Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಸಮಗ್ರ ಆರೋಗ್ಯಕ್ಕೆ ಯೋಗ, ಧ್ಯಾನ ಸಂಜೀವಿನಿ

Saturday, 09.06.2018, 3:05 AM       No Comments

ಪ್ರಾಚೀನ ಕಾಲದಿಂದಲೂ ಪ್ರಮುಖವಾಗಿ ಋಷಿಮುನಿಗಳ ಆಶ್ರಮ, ಪರ್ವತ, ಗುಹೆಗಳಿಗೆ ಸೀಮಿತವಾದ ಧ್ಯಾನ ಇಂದು ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಜನಪ್ರಿಯವಾಗುತ್ತಿದೆ. ಭೌತಿಕ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಸ್ಥಿತಿಯಲ್ಲಿ ಇರಿಸಲು ಧ್ಯಾನ ಅತ್ಯಂತ ಉಪಯುಕ್ತ ವಿಧಾನ. ಮನಸ್ಸು ಹಲವಾರು ಆಲೋಚನೆಗಳ ಸಮೂಹ. ನಮ್ಮ ಮನಸ್ಸು ಗೊಂದಲದ ಗೂಡಾಗಿ, ಚಿಂತೆಯಿಂದ ಚಿತೆ ಕಡೆಗೆ ನಡೆಯಬಾರದು ಎಂದಿದ್ದರೆ ಆ ಮನಸ್ಸಿನ ಪ್ರವಾಹ ತಡೆಗಟ್ಟಿ ಒಂದೇ ಕಡೆಗೆ ನಿಗ್ರಹಗೊಳಿಸುವ ಶಕ್ತಿ ಧ್ಯಾನಕ್ಕೆ ಮಾತ್ರವಿದೆ.

ಧ್ಯಾನ ಎಂದರೆ ಏನು? ಇದು ಮಾನಸಿಕ ಒತ್ತಡ, ಚಂಚಲತೆ, ಚಿಂತೆಯಿಂದ ಮನಸ್ಸನ್ನು ಶಾಂತಿ, ನೆಮ್ಮದಿಯ ಕಡೆಗೆ ತೆಗೆದುಕೊಂಡು ಹೋಗುವ ವಿಧಾನ. ಒಂದುಕಾಲಕ್ಕೆ ಋಷಿಮುನಿಗಳು ಆತ್ಮೋದ್ಧಾರಕ್ಕಾಗಿ ಧ್ಯಾನ ಮಾಡಿದರೆ ಇಂದು ನಾವು ಮನಃಶಾಂತಿ ಪಡೆದು ಆರೋಗ್ಯವಂತರಾಗಿ ಬದುಕಲು ಧ್ಯಾನ ಮಾಡಬೇಕಾಗಿದೆ. ಧ್ಯಾನದಿಂದ ಆರು ತರಹದ ಆರೋಗ್ಯ-ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಪರಿಸರ ಮತ್ತು ಆಧ್ಯಾತ್ಮಿಕ ಸ್ವಾಸ್ಥ್ಯ ಹೆಚ್ಚುತ್ತದೆ. ಸಂಪೂರ್ಣ ಆರೋಗ್ಯಕ್ಕೆ ಸಂಜೀವಿನಿಯಾಗಿದೆ ಧ್ಯಾನ.

ಧ್ಯಾನದ ವಿಧಾನಗಳು: ಜಗತ್ತಿನ ಎಲ್ಲ ಧರ್ಮದವರು ಧ್ಯಾನವನ್ನು ಬೋಧಿಸುತ್ತ ಬಂದಿದ್ದಾರೆ. ಅನಾದಿ ಕಾಲದಿಂದಲೂ ವಿಶ್ವದಾದ್ಯಂತ ಧ್ಯಾನದ ಹಲವು ವಿಧಾನಗಳು ಪ್ರಚಲಿತವಾಗಿವೆ.

ಭಾವಾತೀತ ಧ್ಯಾನ (Transcendental meditation):  ಮಹರ್ಷಿ ಮಹೇಶ ಯೋಗಿಗಳು ವಿವರಿಸಿದಂತೆ ಇದು ಮನಸ್ಸನ್ನು ನಿರಾಳ (Relaxation)ಗೊಳಿಸುವ ವಿಧಾನ. ಮನದಲ್ಲಿ ಮಂತ್ರ ಹೇಳುತ್ತ ದಿನಕ್ಕೆ ಎರಡು ಬಾರಿ 20 ನಿಮಿಷ ಈ ವಿಧಾನದಲ್ಲಿ ಧ್ಯಾನ ಮಾಡಿದರೆ ಮಾನಸಿಕ ಶಾಂತಿಯತ್ತ ಸಾಗಬಹುದು. ಅಲ್ಲದೆ, ರಕ್ತಒತ್ತಡ ನಿಯಂತ್ರಣಕ್ಕೆ ಬಂದು, ಹೃದಯದ ಮಿಡಿತ ಕಡಿಮೆಯಾಗಿ ಹೃದಯಕ್ಕೆ ವಿಶ್ರಾಂತಿ ಸಿಗುತ್ತದೆ.

ಜಪಾನಿನ ಘಟನೆ: 1993ರಲ್ಲಿ ಜಪಾನಿನಲ್ಲಿ ದಿಢೀರ್ ಹೃದಯಾಘಾತದಿಂದ ಹಲವು ಯುವಕ-ಯುವತಿಯರು ಆಸ್ಪತ್ರೆ ಸೇರಿದಾಗ ಅವರ ಹೃದಯ ನಿಷ್ಕ್ರಿಯಗೊಂಡದ್ದು ಇಕೋಕಾರ್ಡಿಯಾಗ್ರಫಿಯಲ್ಲಿ ಕಂಡುಬಂತು. ಆದರೆ, ಆಂಜಿಯೋಗ್ರಾಂ ಮಾಡಿದಾಗ ಕಿರೀಟಧಮನಿಗಳಲ್ಲಿ ಅಡೆತಡೆ ಇರಲಿಲ್ಲ! ಅವರೆಲ್ಲರಲ್ಲಿ ಇದ್ದ ಒಂದು ಸಾಮ್ಯ ಎಂದರೆ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು! ಮನಸ್ಸಿನ ಒತ್ತಡ ಕಡಿಮೆ ಮಾಡಲು ಅವರಿಗೆ ದಿನಕ್ಕೆ ಎರಡು ಬಾರಿ 20 ನಿಮಿಷದಂತೆ ಮೇಲೆ ವಿವರಿಸಿದ ಭಾವಾತೀತ ಧ್ಯಾನ ಮಾಡಿಸಿದಾಗ ಶೇಕಡ 20-30ರಷ್ಟಿದ್ದ ಹೃದಯದ ಕ್ಷಮತೆ ಕೇವಲ 72 ಗಂಟೆಗಳಲ್ಲಿ ಶೇಕಡ 60ಕ್ಕೆ ಹೆಚ್ಚಿತು. ಇದಕ್ಕೆ Takotsubo cardiomyopathy ಎಂದು ಕರೆದರು. ಕಾರಣ ಟ್ರಾ್ಯಪ್​ನಲ್ಲಿ ಸಿಕ್ಕಿಕೊಂಡ ಆಕ್ಟೊಪಸ್ ತರಹ ಹೃದಯ ಊದಿಕೊಂಡಿದ್ದರಿಂದ ಮುಂದೆ ಹೆಚ್ಚಿನ ಸಂಶೋಧನೆ ಮಾಡಿದಾಗ ತಿಳಿದದ್ದು ಏನೆಂದರೆ, ಮನಸ್ಸಿನ ಒತ್ತಡ, ದುಗುಡ ಹೆಚ್ಚಾದಾಗ ಮಿದುಳಿನಿಂದ ಉತ್ಪತ್ತಿಯಾದ ಕೆಟ್ಟ ರಾಸಾಯನಿಕಗಳಿಂದಾಗಿ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕಿರೀಟಧಮನಿಗಳು ಸಂಕುಚಿತಗೊಂಡು ಹೃದಯಕ್ಕೆ ಪ್ರಾಣವಾಯು ಪೋಷಣೆ ಸಿಗದೆ ಅದರ ಸಾಮರ್ಥ್ಯ ಕುಗ್ಗಿಸುತ್ತದೆ ಎಂದು. ಆಗ ಧ್ಯಾನ ಮಾಡಿದಾಗ ಮಿದುಳಿನಿಂದ ಉತ್ಪತ್ತಿಯಾದ ಫೀಲ್​ಗುಡ್ ಹಾಮೋನ್ಸ್ ಅಂದರೆ  Endorphin , Neuropeptideಗಳು ಹೃದಯದ ಪೋಷಣೆ ಹೆಚ್ಚಿಸಿ ಹೃದಯವನ್ನು ಬಲಗೊಳಿಸುತ್ತವೆ. ಇದಕ್ಕೆ ಅವರು”Body Mind and heat axis’ ಎಂದರು. ಹೀಗೆ ಮಿದುಳು, ಹೃದಯ ಮತ್ತು ಶರೀರಕ್ಕೆ ವಿಶ್ರಾಂತಿ ಮತ್ತು ಪೋಷಣೆ ಕೊಟ್ಟು ಸರ್ವಾಂಗೀಣ ಆರೋಗ್ಯಕ್ಕೆ ಯೋಗ-ಧ್ಯಾನ ಅತ್ಯುತ್ತಮವೆಂದು ವಿಶ್ವದ ಕಣ್ಣು ತೆರೆಸಿದವರು ಜಪಾನೀಯರು!

ರಾಜಯೋಗ ಧ್ಯಾನ: ಈ ವಿಧಾನದಲ್ಲಿ ಕಣ್ಣುಗಳನ್ನು ತೆರೆದಿಟ್ಟುಕೊಂಡು ಒಂದು ಕಡೆ ಚಿತ್ತವನ್ನು ಏಕಾಗ್ರಗೊಳಿಸುವುದು. ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಿ ಮನಸ್ಸಿನ ತಳಮಳ, ಚಂಚಲತೆ ಕಡಿಮೆಯಾಗುತ್ತದೆ.

ಜಪ ಮತ್ತು ಸಹಜಯೋಗ: ಈ ವಿಧಾನದಲ್ಲಿ ಉಸಿರಾಟದ ಮೇಲೂ ಗಮನಕೊಟ್ಟು ಶ್ವಾಸಕೋಶದಿಂದ ವಾಯುವನ್ನು ಹೊರಹಾಕುವ ಸಂದರ್ಭದಲ್ಲಿ ‘ಅಹಂ’ ಭಾವವನ್ನು ದೇಹದಿಂದ ಪ್ರತ್ಯೇಕಗೊಳಿಸಲು ಪ್ರಯತ್ನ ಮಾಡಲಾಗುತ್ತದೆ.

ಶಿವಯೋಗ ಧ್ಯಾನ ಮತ್ತು ಅಷ್ಟಾಂಗ ಯೋಗ: ಇದರಲ್ಲಿ ಅಷ್ಟ ಎಂದರೆ 8 ಭಾಗಗಳಿವೆ.

1 ಯಮ: ಅಸತ್ಯ, ಹಿಂಸೆ, ಪರಧನದ ಆಸೆ, ಪರಸ್ತ್ರೀ ವ್ಯಾಮೋಹವನ್ನು ಬಿಟ್ಟು ಲಿಂಗವನ್ನು ಪೂಜಿಸುವುದು ಯಮಾಂಗ. ಇದು ಇಂದಿನ ಸಮಾಜದಲ್ಲಿ ಅತ್ಯಂತ ಅವಶ್ಯವಾಗಿದೆ. ಸಮಾಜದ ನೈತಿಕ ಮೌಲ್ಯಗಳು ನೆಲಕಚ್ಚಿದಾಗ ಎಲ್ಲರೂ ಯಮಾಂಗ ಪಾಲಿಸಿದರೆ ಸಮಾಜದ ಸ್ವಾಸ್ಥ್ಯ ಉತ್ತಮಗೊಳ್ಳುವುದು.

2 ನಿಯಮ: ವಿಭೂತಿ, ರುದ್ರಾಕ್ಷಿ ಧರಿಸಿ ಶುಚಿಭೂತರಾಗಿ ಇಂದ್ರಿಯ ನಿಗ್ರಹ ಮಾಡಿ ಪ್ರಣವ ಪಂಚಾಕ್ಷರಿ ಮಂತ್ರ-ಓಂ ನಮಃ ಶಿವಾಯ ಹೇಳುತ್ತ, ಜಪಮಾಡುತ್ತ ಲಿಂಗಾರ್ಚನೆ ಮಾಡುವುದು ನಿಯಮಾಂಗ.

3 ಆಸನ: ಪದ್ಮಾಸನ, ಸಿದ್ಧಾಸನ, ಸ್ವಸ್ತಿಕಾಸನ ಹಾಕಿ ಲಿಂಗದಲ್ಲಿ ದೃಷ್ಟಿಯನ್ನು ಕೇಂದ್ರೀಕರಿಸಿ ಶಿವಾರ್ಚನೆ ಮಾಡುವುದು ಆಸನಾಂಗ.

4 ಪ್ರಾಣಾಯಾಮ: ಇದು ಪಿಂಗಲಗಳಲ್ಲಿ ಸಂಚರಿಸುವ ವಾಯುವಿನ ರೇಚಕ ಪೂರಕ ಗತಿಗಳನ್ನು ಕ್ರಮಗೊಳಿಸಿ ಅದನ್ನೇ ಹೃದಯದ ಮಧ್ಯ ಸ್ಥಿರ ಮಾಡಿ ಅಲ್ಲಿ ಪ್ರಣವೋಚ್ಚಾರ ಮಾಡುತ್ತ ಲಿಂಗಾರ್ಚನೆ ಮಾಡುವುದು ಪ್ರಾಣಾಯಾಮಾಂಗ.

5 ಪ್ರತ್ಯಾಹಾರ: ಮಿತಾಹಾರಿಗಳಾಗಿ ತನ್ನ ಬಹಿಮುಖ ಇಂದ್ರಿಯಗಳನ್ನು ಅಂತರ್​ವುುಖ ಮಾಡಿ ಅಂತರ್ಲಿಂಗದ ಪೂಜೆ ಮಾಡುವುದು ಪ್ರತ್ಯಾಹಾರ ಅಂಗ.

6 ಧಾರಣ: ತನ್ನ ಹೃದಯಸ್ಥ ಲಿಂಗವನ್ನು ಬಾಹ್ಯಾಂತರ ಕಾರಣಗಳಲ್ಲಿ ಪ್ರತಿಷ್ಠಾಪಿಸಿ ಅರ್ಚಿಸುವುದು ಧಾರಣಾಂಗ.

7 ಧ್ಯಾನ: ಸ್ವಾಧಾರ, ಸ್ವಾಧಿಷ್ಠಾನ, ಆಜ್ಞ ಹಾಗೂ ಬ್ರಹ್ಮರಂಧ್ರದಲ್ಲಿ ಪರಶಿವನ ಪವಿತ್ರ ರೂಪವನ್ನು ಪ್ರತಿಷ್ಠಾಪನೆ ಮಾಡಿ ಅನುಸಂಧಾನಿಸುವುದು ಧ್ಯಾನಾಂಗ.

8 ಸಮಾಧಿ: ದೇಹ, ಪ್ರಾಣ, ಕಮೇಂದ್ರಿಯ ಮತ್ತು ಅಂತಃಕರಣ ಇವು ಕ್ರಮವಾಗಿ ಒಂದಕ್ಕಿಂತ ಒಂದು ಶ್ರೇಷ್ಠವಾಗಿವೆ. ಇವೆಲ್ಲಕ್ಕೂ ಪರಮವಾದದ್ದು, ಅತ್ಯಂತ ಸೂಕ್ಷ್ಮವಾದ ಪ್ರಾಣಲಿಂಗ. ಪರಿಶುದ್ಧ ಮನಸ್ಸಿನಿಂದ ಧ್ಯಾನಿಸಿ ಅದರಲ್ಲಿ ಬೆರೆಯುವುದೇ ಸಮಾಧಿ. ಅಂಗವನ್ನೇ ಲಿಂಗ ಮಾಡಿಕೊಳ್ಳುವುದು, ಅಲ್ಲಿ ಧ್ಯಾತೃ, ಧ್ಯಾನ, ಧ್ಯೇಯಗಳು ಭಿನ್ನವಾಗಿರುವುದಿಲ್ಲ. ಇದೇ ಅಂಗಾಂಗ ಸಾಮರಸ್ಯ. ಶಿವಯೋಗ ಧ್ಯಾನದ ಅಂತಿಮ ಗುರಿ. ‘ಅಹಂ’ ಮನೋಭಾವ ಬಿಟ್ಟು ಜೀವ-ದೇವ ಒಂದಾಗುವುದು ಇಲ್ಲಿ ಸ್ಪಷ್ಟ. ಲಯ, ದರ್ಶನ, ಲಿಂಗ ಪದ ಪರಶಿವನ ಪರಂಜ್ಯೋತಿಯ ದ್ಯೊತಕವಾಗಿವೆ.

114 ವರ್ಷದ ಹಿರಿಯ ಸಂತ ಸಿದ್ಧಗಂಗಾ ಶ್ರೀಗಳ ಚಿತ್ತ, ದೃಷ್ಟಿ ಎಲ್ಲವೂ ಸಮಚಿತ್ತವಾಗಿರಲು ಯೋಗವೇ ಕಾರಣ. ಆದ್ದರಿಂದಲೇ ನಾವು ಅವರನ್ನು ನಡೆದಾಡುವ ದೇವರು ಎನ್ನುವುದು.

ಪ್ರಾಣಾಯಾಮ-ಧ್ಯಾನದ ನಡುವೆ ನಿಕಟ ಸಂಬಂಧವಿದೆ. ಪತಂಜಲಿ ಸೂತ್ರದಲ್ಲಿ ಸಾಧ್ಯವಾದಾಗಲೆಲ್ಲ ಧ್ಯಾನ ಮಾಡಬೇಕು ಎಂದು ಹೇಳಲಾಗಿದೆ. ಇದನ್ನೇ ದಾಸರು ‘ಸದಾ ಎನ್ನ ಹೃದಯದಲ್ಲಿ ವಾಸವಾಗಿರು ಶ್ರೀಹರಿ’ ಎಂದರು. ಅಂದರೆ ಸದಾ ದೇವರ ನಾಮಸ್ಮರಣೆ ಮಾಡಲು ನಿರ್ದಿಷ್ಟ ಸಮಯ, ನಿರ್ಬಂಧಗಳಿಲ್ಲ. ಒಂದೇ ಕಡೆಗೆ ಆಸನದಲ್ಲಿ ಕುಳಿತು ಧ್ಯಾನ ಮಾಡಬೇಕೆಂಬ ನಿರ್ಬಂಧವಿಲ್ಲ. ಎಲ್ಲಿ ಬೇಕಾದರೂ, ಯಾರು ಬೇಕಾದರೂ, ಯಾವಾಗ ಬೇಕಾದರೂ ಧ್ಯಾನ ಮಾಡಬಹುದು. ಇದರಿಂದ ಚಿಂತೆ ದೂರವಾಗಿ ಮನದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ. ನಿದ್ರೆ ಬರುವುದಿಲ್ಲ ಎಂಬ ಸಮಸ್ಯೆ ದೂರವಾಗಿ ನಿಶ್ಚಿಂತೆಯಿಂದ ಮಲಗಬಹುದು. ಆದರೆ, ಪ್ರಾಣಾಯಾಮದಲ್ಲಿ ಉಸಿರಾಟದ ಮೇಲೆ ನಿಯಂತ್ರಣವಿಡುವುದರಿಂದ ಕಪಾಲಭಾತಿ ಮಾಡುವವರ ಚೈತನ್ಯ ಮತ್ತು ಆಯಸ್ಸು ಹೆಚ್ಚುತ್ತದೆ. ಪ್ರಾಣಾಯಾಮ ಮಾಡುವುದರಿಂದ ಏಕಾಗ್ರತೆ, ಗ್ರಹಣಶಕ್ತಿ, ಜ್ಞಾಪಕಶಕ್ತಿ ವೃದ್ಧಿಸುತ್ತವೆ. ಆದ್ದರಿಂದ ಇಂದು ಪೋಲೆಂಡಿನಂಥ ಕಮ್ಯುನಿಸ್ಟ್ (ನಾಸ್ತಿಕರು, ದೇವರಲ್ಲಿ ನಂಬಿಕೆ ಇಲ್ಲದವರು) ದೇಶದಲ್ಲಿ ಶಾಲಾ ಮಕ್ಕಳಿಗೆ

ಪಾಠ ಪ್ರಾರಂಭಿಸುವ ಮೊದಲು 5-10 ನಿಮಿಷ ಪ್ರಾಣಾಯಾಮ ಮಾಡಿಸಲಾಗುತ್ತದೆ. ‘ಉಸಿರಾಟದ ವ್ಯಾಯಾಮಗಳು ನಿಜವಾದ ಪ್ರಾಣಾಯಾಮ ಸಾಧಿಸುವ ಒಂದು ಸಾಧನ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆದ್ದರಿಂದ, ಇಂದು ನಮ್ಮ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮಾನಸಿಕ ಒತ್ತಡ ಕಡಿಮೆ ಮಾಡಿ ಏಕಾಗ್ರತೆ ಹೆಚ್ಚಿಸಲು, ಪ್ರಾಣಾಯಾಮ ಅತ್ಯುತ್ತಮವಾಗಿದೆ. ಅಂದರೆ ಪ್ರಾಣದ ಮೇಲೆ ಪ್ರಭುತ್ವ ಸಾಧಿಸಲು ಓಂಕಾರ ಮಂತ್ರ- ಓಂಕಾರ ಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ.

‘ಓ’ ಮತ್ತು ‘ಮ್ ಅಕ್ಷರಗಳಿಂದ ರಚನೆಯಾದ ಆದಿನಾದ ಓಂಕಾರ ನಮ್ಮ ಇಚ್ಛೆಯನ್ನು ಈಡೇರಿಸಿ ಮೋಕ್ಷದ ಕಡೆಗೆ ಕೊಂಡೊಯ್ಯುತ್ತದೆ. ‘ಓಂ’ ಶಬ್ದವು ಪರಬ್ರಹ್ಮ ಸೂಚಕವೆಂದು ಮಾಂಡೊಕ್ಯೋಪನಿಷತ್ತಿನಲ್ಲಿ ತಿಳಿಸಿದೆ. ಓಂ ಸಕಲ ವೇದಗಳನ್ನೂ, ಸಮಸ್ತ ಸೃಷ್ಟಿಯನ್ನೂ ಮತ್ತು ಸ್ವಯಂ ಭಗವಂತನನ್ನೂ ಪ್ರತಿನಿಧಿಸುತ್ತದೆಂದು ಶ್ರೀ ಅರಬಿಂದೋ ವಿವರಿಸಿದ್ದಾರೆ.

ಇಂದು ವ್ಯಕ್ತಿಯ, ಸಮಾಜದ, ವಿಶ್ವದ ಸ್ವಾಸ್ಥ್ಯ ಉತ್ತಮವಾಗಲು ಮನೋಬಲ ಹೆಚ್ಚಬೇಕಿದೆ. ಮಾನಸಿಕ ಒತ್ತಡದಿಂದ ಸಾಯುವುದನ್ನು ತಡೆಗಟ್ಟಲು ಆತ್ಮಬಲ ಹೆಚ್ಚಿಸಲು ಧ್ಯಾನದ ಮೊರೆ ಹೋಗುವುದು ಸೂಕ್ತ. ಇದನ್ನು ಶರಣ ಶಿರೋಮಣಿ ಅಕ್ಕನಾಗಮ್ಮ ಹೇಳುತ್ತಾರೆ-‘ಮನದೊಡೆಯ ಮಹದೇವ, ಮನವ ನೋಡಿಹನೆಂದು ಮನುಜರ ಕೈಯಿಂದ ಒಂದೊಂದು ನುಡಿಸುವನು, ಇದಕೆ ಕಳವಳಿಸದಿರು ಮನವೇ, ಇದಕೆ ಕಾತರಿಸದಿರು ತನುವೇ ನಿಜವ ಮರೆಯದಿರು ಕಂಡಾ. ನಿಶ್ಚಿಂತೆಯಾಗಿರು ಮನವೇ ಬಸವಣ್ಣ ಪ್ರೀಯ ಸಂಗಯ್ಯನು ಬೆಟ್ಟ ದನಿಪರಾಧವನು ಒಂದು ಬೊಟ್ಟಿನಲಿ ತೊಡೆವನು’!

ಯೋಗ-ಧ್ಯಾನಕ್ಕೆ ವಿಶ್ವಗುರುವಾದ ಭಾರತದಲ್ಲಿ ಇಂದು ನಾವು ಭಾರತೀಯರು ಸ್ವತಃ ಆದಿಯೋಗಿ ಶಿವನನ್ನು ಅನುಕರಿಸಿ ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಲು ಯೋಗಿಗಳಾಗೋಣ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

(ಅನಿವಾರ್ಯ ಕಾರಣದಿಂದ ಕಾಮೆಂಟರಿ ಅಂಕಣ ಪ್ರಕಟವಾಗಿಲ್ಲ)

Leave a Reply

Your email address will not be published. Required fields are marked *

Back To Top