More

    ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಎಫ್​ಆರ್​ಪಿ 290 ರೂ.ಗೆ ಹೆಚ್ಚಳ-ಕೇಂದ್ರ ಸಂಪುಟ ನಿರ್ಧಾರ

    ನವದೆಹಲಿ: ಕಬ್ಬು ಬೆಳೆಗಾರರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬುಧವಾರ ಸಿಹಿ ಕೊಡುಗೆಯೊಂದನ್ನು ನೀಡಿದೆ. ನ್ಯಾಯಸಮ್ಮತ ಹಾಗೂ ಲಾಭದಾಯಕ ಬೆಲೆಯನ್ನು (ಎಫ್​ಆರ್​ಪಿ) ಕ್ವಿಂಟಾಲ್​ಗೆ 5 ರೂ. ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಸಭೆ ಕೈಗೊಂಡಿದೆ. ಇದರಿಂದ ಎಫ್​ಆರ್​ಪಿ 290 ರೂ.ಗೆ ಏರಿದ್ದು, ಕಬ್ಬಿಗೆ ಇದುವರೆಗಿನ ಅತಿ ಹೆಚ್ಚು ಬೆಲೆ ಆಗಿದೆ. ಸಂಪುಟದ ಈ ನಿರ್ಧಾರದಿಂದ ಸುಮಾರು 5 ಕೋಟಿ ಕಬ್ಬು ಬೆಳೆಗಾರರಿಗೆ ಮತ್ತು ಅವರ ಅವಲಂಬಿತರಿಗೂ ಅನುಕೂಲವಾಗಲಿದೆ ಎಂದು ಸಚಿವ ಪಿಯುಷ್ ಗೋಯಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    2021ರ ಅಕ್ಟೋಬರ್ 1ರಿಂದ ಆರಂಭವಾಗುವ 2021-22ರ ಕಬ್ಬು ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಖರೀದಿಸುವ ಕಬ್ಬಿಗೆ ಬುಧವಾರ ಪ್ರಕಟಿಸಿದ ಎಫ್​ಆರ್​ಪಿ ಅನ್ವಯವಾಗುತ್ತದೆ ಎಂದು ಹೇಳಿದರು.

    ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ರೈತರನ್ನು ಸೆಳೆಯುವ ಉದ್ದೇಶದಿಂದ ಮೋದಿ ಸರ್ಕಾರ ಈ ನಿರ್ಧಾರ ಕೈಗೊಂಡಿರಬಹುದು ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

    91,000 ಕೋಟಿ ರೂ. ಕಬ್ಬು ಖರೀದಿ:

    2020-21ರ ಕಬ್ಬು ಹಂಗಾಮಿನಲ್ಲಿ ದೇಶದಾದ್ಯಂತದ ಸಕ್ಕರೆ ಕಾರ್ಖಾನೆಗಳು 91,000 ಕೋಟಿ ರೂಪಾಯಿ ಮೌಲ್ಯದ 2,976 ಲಕ್ಷ ಟನ್ ಕಬ್ಬು ಖರೀದಿಸಿವೆ. ಇದೊಂದು ಸಾರ್ವಕಾಲಿಕ ದಾಖಲೆಯ ಖರೀದಿಯಾಗಿದೆ. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಭತ್ತ ಖರೀದಿಯ ನಂತರ ಕಬ್ಬು ಎರಡನೇ ಸ್ಥಾನದಲ್ಲಿದೆ. 2021-22ರ ಹಂಗಾಮಿನಲ್ಲಿ ಕಬ್ಬು ಇಳುವರಿಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದ್ದು ಕಾರ್ಖಾನೆಗಳು 3,088 ಲಕ್ಷ ಟನ್ ಖರೀದಿಸುವ ಸಂಭವವಿದೆ. ಲಕ್ಷ ಕೋಟಿ ರೂ. ಪಾವತಿ: ಕಬ್ಬು ಬೆಳೆಯುವ ರೈತರಿಗೆ ಒಟ್ಟು 1,00,000 ಕೋಟಿ ರೂಪಾಯಿ ಪಾವತಿ ಮಾಡಲಾಗುತ್ತದೆ. ರೈತ-ಪರ ಕ್ರಮಗಳನ್ನು ಅನುಸರಿಸುತ್ತಿರುವ ಸರ್ಕಾರ, ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗುವುದನ್ನು ಖಾತರಿ ಪಡಿಸಲಿದೆ.

    15,000 ಕೋಟಿ ರೂ. ಎಫ್​ಡಿಐಗೆ ಅಸ್ತು: ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ 15,000 ಕೋಟಿ ರೂಪಾಯಿ ಮೊತ್ತದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್​ಡಿಐ) ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕೆನಡಾದ ಆಂಕರೇಜ್ ಇನ್​ಫ್ರಾಸ್ಟ್ರಕ್ಚರ್ ಇನ್ವೆಸ್ಟ್​ಮೆಂಟ್ ಹೋಲ್ಡಿಂಗ್ ಎಂಬ ಕಂಪನಿ ಹೂಡಿಕೆಗೆ ಮುಂದಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಷೇರುಗಳನ್ನು ಆಂಕರೇಜ್ ಕಂಪನಿಗೆ ವಹಿಸಿಕೊಡುವ ಪ್ರಸ್ತಾಪನೆಯೂ ಇದರಲ್ಲಿ ಒಳಗೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣ ಸಂಸ್ಥೆಯ 950 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಆಂಕರೇಜ್ ಕಂಪನಿಗೆ ಒಂಟಾರಿಯೊ ಇನ್​ಕಾರ್ಪೆರೇಷನ್ ವರ್ಗಾಯಿಸಲಿದೆ.

    ನಿರ್ದಿಷ್ಟವಾಗಿ ಮೂಲಸೌಕರ್ಯ ಮತ್ತು ನಿರ್ಮಾಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೂಡಿಕೆ ಪ್ರಸ್ತಾವನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಉಪಸಮಿತಿ ಸಮ್ಮತಿ ನೀಡಿದೆ. ಅದರಲ್ಲಿ ಸಾರಿಗೆ ಸಂಪರ್ಕ, ವಿಮಾನ ನಿಲ್ದಾಣ ಮತ್ತು ನಾಗರಿಕ ವಿಮಾನ ಯಾನ ಸಂಬಂಧಿತ ವ್ಯವಹಾರ ಹಾಗೂ ಸೇವೆಗಳು ಒಳಗೊಂಡಿವೆ.

    ರಷ್ಯಾ ಸಂಸ್ಥೆಯೊಂದಿಗೆ ಒಪ್ಪಂದ: ಲೆಕ್ಕಪತ್ರ ನಿರ್ವಹಣೆ ವೃತ್ತಿಗೆ ಸಂಬಂಧಿಸಿದ ಸಹಕಾರವನ್ನು ಬಲಪಡಿಸಲು ಭಾರತ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮತ್ತು ರಷ್ಯಾ ವೃತ್ತಿಪರ ಲೆಕ್ಕಪರಿಶೋಧಕರ ಸಂಸ್ಥೆ (ಐಪಿಎಆರ್) ನಡುವೆ ಏರ್ಪಟ್ಟಿರುವ ಒಪ್ಪಂದಕ್ಕೆ ಕೇಂದ್ರ ಸಂಪುಟ ಸಮ್ಮತಿಸಿದೆ. ವೃತ್ತಿಪರ ಲೆಕ್ಕಪರಿಶೋಧನೆಯ ತರಬೇತಿ, ವೃತ್ತಿ ನೈತಿಕತೆ, ತಾಂತ್ರಿಕ ಸಂಶೋಧನೆ, ವೃತ್ತಿಪರ ಹಾಗೂ ಬೌದ್ಧಿಕ ಅಭಿವೃದ್ಧಿ ಮುಂತಾದ ವಲಯಗಳಲ್ಲಿ ಸಹಕಾರ ಹೆಚ್ಚಿಸಿ ಬಲಪಡಿಸಲು ಈ ಒಪ್ಪಂದ ನೆರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts