More

    ಸಕ್ಕರೆ ಗೊಂಬೆ ತಯಾರಿಕೆ ಸೂಕ್ಷ್ಮವಾದ ಕೆಲಸ

    ಅಳವಂಡಿ: ಗೌರಿ ಹುಣ್ಣಿಮೆ ಮಹಿಳೆಯರು ಸಂಭ್ರಮದಿಂದ ಆಚರಿಸುವ ದೊಡ್ಡ ಹಬ್ಬ. ಈ ಹಬ್ಬದ ಪ್ರಮುಖ ಆಕರ್ಷಣೆ ಸಕ್ಕರೆ ಗೊಂಬೆ(ಆರತಿ) ಯನ್ನು ತಟ್ಟೆಯಲ್ಲಿಟ್ಟುಕೊಂಡು ದೇವಸ್ಥಾನಗಳಲ್ಲಿ ಪ್ರತಿಷ್ಟಾಪಿಸಿದ ಗೌರವ್ವನಿಗೆ ಗುಂಪು ಗುಂಪಾಗಿ ತೆರಳಿ ಬೆಳಗುವರು.

    ಇದನ್ನೂ ಓದಿ: ಎಲೆಕ್ಟ್ರಾನಿಕ್ಸ್ ತಯಾರಿಕೆಗೆ ಈಗ ಮತ್ತಷ್ಟು ಉತ್ತೇಜನ!; ಬೃಹತ್​ ಹೂಡಿಕೆಯ ಲೆಕ್ಕಾಚಾರ

    ಸಕ್ಕರೆಗೊಂಬೆ ತಯಾರಿಸುವುದು ಒಂದು ಸೂಕ್ಷ್ಮ ಉದ್ಯೋಗವಾಗಿದೆ. ತಯಾರಿಕೆ ವೇಳೆ ಸಕ್ಕರೆ ಆಣದಲ್ಲಿ ಏರುಪೇರು ಆದರೆ ಆರತಿಗಳು ತಯಾರಾಗುವುದಿಲ್ಲ. ಇಂತಹ ಕಾರ್ಯವನ್ನು ಅಳವಂಡಿ ಗ್ರಾಮದ ಚಿಕ್ಕವೀರಜ್ಜ ಕವಡಿಮಟ್ಟಿ ಕುಟುಂಬ ತಲತಲಾಂತರದಿಂದ ಆರತಿ ತಯಾರಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದು.

    ಚಿಕ್ಕವೀರಜ್ಜರ ತಂದೆ ತಾಯಿ ಶಂಕ್ರಪ್ಪ ಹಾಗೂ ಜೀವಮ್ಮ ಕವಡಿಮಟ್ಟಿ ಆರತಿ ತಯಾರಿಸಲು ಪ್ರಾರಂಭಿಸಿದ್ದಾರೆ. ಈ ಉದ್ಯೋಗವನ್ನು ಇಂದಿಗೂ ಅವರ ಕುಟುಂಬಸ್ಥರಾದ ಚಿಕ್ಕವೀರಜ್ಜ, ಕೊಟ್ರಬಸಮ್ಮ, ರೂಪಾ, ಶ್ರೀಶೈಲಪ್ಪ, ಅಮರೇಶ ಮುಂದುವರಿಸಿಕೊಂಡು ಬಂದಿದ್ದಾರೆ.

    ಕೇಜಿಗೆ ಒಂದು ರೂಪಾಯಿಗೆ ಪ್ರಾರಂಭವಾದ ಉದ್ಯೋಗ, ಪ್ರಸ್ತುತ 100 ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿದೆ. ಪ್ರತಿ ವರ್ಷ ಆರತಿಗಳ ಮಾರಾಟ ಎರಡು ಬಾರಿ ನಡೆಯುತ್ತದೆ. ಶೀಗಿ ಹುಣ್ಣಿಮೆ ಹಾಗೂ ಗೌರಿ ಹುಣ್ಣಿಮೆಗೆ. ಶೀಗಿ ಹುಣ್ಣಿಮೆಗಿಂತ ಗೌರಿ ಹುಣ್ಣಿಮೆಗೆ ಆರತಿಗಳ ಮಾರಾಟ ಜಾಸ್ತಿ ಇರುತ್ತದೆ.

    ಕಾರಣ, ನಿಶ್ಚಯವಾದ ವಧುವಿಗೆ ವರನ ಮನೆಯವರು ಶಕ್ತ್ಯಾನುಸಾರ 5ಕೇಜಿ, 10 ಕೇಜಿಯ ಆರತಿ ಬೆಳಗಿಸುವ ಸಂಪ್ರದಾಯ ಇದೆ.
    ವಿಶಾಖಿ ಮಳೆ ಗೌರಿ ಹುಣ್ಣಿಮೆ ಸಂದರ್ಭದಲ್ಲಿ ಬಂದರೆ ಶೀಗಿ ಹುಣ್ಣಿಮೆಯಲ್ಲಿ ಆರತಿಗಳ ಮಾರಾಟ ಜಾಸ್ತಿಯಾಗುತ್ತದೆ. ವಿಶಾಖಿ ಮಳೆ ಇದ್ದಾಗ ನಿಶ್ಚಯವಾದ ವಧುವಿಗೆ ಆರತಿಯನ್ನು ಒಯ್ಯುವುದಿಲ್ಲ.

    ಹುಣ್ಣಿಮೆಗೆ ಮುಂಚೆ ಆರತಿಗಳ ತಯಾರಿಕೆ ಕಾರ್ಯ ನಡೆಯುತ್ತದೆ. ಪ್ರತಿದಿನ ಬೇಡಿಕೆಗನುಗುಣವಾಗಿ ಆರತಿ ತಯಾರಿಸುತ್ತಾರೆ. ಶೀಗಿ ಹುಣ್ಣಿಮೆಯಲ್ಲಿ ಸುಮಾರು 3 ರಿಂದ 4 ಕ್ವಿಂಟಾಲ ಹಾಗೂ ಗೌರಿ ಹುಣ್ಣಿಮೆಯಲ್ಲಿ 5 ರಿಂದ 6 ಕ್ವಿಂಟಾಲ ಸಕ್ಕರೆ ಗೊಂಬೆ ತಯಾರಿಸಲಾಗುತ್ತದೆ ಎನ್ನುತ್ತಾರೆ ಆರತಿ ತಯಾರಕರು. ತೇರು, ಆನೆ, ಕುದುರೆ, ಗೊಂಬೆ, ಎತ್ತು, ಬಿತ್ತುವ ರೈತ, ಗೋಪುರ ಮುಂತಾದ ರೀತಿಯಲ್ಲಿ ತಯಾರಿಸುತ್ತಾರೆ.


    ನಮ್ಮ ತಂದೆಯವರ ಕಾಲದಿಂದ ಆರತಿ ತಯಾರಿಸುತ್ತಿದ್ದೇವೆ. ಆರತಿ ತಯಾರಿಸಲು ಸುಮಾರು ಮೂರು-ನಾಲ್ಕು ಜನ ಬೇಕು. ಇದು ಶ್ರಮದ ಹಾಗೂ ಸೂಕ್ಷ್ಮ ಕೆಲಸವಾಗಿದೆ. ಬೇಡಿಕೆಗೆ ತಕ್ಕಂತೆ ಆರತಿ ತಯಾರಿಕೆ, ಬೆಲೆ ಹೆಚ್ಚು ಕಡಿಮೆಯಾಗುತ್ತದೆ,
    ಚಿಕ್ಕವೀರಜ್ಜ ಕವಡಿಮಟ್ಟಿ, ಆರತಿ ತಯಾರಕ ಅಳವಂಡಿ.

    ಆರತಿಗಳು ವರ್ಷದ ಶೀಗಿ ಹುಣ್ಣಿಮೆ ಹಾಗೂ ಗೌರಿ ಹುಣ್ಣಿಮೆಯಲ್ಲಿ ಮಾರಾಟವಾಗುತ್ತವೆ. ನಿಶ್ಚಯವಾದ ವಧುವಿಗೆ ಗಂಡಿನ ಮನೆಯವರು ಆರತಿಯನ್ನು ಬೆಳಗಲು ಕಳಿಸುತ್ತಾರೆ ಹೀಗಾಗಿ ಗೌರಿ ಹುಣ್ಣುಮೆಯಲ್ಲಿ ಆರತಿ ಮಾರಾಟ ಜಾಸ್ತಿ.
    ದೇವಪ್ಪ ಕಟ್ಟಿಮನಿ, ಗ್ರಾಮದ ಹಿರಿಯ ಮುಖಂಡ ಅಳವಂಡಿ.

    ಕವಡಿಮಟ್ಟಿ ಕುಟುಂಬ ನೂರಾರು ವರ್ಷಗಳಿಂದ ಆರತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ನಾವು ಸಣ್ಣವರಿದ್ದಾಗ ಇವರ ತಂದೆಯವರು ಆರತಿ ಮಾಡುತ್ತಿದ್ದರು. ಈ ವೃತ್ತಿಯನ್ನು ಕುಟುಂಬದವರು ಮುಂದುವರಿಸಿಕೊಂಡು ಬರುತ್ತಿದ್ದಾರೆ.
    ಶಂಕರಪ್ಪ ಕಲಾದಗಿ ಹಿರಿಯ ಮುಖಂಡ ಅಳವಂಡಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts