ದೇವದುರ್ಗ: ಮಾನಸಿಕ ಒತ್ತಡದಿಂದ ಖಿನ್ನತೆಗೆ ಒಳಗಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಸ್ಥೈರ್ಯ ತುಂಬಿದರೆ ಆತ್ಮಹತ್ಯೆ ತಡೆಯಬಹುದು ಎಂದು ಮನೋಶಾಸ್ತ್ರಜ್ಞ ಅರುಣ್ ಕುಮಾರ ಹೇಳಿದರು.
ಇದನ್ನೂ ಓದಿ: ಅಸ್ಸಾಂ ಮೂಲದ ಯುವಕ ಆತ್ಮಹತ್ಯೆ
ತಾಲೂಕಿನ ಜಾಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯಲ್ಲಿ ಸೋಮವಾರ ಮಾತನಾಡಿದರು.
ಜಗತ್ತಿನಲ್ಲಿ ಪ್ರತಿವರ್ಷ ಆತ್ಮಹತ್ಯೆಯಿಂದ ಸುಮಾರು 8ಲಕ್ಷ ಜನ ಮರಣ ಹೊಂದಿದ್ದಾರೆ. ಇದರಲ್ಲಿ ಶೇ.17 ಭಾರತೀಯರು ಎಂಬುದು ಕಳವಳಕಾರಿಯಾಗಿದೆ. ಯಾರೇ ನೊಂದವರಿದ್ದರೂ ಆತ್ಮವಿಶ್ವಾಸ ತುಂಬುವ ಮೂಲಕ ಆತ್ಮಹತ್ಯೆ ತಡೆಗಟ್ಟಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು.
ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾರಲ್ಲೂ ಪ್ರತಿ ಸಮಸ್ಯೆ ಹಾಗೂ ಪ್ರಶ್ನೆಗೆ ಉತ್ತರವಿರುವುದಿಲ್ಲ. ಆದರೆ ಇಂಥ ಸಂದರ್ಭಗಳಲ್ಲಿ ಕೇವಲ ಆತ್ಮಸ್ಥೃರ್ಯ ಧೈರ್ಯ ಹೆಚ್ಚಿಸುವ ಶಬ್ದಗಳ ಮೂಲಕ ನೊಂದ ವ್ಯಕ್ತಿ ಜೀವನ ಬದಲಾಯಿಸಬಹುದು.
ಭವಿಷ್ಯದ ಬಗ್ಗೆ ಭರವಸೆ ಇಲ್ಲ, ಬೇರೆಯವರಿಗೆ ಹೊರೆಯಾಗುತ್ತೆನೆಂಬ ಭಾವನೆ, ನನ್ನವರು ಯಾರು ಇಲ್ಲ, ಸಾಯುವುದರ ಬಗ್ಗೆ ಅತಿಯಾಗಿ ಮಾತನಾಡುವುದು, ಏಕಾಂಗಿತನ, ವಿಷಯಗಳನ್ನು ಮುಚ್ಚಿಡುವುದು ಹಾಗೂ ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗ ಇವುಗಳೆಲ್ಲವೂ ಆತ್ಮಹತ್ಯೆಗೆ ಎಚ್ಚರಿಕೆ ಗಂಟೆಗಳಿದ್ದಂತೆ.
ಸುತ್ತಮುತ್ತಲಿನ ಕಷ್ಟದಲ್ಲಿರುವ ಜನರ ಭಾವನೆಗಳಿಗೆ ಸ್ಪಂದಿಸಿ ಅದರ ಜೀವನ ಬದಲಾಯಿಸುವ ಪ್ರಯತ್ನ ಮಾಡಬೇಕು ಎಂದು ಅರುಣ್ ಕುಮಾರ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಆರೋಗ್ಯ ಪರಿವೀಕ್ಷಣಾ ಅಧಿಕಾರಿ ಚೇತನ್, ಪಿಎಚ್‌ಸಿಒ ರೇಣುಕಾ, ನರ್ಸಿಂಗ್ ಅಧಿಕಾರಿ ಗಂಗಮ್ಮ, ಪ್ರಾಚಾರ್ಯ ವಿರುಪಣ್ಣ, ಉಪನ್ಯಾಸಕರಾದ ಸುರೇಶ, ಚನ್ನಬಸವ, ಪ್ರಶಾಂತ, ಚನ್ನಬಸವಪ್ಪ ಇತರರಿದ್ದರು.