ಕಬ್ಬು, ಭತ್ತ ಬೆಂಕಿಗಾಹುತಿ

ಯಳಂದೂರು : ತಾಲೂಕಿನ ಮದ್ದೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಹಾಗೂ ಭತ್ತದ ಬೆಳೆ ನಾಶವಾಗಿದೆ.


ಕಬ್ಬಿನ ಗದ್ದೆಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಗಾಳಿಗೆ ಪರಸ್ಪರ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿದೆ. ಪರಿಣಾಮ 8 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಹಾಗೂ 30 ಗುಂಟೆ ಭತ್ತದ ಗದ್ದೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದರು.

ಗ್ರಾಮದ ಚಿಕ್ಕನಂಜಯ್ಯ ಎಂಬುವರಿಗೆ ಸೇರಿದ 3 ಎಕರೆ, ಎಂ.ಬಿ.ಬಸವಯ್ಯ ಎಂಬುವರಿಗೆ ಸೇರಿದ 1.3 ಎಕರೆ, ವೆಂಟಕರಂಗನಾಯಕ ಎಂಬುವರು 30 ಗುಂಟೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಹಾಗೂ ಭತ್ತ ಬೆಂಕಿಗಾಹುತಿಯಾಗಿದೆ. ಅಲ್ಲದೆ ಪುಟ್ಟನಂಜಮ್ಮ, ಬಸವಲಿಂಗಮ ಹಾಗೂ ಗುರುರಾಜು ಎಂಬುವರಿಗೆ ಸೇರಿದ ಕಬ್ಬಿನ ಫಸಲು ಸಂಪೂರ್ಣವಾಗಿ ಭಸ್ಮವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸುವಂತೆ ರೈತರು ಆಗ್ರಹಿಸಿದ್ದಾರೆ.