ಸಂಧಾನ ಸಭೆ ಅರ್ಧ ಓಕೆ ಇನ್ನರ್ಧ ಬಾಕಿ

ಬಾಗಲಕೋಟೆ: ಪ್ರಮುಖ ಮೂರು ಬೇಡಿಕೆಗಳ ವಿಷಯದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವೆ ಜಟಿಲಗೊಂಡಿದ್ದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶಾಂತರಾಮ ಕೆ.ಜಿ. ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಅರ್ಧದಷ್ಟು ಓಕೆ ಆಗಿದ್ದು, ಉಳಿದರ್ಧ ಸಮಸ್ಯೆ ಇನ್ನೂ ಬಾಕಿ ಇದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ದಿಂದ ರಾತ್ರಿವರೆಗೂ ಅಂದಾಜು 5 ಗಂಟೆಗೂ ಅಧಿಕ ಸಮಯ ನಡೆದ ಸಂಧಾನ ಸಭೆ ಭಾಗಶಃ ಯಶಸ್ವಿಯಾಗುವತ್ತ ಚರ್ಚೆ ನಡೆದರೂ ಎಲ್ಲ ವಿಷಯಗಳು ಇತ್ಯರ್ಥವಾಗಿಲ್ಲ. ಪ್ರಮುಖ ಬೇಡಿಕೆಯೊಂದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಕ್ಕರೆ ಕಾರ್ಖಾನೆ ಮಾಲೀಕರು 2 ದಿನಗಳ ಕಾಲಾವಕಾಶ ಕೋರಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಮುಧೋಳ ನಗರದಲ್ಲಿ 1 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಒಂದು ಹಂತದಲ್ಲಿ ವಿಕೋಪಕ್ಕೆ ತಿರುಗುವ ಲಕ್ಷಣಗಳು ಗೋಚರಿಸಿದ್ದರಿಂದ ಕಾರ್ಖಾನೆ ಮಾಲೀಕರು ತುರ್ತು ಸಭೆ ನಡೆಸಿ ಕಬ್ಬು ಕ್ರಷಿಂಗ್ ನಿಲ್ಲಿಸಿ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರು. ಇದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದ್ದರಿಂದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರೂ ನಷ್ಟಕ್ಕೆ ಗುರಿ ಯಾಗುವ ಅಪಾಯ ಎದುರಾಗಿತ್ತು. ಬೆಳೆದು ನಿಂತಿರುವ ಕಬ್ಬು ನುರಿಸುವುದು ಅಗತ್ಯವಾಗಿದ್ದರಿಂದ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಬೇಕಾಯಿತು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಡಿಸಿ ಶಾಂತರಾಮ ಕೆ.ಜಿ. ಎರಡು ಕಡೆಯವರ ಸಭೆ ನಡೆಸಿದರು.

ಕಾರ್ಖಾನೆ ಆರಂಭದ ಆಶಾಭಾವ: ಕಬ್ಬು ಬೆಳೆಗಾರರು ಹಾಗೂ ರೈತರ ನಡುವಿನ ಸಂಧಾನ ಅರ್ಧದಷ್ಟು ಯಶಸ್ವಿಯಾಗಿದೆ. ಸಮಸ್ಯೆ ಇತ್ಯರ್ಥಕ್ಕೆ ಮಾಲೀಕರು ಎರಡು ದಿನಗಳ ಕಾಲ ಸಮಯ ತೆಗೆದುಕೊಂಡಿದ್ದು, ಅಲ್ಲಿವರೆಗೂ ಕಾರ್ಖಾನೆಗಳು ಕಬ್ಬು ನುರಿಸುವಂತಿಲ್ಲ. ಮಾತುಕತೆಗೆ ಎರಡು ಕಡೆಯಿಂದಲೂ ಸ್ಪಂದನೆ ಸಿಗುತ್ತಿರುವುದರಿಂದ ಆದಷ್ಟು ಶೀಘ್ರ ಕಬ್ಬು ಕ್ರಷಿಂಗ್ ಆರಂಭಗೊಳ್ಳುವ ಆಶಾಭಾವನೆ ಮೂಡಿಸಿದೆ.

ರೈತರ ಬೇಡಿಕೆಗಳೇನು?: 2016-17ನೇ ಸಾಲಿನಲ್ಲಿ ಕಾರ್ಖಾನೆಗಳು ಘೊಷಣೆ ಮಾಡಿದ್ದ ಟನ್ ಕಬ್ಬಿಗೆ ಹೆಚ್ಚುವರಿ ಬೆಲೆ 310 ರೂ. ಪಾವತಿಸಬೇಕು. ಐದು ಫ್ಯಾಕ್ಟರಿಗಳು ಈ ಮೊತ್ತವನ್ನು ಪಾವತಿಸಿದ್ದು, ಉಳಿದ ಕಾರ್ಖಾನೆಗಳು ಪಾವತಿಸಲಿ.

2017-18ನೇ ಸಾಲಿನಲ್ಲಿ ಡಿಸೆಂಬರ್​ವರೆಗೆ ಟನ್ ಕಬ್ಬಿಗೆ 2500 ರೂ. ಪಾವತಿಸಿದ್ದು, ಜನವರಿಯಿಂದ ಮಾರ್ಚವರೆಗೂ ಕಡಿಮೆ ಬೆಲೆ ನೀಡಿವೆ. ತಾರತಮ್ಯ ಸರಿಪಡಿಸಿ ಎಲ್ಲ ಕಬ್ಬಿಗೂ 2500 ರೂ. ಪಾವತಿಸಬೇಕು.

ಪ್ರಸಕ್ತ ಹಂಗಾಮಿನಲ್ಲಿ ಟನ್ ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು. ಎಫ್​ಆರ್​ಪಿ ಬದಲಿಗೆ ಎಸ್​ಎಪಿ ಬೆಲೆ ನಿಗದಿಪಡಿಸಬೇಕು. ಇಲ್ಲವೆ ಎಚ್ ಆಂಡ್ ಟಿ ಹೊರತುಪಡಿಸಿ ಮುಂಗಡವಾಗಿ 2500 ರೂ. ಬೆಲೆ ನೀಡಬೇಕು. ಈ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಭೆಯಲ್ಲಿ ಮಾಲೀಕರು ಒಪ್ಪಿದ್ದೇನು?:  2016-17ನೇ ಸಾಲಿನಲ್ಲಿ ಘೊಷಣೆ ಮಾಡಿದ್ದ 310 ರೂ. ಪಾವತಿಸಲು ಸಮ್ಮತಿ ಸೂಚಿಸಿದ್ದಾರೆ. 2017-18ನೇ ಸಾಲಿನಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಕಬ್ಬು ಪೂರೈಸಿದ ಟನ್ ಕಬ್ಬಿಗೆ ಈಗ ಪಾವತಿಸಿದ ಬಿಲ್ ಸರಿಯಾಗಿದೆ. ಆ ವೇಳೆ ಸಕ್ಕರೆ ಧಾರಣೆ ಕಡಿಮೆಯಾಗಿದ್ದು, ಹೆಚ್ಚಿನ ಹಣ ಕೊಡಲು ಸಾಧ್ಯವಿಲ್ಲವೆಂದಾಗ ರೈತರಿಂದ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳಲು ಮಾಲೀಕರು ಎರಡು ದಿನ ಕಾಲಾವಕಾಶ ಕೋರಿದರು. 2ನೇ ಬೇಡಿಕೆ ಬಗ್ಗೆ ತೀರ್ವನವಾದ ಬಳಿಕ ಪ್ರಸಕ್ತ ಹಂಗಾಮಿನ ಬೆಲೆ ನಿರ್ಧಾರದ ಬಗ್ಗೆ ನಂತರದಲ್ಲಿ ಚರ್ಚೆ ನಡೆಯಲಿದೆ.

ಸಭೆಯಲ್ಲಿದ್ದವರು: ಮುರುಗೇಶ ನಿರಾಣಿ, ಜಗದೀಶ ಗುಡಗುಂಟಿ, ಶಿವಕುಮಾರ ಮಲಘಾಣ, ರಾಮಣ್ಣ ತಳೇವಾಡ ಸೇರಿ ಉಳಿದ ಕಾರ್ಖಾನೆಗಳಿಂದ ಮಾಲೀಕರ ಬದಲಿಗೆ ಪ್ರತಿನಿಧಿಗಳು ಭಾಗವಹಿಸಿದ್ದರು. ರೈತರ ಪರವಾಗಿ ಸುಭಾಷ ಶಿರಬೂರ, ಈರಪ್ಪ ಹಂಚಿನಾಳ, ಮುತ್ತಪ್ಪ ಕೋಮಾರ ಸೇರಿ 25 ಪ್ರಮುಖ ಮುಖಂಡರು ಇದ್ದರು. ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಶಾಂತರಾಮ ಕೆ.ಜಿ., ಎಸ್ಪಿ ಸಿ.ಬಿ.ರಿಷ್ಯಂತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಡಿಡಿ ಶ್ರೀಶೈಲ ಕಂಕಣವಾಡಿ ಇದ್ದರು.

ಪೊಲೀಸರೊಂದಿಗೆ ಮಾತಿನ ಚಕಮಕಿ: ಬಾಕಿ ಬಿಲ್ ಪಾವತಿ ಮತ್ತು ಪ್ರಸಕ್ತ ಹಂಗಾಮಿನ ಸೂಕ್ತ ಬೆಲೆ ನಿಗದಿ ಕುರಿತು ಜಿಲ್ಲಾಧಿಕಾರಿ ಶಾಂತರಾಮ ಕೆ.ಜಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಕೆಲ ರೈತ ಮುಖಂಡರಿಗೆ ಒಳಗೆ ಪ್ರವೇಶ ನೀಡದ ಹಿನ್ನೆಲೆ ಪೊಲೀಸರು ಮತ್ತು ಕಬ್ಬು ಬೆಳೆಗಾರರ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಕಬ್ಬು ಬೆಲೆ ನಿಗದಿ ಸಭೆಗೆ ಆಯ್ದ ಕೆಲ ಕಬ್ಬು ಬೆಳೆಗಾರ ಸಂಘದ ಮುಖಂಡರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ವಿರುದ್ಧ ಘೊಷಣೆ ಕೂಗಿದರು.

ಕಬ್ಬು ಬೆಳೆಗಾರ ಸಂಘದ ಮುಖಂಡ ಈರಪ್ಪ ಹಂಚನಾಳ ಮಾತನಾಡಿ, ಬೆಲೆ ನಿಗದಿ ಕುರಿತು ಕರೆದ ಸಭೆಗೆ ಜಿಲ್ಲಾಧಿಕಾರಿ ಕೆಲ ಮುಖಂಡರನ್ನು ಉದ್ದೇಶಪೂರ್ವಕವಾಗಿ ಹೊರಗೆ ಇಟ್ಟಿದ್ದಾರೆ. ಕಾರ್ಖಾನೆ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ. ಜಿಪಂ ಉಪಾಧ್ಯಕ್ಷ, ರೈತ ಮುಖಂಡ ಮುತ್ತಪ್ಪ ಕೋಮಾರ ಅವರನ್ನು ಕೂಡ ಸಭೆಗೆ ಪ್ರವೇಶಿಸಲು ಅವಕಾಶ ನೀಡಿಲ್ಲ. ರೈತ ಮುಖಂಡರಿಗೆ ಅವಕಾಶ ನೀಡದೆ ಡಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾರ್ಖಾನೆಗಳಿಂದ ನ್ಯಾಯ ಸಿಗದೆ ಸಂಕಷ್ಟ ಸ್ಥಿತಿಯಲ್ಲಿರುವ ರೈತರಿಗೆ ಜಿಲ್ಲಾಧಿಕಾರಿ ಸಹಾಯ ಹಸ್ತ ಚಾಚುವ ಬದಲು ಸಭೆಗೆ ಅವರು ಬರಬೇಡಿ, ಇವರು ಬರಬೇಡಿ ಎಂದು ಹೇಳುತ್ತಿರುವುದು ಅವಮಾನಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಳಗೆ ಬಿಡಲು ನಿರಾಕರಿಸಿದ ಪೊಲೀಸರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದರು. ನಂತರ ಎಸ್ಪಿ ಸಿ.ಬಿ.ರಿಷ್ಯಂತ ಆಗಮಿಸಿ ಮುಖಂಡರಿಗೆ ಸಭೆಗೆ ಪ್ರವೇಶ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ಡಿಸಿ ಅವರು ಕರೆದಿದ್ದ ರೈತರು ಮತ್ತು ಕಾರ್ಖಾನೆ ಪ್ರತಿನಿಧಿಗಳ ಸಭೆ ಉತ್ತಮ ರೀತಿಯಲ್ಲಿ ಸಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ವಿಷಯಗಳು ಇತ್ಯರ್ಥವಾಗಿಲ್ಲ. ಎರಡು ದಿನಗಳ ಕಾಲ ಸಮಯ ಕೋರಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಆದರೆ, ಅಲ್ಲಿವರೆಗೂ ಕಬ್ಬು ನುರಿಸುವಂತಿಲ್ಲ. ಎರಡು ದಿನಗಳ ಬಳಿಕ ಸಮಸ್ಯೆ ಇತ್ಯರ್ಥವಾಗುವ ವಿಶ್ವಾಸ ಇದೆ. ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಈ ಜಗಳ ಗಂಡ-ಹೆಂಡತಿಯ ಜಗಳದಂತೆ. ಎಲ್ಲವೂ ಸರಿಯಾಗುತ್ತದೆ. ಕಬ್ಬು ನುರಿಸುವುದು ಆದಷ್ಟು ಬೇಗ ಆರಂಭವಾಗುತ್ತದೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಒಪ್ಪುವ ಒಳ್ಳೆಯ ಬುದ್ಧಿಯನ್ನು ಕಾರ್ಖಾನೆಯವರಿಗೆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.

| ಈರಪ್ಪ ಹಂಚಿನಾಳ ಕಬ್ಬು ಬೆಳೆಗಾರರ ಮುಖಂಡ

ರೈತರ ಮೂರು ಬೇಡಿಕೆಗಳಲ್ಲಿ ಮೊದಲ ಎರಡು ಬೇಡಿಕೆಗಳು ಅವರಿಬ್ಬರು ಪರಸ್ಪರ ಹೊಂದಾಣಿಕೆಯಿಂದ ಮಾಡಿಕೊಂಡಿದ್ದು, ಅದಕ್ಕೆ ಜಿಲ್ಲಾಡಳಿತ ಹೊಣೆಯಲ್ಲ. ಅದಾಗ್ಯೂ ರೈತರ ಹಿತದೃಷ್ಟಿಯಿಂದ ಇಂದಿನ ಸಭೆಯಲ್ಲಿ ರ್ಚಚಿಸಲಾಯಿತು. ಮೊದಲ ಬೇಡಿಕೆಗೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ಕಳೆದ ವರ್ಷದ ಬೇಡಿಕೆ ಬಗ್ಗೆ 2 ದಿನಗಳ ಕಾಲಾವಕಾಶ ಕೋರಿದ್ದಾರೆ. ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ. ಇಂದಿನ ಸಭೆ ಭಾಗಶಃ ಯಶಸ್ವಿಯಾಗಿದೆ. ಶೀಘ್ರದಲ್ಲಿ ಎಲ್ಲವೂ ಬಗೆಹರಿದು ಕಾರ್ಖಾನೆ ಆರಂಭವಾಗುವ ವಿಶ್ವಾಸದಲ್ಲಿ ಇದ್ದೇವೆ.

| ಶಾಂತರಾಮ ಕೆ.ಜಿ. ಬಾಗಲಕೋಟೆ ಡಿಸಿ