Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಜೀವಜಲ ಜಗತ್ತಿನಲ್ಲಿ ಜೀವನಕ್ಕಾಧಾರ

Saturday, 12.05.2018, 3:03 AM       No Comments

| ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ 

ಮಾರ್ಚ್ ಕೊನೆವಾರ ರಾಮನವಮಿ ಆಚರಿಸಿ ಬೀದಿಬೀದಿಗಳಲ್ಲಿ ನೀರುಮಜ್ಜಿಗೆ, ಬೆಲ್ಲದ ಪಾನಕ, ಕೋಸಂಬರಿ ಹಂಚಿ ಕೆಲವರು ನಮ್ಮ ಪರಂಪರೆಯನ್ನು ಮೆರೆದರು. ಅದನ್ನು ನೋಡಿದಾಗ ನನಗೆ ನೆನಪಾಗಿದ್ದು ನನ್ನ ಅಜ್ಜಿ-ಅಜ್ಜ. ಅವರು ಕೇವಲ ಒಂದು ದಿನವಲ್ಲ, ಬೇಸಿಗೆ ಕಾಲ ಪೂರ್ತಿ ಆಚರಿಸುತ್ತಿದ್ದರು. ನನ್ನ ಅಜ್ಜಿ ನೀರುಮಜ್ಜಿಗೆಯನ್ನು ಮನೆಯ ಅಕ್ಕಪಕ್ಕದವರಿಗೆ ಹಂಚಿದರೆ, ನಮ್ಮಜ್ಜ ಶನಿವಾರ ಸಂತೆಯ ದಿನ ದೊಡ್ಡ ತಾಮ್ರದ ಹಂಡೆಯಲ್ಲಿ ಶುಚಿಯಾದ ನೀರು ತುಂಬಿಸಿಕೊಂಡು ಮನೆಯ ಜಗಲಿಯ ಮೇಲೆ ಕುಳಿತು ಸಂತೆಗೆ ಬಂದ ರೈತರಿಗೆ ಒಂದು ತುಂಡು ಬೆಲ್ಲ ಕೊಟ್ಟು ಬೊಗಸೆಯಲ್ಲಿ ನೀರು ಹಾಕುತ್ತಿದ್ದರು.

ಬಾಯಾರಿದವರಿಗೆ ನೀರು ಉಣಿಸುವ ಸುಸಂಸ್ಕೃತಿ ನಮ್ಮಜ್ಜನವರದಾಗಿತ್ತು. ದನಗಳ ಮೇಲೆ ದಯೆ ಇರುವ ಪಶುವೈದ್ಯರಾಗಿದ್ದ ಅವರು ಕಲ್ಲಿನ ದೋಣಿಯಲ್ಲಿ ದನಗಳಿಗೂ ನೀರು ತುಂಬಿಸುತ್ತಿದ್ದರು. ಇದನ್ನು ನಾನು ಚಿದಾನಂದ ಮೂರ್ತಿಗಳ ಮನೆ ‘ಮಿಂಚು’ವಿನ ಮುಂದೆ ಇಂದಿಗೂ ಕಂಡಿದ್ದೇನೆ! ಹಲವಾರು ವರ್ಷಗಳಿಂದ ಸಹಸ್ರಾರು ಜನರಿಗೆ ನೀರುಣಿಸಿದ ನನ್ನಜ್ಜ 95ನೇ ವಯಸ್ಸಿನಲ್ಲಿ ಹಾಸಿಗೆ ಹಿಡಿದಾಗ, ವೈದ್ಯಳಾದ ನಾನು ಕಣ್ಣೀರಿಡುತ್ತ ಹಾಸಿಗೆ ಪಕ್ಕ ಕುಳಿತಿದ್ದೆ. ‘ಯಾಕೆ ಸುಮ್ಮನೆ ಕಣ್ಣೀರು ಹಾಕುತ್ತೀ, ಸಂಸಾರದಲ್ಲಿ ಎಲ್ಲ ನೋಡಿ ಆಯ್ತಲ್ಲ’ ಅಂತ ಸಂತೃಪ್ತಿಯಿಂದ ಅಕ್ಷಯ ತೃತೀಯಾಕ್ಕಾಗಿ ದೇವರ ಧ್ಯಾನ ಮಾಡುತ್ತ ಕಾಯ್ದು, ಅಂದು ಸ್ನಾನ, ಪೂಜೆ, ಪ್ರಸಾದ ಮುಗಿಸಿ ಮನೆಯಲ್ಲಿ ಎಲ್ಲರದೂ ಊಟವಾಗಿದೆಯೇ ಎಂದು ವಿಚಾರಿಸಿ, ಹೊಲದಲ್ಲಿ ಕೆಲಸ ಮಾಡುವವರಿಗೆ ರೊಟ್ಟಿಬುತ್ತಿ ಕಳಿಸಿ ಆಯ್ತೆ ಎಂದು ಕೇಳಿ, ನಂತರ ನನ್ನಪ್ಪನಿಗೆ ‘ಈಶ್ವರ, ಗುರುಗಳ ಹತ್ತಿರ ಕರೆದುಕೊಂಡುಹೋಗು’ ಅಂತ ಅಪ್ಪಣೆ ಮಾಡಿ, ತಮ್ಮ ದೀಕ್ಷಾಗುರುಗಳ ಚಿತ್ರದ ಮುಂದೆ ಕೈಮುಗಿದು ಕುಳಿತಲ್ಲಿಯೇ ಲಿಂಗೈಕ್ಯರಾದರು.

ಅಕ್ಷಯ ತೃತೀಯಾ ಅತ್ಯಂತ ಶುಭದಿನ, ಯಾವುದೇ ಉತ್ತಮಕಾರ್ಯ ಮಾಡಲು ಪ್ರಶಸ್ತದಿನ ಅನ್ನುತ್ತಿದ್ದ ಅವರು, ತಮ್ಮ ಮೋಕ್ಷಕ್ಕೂ ಅಕ್ಷಯ ತೃತೀಯಾವನ್ನು ಆರಿಸಿಕೊಂಡಿದ್ದರು. ಅಂದು ಬಸವ ಜಯಂತಿ, ಶಿವ ಜಯಂತಿಗೆ ಬಂದ ಭಜನಾಮಂಡಳಿಯವರು ‘ಅಜೋಬಾ ಇನ್ನಿಲ್ಲ’ ಅನ್ನುತ್ತ ರಾತ್ರಿಯೆಲ್ಲ ಭಜನೆ ಮಾಡಿದರು. ಮರುದಿನ ಶವಸಂಸ್ಕಾರಕ್ಕೆ ಊರಿನವರಷ್ಟೇ ಅಲ್ಲ ಅಕ್ಕಪಕ್ಕದ ಹಳ್ಳಿಯವರೂ ಬಂದಿದ್ದರು. ಆ ಜನಸಾಗರ ನೋಡಿ ಅಂದು ನನಗೆ ಅರಿವಾಗಿದ್ದು ಒಂದು ಗುಟುಕು ನೀರಿಗೆ ಎಷ್ಟು ಬೆಲೆ ಇದೆ ಎಂದು! ಇಡೀ ಉತ್ತರ ಕರ್ನಾಟಕದ ನೀರಾವರಿ ವ್ಯವಸ್ಥೆಯ ರೂವಾರಿಯಾದ ಅವರ ಮಗ, ಅಂದರೆ ನನ್ನ ದೊಡ್ಡಪ್ಪ ಅಪಘಾತದಿಂದ ತಲೆಗೆ ಪೆಟ್ಟಾಗಿ ಮಲಗಿದಾಗ ಕೂಡ ಇದೇ ರೀತಿ ಜನ ಸೇರಿದ್ದರು. ಒಬ್ಬ ಮುದುಕಿ ಮೂಲೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದರು. ನಮ್ಮ ಸಂಬಂಧಿ ಅಲ್ಲದ ಮುದುಕಿಗೆ ನನ್ನ ತಂಗಿ, ‘ಯಾರವ್ವ ನೀವು?’ ಅಂತ ಕೇಳಿದ್ದಕ್ಕೆ ಆಕೆ- ‘ನಮ್ಮ ಊರಿಗೆ, ಜನರಿಗೆ, ಹೊಲಕ್ಕೆ ನೀರು ಉಣಿಸಿದ ಪುಣ್ಯಾತ್ಮ ಬೇಹೋಷ್ ಆಗಿ ಮಲಗಿದ್ದು ನೋಡಿ ಜೀವ ತಡೆಯಲಿಲ್ಲ. ಅದಕ್ಕೆ ಕಣ್ಣೀರು ಬಂತ್ರೀ’ ಎಂದಿದ್ದರು!

ನೀರಿಗೆ ಯಾಕೆ ಇಷ್ಟು ಮಹತ್ವವೆಂದರೆ ಜೀವಜಲವಿಲ್ಲದೇ ಜಗತ್ತೇ ಇಲ್ಲ. ನೀರಿಲ್ಲದೆ ನಾವು ಕೇವಲ ಮೂರುದಿನ ಬದುಕಬಹುದು. ಹೊಲಕ್ಕೆ ನೀರಿಲ್ಲದಿದ್ದರೆ ರೈತರ ಬದುಕೇ ಬರಡು. ಅದರಲ್ಲೂ ಬೇಸಿಗೆ ಕಾಲದಲ್ಲಿ ಬಾಯಾರಿಕೆ ಹೆಚ್ಚು. ಇಂಥ ಸಮಯದಲ್ಲಿ ನೀರು, ಎಳನೀರು ಜೀವಜಲ. ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳೂ ಹೆಚ್ಚು. ಕಾರಣ ಜನರು ಬಾಯಾರಿಕೆ ತಡೆಯಲಾಗದೇ ಸಿಕ್ಕ ಕಲುಷಿತ ನೀರನ್ನು ಕುಡಿದು ವಾಂತಿ-ಭೇದಿಗೆ ತುತ್ತಾಗುತ್ತಾರೆೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಶುಚಿಯಾದ ಕ್ಲೋರೀನ್​ಯುುಕ್ತ ನೀರು ಹಲವು ಹಳ್ಳಿಗಳಲ್ಲಿ ಮರೀಚಿಕೆಯಾಗಿದೆ.

ನಮ್ಮ ಭೂಮಂಡಲದ ಶೇಕಡ 71 ಭಾಗವನ್ನು ನೀರು ಆವರಿಸಿದೆ. ಆದರೆ ಭೂಮಿಯ ಮೇಲಿನ ಶೇ. 95.5ರಷ್ಟು ನೀರು ಮಹಾಸಾಗರಗಳಲ್ಲಿರುವ ಉಪು್ಪನೀರಾಗಿದೆ. ಆದ್ದರಿಂದ ಭೂಮಿಯ ಮೇಲೆ ಹೇರಳ ನೀರಿದ್ದರೂ ಕುಡಿಯಲು, ಕೃಷಿಮಾಡಲು ಪ್ರಯೋಜನವಾಗುವುದಿಲ್ಲ. ಇದರಿಂದ ಎಲ್ಲ ಕಡೆಯೂ ನೀರಿಗಾಗಿ ಹಾಹಾಕಾರ ಹೆಚ್ಚಿದೆ. ನೀರಿಗಾಗಿ ಯುದ್ಧನಡೆಯುವ ಸಂಭವವಿದೆ. ಸದಾ ಯುದ್ಧದಲ್ಲಿ ಮುಳುಗಿದ್ದ ಇಸ್ರೇಲ್ ಪ್ರಧಾನಿ ಭಾರತಕ್ಕೆ ಬಂದಾಗ ಸಮುದ್ರದ ಉಪು್ಪನೀರನ್ನು ಕುಡಿಯುವ ಸಿಹಿನೀರು ಮಾಡುವ ವಾಹನವನ್ನು ಮೋದಿಯವರಿಗೆ ಉಡುಗೊರೆಯಾಗಿ ಕೊಟ್ಟರು. ಆದರೆ ಭಾರತದಂಥ ದೊಡ್ಡದೇಶದಲ್ಲಿನ 135 ಕೋಟಿ ಜನಸಂಖ್ಯೆಗೆ ಇಂಥ ಎಷ್ಟು ವಾಹನಗಳಿದ್ದರೂ ಸಾಲದು. ಹಾಗಾದರೆ ಭಾರತಕ್ಕಿರುವ ಉಳಿದ ಮಾರ್ಗವೆಂದರೆ ನದಿಗಳ ಜೋಡಣೆ. ಇದಕ್ಕೆ ಮೋದಿಯವರು ಮುಂದೆ ಹೆಜ್ಜೆಯಿಟ್ಟರೂ ಇದು ಭಗೀರಥ ಪ್ರಯತ್ನವೇ ಸರಿ.

ನಮ್ಮ ಶರೀರದಲ್ಲಿ ಶೇ. 70 ಭಾಗ ನೀರು ತುಂಬಿದೆ. ವಿವಿಧ ಅವಯವಗಳಲ್ಲಿ ನೀರು ಇರುವುದಲ್ಲದೆ, ಶರೀರದಲ್ಲಿರುವ 60 ಟ್ರಿಲಿಯನ್ ಜೀವಕಣಗಳಲ್ಲಿ ನೀರು ತುಂಬಿದೆ. ಒಂದು ಸೆಕೆಂಡಿಗೆ 60 ಟ್ರಿಲಿಯನ್ ರಾಸಾಯನಿಕ ಕ್ರಿಯೆ ನಡೆಯುತ್ತಿದ್ದು ಅದಕ್ಕೆ ಪ್ರಾಣವಾಯು ಪೋಷಣೆಗಳ ಜತೆಗೆ ನೀರು ಅತ್ಯವಶ್ಯಕ. ಇದಲ್ಲದೆ ಶರೀರಕ್ಕೆ ಬೇಡವಾದ ತ್ಯಾಜ್ಯಗಳನ್ನು ಮೂತ್ರಪಿಂಡಗಳ ಮುಖಾಂತರ ಹೊರಹಾಕಲು ನೀರು ಬೇಕೇಬೇಕು. ನಮ್ಮ ಉಸಿರಿನಲ್ಲಿ, ಬೆವರಿನಲ್ಲಿ, ಮೂತ್ರದಲ್ಲಿ ನೀರನ್ನು ನಿರಂತರ ಕಳೆದುಕೊಳ್ಳುತ್ತಿರುತ್ತೇವೆ. ಆದ್ದರಿಂದ ಪ್ರತಿದಿನ 1.5-2 ಲೀಟರ್ ನೀರನ್ನು ಅವಶ್ಯವಾಗಿ ಕುಡಿಯಲೇಬೇಕು. ಪ್ರತಿನಿತ್ಯ ಪ್ರತಿಯೊಬ್ಬ ವ್ಯಕ್ತಿಗೆ ಸರಾಸರಿ 200 ಲೀಟರ್ ನೀರು ಬೇಕು. ಅಂದರೆ, ಸ್ನಾನಕ್ಕೆ, ಬಟ್ಟೆ-ಪಾತ್ರೆ ತೊಳೆಯಲು, ಶೌಚಗೃಹದಲ್ಲಿ ಫ್ಲಷ್ ಮಾಡಲು ಇತ್ಯಾದಿ ಕೆಲಸಗಳಿಗೆ. ಆದರೆ ಜನರು ಅದರಲ್ಲೂ ಕಲಿತವರು ಅನಾಗರಿಕರಿಗಿಂತ ಕೆಟ್ಟದಾಗಿ ನೀರನ್ನು ಪೋಲುಮಾಡುತ್ತಾರೆ. ಮನೆಬಾಗಿಲ ಮುಂದೆ ಪೈಪ್​ನಲ್ಲಿ ನೀರು ಬಿಟ್ಟುಕೊಂಡು ಕಾರು ತೊಳೆಯುವುದಕ್ಕೆ ನೀರು ಪೋಲುಮಾಡುತ್ತಾರೆ. ಬಕೆಟ್​ನಲ್ಲಿ ನೀರು ತೆಗೆದುಕೊಂಡು ಬಟ್ಟೆಯಲ್ಲಿ ಒರೆಸಿದರೆ ಕಾಲುಬಕೆಟ್​ನಷ್ಟು ನೀರಿನಲ್ಲಿ ಸ್ವಚ್ಛಗೊಳಿಸಬಹುದು.

ಒಂದು ದಿನ ಆಲಮಟ್ಟಿ ಜಲಾಶಯಕ್ಕೆ ಹೋದಾಗ ವೃದ್ಧ ಕೆಲಸಗಾರರು ನನ್ನನ್ನು ಕಂಡು ಸಂತಸದಿಂದ ನಮ್ಮ ದೊಡ್ಡಪ್ಪನವರಾದ ಕರ್ನಾಟಕದ ಭಗೀರಥ ಬಾಳೇಕುಂದ್ರಿಯವರ ಬಗ್ಗೆ ತಿಳಿಸಿದರು. ‘‘ಅವ್ವಾ, ಎಲ್ಲ ಇನ್​ಸ್ಪೆಕ್ಷನ್ ಮಾಡಿ ದಣದಿರತಾರ ಸಾಹೇಬರು ಅಂತ, ಮೈಕೈ ನೋವು ಕಡಿಮೆ ಆಗಲಿ ಅಂತ ನಾನು ಎರಡು ಬಕೆಟ್ ನೀರು ಸ್ನಾನಕೆ ತಂದುಕೊಟ್ಟರ, ಬಾಳೇಕುಂದ್ರಿ ಸಾಹೇಬರು ಬರೀ ಮುಕ್ಕಾಲು ಬಕೆಟ್​ನಲ್ಲಿ ಸ್ನಾನ ಮುಗಿಸಿಬಿಡುತ್ತಿದ್ದರು. ನಾನು ಚಕಿತನಾಗಿ ‘ಸಾಹೇಬ್ರ ಜಳಕ ಮಾಡಲಿಲ್ಲರ್ರೀ?’ ಅಂತ ಕೇಳಿದರೆ ಅವರು ‘ನೋಡ್ರಿ, ನೀರು ಬಹಳ ಬೆಲೆಬಾಳುವುದು; ಅದನ್ನು ಮೈಮೇಲೆ ಸುರಕೊಂಡು ಗಟಾರಿಗೆ ಹರಿಸಬಾರದು. ಎಷ್ಟು ಬೇಕು ಅಷ್ಟೇ ನೀರನ್ನು ಬಳಸಬೇಕು’ ಅಂತ ತಾಕೀತು ಮಾಡಿದರ್ರಿ. ಅದರಿಂದ ನಾನೂ ಕಡಿಮೆ ನೀರಿನಲ್ಲಿ ಜಳಕ ಮಾಡತೀನಿರ್ರೀ’ ಎಂದು ತಿಳಿಸಿದರು. ಓದದ ಒಬ್ಬ ಕಚೇರಿ ಜವಾನನಿಗೆ ಅರ್ಥವಾದದ್ದನ್ನು, ಕಲಿತ ನಾಗರಿಕರು ಕಲಿಯದೇ ಇರುವುದು ದುರಂತ.

ಹಲವು ರೀತಿಯಿಂದ ನಾವು ನೀರು ಪೋಲಾಗದಂತೆ ನೋಡಿಕೊಳ್ಳಬೇಕಿದೆ. ಉದಾಹರಣೆಗೆ ನಾವು ಎಲ್ಲ ನಲ್ಲಿಗಳಿಗೆ ‘ಊಟಟಠಿ ್ಚ್ಞ್ಟ್ಝ ಹಾಕಿದರೆ, ಹಲ್ಲುಜ್ಜಿಕೊಳ್ಳುವಾಗ, ಮುಖ-ಕೈ ತೊಳೆದುಕೊಳ್ಳುವಾಗ ನೀರು ಪೋಲಾಗುವುದನ್ನು ನಿಲ್ಲಿಸಬಹುದು. ಕಡಿಮೆ ನೀರಿನಲ್ಲಿ ಫ್ಲಷ್ ಮಾಡುವ ವಿಧಾನಗಳು ಬಂದಿವೆ. ಚೊಂಬಲ್ಲಿ ನೀರು ಸುರಿದುಕೊಳ್ಳುವ ಬದಲು ಷೊವರ್ ಬಳಸಬಹುದು. ವಿಪರೀತ ನೀರು ಪೋಲುಮಾಡುವ ಟಬ್​ಬಾತ್ ಮಾಡಲೇಕೂಡದು. ಹೀಗೆ ನೀರು ಉಳಿಸುವುದರಿಂದ ನಾವು ಪ್ರತಿಯೊಬ್ಬರೂ ಕೇವಲ 150 ಲೀಟರ್ ನೀರಿನಲ್ಲಿ ಬದುಕಬಹುದು. ಸಿಕ್ಕಸಿಕ್ಕಲ್ಲಿ ಬೋರ್​ವೆಲ್ ಕೊರೆದು ಭೂಮಿ ಕೆಳಗಿನ ನೀರನ್ನು ಮುಗಿಸುವ ಬದಲು, ಮಳೆನೀರು ಕೊಯ್ಲು ಮಾಡಿ ಅಂತರ್ಜಲ ಉಳಿಸಿ ನಮ್ಮ ಹೂದೋಟ, ಗಿಡಮರಗಳಿಗೆ ಬಳಸಬಹುದು. ಅತ್ಯಂತ ಕಡಿಮೆ, ಅಂದರೆ 3-5 ಸಾವಿರ ರೂಪಾಯಿ ಖರ್ಚುಮಾಡಿದರೆ ಆಯ್ತು, ವರ್ಷಾನುಗಟ್ಟಲೆ ಮಳೆನೀರು ಕೊಯ್ಲು ಮಾಡುತ್ತಿರಬಹುದು. ಜನಸಾಮಾನ್ಯರಂತೆ ರೈತರು ಕೂಡ ನೀರು ಪೋಲುಮಾಡದೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡರೆ ಉತ್ತಮ. ಮೂರು-ನಾಲ್ಕು ಪಟ್ಟು ಹೆಚ್ಚು ನೀರು ಬೇಕಾಗುವ ಫಸಲನ್ನು ಅದರಲ್ಲೂ ಹಾನಿಕಾರಕ ತಂಬಾಕು ಬೆಳೆಯುವುದನ್ನು ಬಿಟ್ಟುಬಿಡಬೇಕು.

ದುರಂತವೆಂದರೆ ಪವಿತ್ರಗಂಗೆಯನ್ನು ಕಲುಷಿತಗೊಳಿಸಿದ ನಮ್ಮ ದೇಶದಲ್ಲಿ ನೀರಿನ ಮಹತ್ವ ಮರೆತು ನೀರಿಗಾಗಿ ರಾಜಕೀಯ ಲಾಭಕ್ಕಾಗಿ ಸಂಘರ್ಷ ಮಾಡುವುದು ಹೆಚ್ಚಾಗಿದೆ. ಜೀವಜಲ ಜಗತ್ತಿನ ಸಕಲ ಜೀವಾತ್ಮರಿಗೆ ಬೇಕು. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಸಸ್ಯಾಹಾರಿ ಆನೆಯೊಂದು, ನೀರಿಗಾಗಿ ಹಲವು ಮೈಲಿ ಕ್ರಮಿಸಿದ ಮಾಂಸಾಹಾರಿ ಸಿಂಹಿಣಿ ಮತ್ತು ಅದರ ಮರಿ ಸುಸ್ತಾದಾಗ ಆ ಮರಿಯನ್ನು ತನ್ನ ಸೊಂಡಿಲಿನಲ್ಲಿ ಎತ್ತಿಕೊಂಡು ಎರಡು ಮೈಲಿ ದೂರ ನಡೆದು ನೀರು ಇದ್ದಲ್ಲಿ ಅದನ್ನು ಇಳಿಸಿದ್ದು ಕೇವಲ ಸೋಜಿಗ ಅಲ್ಲ, ಮಾನವರೂ ಕಲಿಯಬೇಕಾದ ಅತ್ಯಂತ ಮೌಲಿಕ ವಿಚಾರ. ಸ್ವಾರ್ಥದ ಕೆಟ್ಟ ರಾಜಕೀಯ ಬಿಟ್ಟು ಎಲ್ಲರ ಬದುಕಿಗೆ ಬೇಕಾದ ಜೀವಜಲ ಉಳಿಸಲು, ಸದ್ಬಳಕೆ ಮಾಡಲು ಮುಂದಾಗೋಣ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top