ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ರಾಜ್ಯಕ್ಕೆ ನಂ.1; 8 ಲಕ್ಷ ಟನ್ ಅಧಿಕ ಉತ್ಪಾದನೆ

ರಾಯಣ್ಣ ಆರ್.ಸಿ.

ಬೆಳಗಾವಿ: ಕಬ್ಬಿನ ಬೆಳೆಗೆ ಸೂಕ್ತ ವೈಜ್ಞಾನಿಕ ದರ ನೀಡಬೇಕು ಎಂದು ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದ ನಡುವೆಯೇ ಈ ವರ್ಷದ ಕಬ್ಬಿನ ಹಂಗಾಮು ಮುಕ್ತಾಯವಾಗಿದೆ. ರಾಜ್ಯದ 67 ಸಕ್ಕರೆ ಕಾರ್ಖಾನೆಗಳು (ಮಾ.15ರವರೆಗೆ) 4.04 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 43.10 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ರಾಜ್ಯದ ಕಾರ್ಖಾನೆಗಳಲ್ಲಿ ಕಬ್ಬಿನ ಸರಾಸರಿ ಇಳುವರಿ ಶೇ.10.65ರಷ್ಟಿದೆ. ರಾಜ್ಯದಲ್ಲಿ ಈ ಬಾರಿ 8 ಲಕ್ಷ ಟನ್ ಅಕ ಸಕ್ಕರೆ ಉತ್ಪಾದನೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳು 1.57 ಕೋಟಿ ಮೆಟ್ರಿಕ್‌ಟನ್ ಕಬ್ಬು ನುರಿಸಿ, 17.65 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಬ್ಬಿನ ಸರಾಸರಿ ಇಳುವರಿ 11.26ರಷ್ಟಿದೆ. ಈ ಬಾರಿ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ನುರಿಸುವ ಹಂಗಾಮು ಕಬ್ಬು ಬೆಳೆಗಾರರ ಹೋರಾಟದಿಂದಾಗಿ ಒಂದೂವರೆ ತಿಂಗಳು ತಡವಾಗಿ ಆರಂಭವಾಗಿತ್ತು.

ರಾಜ್ಯದ ಟಾಪ್ 3 ಕಾರ್ಖಾನೆಗಳು

ಬೆಳಗಾವಿ ಜಿಲ್ಲೆಯಲ್ಲಿರುವ ಉಗಾರ್ ಶುಗರ್ಸ್, ಬಾಗಲಕೋಟ ಜಿಲ್ಲೆಯ ನಿರಾಣಿ ಶುಗರ್ಸ್ ಮತ್ತು ಗೋಕಾಕ ಸತೀಶ ಶುಗರ್ಸ್ ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಬೆಳಗಾವಿ ಜಿಲ್ಲೆಯ ಉಗಾರ ಶುಗರ್ಸ್ 15.97 ಲಕ್ಷ ಟನ್ ಕಬ್ಬು ನುರಿಸಿ ಮೊದಲ ಸ್ಥಾನದಲ್ಲಿದೆ. ಮುಧೋಳದ ನಿರಾಣಿ ಶುಗರ್ಸ್ 15.86 ಲಕ್ಷ ಟನ್ ಕಬ್ಬು ನುರಿಸಿ ದ್ವಿತೀಯ ಸ್ಥಾನದಲ್ಲಿದೆ. 12.58 ಲಕ್ಷ ಟನ್ ಕಬ್ಬು ನುರಿಸಿರುವ ಗೋಕಾಕ ಸತೀಶ ಶುಗರ್ಸ್ ತೃತೀಯ ಸ್ಥಾನದಲ್ಲಿದೆ.

ಉತ್ತರ ಕರ್ನಾಟಕದಲ್ಲಿ ಕಬ್ಬು ನುರಿಸುವ ಹಂಗಾಮು ತಡವಾಗಿ ಆರಂಭವಾಗಿದೆ. ಮಾರ್ಚ್ 2ನೇ ವಾರದವರೆಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದರಿಂದ ಕಳೆದ ಬಾರಿಗಿಂತ ರಾಜ್ಯದಲ್ಲಿ 8 ಲಕ್ಷ ಟನ್ ಅಧಿಕ ಸಕ್ಕರೆ ಉತ್ಪಾದನೆಯಾಗಿದೆ. ಕಳೆದ ವರ್ಷದ ಹಂಗಾಮಿನಲ್ಲಿ 35.10 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿತ್ತು. ಈ ಬಾರಿ 43.10 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದೆ.
| ಆರ್.ಬಿ.ಖಾಂಡಗಾಂವೆ, ನಿರ್ದೇಶಕರು, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿ

One Reply to “ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ರಾಜ್ಯಕ್ಕೆ ನಂ.1; 8 ಲಕ್ಷ ಟನ್ ಅಧಿಕ ಉತ್ಪಾದನೆ”

Comments are closed.