More

    ಲಾಭದಾಯಕ ಕೃಷಿಗೆ ಆರೋಗ್ಯಕರ ಟ್ರ್ಯಾಕ್ಟರ್​ 

    ಯಾವುದೇ ಒಬ್ಬ ಕೃಷಿಕ ತನ್ನ ಜೀವನದಲ್ಲಿ ಮಾಡುವ ಅತಿ ದೊಡ್ಡ ಹೂಡಿಕೆಯೆಂದರೆ ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಹಾಕುವ ಹಣ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ರೈತರಿಗೆ ಟ್ರ್ಯಾಕ್ಟರ್ ಖರೀದಿಯು ಒಂದು ಕನಸು ನನಸಾದಂತಹ ಅನುಭವವನ್ನು ತಂದುಕೊಡುತ್ತದೆ. ಬ್ಯಾಂಕುಗಳು ಸಾಲ ಕೊಡುವುದರಿಂದ ಈ ಕನಸನ್ನು ಹೇಗೋ ನನಸು ಮಾಡಿಕೊಂಡುಬಿಡಬಹುದು. ಆದರೆ ನಿಜವಾದ ಪರೀಕ್ಷೆ ಆರಂಭವಾಗುವುದೇ ಖರೀದಿಸಿದ ನಂತರ. ಅದು ಸರಾಗವಾಗಿ ಓಡುತ್ತಿರಬೇಕೆಂದರೆ ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ರೈತ ಅರಿತುಕೊಂಡಿರಬೇಕಾಗುತ್ತದೆ. ಉತ್ತಮ ಇಳುವರಿಗೂ, ಟ್ರ್ಯಾಕ್ಟರ್​ನ ‘ಆರೋಗ್ಯ’ಕ್ಕೂ ನೇರವಾದ ಸಂಬಂಧವಿದೆ. ಟ್ರ್ಯಾಕ್ಟರನ್ನು ಒಳ್ಳೆಯ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಕಷ್ಟು ಸಮಯ ನೀಡಬೇಕಾಗುತ್ತದೆ. 

    ಉದ್ಯಮ-ಕೈಗಾರಿಕೆಗಳು ಎಷ್ಟೇ ದೊಡ್ಡ ಪ್ರಮಾಣದಲ್ಲಿ ಬೆಳೆದರೂ ಭಾರತ ಈಗಲೂ ಕೃಷಿ ಪ್ರಧಾನ ದೇಶವೇ. ಏಕೆಂದರೆ ಈಗಲೂ ಶೇಕಡ 80ರಷ್ಷು ಗ್ರಾಮೀಣ ಜನತೆಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳೇ ಜೀವನೋಪಾಯಕ್ಕೆ ಬೇಕಾದ ಆದಾಯದ ಮೂಲ. ಶೇಕಡ 52ರಷ್ಟು ಜನರಿಗೆ ಈಗಲೂ ಉದ್ಯೋಗ ಒದಗಿಸುತ್ತಿರುವುದು ಕೃಷಿ ಕ್ಷೇತ್ರವೇ.

    ಇಷ್ಟು ಮಹತ್ವದ ಈ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಧುನೀಕರಣ, ಯಾಂತ್ರೀಕರಣ ಹಾಸುಹೊಕ್ಕಾಗಿದೆ. ದಿನೇದಿನೆ ಹೊಸ ಹೊಸ ಆವಿಷ್ಕಾರಗಳು ಅನುಷ್ಠಾನಗೊಂಡು, ರೈತ ಸಮುದಾಯದ ಶ್ರಮವನ್ನು ಕಡಿಮೆ ಮಾಡತೊಡಗಿವೆ. ಇಷ್ಟೆಲ್ಲ ಆದರೂ, ಕಳೆದ ಐದಾರು ದಶಕಗಳಿಂದ ಬಳಕೆಯಲ್ಲಿರುವ ಟ್ರ್ಯಾಕ್ಟರ್​ಗಳ ಮೇಲೆ ಈಗಲೂ ರೈತ ಸಮುದಾಯ ಸಾಕಷ್ಟು ಅವಲಂಬಿತವಾಗಿದೆ. ಹೊಲದಲ್ಲಿ ಬಿತ್ತನೆ-ಉಳುಮೆ ಮಾಡುವುದರಿಂದ ಹಿಡಿದು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವವರೆಗೆ ಟ್ರ್ಯಾಕ್ಟರ್ ಹಲವು ವಿಧಗಳಲ್ಲಿ ರೈತರಿಗೆ ಸಹಕಾರಿ.

    ಆದರೆ ಇಷ್ಟು ಉಪಯುಕ್ತವಾದ ಟ್ರ್ಯಾಕ್ಟರ್​ಗಳನ್ನು ಹೇಗೆ ಬಳಸಬೇಕು, ಅದರ ‘ಆರೋಗ್ಯ’ವನ್ನು ಹೇಗೆ ಕಾಪಾಡಬೇಕು ಎಂಬುದರ ಕುರಿತು ಬಹಳಷ್ಟು ರೈತರಿಗೆ ಅರಿವು ಇಲ್ಲ. ಸರಿಯಾದ ಸಮಯಕ್ಕೆ ನಿರ್ವಹಣೆ, ಕಾಳಜಿ ಸಿಗದೆ ಟ್ರ್ಯಾಕ್ಟರ್​ಗಳ ಬಾಳಿಕೆ ಕಡಿಮೆಯಾಗುವುದರಿಂದ ರೈತರು ನಷ್ಟ ಅನುಭವಿಸುತ್ತಾರೆ. ಅಗತ್ಯವಿದ್ದಾಗ ದುರಸ್ತಿ ಮಾಡಿಸುವುದು, ಕಾಲಕಾಲಕ್ಕೆ ಇಂಜಿನ್ ಆಯಿಲ್ ಬದಲಾಯಿಸುವುದು, ನಿರ್ದಿಷ್ಟ ಸಮಯಕ್ಕೆ ಹಳೇ ಬಿಡಿಭಾಗಗಳನ್ನು ತೆಗೆದು ಹೊಸ ಬಿಡಿಭಾಗ ಹಾಕುವುದರಿಂದ ಈ ನಷ್ಟವನ್ನು ತಪ್ಪಿಸಲು ಸಾಧ್ಯವಿದೆ.

    ನಿಯಮಿತ ತಪಾಸಣೆ: ದಿನಕ್ಕೆ ಒಮ್ಮೆಯಾದರೂ ಇಡೀ ಟ್ರ್ಯಾಕ್ಟರನ್ನು ಕೂಲಂಕಷವಾಗಿ ತಪಾಸಣೆ ಮಾಡಬೇಕು. ಎಲ್ಲಿಯಾದರೂ ಲೀಕೇಜ್ ಇದೆಯಾ, ಮಣ್ಣು ಮೆತ್ತಿಕೊಂಡಿದೆಯಾ, ತುಕ್ಕು ಹಿಡಿಯುತ್ತಿದೆಯಾ ಎಂಬುದನ್ನು ಸಾದ್ಯಂತವಾಗಿ ಪರೀಕ್ಷಿಸಬೇಕು. ಹೆಡ್​ಲೈಟುಗಳು, ಇಂಡಿಕೇಟರ್ ಲೈಟುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

    ಶಬ್ದ ಕೇಳಿಸಿಕೊಳ್ಳಿ: ಟ್ರ್ಯಾಕ್ಟರನ್ನು ಒಮ್ಮೆ ಸುಮ್ಮನೆ ಸ್ಟಾರ್ಟ್ ಮಾಡಿ ಒಂದೆರಡು ನಿಮಿಷ ಬಿಡಿ. ಅದು ಹೊರಡಿಸುವ ಶಬ್ದವನ್ನು ಕಿವಿಗೊಟ್ಟು ಕೇಳಿಸಿಕೊಳ್ಳಿ. ಇಂಜಿನ್​ನ ಶಬ್ದ ಎಂದಿನಂತೆ ಇದೆಯೇ ಗಮನಿಸಿ. ಅಸಹಜವಾದ ಶಬ್ದ ಕೇಳಿಸಿದರೆ ಅದು ನಿದಿಷ್ಟವಾಗಿ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಿ. ಒಮ್ಮೆ ಗೇರ್ ಬದಲಾಯಿಸಿ ನೋಡಿ. ಆಗಲೂ ಎಂದಿನ ಸಹಜವಾದ ಶಬ್ದವೇ ಬರಬೇಕು. ಇಲ್ಲದಿದ್ದರೆ ಎಲ್ಲೋ ಏನೋ ತೊಂದರೆ ಇದೆ ಎಂದರ್ಥ. ಕೂಡಲೇ ಅದನ್ನು ಮೇಂಟೆನನ್ಸ್​ಗೆ ಅಥವಾ ದುರಸ್ತಿಗೆ ಒಯ್ಯಬೇಕು ಎಂಬುದನ್ನು ಇದು ಸೂಚಿಸುತ್ತದೆ.

    ಆಯಿಲ್​ನ ಮಟ್ಟದ ಮೇಲಿರಲಿ ನಿಗಾ: ಟ್ರ್ಯಾಕ್ಟರ್ ಸರಾಗವಾಗಿ ಓಡುವಂತೆ ಮಾಡಲು ಸಹಾಯ ಮಾಡುವ ಎಲ್ಲ ಆಯಿಲ್​ಗಳನ್ನು ನಿಯಮಿತವಾಗಿ ಚೆಕ್ ಮಾಡುವುದು ಅತ್ಯವಶ್ಯಕ. ಇಂಜಿನ್, ಹೈಡ್ರಾಲಿಕ್, ಟ್ರಾನ್ಸ್​ಮಿಷನ್ ಮತ್ತು ಬ್ರೇಕ್ ಆಯಿಲ್​ಗಳನ್ನು ನಿರ್ದಿಷ್ಟ ಅವಧಿಯಲ್ಲಿ ಬದಲಿಸಲೇಬೇಕಾಗುತ್ತದೆ. ಬಳಸಿ ಬಳಸಿ ಕರಕಲಾದ ಆಯಿಲ್​ನಿಂದ ಟ್ರ್ಯಾಕ್ಟರ್​ಗೆ ಹೆಚ್ಚಿನ ಹಾನಿಯಾಗುತ್ತದೆ. ಆಗಾಗ ಆಯಿಲ್ ತಪಾಸಣೆ ಮಾಡುತ್ತಿದ್ದರೆ ಅದು ಬೇಗ ಖಾಲಿಯಾಗುತ್ತಿದೆಯೋ, ನಿರ್ದಿಷ್ಟ ಸಮಯಕ್ಕೇ ಕಪ್ಪಗಾಗುತ್ತಿದೆಯೋ ಎಂಬುದೂ ಮನದಟ್ಟಾಗುತ್ತದೆ. ನಿಗದಿತ ಅವಧಿಗಿಂತ ಮೊದಲೇ ಖಾಲಿಯಾಗುತ್ತಿದ್ದರೆ ಎಲ್ಲಿಯೋ ಸೋರಿಕೆಯಾಗುತ್ತಿದೆ ಎಂಬುದು ಕೂಡ ಅರಿವಿಗೆ ಬರುತ್ತದೆ. ಸೂಕ್ತ ದುರಸ್ತಿ ಮಾಡಿಸಿ ಆ ಸೋರಿಕೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪ್ರತಿ ರೇಡಿಯೇಟರ್​ಗೂ ಇಂತಹುದೇ ಕಂಪನಿಯ ಕೂಲಂಟ್ ಹಾಕಬೇಕೆಂಬ ನಿಯಮ ಇರುತ್ತದೆ. ಮ್ಯಾನುಯಲ್ ನೋಡಿ ಅದನ್ನು ನಿರ್ಧರಿಸಬೇಕಾಗುತ್ತದೆ.

    ಬ್ಯಾಟರಿ ಮೇಂಟೆನನ್ಸ್: ಯಾವುದಾದರೂ ಅನಿವಾರ್ಯ ಕಾರಣಕ್ಕೆ ಕೆಲವು ದಿನಗಳ ಕಾಲ ಟ್ರ್ಯಾಕ್ಟರನ್ನು ನಿಲ್ಲಿಸಬೇಕಾಗಿ ಬಂದರೆ, ಆಗ ಅದರ ಬ್ಯಾಟರಿ ಡೌನ್ ಆಗುವ ಸಂಭವ ಹೆಚ್ಚಾಗಿರುತ್ತದೆ. ಹಾಗೇನಾದರೂ ಆದರೆ ಅದರಿಂದ ಆಲ್ಟರ್​ನೇಟರ್ ಮೇಲೆ ಹೊರೆ ಬೀಳುತ್ತದೆ. ಕೆಲವೊಮ್ಮೆ ಇಂಜಿನ್ ಫೇಲ್ ಆಗುವ ಸಾಧ್ಯತೆಯೂ ಇರುತ್ತದೆ. ಹೈವೋಲ್ಟೇಜ್ ಚಾರ್ಜರ್ ಮೂಲಕ ಅಂಥ ಬ್ಯಾಟರಿಗಳನ್ನು ಪುನಶ್ಚೇತನಗೊಳಿಸಬಹುದು. ಅದರ ಜತೆಗೇ ಎಲೆಕ್ಟ್ರಿಕಲ್ ಕನೆಕ್ಷನ್​ಗಳು ಸರಿಯಾಗಿವೆಯೇ, ಯಾವುದಾದರೂ ವೈರ್​ಗಳು ಬಿಟ್ಟುಕೊಂಡಿವೆಯೇ ಎಂಬುದರತ್ತಲೂ ಗಮನ ಹರಿಸಬೇಕು. ‘ಆರೋಗ್ಯಕರ’ ಬ್ಯಾಟರಿಯಿಂದ ಆಲ್ಟರ್​ನೇಟರ್ ಮೇಲೆ ಬೀಳುವ ಹೊರೆ ಕಡಿಮೆಯಾಗುತ್ತದೆ.

    ಸರ್ವಿಸ್ ಮಾಡೋದನ್ನು ಮರೀಬೇಡಿ: ರೈತರು ನೆನಪಿಡಲೇಬೇಕಾದ ಇನ್ನೊಂದು ಸಂಗತಿ ಎಂದರೆ, ಟ್ರ್ಯಾಕ್ಟರ್​ನ ನಿಯಮಿತ ಸರ್ವಿಸಿಂಗ್. ಉತ್ಪಾದನಾ ಸಂಸ್ಥೆಯವರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸಬೇಕು. ಸಾಧ್ಯವಾದಷ್ಟೂ ಆಥರೈಸ್ಡ್ ಡೀಲರ್ ಬಳಿ ಅಥವಾ ಅಧಿಕೃತ ಸರ್ವಿಸ್ ಸೆಂಟರ್​ನಲ್ಲಿಯೇ ಸರ್ವಿಸ್ ಮಾಡಿಸುವುದು ಒಳ್ಳೆಯದು. ಅಕಸ್ಮಾತ್ ಟ್ರ್ಯಾಕ್ಟರ್​ಗೆ ಯಾವುದಾದರೂ ಬಿಡಿಭಾಗ ಅಗತ್ಯವಿದ್ದರೆ ಅಲ್ಲಿ ಅಧಿಕೃತವಾದವುಗಳನ್ನೇ ಹಾಕುತ್ತಾರೆ. ಅಲ್ಲದೆ ಗುಣಮಟ್ಟದ ಸರ್ವಿಸಿಂಗ್ ಕೂಡ ದೊರೆಯುತ್ತದೆ.

    ಟ್ರ್ಯಾಕ್ಟರ್​ಗಳ ನಿರ್ವಹಣೆ ಹೇಗೆ?

    ಖರೀದಿಸಿ ಹಲವು ವರ್ಷಗಳಾದರೂ ಟ್ರ್ಯಾಕ್ಟರ್ ಹೊಚ್ಚ ಹೊಸದರಂತೆ ಇರಬೇಕು ಎನ್ನುವುದು ಎಲ್ಲ ರೈತರ ಅಭಿಲಾಷೆ. ಹಾಗಿರಬೇಕೆಂದರೆ ಅದರ ‘ಆರೋಗ್ಯ’ದ ಬಗ್ಗೆ ರೈತರಿಗೆ ಕಾಳಜಿ ಇರಬೇಕು. ನಿಯಮಿತವಾಗಿ ಅದರ ಬೇಕು-ಬೇಡಗಳನ್ನು ಪೂರೈಸಿದರೆ ಟ್ರ್ಯಾಕ್ಟರ್​ನ ಕಾರ್ಯನಿರ್ವಹಣೆ ಉತ್ತಮವಾಗಿರುತ್ತದೆಯಲ್ಲದೆ, ಬಾಳಿಕೆ ಕೂಡ ಹಲವು ವರ್ಷಗಳ ಕಾಲ ಹೆಚ್ಚುತ್ತದೆ. ಚೆನ್ನಾಗಿ ನಿರ್ವಹಿಸಿದರೆ ಒಂದು ಟ್ರ್ಯಾಕ್ಟರ್ ಕಡಿಮೆಯೆಂದರೂ 15ರಿಂದ 18 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಅದನ್ನು ಸಾಧ್ಯವಾಗಿಸಲು ರೈತರು ನಿರ್ದಿಷ್ಟ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.

    ರೇಡಿಯೇಟರ್ ಪರೀಕ್ಷೆ

    ಟ್ರ್ಯಾಕ್ಟರ್ ಪ್ರತಿದಿನ ಹಲವು ಗಂಟೆಗಳ ಕಾಲ ನಿರಂತರವಾಗಿ ಓಡುವುದರಿಂದ ರೇಡಿಯೇಟರ್​ನಲ್ಲಿರುವ ತೈಲ ಕಡಿಮೆಯಾಗುತ್ತಿರುತ್ತದೆ. ಕೂಲಂಟ್ ಆಗಲಿ ಅಥವಾ ಇಂತಹ ತೈಲವಾಗಲಿ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾದರೆ, ಟ್ರ್ಯಾಕ್ಟರೇ ತನ್ನ ಶಬ್ದಗಳ ಮೂಲಕ ಸೂಚನೆ ಕೊಡುತ್ತದೆ.

    ಅಂತಹ ಆಂತರಿಕ ವ್ಯವಸ್ಥೆ ಅದರಲ್ಲಿರುತ್ತದೆ. ಆದರೆ ಯಾವುದಾದರೂ ಕಾರಣಕ್ಕೆ ಅದು ಆ ರೀತಿಯ ‘ಸೂಚನೆ’ಯನ್ನು ಸ್ಪಷ್ಟವಾಗಿ ನೀಡದೆಯೂ ಹೋಗಬಹುದು. ಹಾಗಾಗಿ ರೇಡಿಯೇಟರ್​ನಲ್ಲಿ ಅಗತ್ಯ ಪ್ರಮಾಣದ ಲಿಕ್ವಿಡ್ ಇದೆಯೋ ಇಲ್ಲವೋ ಎಂಬುದನ್ನು ರೈತರೇ ನಿಯಮಿತವಾಗಿ ಪರೀಕ್ಷಿಸಿಕೊಂಡು, ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಕೂಲಂಟ್ ಅಥವಾ ತೈಲವನ್ನು ಭರ್ತಿ ಮಾಡುವುದು ಒಳಿತು.

    ಏರ್​ಫಿಲ್ಟರ್ ಕೂಡ ಮುಖ್ಯ

    ಹೊಲಗದ್ದೆಗಳೆಂದರೆ ಅಲ್ಲಿ ಧೂಳು, ಮಣ್ಣು ಸಾಮಾನ್ಯ. ಅದು ಟ್ರ್ಯಾಕ್ಟರ್ ಮೇಲೆ ಪ್ರತಿದಿನ ಕೂರುತ್ತಿರುತ್ತದೆ. ಹಾಗೆಯೇ ಏರ್​ಫಿಲ್ಟರ್​ನಲ್ಲೂ ಹೋಗುತ್ತಿರುತ್ತದೆ. ಧೂಳು, ಮಣ್ಣಿನಿಂದ ಏರ್​ಫಿಲ್ಟರ್​ನ ರಂಧ್ರಗಳು ಮುಚ್ಚಿಕೊಂಡರೆ ಅದರಿಂದ ಟ್ರ್ಯಾಕ್ಟರ್​ನ ಬಾಳಿಕೆ ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿದಿನ ಅಥವಾ ಎರಡು ದಿನಗಳಿಗೊಮ್ಮೆ ಏರ್​ಫಿಲ್ಟರ್ ತಪಾಸಿಸಬೇಕು. ಧೂಳು, ಮಣ್ಣು ಒರೆಸಿ ಮತ್ತೆ ಹಾಕಬೇಕು. ಎಂಜಿನ್ ಬ್ಲೇಡ್​ಗಳ ಮೇಲೆ ಕುಳಿತುಕೊಳ್ಳುವ ಧೂಳನ್ನೂ ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಅಗತ್ಯವೆನಿಸಿದರೆ ಏರ್​ಫಿಲ್ಟರ್ ಮತ್ತು ಬ್ಲೇಡ್​ಗಳನ್ನು ಬದಲಾಯಿಸಬೇಕು.

    ಚಕ್ರಗಳ ಗಾಳಿ 

    ಟೈರ್​ಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಗಾಳಿ ಇದೆಯೇ ಎಂಬುದನ್ನು ಕನಿಷ್ಠ ನಾಲ್ಕೈದು ದಿನ ಅಥವಾ ವಾರಕ್ಕೊಮ್ಮೆಯಾದರೂ ಗಮನಿಸಬೇಕು. ಪ್ರತಿದಿನ ಬಳಕೆಯಾದಂತೆ ಚಕ್ರಗಳಲ್ಲಿ ಗಾಳಿ ಕಡಿಮೆಯಾಗುತ್ತ ಹೋಗುತ್ತದೆ. ಟೈರ್​ಗಳಿಗೆ ಯಾವುದೇ ಹಾನಿ ಆಗಬಾರದು ಎಂದಿದ್ದರೆ ನಿಯಮಿತವಾಗಿ ಗಾಳಿ ತುಂಬಿಸುತ್ತಿರಲೇಬೇಕು. ಅದಲ್ಲದೆ, ಚಕ್ರಗಳಲ್ಲಿ ಗಾಳಿ ಕಡಿಮೆ ಇದ್ದರೆ ವಾಹನ ಹೆಚ್ಚಿನ ಇಂಧನವನ್ನು ಕುಡಿಯುತ್ತದೆ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಟೈರ್​ಗಳು ಹೆಚ್ಚು ವೇಗವಾಗಿ ಗಾಳಿಯನ್ನು ಕಳೆದುಕೊಳ್ಳುತ್ತವೆ. ಆ ಬಗ್ಗೆ ನಿಗಾ ಇಡುವುದು ಒಳ್ಳೆಯದು.

    ಟ್ರ್ಯಾಕ್ಟರ್ ಟಿಪ್ಸ್

    1.  ಖರೀದಿ ಮಾಡುತ್ತಿದ್ದಂತೆಯೇ ಕಂಪನಿಯವರು ನೀಡುವ ಪುಸ್ತಕವನ್ನು (ಯೂಸರ್ಸ್ ಮ್ಯಾನುಯಲ್) ಪೂರ್ತಿಯಾಗಿ ಓದಿ, ಮನನ ಮಾಡಿಕೊಳ್ಳಿ.

    2. ಟ್ರ್ಯಾಕ್ಟರ್​ಗೆಂದೇ ನಿರ್ದಿಷ್ಟವಾದ ಟೂಲ್​ಗಳಿರುತ್ತವೆ. ಬೇರೆ ವಾಹನಗಳ ಟೂಲ್​ಗಳು ಟ್ರ್ಯಾಕ್ಟರ್​ಗೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಅದರದೇ ಟೂಲ್​ಗಳನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ.

    3. ಮಳೆಗಾಲದಲ್ಲಿ ಟ್ರ್ಯಾಕ್ಟರನ್ನು ಹೊರಗೆ ನಿಲ್ಲಿಸಬೇಡಿ. ಮಳೆನೀರಿನಿಂದ ಅದರ ಭಾಗಗಳು ತುಕ್ಕು ಹಿಡಿದು ಬೇಗ ಹಾಳಾಗುತ್ತವೆ. ಒಳಗೆ ನಿಲ್ಲಿಸಲು ಸ್ಥಳಾವಕಾಶ ಇಲ್ಲದಿದ್ದರೆ ಕೊನೇ ಪಕ್ಷ ಅದಕ್ಕೆ ಪ್ಲಾಸ್ಟಿಕ್ ಹೊದಿಕೆಯನ್ನಾದರೂ ಹೊದಿಸಿ.

    4. ಬಹುತೇಕ ಟ್ರ್ಯಾಕ್ಟರ್​ಗಳಿಗೆ ಆಟೋಮೆಟಿಕ್ ಬ್ರೇಕ್​ಗಳಿರುತ್ತವೆ. ಅವು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಅವುಗಳಿಗೆ ಕಾಲಕಾಲಕ್ಕೆ ಸರಿಯಾಗಿ ಲ್ಯೂಬ್ರಿಕಂಟ್​ಗಳನ್ನು (ಆಯಿಲ್) ಹಾಕಬೇಕು.

    5. ಉತ್ತಮವಾಗಿ ಲ್ಯೂಬ್ರಿಕೇಟ್ ಆಗಿರುವ ಟ್ರ್ಯಾಕ್ಟರ್ ನಿಮಗೆ ಹೆಚ್ಚು ತಲೆನೋವು ಕೊಡುವುದೇ ಇಲ್ಲ. ಹಾಗಾಗಿ ಆಯಿಲ್ ಮಟ್ಟವನ್ನು ನಿರಂತರವಾಗಿ ಗಮನಿಸುತ್ತಿರಿ.

    6. ಯಾವಾಗಲೂ ಹೆವಿ ಡ್ಯೂಟಿ ಲ್ಯೂಬ್ರಿಕಂಟ್​ಗಳನ್ನೇ ಉಪಯೋಗಿಸಿ. ಕಾರು ಮತ್ತಿತರ ಹಗುರ ವಾಹನಗಳಿಗೆ ಬಳಸುವ ಲ್ಯೂಬ್ರಿಕಂಟ್​ಗಳನ್ನು ಟ್ರ್ಯಾಕ್ಟರ್​ಗಳಿಗೆ ಬಳಸದಿರಿ.

    7. ಕೆಲವು ಕಂಪನಿಗಳ ಟ್ರ್ಯಾಕ್ಟರ್​ಗಳಿಗೆ ನಿರ್ದಿಷ್ಟ ಲ್ಯೂಬ್ರಿಕಂಟ್​ಗಳನ್ನೇ ಬಳಸಬೇಕೆಂಬ ನಿಯಮವನ್ನು ಯೂಸರ್ಸ್ ಮ್ಯಾನುಯಲ್​ನಲ್ಲಿ ಸೂಚಿಸಿರುತ್ತಾರೆ. ಅದನ್ನೇ ಬಳಸುವುದು ವಿಹಿತ.

    8. ಬಿಡಿಭಾಗಗಳನ್ನು ಸರಿಯಾಗಿ ಪರೀಕ್ಷಿಸಿ. ಅವುಗಳಿಗೆ ಕ್ಲೀನಿಂಗ್ ಮತ್ತು ಗ್ರೀಸಿಂಗ್ ಅವಶ್ಯಕತೆ ಇದ್ದರೆ ಕೂಡಲೇ ಮಾಡಿಸಿ.

    9. ಯಾವತ್ತೂ ಟ್ರ್ಯಾಕ್ಟರನ್ನು ಓವರ್​ಲೋಡ್ ಮಾಡಬೇಡಿ. ಪದೇಪದೆ ಹೆಚ್ಚಿನ ಲೋಡ್ ಹೊರಿಸಿ ಓಡಿಸುತ್ತಿದ್ದರೆ ಅದು ಬೇಗ ಹಾಳಾಗುತ್ತದೆ.

    10. ಕಾರಿನಂತೆ ಟ್ರ್ಯಾಕ್ಟರ್​ಗಳ ಇಂಜಿನ್ ಕೂಡ ರಬ್ಬರ್ ಹೋಸ್​ಗಳು ಮತ್ತು ಬೆಲ್ಟ್​ಗಳನ್ನು ಹೊಂದಿರುತ್ತದೆ. ಅವು ಡ್ಯಾಮೇಜ್ ಆಗಿವೆಯೇ ಎಂಬುದನ್ನು ಆಗಾಗ ಗಮನಿಸುತ್ತಿರಿ. ಡ್ಯಾಮೇಜ್ ಆಗಿದ್ದರೆ ಕೂಡಲೇ ಬದಲಿಸಿ.

    11. ಪ್ರತಿ ಐನೂರು ಗಂಟೆಗಳ ಉಪಯೋಗದ ನಂತರ ಟ್ರ್ಯಾಕ್ಟರ್​ನ ಹೈಡ್ರಾಲಿಕ್ ಸಿಸ್ಟೆಮ್ ಅನ್ನು ನುರಿತ ವೃತ್ತಿಪರರಿಂದ ಸರ್ವಿಸ್ ಮಾಡಿಸುವುದು ಸೂಕ್ತ.

    12. ಬೇರೆ ಬೇರೆ ಟ್ರ್ಯಾಕ್ಟರ್​ಗಳ ವಿನ್ಯಾಸ ಬೇರೆಬೇರೆಯಾಗಿರುತ್ತದೆ. ಅವುಗಳ ಆಯಿಲ್ ಬದಲಾವಣೆಯ ಅವಧಿಯೂ ಭಿನ್ನವಾಗಿರುತ್ತದೆ. ಮ್ಯಾನುಯಲ್​ನಲ್ಲಿ ಸ್ಪಷ್ಟಪಡಿಸಿದ ಅವಧಿಗೆ ಸರಿಯಾಗಿ ಆಯಿಲ್ ಬದಲಿಸುವುದು ಜಾಣತನ. ಕೆಲವು ಟ್ರ್ಯಾಕ್ಟರ್​ಗಳಿಗೆ ಪ್ರತಿ ನೂರು ಗಂಟೆಗಳ ಕಾರ್ಯನಿರ್ವಹಣೆಯ ಬಳಿಕ ಆಯಿಲ್ ಬದಲಿಸುವುದು ಸೂಕ್ತವಾಗಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts