ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದೊಂದಿಗೆ ಪುನರಾರಂಭಗೊಳ್ಳುವ ಸಿದ್ಧತೆಯಲ್ಲಿದ್ದು, ಕರಾವಳಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಇದರ ಆಡಳಿತ ಮಂಡಳಿ ಈಗ ರೈತರಿಗೆ ಸುಧಾರಿತ ತಳಿಯ ಕಬ್ಬಿನ ಬೀಜವನ್ನು ಕಾರ್ಖಾನೆಯ ಆವರಣದಲ್ಲಿ ವಿತರಿಸಿ ಮುಂದಿನ ವರ್ಷ ಕಬ್ಬು ಬೆಳೆಯುವ ಕುರಿತು ಮನವರಿಕೆ ಮಾಡಿದೆ.

ಕಾರ್ಖಾನೆ ಪುನಶ್ಚೇತನದ ಕುರಿತು ನುರಿತ ತಾಂತ್ರಿಕ ತಜ್ಞರನ್ನೊಳಗೊಂಡ ಮೆ.ಮಿಟ್ಕಾನ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್, ಪುಣೆ ಇವರಿಂದ ವಿಸ್ತತ ಯೋಜನಾ ವರದಿ ತಯಾರಿಸಲಾಗಿದೆ. ಕಾರ್ಖಾನೆಯ ಪುನಶ್ಚೇತನಕ್ಕೆ ಬೇಕಾದ 30 ಕೋಟಿ ರೂ.ನಷ್ಟು ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಯೋಜನಾ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇತ್ತೀಚೆಗೆ ಮುಖ್ಯಮಂತ್ರಿಗಳು ಉಡುಪಿ ಪ್ರವಾಸ ಕೈಗೊಂಡಿದ್ದಾಗ ಕಾರ್ಖಾನೆ ಪುನಶ್ಚೇತನದ ಬಗ್ಗೆ ಜನಪ್ರತಿನಿಧಿಗಳು ಮತ್ತು ಕಾರ್ಖಾನೆಯ ಅಧ್ಯಕ್ಷರು ಆರ್ಥಿಕ ನೆರವು ನೀಡುವಂತೆ ವಿನಂತಿಸಿದ್ದರು. ಕಾರ್ಖಾನೆಯ ಪುನಶ್ಚೇತನಕ್ಕೆ ಒಲವು ವ್ಯಕ್ತಗೊಂಡಿದ್ದು, ವಾರಾಹಿ ನೀರು ಬಂದಿರುವುದರಿಂದ ಕಾರ್ಖಾನೆಯ ಕಾರ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಕಬ್ಬು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದರು.

ಈ ಹಿಂದೆ ಕಾರ್ಖಾನೆಯ ಕಬ್ಬು ಅರೆಯುವಿಕೆಯ ಸಾಮರ್ಥ್ಯವು ದಿನವೊಂದರ 1250 ಮೆಟ್ರಿಕ್ ಟನ್‌ಗಳಾಗಿದ್ದು ವಾರಾಹಿ ನೀರಾವರಿ ಯೋಜನೆ ಕುಂಠಿತವಾದ ಕಾರಣ ಮತ್ತು ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗದೆ ಕಾರ್ಖಾನೆ ಮುಚ್ಚುವಂತಾಗಿತ್ತು. ಸರ್ಕಾರದ ನಿರ್ದೇಶನದಂತೆ ಬೆಳಗಾವಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಬ್ಬು ತಜ್ಞರು 2017ರ ಏಪ್ರಿಲ್‌ನಲ್ಲಿ ಕಾರ್ಖಾನೆ ವ್ಯಾಪ್ತಿಯ ರೈತರನ್ನು ಸಂಪರ್ಕಿಸಿ, ವಾರಾಹಿ ನೀರಾವರಿ ಯೋಜನೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದರು. ಕಬ್ಬು ಬೆಳೆಯ ಬಹುದಾದ ಪ್ರದೇಶ ಮತ್ತು ನೀರಾವರಿ ಲಭ್ಯತೆಯ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದರು.

ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ಹೆಚ್ಚಿರುವುದರಿಂದ 5 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತಲೂ ಹೆಚ್ಚು ಕಬ್ಬು ಬೆಳೆಯಲು ಸಾಧ್ಯವಿದೆ ಎಂಬುದನ್ನು ಮನಗಂಡು ಕಾರ್ಖಾನೆ ಪುನಶ್ಚೇತನ ಕುರಿತು ಚಿಂತಿಸಲಾಗಿತ್ತು.

ಲಾಭದಾಯಕವಾದ ವಾರಾಹಿ: ವಾರಾಹಿ ನೀರಾವರಿ ಯೋಜನೆಯಲ್ಲಿ ಈಗಾಗಲೇ ಸುಮಾರು 12,000 ಎಕ್ರೆ ರೈತರ ಕೃಷಿ ಜಮೀನಿಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. 2018ರ ಜೂನ್ 8ರಂದು 9 ಪ್ಯಾಕೇಜ್ ಮೂಲಕ ಹೆಚ್ಚುವರಿ ಕಾಮಗಾರಿಗೂ ಟೆಂಡರ್ ನಡೆದು ಕೆಲಸ ಪ್ರಗತಿಯಲ್ಲಿದೆ. ಇದರಿಂದಾಗಿ ಹೆಚ್ಚುವರಿಯಾಗಿ ಸುಮಾರು 8,000 ಎಕ್ರೆ ಕೃಷಿ ಜಮೀನಿಗೆ ನೀರು ದೊರೆಯಲಿದೆ. ವಾರಾಹಿ ಯೋಜನೆಯು ಪೂರ್ಣಗೊಂಡಾಗ ಸುಮಾರು ಎಡದಂಡೆ ಕಾಲುವೆಯ ಪ್ರದೇಶದಲ್ಲಿ ಒಟ್ಟು 22,000 ಎಕ್ರೆಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಇದರಲ್ಲಿ 12ರಿಂದ 15 ಸಾವಿರ ಎಕ್ರೆ ಜಮೀನಿನಲ್ಲಿ ಕಬ್ಬು ಅಭಿವೃದ್ಧಿಯಾಗಲಿದೆ.

ಮುಂದಿನ ವರ್ಷ ಕಬ್ಬು ನಾಟಿ: ಮುಖ್ಯಮಂತ್ರಿಯವರ ಸಲಹೆಯಂತೆ ಕಬ್ಬಿನ ಬೀಜೋತ್ಪಾದನೆಗಾಗಿ ಉತ್ತಮ ತಳಿಯ ಹಾಗೂ ಅಧಿಕ ಇಳುವರಿಯ ಕಬ್ಬಿನ ಬೀಜವನ್ನು ಮಂಡ್ಯದ ವಿ.ಸಿ. ಫಾರ್ಮ್‌ನಿಂದ ಖರೀದಿಸಿ ರೈತರಿಗೆ ಉಚಿತವಾಗಿ ನೀಡುವ ಬಗ್ಗೆ ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಚಾಲನೆ ನೀಡಲಾಗಿದೆ. ಈ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಕೇಳಲಾಗಿದ್ದು, ಅನೇಕ ರೈತರು ಬೀಜ/ಸಸಿ ಪಡೆದು ಮುಂದಿನ ವರ್ಷದಲ್ಲಿ ಇಳುವರಿ ಮಾಡುವ ಕುರಿತು ಭರವಸೆ ನೀಡಿದ್ದಾರೆ.

ಕಾರ್ಖಾನೆ ಕಾರ್ಯವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ಹೆಚ್ಚಳವಾಗಿರುವುದರಿಂದ ರೈತರು ಕಬ್ಬು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೆ ಕರಾವಳಿ ಭಾಗದ ವೈಪರೀತ್ಯ ಹವಾಮಾನದಿಂದಾಗಿ ಭತ್ತದ ಬೆಳೆಗಿಂತ ರೈತರಿಗೆ ಕಬ್ಬಿನ ಬೆಳೆಯು ಲಾಭದಾಯಕವಾಗಿರುವುದರಿಂದ ರೈತರು ಬ್ರಹ್ಮಾವರದಲ್ಲಿರುವ ಸ್ಥಗಿತಗೊಂಡ ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸುವಂತೆ ಆಗ್ರಹಿಸುತ್ತಿದ್ದಾರೆ.
|ಜಯಶೀಲ ಶೆಟ್ಟಿ, ಅಧ್ಯಕ್ಷ, ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ