ಮಹಾಲಿಂಗಪುರ: ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಭಜರಂಗದಳ ಮುಖಂಡ ಸುಹಾಸ್ ಶೆಟ್ಟಿ ಮನೆಗೆ ಬುಧವಾರ ಮಹಾಲಿಂಗಪುರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧನ ಸಹಾಯ ನೀಡಿದ್ದಾರೆ.

ಈ ಕುರಿತು ಶುಕ್ರವಾರ ವಿಜಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಹಿಂದು ಸಂಘಟನೆಗಳ ಮುಖಂಡ ರವಿ ಜವಳಗಿ, ಹಿಂದುತ್ವಕ್ಕಾಗಿ ಧರ್ಮ ರಕ್ಷಣೆಗಾಗಿ ತನ್ನ ಯೌವ್ವನವನ್ನು ಜೈಲಿನಲ್ಲಿಯೇ ಕಳೆದು ತನಗಾಗಿ ಏನು ಮಾಡಿಕೊಳ್ಳದೆ, ತನ್ನ ಜೀವನವನ್ನೇ ಹಿಂದೂ ಸಮಾಜಕ್ಕೆ ಅರ್ಪಿಸಿದ ಪುಣ್ಯಾತ್ಮನ ತಾಯಿಗೆ ಮಕ್ಕಳಾಗಿ ನಾವಿದ್ದೇವೆ. ಜತೆಗೆೆ ನಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಅವರಿಗೆ ಧೈರ್ಯ ಹೇಳಿ ಬಂದಿದ್ದೇವೆ ಎಂದರು.
ಸುಹಾಸ್ ಹತ್ಯೆ ಒಂದು ಪ್ರತಿಕಾರದ ಹತ್ಯೆಯಾಗಿದೆ. ಇದು ಕೇವಲ 7-8 ಜನರಿಂದ ನಡೆದ ಕೃತ್ಯವಲ್ಲ. ಈ ಹತ್ಯೆಯ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡವಿರುವ ಕಾರಣ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಪ್ರಕಾಶ ಮರೆಗುದ್ದಿ, ರಾಘು ಗರಗಟ್ಟಿ, ಆನಂದ ಶಿರಗುಪ್ಪಿ, ಸಚಿನ ಕಲ್ಮಡಿ, ಅರ್ಜುನ ಪವಾರ, ಅಭಿ ಲಮಾಣಿ, ಮಂಜುನಾಥ ಭಾವಿಕಟ್ಟಿ, ಶಿವು ಸಣ್ಣಕ್ಕಿ, ಹಣಮಂತ ನಾವಿ, ರಾಘು ಪವಾರ ಮತ್ತಿತರರಿದ್ದರು.