ಗುಡ್ಡ ಕುಸಿದು 25 ಎಕರೆ ಭತ್ತದ ಗದ್ದೆ ನಾಶ

ಶೃಂಗೇರಿ: ಸಾಲ ಹೊತ್ತುಕೊಂಡು ಹುಟ್ಟಿದ್ದೇವೆ. ಸಾಲದಲ್ಲಿಯೇ ಬದುಕುತ್ತಿದ್ದೇವೆ. ಸಾಲದೊಂದಿಗೆ ಸಾಯುತ್ತೇವೆ. ಇದು ಕಥೆಯಲ್ಲ. ನಮ್ಮ ಜೀವನ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಹುಲುಗಾರು ಕೃಷಿಕರಾದ ಬೈಲಿನ ಪಲ್ಲವಿ, ಶಶಿಕಲಾ, ನಾಗರಾಜ, ಕರುಣಾ, ಶ್ರೀಶಂಕರಪ್ಪ ಅವರ ವ್ಯಥೆಯ ಬದುಕು.

ಕೃಷಿ ನಂಬಿ ಆರ್ಥಿಕವಾಗಿ ದುರ್ಬಲರಾಗಿರುವ ಇಲ್ಲಿನ 30 ಕುಟುಂಬಗಳ ಒಟ್ಟು 25 ಎಕರೆ ಭತ್ತದ ಗದ್ದೆಗಳ ಮೇಲೆ ಗುಡ್ಡ ಕುಸಿದು ನೆಟ್ಟ ಸಸಿಗಳು ಮಣ್ಣುಪಾಲಾಗಿವೆ. ಒಂದು ತಿಂಗಳಿನಿಂದ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿ ಸಸಿಮಡಿ ನೆಟ್ಟು ಮನೆಯ ಬಳಕೆಗಾಗಿ ಭತ್ತದ ನಿರೀಕ್ಷೆಯಲ್ಲಿದ್ದ ಅಲ್ಲಿನ ಕೃಷಿಕರ ಬದುಕು ಮಳೆ ಕಸಿದುಕೊಂಡಿದೆ.

ಸಹ್ಯಾದ್ರಿ ಪರ್ವತಶ್ರೇಣಿಯ ತಪ್ಪಲಿನಲ್ಲಿ ಮನಮೋಹಕವಾದ ಪರಿಸರದಲ್ಲಿ ಪಟ್ಟಣದಿಂದ 12 ಕಿಮೀ ದೂರದಲ್ಲಿರುವ ಕಿಗ್ಗಾ ಗ್ರಾಪಂ ವ್ಯಾಪ್ತಿಯ ಹುಲುಗಾರುಬೈಲಿನ ಮರಾಠಿ ಜನಾಂಗದ ಎಸ್ಟಿ 30 ಕುಟುಂಬಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸೆ ಬಂದವರು.ಬೈನೇಮರದ ಕಳ್ಳು ಸಂಗ್ರಹಿಸುವ ಹಾಗೂ ಅಡಕೆಗೊನೆ ತೆಗೆಯುವ ಕಾಯಕದಲ್ಲಿ ನಿಸ್ಸೀಮರು. ಇಲ್ಲಿ ನೆಲೆಸಿರುವ ಕುಟುಂಬದ ಹಿರಿಯರು ಬದುಕುಕಟ್ಟಿಕೊಳ್ಳಲು ಪಟೇಲರ ಆಡಳಿತವಿದ್ದ ಸಮಯ ಸುಮಾರು ಇನ್ನೂರು ವರ್ಷಗಳ ಕೆಳಗೆ ಕಿಗ್ಗಾದ ಸಮೀಪವಿರುವ ಹುಲುಗಾರು ಬೈಲಿಗೆ ಬಂದವರು.

ದಟ್ಟವಾದ ಅರಣ್ಯಗಳ ನಡುವೆ ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದ ಇವರು ಭೂ ಸುಧರಣಾ ಕಾಯ್ದೆಯಡಿ ಅಲ್ಲಸ್ವಲ್ಪ ಜಮೀನು ಪಡೆದವರು. ಕಂದಾಯ ಕಟ್ಟುತ್ತಲೇ ಬಂದಿದ್ದಾರೆ. ಆದರೆ ಹಲವರಿಗೆ ಹಕ್ಕುಪತ್ರ ಇನ್ನೂ ದೊರಕಲಿಲ್ಲ ಎಂದು ಮರಾಠಿ ಜನಾಂಗದವರ ಯಶೋಗಾಥೆಯನ್ನು ಕಿಗ್ಗಾದ ಕೃಷಿಕ ಶ್ರೀನಿವಾಸ್ ಭಟ್ ಅವರು ಬಿಚ್ಚಿಟ್ಟರು.

ಹಲವರ ಮನೆ ಗುಡ್ಡದಲ್ಲಿದ್ದರೆ ಇನ್ನೂ ಹಲವರು ಗುಡ್ಡದ ಕೆಳಗೆ ವಾಸಿಸುತ್ತಿದ್ದಾರೆ. ಒಂದು ಎಕರೆ ಒಳಗೆ ಇರುವ ಕೃಷಿಭೂಮಿ, ಅಡಕೆ, ಕಾಳುಮೆಣಸು, ಭತ್ತದ ಗದ್ದೆಯೊಂದಿಗೆ ಬಂದ ಫಸಲಿನಲ್ಲಿ ಜೀವನ ನಿರ್ವಹಿಸುತ್ತಿದ್ದ ಎಲ್ಲ ಕುಟುಂಬದವರ ಅಡಕೆ, ಕಾಳುಮೆಣಸು, ಕಾಫಿಬೆಳೆಗಳು ಕೊಳೆ, ಸೊರಗು ರೋಗದಿಂದ ಎಳೆಕಾಯಿಗಳು ಉದುರುತ್ತಿವೆ. ಊಟಕ್ಕೆ ಭತ್ತವಾದರೂ ಉಳಿದೀತು ಎಂಬ ಅವರ ಆಸೆ ನೀರು ಪಾಲಾಗಿದೆ.

2013ರಲ್ಲಿ ಬಂದ ಮಳೆಯಿಂದ ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿತ್ತು. 2018ರ ಮಳೆ ಅಲ್ಲಿದ್ದರ ಬದುಕನ್ನು ಕಸಿದುಕೊಂಡಿದೆ. ಮತ್ತೇ ಜೀವನ ನಿರ್ವಹಣೆಗಾಗಿ ನೀರಿನಿಂದ ಆವೃತ್ತಗೊಂಡ ಗದ್ದೆಯಲ್ಲಿ ಲಭ್ಯವಿರುವ ಸಸಿಗಳನ್ನು ಮತ್ತೆ ನೆಡುವ ಕಾಯಕದಲ್ಲಿ ರೈತರು ತೊಡಗಿದ್ದಾರೆ. ಮೂವತ್ತು ಕುಟುಂಬಗಳು ಒಗ್ಗಟ್ಟಾಗಿ ಪರಸ್ಪರ ಒಬ್ಬರಿಗೊಬ್ಬರು ಸಹಕಾರ ನೀಡುತ್ತ ಗದ್ದೆ ಕಾಯಕದಲ್ಲಿ ತೊಡಗಿದ್ದಾರೆ. ಚುನಾವಣೆ ಸಮಯದಲ್ಲಿ ಮತ ಕೇಳಲು ಬಂದ ನಾಯಕರು ಅತ್ತ ಸುಳಿದಿಲ್ಲ ಎಂಬ ನೋವು ಅವರನ್ನೂ ಕಾಡುತ್ತಿದೆ. ಮಕ್ಕಳ ಶಿಕ್ಷಣ,ಹಿರಿಯರ ಆನಾರೋಗ್ಯ, ಪುಟ್ಟ ಮನೆಯಲ್ಲಿ ಕನಸು ಕಾಣುತ್ತಿರುವ ಯುವ ಕೃಷಿಕರು ಎಲ್ಲವನ್ನೂ ಕಳೆದುಕೊಂಡರೂ ಬದುಕಿ ತೋರಿಸುತ್ತೇವೆ ಎಂಬ ಛಲ ಬಡತನದಲ್ಲಿ ಪುಟಿಯುತ್ತಿರುವ ಸ್ವಾಭಿಮಾನ ನಿಜಕ್ಕೂ ಪ್ರಶಂಸನೀಯ.

ನೂರಾರು ವರ್ಷಗಳಿಂದ ಇಲ್ಲಿಯೇ ವಾಸವಾಗಿರುವ ನಮ್ಮ ಹಿರಿಯರು ಬಿಟ್ಟುಹೋದ ಭೂಮಿಯೇ ನಮಗೆ ದೊಡ್ಡ ಆಸ್ತಿ. ಸರ್ಕಾರ ಕೆಲವರಿಗೆ ಜಮೀನು ಹಕ್ಕುಪತ್ರ ನೀಡಿಲ್ಲ. ಇನ್ನೂ ಹಲವರಿಗೆ ಮನೆಹಕ್ಕು ಪತ್ರವಿಲ್ಲ. ಸರ್ಕಾರ ನಮಗೆ ಕೂಡಲೇ ಪರಿಹಾರ ನೀಡಬೇಕು.

| ಆಶಾ, ಹುಲುಗಾರುಬೈಲು