ನಾನು ಓಡಿಹೋಗಿದ್ದೇನೆ ಎಂದು ಹೇಳುವುದು ಬಿಜೆಪಿಗಷ್ಟೇ ಹೊಂದಿಕೆಯಾಗುತ್ತದೆ ಎಂದ ವಿಜಯ್‌ ಮಲ್ಯ

ಲಂಡನ್‌: ಒಂಬತ್ತು ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ನಾನು 1992 ರಿಂದಲೂ ಇಂಗ್ಲೆಂಡ್‌ ನಿವಾಸಿಯಾಗಿರುವುದನ್ನು ಮರೆಮಾಚಿ ದೇಶ ತೊರೆದು ಓಡಿ ಹೋಗಿದ್ದೇನೆ ಎಂದಷ್ಟೇ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಮಲ್ಯ, ವಾಸ್ತವ ಏನೆಂದರೆ ನಾನು 1992ರಿಂದಲೂ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವುದನ್ನು ನಿರ್ಲಕ್ಷ್ಯಿಸಲಾಗಿದೆ. ನಾನು ಓಡಿ ಹೋಗಿದ್ದೇನೆ ಎಂದಷ್ಟೇ ಹೇಳುವುದು ಬಿಜೆಪಿಗೆ ಸೂಕ್ತವಾಗಿದೆ.

ಪ್ರಧಾನಿ ಮೋದಿಯವರು ಸಂದರ್ಶನವೊಂದರಲ್ಲಿ ಬಿಜೆಪಿ ಸರ್ಕಾರವು ಮಲ್ಯ ಬ್ಯಾಂಕುಗಳಿಂದ ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಡೆಯಲಾಗಿದೆ ಎಂದು ಹೇಳುತ್ತಾರೆ ಆದರೆ ಬಿಜೆಪಿ ವಕ್ತಾರರು ಮಾತ್ರ ನನ್ನನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾನು ನೋಡಿದ ಮೋದಿ ಸಂದರ್ಶನದಲ್ಲಿ ನಾನು 9,000 ಕೋಟಿ ರೂ.ಗಳನ್ನು ಬ್ಯಾಂಕುಗಳಿಂದ ಸಾಲ ಪಡೆದಿದ್ದು, ಅವರ ಸರ್ಕಾರ 14,000 ಕೋಟಿ ರೂ. ಮೌಲ್ಯದ ನನ್ನ ಆಸ್ತಿಯನ್ನು ವಶಕ್ಕೆ ಪಡೆದಿದೆ ಎಂದು ಹೇಳಿದ್ದಾರೆ. ಹಾಗಾಗಿ ಉನ್ನತ ವರ್ಗವೇ ಸಂಪೂರ್ಣ ಸಾಲವಸೂಲಿಯನ್ನು ದೃಢಪಡಿಸಿದೆ. ಹೀಗಿದ್ದರೂ ಬಿಜೆಪಿ ವಕ್ತಾರರು ಮಾತ್ರ ತಮ್ಮ ವಾಕ್ಚಾತುರ್ಯವನ್ನು ಮುಂದುವರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸರಕಾರವು ವಿಜಯ್ ಮಲ್ಯನಿಗೆ ಬ್ಯಾಂಕುಗಳು ನೀಡಿದ್ದಕ್ಕಿಂತ ಹೆಚ್ಚಿನದನ್ನು ಮರಳಿ ಪಡೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗಾಗಿ ನಾನು ವಿನಮ್ರತೆಯಿಂದ ಸಮರ್ಥನೆಯನ್ನು ಸಲ್ಲಿಸುತ್ತೇನೆ. ಮೋದಿ ಹೇಳಿಕೆಯಂತೆಯೇ ನಾನು ಬ್ಯಾಂಕುಗಳಲ್ಲಿ ಪಡೆದಿದ್ದಕ್ಕಿಂತಲೂ ಹೆಚ್ಚಿನದ್ದನ್ನು ನನ್ನಿಂದ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ದೇಶದ ವಿವಿಧ ಬ್ಯಾಂಕುಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಮರುಪಾವತಿ ಮಾಡದೆ ದೇಶಬಿಟ್ಟು ಹೋಗಿರುವ ಉದ್ಯಮಿ ವಿಜಯ್​ ಮಲ್ಯ ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಮಾ. 2016 ರಲ್ಲಿ ದೇಶದಿಂದ ಪರಾರಿಯಾಗಿರುವ ಮಲ್ಯ ಗಡಿಪಾರಿಗೆ ಭಾರತ ಮನವಿ ಸಲ್ಲಿಸಿದ್ದು, ಭಾರತಕ್ಕೆ ಹಸ್ತಾಂತರದ ವಿರುದ್ಧ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್)