ರಸ್ತೆ ಸಂಚಾರ ತಡೆದು ರೈತರಿಂದ ಪ್ರತಿಭಟನೆ

ಜಮಖಂಡಿ: ಕಬ್ಬಿನ ಬಿಲ್ ಬಾಕಿ ಪಾವತಿಗೆ ಒತ್ತಾಯಿಸಿ ಹಾಗೂ ದೆಹಲಿಯಲ್ಲಿ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಎ.ಜಿ. ದೇಸಾಯಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಸಂಗಪ್ಪ ನಾಗರಡ್ಡಿ ಮಾತನಾಡಿ, ಸಕ್ಕರೆ ಕಾರ್ಖಾನೆ ಗಳಿಗೆ ಕಬ್ಬು ಪೂರೈಸಿದ 14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನಿದೆ. ಆದರೆ, ಕಾರ್ಖಾನೆಗಳ ಮಾಲೀಕರು 8 ತಿಂಗಳಾದರೂ ಹಣ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡ ಬಾಬು ಹಸರಡ್ಡಿ, ಸಂಜೀವ ಮಾಣಿಕಶೆಟ್ಟಿ ಮಾತನಾಡಿ, ಸಾಲಮನ್ನಾ, ಡಾ. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಪೊಲೀಸರ ಮೂಲಕ ಹತ್ತಿಕ್ಕಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸಿತು. ರೈತರ ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಗುಡುಗಿದರು. ಬಳಿಕ ಉಪವಿಭಾಗಾಧಿಕಾರಿಗಳ ಕಾರ್ಯಾ ಲಯದ ಗ್ರೇಡ್-2 ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ರಾಜು ನದಾಫ್, ಕಲ್ಲಪ್ಪ ಬಿರಾದಾರ, ತುಕಾರಾಮ ಮ್ಯಾಗಿನ ಮನಿ, ಗಂಗಾಧರ ಮೇಟಿ, ದುಂಡಪ್ಪ ಜೀರಗಾಳ, ಗೋವಿಂದಪ್ಪ ಕೋರಡ್ಡಿ, ಪುಲಿಕೇಶಿ ನಾಂದ್ರೇಕರ, ರಮೇಶ ತೇಲಿ, ಕದಮ ಇದ್ದರು.