ಅನಿವಾಸಿಗಳಿಗೆ ಸೂಕ್ತ ವ್ಯವಸ್ಥೆ

ಮಂಗಳೂರು: ಮೂರು ವರ್ಷಗಳಲ್ಲಿ ಸೌದಿಯಿಂದ ಉದ್ಯೋಗ ಕಳೆದುಕೊಂಡು ಹಿಂತಿರುಗುತ್ತಿರುವ ಅನಿವಾಸಿ  ಭಾರತೀಯರ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಅಲ್ಲಿ ತಲೆದೋರಿರುವ ಆರ್ಥಿಕ ಸ್ಥಿತ್ಯಂತರದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರು ಸಂಕಷ್ಟದಲ್ಲಿದ್ದು, ಹಿಂತಿರುಗುತ್ತಿರುವ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಇಂಡಿಯನ್ ಸೋಶಿಯಲ್ ಫಾರಂ ಆಗ್ರಹಿಸಿದೆ.

ಅನಿವಾಸಿ ಭಾರತೀಯ ಕನ್ನಡಿಗರ ಮೇಲೆ ಬೀರುತ್ತಿರುವ ಪರಿಣಾಮ ಕುರಿತು ಅಂಕಿಅಂಶಗಳಿಂದ ಕೂಡಿದ ಅಧ್ಯಯನ ವರದಿಯನ್ನು ಇಂಡಿಯನ್ ಸೋಶಿಯಲ್ ಫಾರಂ (ಕರ್ನಾಟಕ ರಾಜ್ಯ- ಪೂರ್ವ ಪ್ರಾಂತ್ಯ, ಸೌದಿ ಅರೇಬಿಯಾ) ವತಿಯಿಂದ ಸಿದ್ಧಪಡಿಸಲಾಗಿದೆ. ಶೀಘ್ರವೇ ಮುಖ್ಯಮಂತ್ರಿ ಆದಿಯಾಗಿ ಸಂಬಂಧಪಟ್ಟವರಿಗೆ ಸಲ್ಲಿಸಲಾಗುವುದು. ಈ ವರ್ಷ ಸೌದೀಕರಣಕ್ಕೆ ಮತ್ತೆ 41 ಕ್ಷೇತ್ರಗಳನ್ನು ಒಳಪಡಿಸಿದೆ. ಕುಟುಂಬದೊಂದಿಗೆ ವಾಸಿಸುವವರಿಗೆ ಲೇವಿ ಜಾರಿಗೊಳಿಸಿರುವುದರಿಂದ ಹಿಂತಿರುಗುವವರ ಸಂಖ್ಯೆ ದುಪ್ಪಟ್ಟಾಗುವ ಲಕ್ಷಣ ಗೋಚರಿಸಿವೆ. 1500 ಅನಿವಾಸಿ ಭಾರತೀಯ ಕುಟುಂಬಗಳು ಸೌದೀಕರಣದ ಸಮಸ್ಯೆಯಿಂದ ಹಿಂತಿರುಗಿವೆ. ಕರ್ನಾಟಕದ ಎನ್‌ಆರ್‌ಐ ಫಾರಂ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಾರ್ಯಕಾರಿ ಸಮಿತಿ ಸದಸ್ಯ ಮಹಮ್ಮದ್ ಶರೀಫ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೌದಿಯಿಂದ ಉದ್ಯೋಗ ಕಳೆದುಕೊಂಡು ಬರುವವರಿಗೆ ಅವರ ಕೌಶಲದ ಆಧಾರದ ಮೇಲೆ ಸೂಕ್ತ ವಲಯದಲ್ಲಿ ಪ್ರಾತಿನಿಧ್ಯ ಒದಗಿಸಬೇಕು. ಸರ್ಕಾರದ ವಿವಿಧ ಯೋಜನೆಗಳು ಸೌದಿಯಿಂದ ಹಿಂತಿರುಗುವ ಅರ್ಹ ಅನಿವಾಸಿ ಕನ್ನಡಿಗರಿಗೆ ಲಭ್ಯವಾಗಬೇಕು. ಅನಿವಾಸಿ ಕನ್ನಡಿಗರ ಮಕ್ಕಳ ಉನ್ನತ ಶಿಕ್ಷಣ ದಾಖಲಾತಿ ಸಂದರ್ಭ ಎನ್‌ಆರ್‌ಐಗಳಾಗಿ ಪರಿಗಣಿಸಿ ಅಧಿಕ ಶುಲ್ಕ ಪಡೆಯಲಾಗುತ್ತಿದ್ದು, ಸರ್ಕಾರ ಮಧ್ಯಪ್ರವೇಶಿಸಬೇಕು. ಪ್ರತಿ ವರ್ಷ ಸೌದಿಗೆ 5-10 ಸಾವಿರದವರೆಗೆ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ತೆರಳುತ್ತಿದ್ದರು. ಈಗ ಅಲ್ಲಿಂದ ಹಿಂತಿರುಗುವವರ ಜತೆ ವಲಸೆ ಹೋಗಲು ನಿರ್ಧರಿಸಿದ್ದವರಿಗೂ ಉದ್ಯೋಗ ಸೃಷ್ಟಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಮಹಮ್ಮದ್ ಬಶೀರ್, ಮಹಮ್ಮದ್ ಅಶ್ಫಾಕ್, ಇಂಡಿಯನ್ ಸೋಶಿಯಲ್ ಫಾರಂ ಕುವೈತ್‌ನ ಕಾರ್ಯಕಾರಿ ಸಮಿತಿ ಸದಸ್ಯ ಮಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ಗಲ್ಫ್ ರಾಷ್ಟ್ರಗಳಿಂದ ಹಿಂತಿರುಗಿರುವ ಅನಿವಾಸಿ ಕನ್ನಡಿಗರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕಚೇರಿ ತೆರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದರು. ಆದರೆ ಪ್ರಸ್ತುತ ಅಲ್ಲಿ ಸೌಲಭ್ಯವಿಲ್ಲ. ಜತೆಗೆ ವಿದೇಶದಲ್ಲಿರುವ ಎನ್‌ಆರ್‌ಐಗಳ ಕುರಿತು ಸಮರ್ಪಕ ಮಾಹಿತಿ ರಾಜ್ಯ ಸರ್ಕಾರದ ಬಳಿ ಇಲ್ಲ.

|ಮಹಮ್ಮದ್ ಶರೀಫ್ ತಿಳಿಸಿದರು.