ದೇಹಕ್ಕೆ ಅತ್ಯಗತ್ಯ ರೈಬೋಫ್ಲೇವಿನ್

ರೈಬೋಫ್ಲೇವಿನ್​ನ ವಿಶೇಷತೆಯ ಬಗೆಗೆ ತಿಳಿದುಕೊಳ್ಳುತ್ತಿದ್ದೆವು. ವಿಟಮಿನ್ ಬಿ2ವನ್ನು ರೈಬೋಫ್ಲೇವಿನ್ ಎಂದು ಕರೆಯಲಾಗುತ್ತದೆ. ಮೊಟ್ಟೆ, ಹಸಿರು ತರಕಾರಿಗಳು, ಹಾಲು ಹಾಗೂ ಇನ್ನಿತರ ಹಾಲಿನ ಉತ್ಪನ್ನಗಳು, ಮಾಂಸ, ಅಣಬೆ, ಬಾದಾಮಿ, ಸಣ್ಣ ಪ್ರಮಾಣದಲ್ಲಿ ಕೆಲವೊಂದು ಧಾನ್ಯಗಳಲ್ಲಿ ವಿಟಮಿನ್ ಬಿ2 ಇರುತ್ತದೆ. ಇಂತಹ ಪದಾರ್ಥಗಳನ್ನು ಸೇವಿಸಿದಾಗ ನಮ್ಮ ದೇಹಕ್ಕೆ ಪೋಷಕಾಂಶ ಲಭ್ಯವಾಗುತ್ತದೆ. ಪೂರಕ ಆಹಾರಗಳಿಂದ (ಸಪ್ಲಿಮೆಂಟ್ಸ್) ವಿಟಮಿನ್ ಬಿ2 ಪಡೆಯಬಹುದು. ವಿಟಮಿನ್ ಬಿ ಸಂಯುಕ್ತಗಳ ಕೊರತೆಯಿಂದ ತೊಂದರೆಗಳು ಉಂಟಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ವಿಟಮಿನ್ ಅಗತ್ಯ ಇರುತ್ತದೆ. ಆಗ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು. ಅರ್ಧತಲೆಶೂಲೆಯು ರೈಬೋಫ್ಲೇವಿನ್ ಕೊರತೆಯಿಂದ ಕಾಡುತ್ತಿರಬಹುದು. ಪದೇಪದೆ ತಲೆನೋವು ಮಕ್ಕಳಲ್ಲಿ, ಯುವಕರಲ್ಲಿ ಕಾಡುವುದು ಇದರಿಂದಾಗಿ ಇರಬಹುದು. ಮೈಗ್ರೇನ್ ಇರುವವರೂ ಒಮ್ಮೆ ಇದರ ಬಗೆಗೆ ಲಕ್ಷ್ಯ ವಹಿಸುವುದು ಉತ್ತಮ. ರೈಬೋಫ್ಲೇವಿನ್​ಯುುಕ್ತ ಆಹಾರವನ್ನು ಹೆಚ್ಚು ಮಾಡಿದಲ್ಲಿ ಈ ಸಮಸ್ಯೆ ಕಡಿಮೆಯಾಗುತ್ತದೆ. ಕಬ್ಬಿಣದಂಶ ನಮ್ಮ ದೇಹಕ್ಕೆ ಬೇಕಾದಂತಹ ಮುಖ್ಯ ಪೋಷಕಾಂಶ. ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಕಬ್ಬಿಣಾಂಶದ ಅಗತ್ಯ ಹೆಚ್ಚಿರುತ್ತದೆ. ನಾವು ಸೇವಿಸಿದ ಆಹಾರದಿಂದ ಕಬ್ಬಿಣಾಂಶ ಹಾಗೂ ಝಿಂಕ್​ನ್ನು ದೇಹವು ಹೀರಿಕೊಳ್ಳಲು ರೈಬೋಫ್ಲೇವಿನ್ ಸಹಾಯ ಮಾಡುತ್ತದೆ. ಆದ್ದರಿಂದ ಕಬ್ಬಿಣಾಂಶದ ಕೊರತೆಯನ್ನು ತಡೆಯಲು ರೈಬೋಫ್ಲೇವಿನ್ ಸಹಕಾರಿ. ರೈಬೋಫ್ಲೇವಿನ್ ಮುಖ್ಯವಾಗಿ ಕೆಂಪು ರಕ್ತಕಣಗಳ ಉತ್ಪಾದನೆಗೆ ಬೇಕಾಗುತ್ತದೆ. ಹೃದಯಸಂಬಂಧಿತ ಸಮಸ್ಯೆಗಳಿಂದ ದೂರವಿರಲು, ಮಾಂಸಖಂಡಗಳ ಕಾರ್ಯವರ್ಧನೆಗೆ ಇದು ಅವಶ್ಯ.

ಬ್ರೊಕೋಲಿ, ಪಾಲಕ್, ಮೊಟ್ಟೆ, ಯೋಗ್ಹರ್ಟ್, ಕೆಂಪಕ್ಕಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ2ವನ್ನು ಒದಗಿಸುತ್ತವೆ. ವಿಟಮಿನ್ ಬಿ2 ನೀರಿನಲ್ಲಿ ಕರಗುವುದರಿಂದ ಕರಿದು, ಹುರಿದು, ಬೇಯಿಸಿದಲ್ಲಿ ರೈಬೋಪ್ಲೇವನ್ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದಷ್ಟು ಹಸಿಯಾದ ಪದಾರ್ಥವನ್ನೇ ಸೇವಿಸಿ. ಬೇಯಿಸುವ ಅನಿವಾರ್ಯತೆ ಇದ್ದಲ್ಲಿ ಪಾತ್ರವನ್ನು ಮುಚ್ಚಿ ಅಥವಾ ಕುಕ್ಕರಿನಲ್ಲಿ ಬೇಯಿಸಿ. ಸುಸ್ತು, ಗಂಟಲು ಊದಿಕೊಳ್ಳುವುದು, ನೋವು, ಬಾಯಿ ಒಡೆಯುವುದು, ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು, ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯಲ್ಲಿ ಅಡೆತಡೆಗೆ ರೈಬೋಪ್ಲೇವನ್ ಕೊರತೆ ಕಾರಣವಾಗಬಹುದು. ಹೀಗಾಗಿ ದಿನನಿತ್ಯದಲ್ಲಿ ಆಹಾರವನ್ನು ಆಯ್ದುಕೊಳ್ಳುವಾಗ ಜಾಣತನವಿರಲಿ.