ಪ್ರಾಸ್ಟೇಟ್ ಎನ್​ಲಾರ್ಜ್​ವೆುಂಟ್ ಸಮಸ್ಯೆಗೆ ಏನು ಪರಿಹಾರ?

| ಡಾ. ವೆಂಕಟ್ರಮಣ ಹೆಗಡೆ

ಪ್ರಾಸ್ಟೇಟ್ ಎನ್​ಲಾರ್ಜ್​ವೆುಂಟ್ ಪುರುಷರಲ್ಲಿ ಕಂಡುಬರುವ ಸಮಸ್ಯೆ. ಮೊದಮೊದಲು ತೊಂದರೆ ಇರುವುದು ಹಲವರಿಗೆ ಗೊತ್ತಾಗದೆ ಇರಬಹುದು. ಕಿಡ್ನಿಯಲ್ಲಿ ಕಲ್ಲು ಆಗಿರಬಹುದು ಎಂದು ಭಾವಿಸುವವರು ಅನೇಕರಿದ್ದಾರೆ. ಆದರೆ ಸರಿಯಾದ ಪರೀಕ್ಷೆಯ ನಂತರ ಸಮಸ್ಯೆ ಗೋಚರವಾಗುವುದು. ದಿನದಲ್ಲಿ ಅನೇಕಾನೇಕ ಬಾರಿ ಮೂತ್ರವಿಸರ್ಜನೆ ಉಂಟಾಗುವುದು ತೊಂದರೆಯ ಮೊದಲ ಸಾಮಾನ್ಯ ಲಕ್ಷಣ. ಕೆಲವರಿಗೆ ಅದೂ ಗೋಚರವಾಗದೆ ಇರಬಹುದು. ನಂತರ ಸರಿಯಾಗಿ ಮೂತ್ರವಿಸರ್ಜನೆ ಆಗದಿರುವುದು, ಪದೇಪದೆ ಹನಿಹನಿಯಾಗಿ ವಿಸರ್ಜನೆ ಆಗುವಂತಹದ್ದು, ಉರಿಯಾಗುವಂತಹದ್ದು ಇಂತಹ ಲಕ್ಷಣಗಳು ಕಂಡುಬರಬಹುದು. 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸಮಸ್ಯೆಯಿದು. ಅಂದಮಾತ್ರಕ್ಕೆ ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಲ್ಲ. ಪುರುಷರಲ್ಲಿ ಮೂತ್ರವು ಯುರೆತ್ರದ ಮೂಲಕ ಬ್ಲಾಡರ್​ನಲ್ಲಿ ಹರಿಯುತ್ತದೆ. ಪ್ರಾಸ್ಟೇಟ್ ಗ್ರಂಥಿಯು ದೊಡ್ಡದಾದಾಗ ಅದು ಯುರೆತ್ರದಲ್ಲಿ ಹರಿಯುವಿಕೆಗೆ ತಡೆ ಒಡ್ಡುತ್ತದೆ. ಆಗ ಮೂತ್ರವಿಸರ್ಜನೆಗೆ ತೊಂದರೆಯಾಗುತ್ತದೆ. ಹೀಗೆ ಸಮಸ್ಯೆ ಉಂಟಾಗುತ್ತದೆ. ಯಾವಾಗ ಈ ತೊಂದರೆಯಾಗುತ್ತದೆಯೋ ಇದರ ಪರಿಣಾಮದಿಂದ ಬ್ಲ್ಯಾಡರ್ ಪೂರ್ಣವಾಗಿ ಖಾಲಿಯಾಗುವುದಿಲ್ಲ. ಅರ್ಥಾತ್ ಸರಿಯಾಗಿ ವಿಸರ್ಜನೆ ಆಗುವುದಿಲ್ಲ. ಅದು ಯುರಿನರಿ ಟ್ರ್ಯಾಕ್ಟ್ ಇನ್​ಫೆಕ್ಷನ್,

ಬ್ಲ್ಯಾಡರ್ ಸ್ಟೋನ್​ಗಳಿಗೆ, ರಕ್ತ ವಿಸರ್ಜನೆಗೆ ಭವಿಷ್ಯತ್ತಿನಲ್ಲಿ ನಾಂದಿಯಾಗಬಹುದು. ಹಾಗಾಗಿ ತೊಂದರೆ ಇರುವುದು ಗೋಚರವಾದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದು ಯುಕ್ತ.

ಕೆಲವೊಂದು ಆಹಾರಪದಾರ್ಥಗಳು ಹಾಗೂ ಪ್ರಕೃತಿಚಿಕಿತ್ಸೆಗಳು ಪ್ರಾಸ್ಟೇಟ್ ಎನ್​ಲಾರ್ಜ್​ವೆುಂಟ್ ತೊಂದರೆಯನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಸಹಾಯ ಮಾಡುತ್ತವೆ. ಹಣ್ಣುಗಳು, ತರಕಾರಿಗಳಿಂದ ಕೂಡಿದ ಆಹಾರಪದ್ಧತಿಯು ಸಮಸ್ಯೆಗಳಿಂದ ಹೊರಬರಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ ಒಳ್ಳೆಯ ಕೊಬ್ಬಿನಂಶ ಹೊಂದಿದ ಆಹಾರಗಳು ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯಕ್ಕೆ ಸಹಕರಿಸುತ್ತವೆ. ಟೊಮ್ಯಾಟೋದಲ್ಲಿ ಲೈಕೋಪಿನ್ ಇದ್ದು, ಪ್ರಾಸ್ಟೇಟ್ ಗ್ರಂಥಿಯ ಕೋಶಗಳಿಗೆ ಈ ಆಂಟಿ ಆಕ್ಸಿಡೆಂಟ್ ಒಳಿತು ಮಾಡುತ್ತವೆ. ಪ್ರತಿನಿತ್ಯ ತಾಜಾ ಟೊಮ್ಯಾಟೋ ಜ್ಯೂಸ್ ಮಾಡಿ ಕುಡಿಯುವುದು ಸಮಸ್ಯೆಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. (ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇದ್ದರೆ ಟೊಮ್ಯಾಟೋದಲ್ಲಿನ ಬೀಜವನ್ನು ತೆಗೆದು ಉಪಯೋಗಿಸಬೇಕು.)

ಸ್ಟ್ರಾಬೆರ್ರಿ, ಬ್ಲೂಬೆರ್ರಿ, ಬ್ಲಾಕ್​ಬೆರ್ರಿಗಳು ಆಂಟಿ-ಆಕ್ಸಿಡೆಂಟ್​ಗಳ ಆಗರವೇ ಆಗಿದ್ದು, ದೇಹದಲ್ಲಿನ ಫ್ರೀರ್ಯಾಡಿಕಲ್ಸ್​ಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ. ಫ್ರೀರ್ಯಾಡಿಕಲ್​ಗಳು ತೊಂದರೆ ಉಲ್ಬಣಿಸಲು ಕಾರಣವಾಗುವುದರಿಂದ ಅದರ ನಿಯಂತ್ರಣ ಅಗತ್ಯ. ಬ್ರೊಕೋಲಿ, ಹುಕೋಸು, ಕ್ಯಾಬೀಜ್​ನಂತಹ ತರಕಾರಿಗಳು ಸಲ್ಪೊರಾಫೇನ್ ಎಂಬ ರಾಸಾಯನಿಕ ಹೊಂದಿವೆ. ಅವು ಆರೋಗ್ಯಯುತ ಪ್ರಾಸ್ಟೇಟ್​ಗೆ ಅನುವು ಮಾಡಿಕೊಡುತ್ತವೆ. ನಟ್ಸ್​ಗಳು ಬಹಳ ಒಳ್ಳೆಯದು. ವಿಟಮಿನ್ ಸಿ ಹೆಚ್ಚಿರುವ ಪದಾರ್ಥಗಳು (ಸೀಬೆಹಣ್ಣು, ಕಿತ್ತಳೆ, ಮೂಸಂಬಿ, ಲಿಂಬು ಇತ್ಯಾದಿ ಸಿಟ್ರಿಕ್ ಆಮ್ಲ ಹೊಂದಿರುವಂಥವು) ತೊಂದರೆಯಿಂದ ಹೊರಬರಲು ಸಹಾಯ ಮಾಡುತ್ತವೆ. ಈರುಳ್ಳಿ, ಬೆಳ್ಳುಳ್ಳಿ ಸಹ ಸಹಕಾರಿ ಪದಾರ್ಥಗಳಾಗಿವೆ. ತಂಪು ಕಟಿಸ್ನಾನ ಹಾಗೂ ಇನ್ನಿತರ ಜಲಚಿಕಿತ್ಸೆಗಳು ಸಮಸ್ಯೆ ನಿರ್ವಹಣೆಗೆ ಸಹಕರಿಸುತ್ತವೆ.

ಹೀಗೆ ಪ್ರಕೃತಿದತ್ತ ಆಹಾರದೊಂದಿಗೆ ಚಿಕಿತ್ಸೆ ಪಡೆದಾಗ ಖಂಡಿತ ಉತ್ತಮ ಪರಿಣಾಮ ಪಡೆಯಬಹುದು. ಆದರೆ ಸೂಕ್ತ ಸಲಹೆ ಪಡೆಯುವುದು ಅಗತ್ಯ.