ ಮಕ್ಕಳ ಅವಗುಣಗಳನ್ನು ನಯವಾಗಿ ತಿದ್ದಿ ಅವರಲ್ಲಿ ಸದ್ಗುಣಗಳ ಶಿಷ್ಟಾಚಾರದ ಬೀಜ ಬಿತ್ತುತ್ತಿದ್ದುದು ತಾಯಿ! ಮಕ್ಕಳನ್ನು ಸುಸಂಸ್ಕೃತರನ್ನಾಗಿಸುತ್ತಿದ್ದುದು ಮಾತೆ. ಆದರೆ ದುರದೃಷ್ಟವೆಂದರೆ ಮಕ್ಕಳ ಭದ್ರ ಭವಿಷ್ಯದ ಬುನಾದಿ ಹಾಕಬೇಕಾದ ತಾಯಿಯೊಬ್ಬಳು ಶತಮೂರ್ಖಳಂತೆ ತನ್ನ ಮುತ್ತಿನಂಥ ಮೂರು ಗಂಡುಮಕ್ಕಳೊಡನೆ ಕೆರೆಗೆ ಹಾರಿದ್ದು! ಇಂಥ ಆಘಾತಕಾರಿ ಕೃತ್ಯ ಮಾಡಿದವಳು ಅನಕ್ಷರಸ್ಥಳಲ್ಲ; ತನ್ನ ಮಕ್ಕಳು ಕೇವಲ ದುಬಾರಿ ಕಾನ್ವೆಂಟಿನಲ್ಲಿ ಓದಬೇಕೆಂಬ ಹುಚ್ಚುಹಂಬಲದ ಅವಿವೇಕಿ. ಗಂಡನಿಗೆ ಖಾಸಗಿ ಶಾಲೆಯ ಖರ್ಚು ಭರಿಸಲು ಆಗುವುದಿಲ್ಲ ಎಂದು ಮನವರಿಕೆ ಆದಮೇಲೆ ಆತನ ಅಸಹಾಯಕತೆಯನ್ನು ಅರಿತ ಮೇಲೂ ತವರುಮನೆಯವರು ಬುದ್ಧಿ ಹೇಳಿದ ಮೇಲೂ ಇಂಥ ಘೋರಕೃತ್ಯ ಎಸಗಿದ್ದು ಅಕ್ಷಮ್ಯ ಅಪರಾಧ. ನಾಗರಿಕ ಸಮಾಜ ಇದನ್ನೊಂದು ಕೇವಲ ದುರಂತ ಘಟನೆ ಎಂದು ಪರಿಗಣಿಸದೆ ಚಿಂತನ-ಮಂಥನ ಮಾಡಿ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ನಮ್ಮ ಆಸ್ಪತ್ರೆಯ ಆಯಾ ಮತ್ತು ವಾರ್ಡ್​ಬಾಯ್ಗಳು ಪ್ರತಿವರ್ಷ ಶಾಲೆ ಆರಂಭದಲ್ಲಿ ವೈದ್ಯರ ಹತ್ತಿರ ಹಣ ದೇಣಿಗೆ ಪಡೆದು ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದರು. ನಾನು ‘ಯಾಕೆ, ಸರ್ಕಾರ ಪುಕ್ಕಟೆ ಶಿಕ್ಷಣ ಕೊಡಲು ಸರ್ಕಾರಿ ಶಾಲೆ ತೆರೆದಿದೆಯಲ್ಲ? ನೀವು ಯಾಕೆ ಬೇಡಿಕೊಂಡು ಸಾಲಮಾಡಿ ಓದಿಸಬೇಕು?’ ಎಂದು ಕೇಳಿದಾಗ ಅವರು- ‘ಇಲ್ಲ ಮೇಡಂ, ಸರ್ಕಾರಿ ಶಾಲೆಯ ಸ್ಥಿತಿ ತುಂಬ ಶೋಚನೀಯ. ಅಲ್ಲಿಗೆ ಕಳಿಸಿದರೆ ಮಕ್ಕಳು ಹಾಳಾಗುತ್ತಾರೆ’ ಎಂದರು. ಹಾಗಾದರೆ ಶಿಕ್ಷಣಸಂಸ್ಥೆಗಳ ಶೋಚನೀಯ ಸ್ಥಿತಿಗೆ ಸರ್ಕಾರವೇ ನೇರಹೊಣೆ. ಸರಿಯಾದ ಕಟ್ಟಡ, ಶೌಚಗೃಹವಿಲ್ಲದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಕೊಡಬೇಕೆಂದು ಸರ್ಕಾರದ ಮೇಲೆ ಸಮಾಜ ಒತ್ತಡ ಹಾಕಲೇಬೇಕು.

ಸರ್ಕಾರಿ ಶಾಲೆಯ ದುಸ್ಥಿತಿಯಿಂದ ಬೇಸತ್ತ ಜನ ಬೇರೆ ದಾರಿಯಿಲ್ಲದೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಖಾಸಗಿ ಶಾಲೆಯವರು ಪರಿಸ್ಥಿತಿಯ ಪ್ರಯೋಜನ ಪಡೆದು ಸಿಕ್ಕಾಪಟ್ಟೆ ಡೊನೇಷನ್ ಫೀಸ್ ಬೆಳೆಸಿ ಸಮಾಜವನ್ನು ದೋಚುತ್ತಿದ್ದಾರೆ. ಇತ್ತ ಹುಲಿ, ಅತ್ತ ನದಿ ಎಂಬ ಪರಿಸ್ಥಿತಿಯಲ್ಲಿ ಪಾಲಕರು ಮಕ್ಕಳಿಗೆ ಓದಿಸಲು ಪರದಾಡುತ್ತಿದ್ದಾರೆ.

ವಾಸ್ತವ ಸ್ಥಿತಿ ಏನು? ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಕಳಪೆಯೇ? ಇದು ವಾಸ್ತವಕ್ಕೆ ದೂರ. ಕಾರಣ, ಫಲಿತಾಂಶ ಬಂದಾಗ ಹಳ್ಳಿಯ ಮಕ್ಕಳೇ ಮುಂದೆ. ಅದರಲ್ಲೂ ಹುಡುಗಿಯರೇ ಹೆಚ್ಚು ಅಂಕ ಪಡೆಯುವುದು.

ಸ್ವಾಮಿ ವಿವೇಕಾನಂದರ ತಾಯಿ ಭುವನೇಶ್ಬರಿ ಜಗತ್ತಿನ ಎಲ್ಲ ತಾಯಂದಿರಿಗೆ ಮಾದರಿ. ಒಂದು ಸಲ ಪುಟ್ಟ ನರೇಂದ್ರ ಸಾರೋಟಿನಲ್ಲಿ ತಂದೆ-ತಾಯಿಯರ ಮಧ್ಯೆ ಕುಳಿತು ಹೋಗುತ್ತಿದ್ದಾಗ ಕುದುರೆಗಾಡಿ ಓಡಿಸುವವರ ಕೌಶಲ ಕಂಡು ನಿಬ್ಬೆರಗಾಗಿ ನೋಡುತ್ತಿದ್ದ. ಕಾರಣ, ಕೈಯಲ್ಲಿಯ ಲಗಾಮು ಎಳೆದರೆ ಕುದುರೆ ಲೀಲಾಜಾಲವಾಗಿ ಕಲ್ಕತ್ತೆಯ ರಸ್ತೆಯಲ್ಲಿ ಎಡಬಲ ತಿರುಗುತ್ತ ಓಡುತ್ತಿತ್ತು. ಜಗತ್ತಿನಲ್ಲಿ ಇದಕ್ಕಿಂತ ಹೆಚ್ಚು ಕೌತುಕದ ಕೌಶಲವಿಲ್ಲ ಎಂದು ಯೋಚಿಸುತ್ತಿದ್ದ. ಬಾಲ ನರೇಂದ್ರನನ್ನುದ್ದೇಶಿಸಿ ತಂದೆ ಗಂಭೀರವಾಗಿ ಕೇಳಿದರು- ‘ಮಗೂ ನರೇಂದ್ರ, ದೊಡ್ಡವನಾಗಿ ನೀನು ಏನಾಗುತ್ತೀಯಪ್ಪ?’. ಕುದುರೆಗಾಡಿಯಲ್ಲಿ ಮಗ್ನನಾಗಿದ್ದ ಚಿಕ್ಕ ನರೇಂದ್ರ, ‘ಅಪ್ಪಾಜಿ, ನಾನು ಕುದುರೆಗಾಡಿ ಓಡಿಸುವವನು ಆಗುತ್ತೇನೆ’. ಮಗನ ಮಾತು ಕೇಳಿ ಕೆರಳಿದ ತಂದೆ ರೇಗುತ್ತ ಮಗನ ಬೆನ್ನಿಗೆ ಬಲವಾಗಿ ಒಂದು ಏಟುಕೊಟ್ಟರು. ಅವರಿಗೆ ಮಗ ದೊಡ್ಡ ಬ್ಯಾರಿಸ್ಟರ್ ಅಥವಾ ಕಲೆಕ್ಟರ್ ಆಗಬೇಕೆಂಬ ಆಸೆಯಿತ್ತು! ನರೇಂದ್ರನ ತಾಯಿ ಮನೆಗೆ ಹೋದಮೇಲೆ ಮಗನ ಕೈಹಿಡಿದು ಕರೆದುಕೊಂಡು ಹೋಗಿ ಗೋಡೆಯ ಮೇಲಿನ ಸುಂದರ ಚಿತ್ರ ತೋರಿಸಿ, ‘ಮಗೂ, ನೀನು ಸಾರಥಿಯೇ ಆಗುವುದಾದರೆ ಖಂಡಿತ ಸಾರಥಿಯಾಗು ಕಂದ. ಆದರೆ ಕೇವಲ ಒಂದು ಕುದುರೆಗಾಡಿ ಓಡಿಸುವ ಸಾರಥಿಯಲ್ಲ; ಈ ಕೃಷ್ಣಪರಮಾತ್ಮನಂಥ, ವಿಶ್ವಕ್ಕೇ ದಾರಿ ತೋರಿಸುವ ಸಾರಥಿಯಾಗು ನನ್ನ ಕಂದ!’ ಎಂದಳು. ಹೀಗೆ ತಾಯಿಯ ಪ್ರೋತ್ಸಾಹದಿಂದ ಜೀವನದಲ್ಲಿ ಗುರಿಇಟ್ಟುಕೊಂಡು ನಡೆದ ವಿವೇಕಾನಂದ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ ಮಹಾನ್ ಚೈತನ್ಯವಾದರು! ಮಕ್ಕಳ ಮೇಲೆ ತಮ್ಮ ಆಸೆ ಆಕಾಂಕ್ಷೆ ಹೇರಿ ಒತ್ತಡ ತರುವ ತಂದೆ-ತಾಯಂದಿರು ತಾಳ್ಮೆಯಿಂದ ಮಕ್ಕಳಿಗೆ ಮಾರ್ಗದರ್ಶನ ಮಾಡುವುದನ್ನು ಆ ತಾಯಿ ಭುವನೇಶ್ವರಿಯಿಂದ ಕಲಿಯಬೇಕು.

ಇನ್ನು, ಗಂಡ ಮಕ್ಕಳನ್ನು ಕಾನ್ವೆಂಟಿಗೆ ದಾಖಲು ಮಾಡಲಿಲ್ಲವೆಂದು ಮುನಿಸಿಕೊಳ್ಳುವ ಮಹಿಳೆಯರು, ವಿಶ್ವವಿಖ್ಯಾತ ಥಾಮಸ್ ಆಲ್ವಾ ಎಡಿಸನ್ ಅವರ ತಾಯಿಯಿಂದ ಕಲಿಯಬೇಕು- ಹೇಗೆ ಮಕ್ಕಳ ಮನದಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದು. ಶತಮಾನದ ವಿಜ್ಞಾನಿ ಎಂದು ಹೆಸರುವಾಸಿಯಾಗಿ ನೊಬೆಲ್ ಪಾರಿತೋಷಕ ಪಡೆದ ಥಾಮಸ್ ಆಲ್ವಾ ಎಡಿಸನ್, ಚಿಕ್ಕವನಾಗಿದ್ದಾಗ ಸ್ವಲ್ಪ ಕೆಪ್ಪ, ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಜತೆಗೆ ವಿಪರೀತ ಕುತೂಹಲದ ಸ್ವಭಾವ. ಅವನು ಕೇಳುವ ಪ್ರಶ್ನೆಗಳಿಗೆ ಬೇಸತ್ತ ಶಿಕ್ಷಕಿ ಜೋರಾಗಿ ಅವನ ಕೆನ್ನೆಗೆ ಹೊಡೆದಿದ್ದರು. ಇದರಿಂದ ನೊಂದ ಅವನ ತಾಯಿ ಆವೇಶದಿಂದ ಆ ಶಿಕ್ಷಕಿಗೆ ಹೇಳಿದರು- ‘ಇಂದು ನನ್ನ ಮಗನನ್ನು ಪೆದ್ದ ಎಂದು ನಿಂದಿಸಿ ಕೆನ್ನೆಗೆ ಹೊಡೆದಿದ್ದೀರಲ್ಲ, ನೆನಪಿಡಿ ಒಂದು ದಿನ ನನ್ನ ಮಗ ವಿಶ್ವಕ್ಕೇ ಬೆಳಕು ತೋರಿಸುವಂಥವನು ಆಗುತ್ತಾನೆ’. ಆದರೂ ತುಂಬ ಕಠಿಣಹೃದಯಿ ಶಿಕ್ಷಕಿ ಮಗುವನ್ನು ಶಾಲೆಯಿಂದ ತೆಗೆದುಹಾಕಿ ಒಂದು ಚೀಟಿ ಕೊಟ್ಟು- ‘ಹೋಗು, ನಿಮ್ಮಮ್ಮನಿಗೆ ಕೊಡು’ ಎಂದು ಹೇಳಿ ಮನೆಗಟ್ಟಿದರು. ಆ ಚೀಟಿ ಓದಿದ ತಾಯಿಯ ಹೃದಯ ಕರಗಿ ಕಣ್ಣೀರಾಗಿ ಧಾರಾಕಾರವಾಗಿ ಸುರಿದವು. ಮಗನನ್ನು ತಬ್ಬಿಕೊಂಡು- ‘ಕಂದಾ, ನೀನು ತುಂಬ ಬುದ್ಧಿವಂತ; ನಿನಗೆ ಕಲಿಸುವ ಶಕ್ತಿ ತಮಗಿಲ್ಲ ಅಂತ ನಿನ್ನ ಟೀಚರ್ ಬರೆದಿದ್ದಾರೆ. ಪರವಾಗಿಲ್ಲ, ನಾನಿದ್ದೇನಲ್ಲ’ ಎಂದು ತಬ್ಬಿಕೊಂಡು ಮಗುವಿಗೆ ತನ್ನ ಬುದ್ಧಿಶಕ್ತಿ, ಆತ್ಮವಿಶ್ವಾಸ ತುಂಬಿಸಿ ಓದಿಸಿದರು. ಮುಂದೆ ಅವನು ಬಲ್ಬ್​ನಲ್ಲಿ ವಿದ್ಯುತ್ ಹರಿಸಿ ವಿಶ್ವಕ್ಕೇ ಬೆಳಕು ತೋರಿಸಿದರು. ಹತ್ತು ಹಲವು ಆವಿಷ್ಕಾರಕ್ಕೆ ಹೆಸರಾದ ಅವರು 84ನೇ ವಯಸ್ಸಿನಲ್ಲಿ 1093 ಪೇಟೆಂಟ್ ಪಡೆದು ನೊಬೆಲ್ ಪಾರಿತೋಷಕ ಪಡೆದು ಜಗತ್ತಿಗೆ ಛಾಯಾಚಿತ್ರ ಕೊಟ್ಟ ಮಹಾನ್ ಸಾಧಕ. ಒಂದು ದಿನ ಹಳೇಕಪಾಟು ಸ್ವಚ್ಛಗೊಳಿಸುವಾಗ ಒಂದು ಹಳೇಚೀಟಿ ಕೈಗೆ ಸಿಕ್ಕಿತು. ಅದನ್ನು ಓದಿದ ಎಡಿಸನ್ ಇಡೀದಿನ ಗಳಗಳನೆ ಅತ್ತರು. ಕಾರಣ ಆ ಚೀಟಿಯಲ್ಲಿ- ‘ಟ್ಠ್ಟ ಠಟ್ಞ ಜಿಠ ಚ್ಞ ಚಛಛ್ಝಛಿಛ ್ಚಜ್ಝಿಛ (ಞಛ್ಞಿಠಿಚ್ಝ್ಝ ಜ್ಝಿ್ಝ. ಗಛಿ ್ಚnಟಠಿ ಠಿಛಿಚ್ಚಜ ಜಜಿಞ. ್ಗ್ಠ ಢಟ್ಠ್ಟಛ್ಝಿ್ಛ ಠಿಚkಛಿ ಠಿಜಛಿ ್ಟಠಟಟ್ಞಠಜಿಚಿಜ್ಝಿಜಿಠಿಢ ಟ್ಛ ಛಿಛ್ಠ್ಚಠಿಜ್ಞಿಜ ಜಜಿಞ’ ಅಂತ ಬರೆದಿತ್ತು. ಅದನ್ನು ಓದಿದ ಅವರ ಬಾಯಿಂದ ಬಂದ ಉದ್ಗಾರ- ‘ಒಂದು ಬುದ್ಧಿಮಾಂದ್ಯ ಮಗುವನ್ನು ಅತ್ಯಂತ ಪ್ರತಿಭಾವಂತ ಆವಿಷ್ಕಾರಿಯನ್ನಾಗಿಸಿದ್ದು ನನ್ನ ಮಹಾನ್ ಮಾತೆ!’. ಅವನ ತಾಯಿ ನ್ಯಾನ್ಸಿ ಮ್ಯಾಥ್ಯೂಸ್ ಇಲ್ಲಿಯಟ್ ಇಂದು ಇಡೀ ವಿಶ್ವದ ಮಾತೆಯರಿಗೆ ಮಾದರಿ. ಮಣ್ಣಿನ ಮುದ್ದೆಯಂತಿರುವ ಮಗುವನ್ನು ತಾಯಿ ತನ್ನ ಪ್ರೀತಿವಾತ್ಸಲ್ಯ, ಶ್ರಮದಿಂದ ಜಗತ್ತಿಗೇ ಜ್ಯೋತಿಯನ್ನು ಕೊಡುವವನನ್ನಾಗಿಸಬಹುದು. ಚೆನ್ನಾಗಿರುವ ಮಕ್ಕಳನ್ನು ಕೆರೆಗೆ ತಳ್ಳುವುದು ಪರಿಹಾರವಲ್ಲ. ಅದು ಹೀನ ಅಕ್ಷಮ್ಯ ಕೃತ್ಯ!

ಏನೂ ಓದದ, ಶಾಲೆಗೆ ಹೋಗದ ನಮ್ಮ ಹಿಂದಿನ ಕಾಲದ ತಾಯಂದಿರು, ಮಗು ತೊಟ್ಟಿಲಲ್ಲಿರುವಾಗಲೇ ಸಕಾರಾತ್ಮಕ ಚಿಂತನೆ ತುಂಬುವ ಜೋಗುಳ ಹಾಡುತ್ತಿದ್ದರು- ‘ಮಾತಿಗೆ ಮಾಣಿಕ್ಯವಾಗು, ನೀತಿಗೆ ಪ್ರಭುವಾಗು, ಜಗಕೆ ಜ್ಯೋತಿಯಾಗು ನನಕಂದ’ ಎಂಬುದಾಗಿ.

ಸನ್ಮಾರ್ಗ ತೋರಿಸುವ ತಾಯಿ ಅಂದಾಗ ನನಗೆ ನೆನಪಾಗುವುದು ಡಾ. ರೆಹಮತ್ ಉಲ್ಲಾ ಅವರ ಮಾತು. ಒಂದು ಸಲ ವಿಶ್ವ ಸಮ್ಮೇಳನದಲ್ಲಿ ವಿಶ್ವವಿಖ್ಯಾತರಾದ ಅವರೊಂದಿಗೆ ಮಾತನಾಡುತ್ತ ಊಟದ ಸ್ಥಳಕ್ಕೆ ಬಂದೆ. ಅಲ್ಲಿ ಅವರು ಪಕ್ಕಕ್ಕೆ ಸರಿದು ‘ಲೇಡೀಸ್ ಫಸ್ಟ್’ ಅಂದರು. ನಾನು ‘ಆಫ್ಟರ್ ಯೂ, ಸರ್’ ಅಂದೆ. ಅದಕ್ಕೆ ಅವರು, ‘ಇಲ್ಲ ಇಲ್ಲ, ನಾನು ಮಹಿಳೆಯನ್ನು ಹಿಂದೆ ಹಾಕಿ ಮುಂದೆ ಹೋದರೆ ನನ್ನ ತಾಯಿ ನನ್ನನ್ನು ಕ್ಷಮಿಸುವುದಿಲ್ಲ’ ಎಂದರು. 80 ವರ್ಷದ ಅವರಿಗೆ ಕೇಳಿದೆ- ‘ನಿಮ್ಮ ತಾಯಿ ಇನ್ನೂ ಬದುಕಿದ್ದಾರೇನು? ನೀವು ಭಾಗ್ಯವಂತರು’. ಅದಕ್ಕೆ ಅವರು, ‘ಇಲ್ಲ ನನ್ನ ತಾಯಿ ಎಲ್ಲೇ ಇದ್ದರೂ ನಾನು ತಪು್ಪಮಾಡಿದರೆ, ಮಹಿಳೆಯರಿಗೆ ಅಗೌರವ ತೋರಿಸಿದರೆ ನನ್ನನ್ನು ಕ್ಷಮಿಸುವುದಿಲ್ಲ’ ಎಂದರು. ಮಗುವಾಗಿ ಮಾತೆಯಿಂದ ಕಲಿತ ಸದ್ಗುಣಗಳು ವಯಸ್ಸಾದರೂ ಹಾಗೇ ಇರುತ್ತವೆ. ಒಳ್ಳೆ ನಡತೆಯನ್ನು ಮಕ್ಕಳು ಮಾತೆಯಿಂದ ಕಲಿಯುತ್ತಾರೆ. ಶಾಲೆ ಶಿಕ್ಷಣವನ್ನು ಕೊಡಬಹುದು, ಆದರೆ ಸಂಸ್ಕಾರ ಕೊಡಬೇಕಾದ್ದು ತಾಯಿ. ಅವರೇ ಮಕ್ಕಳನ್ನು ಸಾಯಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡರೆ ಏನು ಪ್ರಯೋಜನ?

ಸರ್ಕಾರ ಆದಷ್ಟೂ ಶೀಘ್ರವಾಗಿ ಸರ್ಕಾರಿ ಶಾಲೆಗಳ ಸ್ಥಿತಿ ಉತ್ತಮಗೊಳಿಸುವ ಕ್ರಮ ಜರುಗಿಸಬೇಕು. ಉತ್ತಮ ಸಮಾಜಕ್ಕೆ ಸದ್ವಿದ್ಯೆ ಕೊಡುವ ಶಿಕ್ಷಣಸಂಸ್ಥೆಗಳು ಬೆಳೆಯಬೇಕು.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top