ಆಕಸ್ಮಿಕ ಬೆಂಕಿಗೆ ಕಬ್ಬು ಬೆಳೆ ನಾಶ

ನಂಜನಗೂಡು: ನಗರದ ಹಳ್ಳದಕೇರಿ ಬಡಾವಣೆ ಸಮೀಪ ಜಮೀನಿನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ ಕಬ್ಬು ಬೆಳೆ ನಾಶವಾಗಿದೆ.
ಪ್ರಶಾಂತ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಜ್ವಾಲೆ ಕಬ್ಬು ಬೆಳೆ ಆವರಿಸಿಕೊಂಡು ಅರ್ಧ ಎಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ. ಇದನ್ನು ಕಂಡ ನಗರಸಭೆ ಸದಸ್ಯ ಗಿರೀಶ್ ಅಗ್ನಿ ಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದ ಫಸಲು ಸಂಪೂರ್ಣ ನಾಶ ಆಗುವುದನ್ನು ತಪ್ಪಿಸಿದ್ದಾರೆ. ಚಾಮರಾಜನಗರ ಮುಖ್ಯರಸ್ತೆಗೆ ಜಮೀನು ಹೊಂದಿಕೊಂಡಿದ್ದು, ಯಾರೋ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.