Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ವೈರಾಣುಗಳಿಂದ ವಿಶ್ವದ ವಿನಾಶ ತಡೆಯುವುದು ಹೇಗೆ?

Saturday, 26.05.2018, 3:05 AM       No Comments

ಮ್ಮ ಅಜ್ಜನವರು ತಾವು ಅನಾಥರಾಗಿದ್ದುದು ಹೇಗೆ ಎಂಬ ಕತೆ ಹೇಳುತ್ತ, ಮಹಾಮಾರಿ ಪ್ಲೇಗಿನ ಪಿಡುಗು ಬಂದಾಗ ಹೇಗೆ ಜನ ಹೆದರಿ ಊರುಬಿಟ್ಟು ಹೋಗುತ್ತಿದ್ದರು, ಸತ್ತುಬಿದ್ದ ಇಲಿ ಕಂಡು ಹೆದರುತ್ತಿದ್ದರು, ತಂದೆ-ತಾಯಿ ಕಳೆದುಕೊಂಡ ಮಕ್ಕಳು ಹೇಗೆ ರೋದಿಸುತ್ತಿದ್ದರು ಎಂದು ಹೇಳುವಾಗ ನಾವು ಚಕಿತರಾಗಿ ಕೇಳುತ್ತಿದ್ದೆವು. ಇತ್ತೀಚೆಗೆ ಶುಶ್ರೂಷಕಿ ಲಿನಿ ಪುತ್ತುಸರಿ ಬಾವಲಿ ಜ್ವರದಿಂದ ಸತ್ತರೆ, ಅವರ ಶವವನ್ನು ಮನೆಯವರಿಗೆ ಕೊಡದೆ ಇರುವುದರಿಂದ ಅವರ ಮಕ್ಕಳಿಗೆ ತಾಯಿ ಸತ್ತಿದ್ದು ತಿಳಿದೇ ಇಲ್ಲ! ಅಮ್ಮ ಆಸ್ಪತ್ರೆ ಡ್ಯೂಟಿಗೆ ಹೋಗಿದ್ದಾರೆ ಬರುತ್ತಾರೆ ಎಂದು ಅವರು ಕಾಯುತ್ತಿದ್ದ ಕತೆ ಕೇಳಿದಾಗ, ಕರುಳು ಕಿತ್ತುಬಂತು. ಮಲೇಷ್ಯಾದಿಂದ ಹಿಂದಿರುಗಿದ ಇಬ್ಬರು ಬಾವಲಿಜ್ವರ ಪೀಡಿತ ರೋಗಿಗಳ ಶುಶ್ರೂಷೆ ಮಾಡುತ್ತ ಆ ವೈರಾಣು ಸಿಸ್ಟರ್ ಲಿನಿ ಶರೀರ ಸೇರಿ ಅವರೂ ಬಾವಲಿಜ್ವರಕ್ಕೆ ತುತ್ತಾಗಿರುವುದು ದುರಂತವೇ ಸರಿ.

ಇಂದು ಪ್ಲೇಗಿನಿಂದ ಯಾರೂ ಸಾಯುವುದಿಲ್ಲ. ಕಾರಣ ಆ ರೋಗಾಣುಗಳನ್ನು ಸಾಯಿಸುವ ಶಕ್ತಿಯಿರುವ ಆಂಟಿಬಯಾಟಿಕ್​ಗಳು ನಮ್ಮ ಹತ್ತಿರ ಬೇಕಾದಷ್ಟಿವೆ. ಆಂಟಿಬಯಾಟಿಕ್ ಅಂದರೆ ಒಂದು ರೋಗಾಣುವಿನಿಂದ ಉತ್ಪತ್ತಿಯಾದ ಪದಾರ್ಥವನ್ನು ಇನ್ನೊಂದು ರೋಗಾಣುವನ್ನು ಸಾಯಿಸಲು ಬಳಸುವುದು. ವಿಶ್ವದ ಪ್ರಪ್ರಥಮ ಆಂಟಿಬಯಾಟಿಕ್ ಕಂಡುಹಿಡಿದದ್ದು ಡಾ. ಅಲೆಕ್ಸಾಂಡರ್ ಫ್ಲೆಮಿಂಗ್. ಅವರ ತಂದೆ ಒಬ್ಬ ಸಾಮಾನ್ಯ ಬಡರೈತರಾಗಿದ್ದರು. ಒಂದು ದಿನ ಹೊಲದಿಂದ ಬರುವಾಗ, ಪುಟ್ಟಹುಡುಗನೊಬ್ಬ ಕೆಸರಿನ ಮಡುವಲ್ಲಿ ಸಿಕ್ಕಿಕೊಂಡು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕಂಡರು. ಆತನನ್ನು ಮಡುವಿನಿಂದ ಹೊರತೆಗೆದು, ಬಿಸಿನೀರಲ್ಲಿ ಸ್ನಾನಮಾಡಿಸಿ, ಬಿಸಿಹಾಲು ಕುಡಿಸಿ ಬೆಚ್ಚಗೆ ಮಲಗಿಸಿದರು. ಮರುದಿನ ಒಬ್ಬ ಲಾರ್ಡ್ ಕುದುರೆ ಸಾರೋಟಿನಲ್ಲಿ ಬಂದಿಳಿದು, ತನ್ನ ಮಗುವನ್ನು ರಕ್ಷಿಸಿದ್ದಕ್ಕೆ ಅವರಿಗೆ ನಾಣ್ಯ ತುಂಬಿದ ಚೀಲವನ್ನು ಬಹುಮಾನವಾಗಿ ಕೊಡಲು ಹೋದರು. ಆಗ ಈ ರೈತ ವಿನಮ್ರರಾಗಿ- ‘ನನಗೆ ದಯವಿಟ್ಟು ನಿಮ್ಮ ಹಣ ಬೇಡ. ನನ್ನ ಮಗನಂತೆ ಅವನನ್ನು ಉಳಿಸಿದ್ದೇನೆ’ ಎಂದರು. ತನ್ನ ಮಗನ ಪಕ್ಕ ನಿಂತಿದ್ದ ಆ ರೈತರ ಮಗನನ್ನು ನೋಡಿ ಲಾರ್ಡ್- ‘ಹಾಗಾದರೆ, ನಾನು ನಿಮ್ಮ ಮಗನನ್ನು ನನ್ನ ಮಗನಂತೆ ಓದಿಸುತ್ತೇನೆ’ ಎಂದರು! ಆ ಪ್ರಾಮಾಣಿಕ ಅಂತಃಕರಣದ ಬಡರೈತರ ಮಗನೇ ಮುಂದೆ ಚೆನ್ನಾಗಿ ಓದಿ, ವಿಶ್ವದ ಪ್ರಥಮ ಆಂಟಿಬಯಾಟಿಕ್ ಎನಿಸಿಕೊಂಡ ‘ಪೆನಿಸಿಲಿನ್’ ಅನ್ನು ಕಂಡುಹಿಡಿದು ನೊಬೆಲ್ ಪುರಸ್ಕಾರವನ್ನು ಪಡೆದ ಡಾ. ಅಲೆಕ್ಸಾಂಡರ್ ಫ್ಲೆಮಿಂಗ್! ಆ ರೈತ ಜೀವ ಉಳಿಸಿದ ಆ ಮಗುವೇ ಮುಂದೆ ಇಂಗ್ಲೆಂಡಿನ ಪ್ರಧಾನಿಯಾದ ವಿನ್​ಸ್ಟನ್ ರ್ಚಚಿಲ್! ಅಲೆಕ್ಸಾಂಡರ್ ಫ್ಲೆಮಿಂಗ್ ತಾವು ಕಂಡುಹಿಡಿದ ಪೆನಿಸಿಲಿನ್​ನಿಂದ ಲಕ್ಷಾಂತರ ಜೀವಗಳನ್ನು ರೋಗಾಣುಗಳ ದಾಳಿಯಿಂದ ಉಳಿಸಿದರು. ಸ್ವತಃ ರ್ಚಚಿಲ್ ಅವರಿಗೆ ನ್ಯುಮೋನಿಯಾ ಆದಾಗ, ಪೆನಿಸಿಲಿನ್ ಇಂಜೆಕ್ಷನ್ ಕೊಟ್ಟು ಅವರ ಜೀವ ಉಳಿಸಲಾಯಿತು!

ಅಂದಿನಿಂದ ಇಲ್ಲಿಯವರೆಗೂ ರೋಗಾಣುಗಳನ್ನು ನಿಯಂತ್ರಿಸಲು ಹತ್ತು ಹಲವು ಆಂಟಿಬಯಾಟಿಕ್​ಗಳ ಆವಿಷ್ಕಾರವಾಗಿದೆ. ಇನ್ನೇನು, ಮಾನವ ರೋಗಾಣುಗಳ ಮೇಲೆ ನಿಯಂತ್ರಣ ಸಾಧಿಸಿದ ಅನ್ನುವಷ್ಟರಲ್ಲಿ ಮೇಲಿಂದ ಮೇಲೆ ವೈರಾಣುಗಳು ದಾಳಿ ನಡೆಸುತ್ತಿವೆ. ಈಗ ವೈರಾಣುಗಳಿಂದ ವಿಶ್ವದ ಮಾನವರ ವಿನಾಶ ತಡೆಯುವುದು ಹೇಗೆ ಎಂಬ ಚಿಂತೆ ವೈದ್ಯರದ್ದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗಂಭೀರವಾಗಿ ಯೋಚಿಸುತ್ತಿದೆ.

ವೈರಾಣು ಎಂದರೆ ಏನು?: ವೈರಾಣು ಅತ್ಯಂತ ಸೂಕ್ಷ್ಮಜೀವಿ. ಕಣ್ಣಿಗೂ, ಸೂಕ್ಷ್ಮದರ್ಶಕದಲ್ಲೂ ಕಾಣದಷ್ಟು ಚಿಕ್ಕದಾಗಿದ್ದು, ಪ್ರಾಣಿ-ಪಕ್ಷಿ, ಮಾನವರ ಶರೀರದ ಜೀವಕಣಗಳಲ್ಲಿ ಸೇರಿ ಅಲ್ಲಿ ಬೆಳೆಯುತ್ತ ಹೋಗಿ ಆ ಜೀವವನ್ನು ನಾಶಮಾಡುತ್ತವೆ. ಈಗ ವೈರಾಣುಗಳನ್ನು ಸಾಮಾನ್ಯ ಪ್ರಯೋಗಾಲಯಗಳಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ. ಪೂನಾದಲ್ಲಿರುವ ‘ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ’ಗೆ ರಕ್ತಪರೀಕ್ಷೆಗೆ ಕಳಿಸಬೇಕಾಗುತ್ತದೆ. ವೈರಾಣುವನ್ನು ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್​ನಲ್ಲಿ ಮಾತ್ರ ನೋಡಬಹುದು. ಕಾರಣ, ಅವು 0.004-0.1 ಮೈಕ್ರಾನ್ ಅಂದರೆ, ಸಾಮಾನ್ಯ ರೋಗಾಣುಗಳಿಗಿಂತ 100 ಪಟ್ಟು ಚಿಕ್ಕದಾಗಿರುವುವು. ಇಂಥವು ಒಂದು ಸಲ ನಮ್ಮ ಶರೀರವನ್ನು ಸೇರಿಕೊಂಡರೆ ಸಾಕು, 103 ಟ್ರಿಲಿಯನ್ ಜೀವಕಣಗಳನ್ನು ಧ್ವಂಸಗೊಳಿಸುವಂತೆ ಕೋಟ್ಯಾನುಕೋಟಿ ಸಂಖ್ಯೆಯಲ್ಲಿ ಬೆಳೆಯುತ್ತವೆ! ರೋಗಾಣುಗಳಿಂದ ಬಂದ ಜ್ವರವನ್ನು ಆಂಟಿಬಯಾಟಿಕ್ಸ್ ಕೊಟ್ಟು ನಿಯಂತ್ರಿಸಬಹುದು. ಆದರೆ ವೈರಾಣುವಿನಿಂದ ಬರುವ ಕಾಯಿಲೆಗಳನ್ನು ಕಂಡುಹಿಡಿದು ಗುಣಪಡಿಸುವುದು ಕಷ್ಟಸಾಧ್ಯ. ಕಾರಣ, ಹಲವು ಹೊಸ ವೈರಾಣುಗಳಿಗೆ ಮದ್ದು ಇಲ್ಲ.

ವಿಶ್ವದಲ್ಲಿಯೇ ಅತಿಭಯಂಕರ ಎನಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ವೈರಾಣು ಕಾಯಿಲೆಗಳಲ್ಲಿ ಪ್ರಮುಖವಾಗಿರುವಂಥವು ಹೀಗಿವೆ-

  • ಎಚ್​ಐವಿ-ಏಡ್ಸ್​ ಆಫ್ರಿಕಾದ ಮಂಗಗಳಿಂದ ಮಾನವರಿಗೆ ಅಂಟಿಕೊಂಡ ಈ ವೈರಾಣು, ಮನುಷ್ಯರಿಂದ ಮನುಷ್ಯರಿಗೆ ರಕ್ತದ ಮುಖಾಂತರ, ಇಲ್ಲವೇ ಲೈಂಗಿಕ ಕ್ರಿಯೆಯಿಂದ ಕಾಳ್ಗಿಚ್ಚಿನಂತೆ ಹಬ್ಬುತ್ತದೆ. ವಿಶ್ವಾದ್ಯಂತ ಅಗಾಧ ಜನರ ಸಾವಿಗೆ ಕಾರಣವಾದ ಎಚ್​ಐವಿ-ಏಡ್ಸ್ ವೈರಾಣು, ಗರ್ಭಿಣಿಯಿಂದ ಗರ್ಭದಲ್ಲಿರುವ ಭ್ರೂಣಕ್ಕೂ ಅಂಟಿಕೊಳ್ಳುತ್ತದೆ!
  • ಕಾಮಾಲೆಗೆ ಕಾರಣವಾಗುವ ಹೆಪಟೈಟಿಸ್ ಎ,ಬಿ,ಸಿ ವೈರಾಣುಗಳು, ಪಿತ್ತಜನಕಾಂಗದ ವೈಫಲ್ಯದಿಂದ ಸಾವಿರಾರು ಜನರು ಸಾಯಲು ಕಾರಣವಾಗಿವೆ. ಈಗ ಇದಕ್ಕೆ ಚುಚ್ಚುಮದ್ದು ಬಂದಿರುವುದರಿಂದ ಸಾವುನೋವಿನ ಸಂಖ್ಯೆ ಇನ್ನು ಮುಂದೆ ಕಡಿಮೆ ಆಗಬಹುದು.
  • ಜರ್ಮನ್ ದಢಾರ (Rubella Syndrome) ಗರ್ಭಧರಿಸಿ ಮೊದಲ ಮೂರು ತಿಂಗಳಿಗೆ ಬಂದರೆ ಭ್ರೂಣವನ್ನು ನಾಶಪಡಿಸುತ್ತದೆ ಇಲ್ಲವೇ ಆ ಮಗುವಿನಲ್ಲಿ ಹುಟ್ಟುಕುರುಡು (Cataract), ಕಿವುಡು ಮತ್ತು ಹೃದಯದ ನ್ಯೂನತೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಕೇಂದ್ರ ಸರ್ಕಾರವೀಗ ‘ಇಂದ್ರಧನುಷ್’ ಲಸಿಕೆಯಲ್ಲಿ ಇದನ್ನು ಸೇರಿಸಿದೆ. ಪ್ರತಿಯೊಂದು ಮಗುವಿಗೂ ತಪ್ಪದೆ ರುಬೆಲ್ಲ ಲಸಿಕೆ ಕೊಡಿಸಿದರೆ, ಮುಂದೆ ಅವರಿಗೆ ಹುಟ್ಟುವ ಮಕ್ಕಳಿಗೂ ರಕ್ಷಣೆ ಸಿಗುತ್ತದೆ.
  • ರೇಬಿಸ್ ವೈರಾಣು ಹುಚ್ಚುನಾಯಿ ಕಚ್ಚುವುದರಿಂದ ಬರುತ್ತದೆ. ಇದರಿಂದ ಪ್ರತಿವರ್ಷ ಸಹಸ್ರಾರು ಜನ ಸಾಯುತ್ತಾರೆ. ಈಗ ರೇಬಿಸ್​ಗೆ ಚಿಕಿತ್ಸೆ ಲಭ್ಯವಿದೆ.
  • ಕಾಲರಾ ವಿಷಯದಲ್ಲಿ ಹೇಳುವುದಾದರೆ, ಸಂಬಂಧಿತ ವೈರಾಣುವಿನಿಂದ ಆಗುವ ವಾಂತಿ-ಭೇದಿಗೆ ಈಗ ಚಿಕಿತ್ಸೆ ಲಭ್ಯವಿರುವುದರಿಂದ ಸಾಯುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ನೀರನ್ನು ಕುದಿಸಿ ಆರಿಸಿ ಕುಡಿಯುವುದರಿಂದ, ಶುದ್ಧನೀರಿನ ಬಳಕೆಯಿಂದ ಇಂದು ಕಾಲರಾ ನಿಯಂತ್ರಣದಲ್ಲಿದೆ.
  • ಚಿಕೂನ್ ಗುನ್ಯಾ, ಸೊಳ್ಳೆ ಕಚ್ಚುವುದರಿಂದ ಹಬ್ಬುತ್ತದೆ. ಕೀಲುನೋವಾಗಿ ನಡೆಯಲಾಗದಂತೆ ಮಾಡುತ್ತದೆ. ಇದಕ್ಕೆ ಚಿಕಿತ್ಸೆ ಇಲ್ಲ. ಕೇವಲ ಕೀಲುನೋವು ಶಮನಕ್ಕೆ ಔಷಧ ಬಳಸಬಹುದು. ಮುಖ್ಯವಾಗಿ ಸೊಳ್ಳೆ ಕಚ್ಚದಂತೆ ನಿಗಾವಹಿಸಬೇಕು.
  • ಡೆಂಘ ಜ್ವರ ಕೂಡ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಈ ಜ್ವರದಲ್ಲಿ ರೋಗನಿರೋಧಕ ಶಕ್ತಿ ಇರುವ ರಕ್ತದ ಬಿಳಿಕಣಗಳು (Platelets) ಕಡಿಮೆ ಆಗಿ ರಕ್ತಸ್ರಾವವಾಗಿ ಸಾವು ಉಂಟಾಗಬಹುದು.
  • ಇನ್​ಫ್ಲುಯೆಂಜಾದಿಂದ 1918-19ರಲ್ಲಿ ಬರೋಬ್ಬರಿ 40 ದಶಲಕ್ಷ ಜನ ಸತ್ತರು ಅಂದರೆ, ಮೊದಲನೇ ವಿಶ್ವಯುದ್ಧದಲ್ಲಿ ಸತ್ತವರಿಗಿಂತ ಹೆಚ್ಚುಜನ ಸತ್ತರು ಅಂದರೆ, ವೈರಾಣುಗಳು ಎಷ್ಟು ಭಯಂಕರವೆಂದು ಊಹಿಸಬಹುದು. ನಾನು ಅಮೆರಿಕಕ್ಕೆ ಅಧ್ಯಯನಕ್ಕೆ ಹೋದಾಗ ವಿಚಿತ್ರವಾಗಿ ಕಂಡಿದ್ದು, ಪ್ರತಿಯೊಬ್ಬ ವೈದ್ಯರೂ ತಪ್ಪದೆ ಫ್ಲೂ ಚುಚ್ಚುಮದ್ದು ಮಾಡಿಕೊಳ್ಳುತ್ತಿದ್ದುದು! ಆದರೆ ನಮ್ಮ ದೇಶದಲ್ಲಿ ಯಾರೂ ಚುಚ್ಚುಮದ್ದು ಮಾಡಿಕೊಳ್ಳುವುದಿಲ್ಲ. ಇದು ‘droplet infection’ ಅಂದರೆ, ಕೆಮ್ಮಿದಾಗ ಸೀನಿದಾಗ ಕೋಟ್ಯಂತರ ವೈರಾಣುಗಳು ಬಾಯಿಯಿಂದ ಮೂಗಿನಿಂದ ಹೊರಬರುತ್ತವೆ. ಕ್ರಿಕೆಟ್​ನಲ್ಲಿ ಒಬ್ಬ ಅತಿವೇಗದ ಬೌಲರ್ ಗಂಟೆಗೆ 96 ಕಿ.ಮೀ. ವೇಗದಲ್ಲಿ ಚೆಂಡು ಎಸೆಯುತ್ತಾನೆ. ಆದರೆ ಫ್ಲೂ ಅಥವಾ ಎಚ್1ಎನ್1 ಹಕ್ಕಿಜ್ವರ ಅಥವಾ ಸಾರ್ಸ್​ನಲ್ಲಿ ರೋಗಿ ಸೀನಿದಾಗ ಇಲ್ಲವೇ ಕೆಮ್ಮಿದಾಗ ಗಂಟೆಗೆ 166 ಕಿ.ಮೀ. ವೇಗದಲ್ಲಿ ವೈರಾಣುಗಳು ಮುಖಕ್ಕೆ ಅಪ್ಪಳಿಸಿದಾಗ, ಸುತ್ತಲಿರುವವರಿಗೆ ಮೂರೇ ದಿನದಲ್ಲಿ ಜ್ವರ ಬರುತ್ತದೆ. ಹೀಗೆ ಅತಿಹೆಚ್ಚು ವೇಗದಲ್ಲಿ ವೈರಾಣುಗಳು ಮನುಷ್ಯರಿಂದ ಮನುಷ್ಯರಿಗೆ ಹಬ್ಬುತ್ತವೆ. ಆದ್ದರಿಂದ ಪ್ರತಿಯೊಬ್ಬರೂ, ಅದರಲ್ಲೂ ಫ್ಲೂ ಇರುವವರು ಕೆಮ್ಮುವಾಗ ಸೀನುವಾಗ ಮುಖವನ್ನು ಒಂದು ಕಡೆಗೆ ತಿರುಗಿಸಿ, ಕರವಸ್ತ್ರ ಇಲ್ಲವೇ ಕೈಯನ್ನು ಅಡ್ಡಲಾಗಿ ಹಿಡಿದು ಅದರಲ್ಲಿ ಕೆಮ್ಮಬೇಕು ಇಲ್ಲವೇ ಸೀನಬೇಕು. ನಂತರ ರೋಗನಿರೋಧಕ ಆಂಟಿಸೆಪ್ಟಿಕ್ ಲೋಶನ್​ನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಜನರು ಇಂದು ‘ನಮಸ್ಕಾರ’ ಎಂಬುದಾಗಿ ಕೈಮುಗಿಯುವುದನ್ನು ಬಿಟ್ಟು ಕೈಕುಲುಕುತ್ತಿದ್ದಾರೆ. ಇದರಿಂದ ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಈ ವೈರಾಣುಗಳು ಸಲೀಸಾಗಿ ಹಸ್ತಾಂತರವಾಗುತ್ತವೆ! ಆದ್ದರಿಂದ ಭಾರತೀಯರಾಗಿ ನಮ್ಮ ಹಳೆಯ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳುವುದು ಉತ್ತಮ. ಉದಾಹರಣೆಗೆ, ಹಿಂದೆ ನಾವ್ಯಾರೂ ಬಾಯಿಕಚ್ಚಿ ನೀರು ಕುಡಿಯುತ್ತಿರಲಿಲ್ಲ, ಕೈಕಾಲು ತೊಳೆಯದೆ ಮನೆಯಲ್ಲಿ ಏನೂ ಮುಟ್ಟುತ್ತಿರಲಿಲ್ಲ, ಊಟ ಮಾಡುತ್ತಿರಲಿಲ್ಲ. ಆದರೆ ಇಂದು ಈ ಹಳೆಯ ಪದ್ಧತಿಗಳನ್ನು ಗಾಳಿಗೆ ತೂರುತ್ತಿದ್ದೇವೆ, ಶುಚಿತ್ವದ ಬಗ್ಗೆ ಗಮನ ಕೊಡುತ್ತಿಲ್ಲ. ಇದರಿಂದ ರೋಗ ಹಬ್ಬುತ್ತಿದೆ.

ಇತ್ತೀಚೆಗೆ ಕೇರಳದಲ್ಲಿ ಕಂಡುಬಂದ ಬಾವಲಿಜ್ವರದಿಂದ ಬಚಾವ್ ಆಗಬೇಕೆಂದರೆ ರೋಗಿಯ ಹತ್ತಿರ ಇರುವವರು ಕೈಗೆ ಕೈಗವುಸು ಹಾಕಿ ಅವರ ಎಂಜಲು, ರಕ್ತ, ಮಲಮೂತ್ರದಿಂದ ವೈರಾಣು ಹಬ್ಬದಂತೆ ನೋಡಿಕೊಳ್ಳಬೇಕು. ಬಾವಲಿ ಕಚ್ಚಿದ ಹಣ್ಣು, ಕೊಳೆತ ಹಣ್ಣಿಗೆ ಸೇರಿಸಿದ ಸೇಂದಿ ಅಥವಾ ಸಾರಾಯಿ ಕುಡಿದರೂ ಈ ಜ್ವರ ಬರುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರ, ಹಣ್ಣು-ಹಂಪಲನ್ನು ಚೆನ್ನಾಗಿ ತೊಳೆದು ಶುಚಿಯಾಗಿಸಿ, ಸಿಪ್ಪೆತೆಗೆದು ತಿನ್ನಬೇಕು. ಬಾವಲಿಜ್ವರ ಪ್ರಥಮವಾಗಿ 1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪಾಹ್ ವಲಯದಲ್ಲಿ, ಹಂದಿ ಸಾಕಣೆ ಮಾಡುವ ರೈತರಲ್ಲಿ ಕಂಡುಬಂತು. ಆದ್ದರಿಂದ ಇದಕ್ಕೆ ನಿಪಾಹ್ ವೈರಾಣು ಅಂದರೆ ‘Niv’ ಎಂದು ಕರೆದರು. ಈ ವೈರಾಣುವಿಗೆ ಇನ್ನೂ ಚುಚ್ಚುಮದ್ದು ಬಂದಿಲ್ಲ. ಇದು ಅತ್ಯಂತ ಮಾರಣಾಂತಿಕವಾಗಿದ್ದು, ಶೇ. 74ರಷ್ಟು ರೋಗಿಗಳಲ್ಲಿ ಸಾವು ಉಂಟಾಗುವುದರಿಂದ ಜನರಲ್ಲಿ ಭಯ ಆವರಿಸಿದೆ.

ಸಾಮಾನ್ಯವಾಗಿ ವೈರಾಣುಗಳಿಂದ ಬರುವ ರೋಗ, ಮಂಗ, ಇಲಿ, ಬಾವಲಿ, ಹಂದಿ, ಹಕ್ಕಿ, ಸೊಳ್ಳೆಗಳಿಂದ ಮನುಷ್ಯರಿಗೆ ಬರುವುದರಿಂದ, ಜನರು ‘ಶುಚಿತ್ವವೇ ದೈವತ್ವ’ ಅನ್ನುವ ನಮ್ಮ ಹಳೆಯ ಮಾತನ್ನು ಮೊದಲು ಗಮನದಲ್ಲಿಟ್ಟುಕೊಂಡು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೈಕಾಲು ತೊಳೆಯದೆಯೇ ಏನನ್ನೂ ಮುಟ್ಟಬಾರದು, ರೋಗ ಬಂದವರನ್ನು ‘ಸಂಪರ್ಕತಡೆ’ (Quarantine) ಮಾಡುವುದರ ಜತೆಗೆ ಮುಸುಕು (Mask) ಹಾಕಿದರೆ ವೈರಾಣುಗಳು ಪಸರಿಸದಂತೆ ತಡೆಯಬಹುದು. ಕುಡಿಯುವ ನೀರು, ಆಹಾರ ಶುದ್ಧವಾಗಿರಬೇಕು. ನೆನಪಿಡಿ, ‘ರೋಗ ತಡೆಗಟ್ಟುವಿಕೆಯು ಚಿಕಿತ್ಸೆಗಿಂತ ಉತ್ತಮ’ ಎಂಬುದು ವೈರಾಣು ರೋಗಗಳಿಗೆ ಅಕ್ಷರಶಃ ಅನ್ವಯಿಸುತ್ತದೆ. ನಮ್ಮೀ ‘ಸ್ವಚ್ಛಭಾರತ’ವನ್ನು ‘ಸ್ವಸ್ಥಭಾರತ’ ಮಾಡೋಣ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top