More

    ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ವೃದ್ಧಿ

    ಚಿಕ್ಕಬಳ್ಳಾಪುರ: ಪ್ರಸ್ತುತ ಚುನಾವಣೆಗಳು ಮುಗಿದ ಕೂಡಲೇ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿರುವ ಮಂಚನಬಲೆ ಗ್ರಾಮವನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಭರವಸೆ ನೀಡಿದರು.

    ತಾಲೂಕಿನ ಮಂಚನಬಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರದಲ್ಲಿ ಮಾತನಾಡಿ, ಈಗಾಗಲೇ 3 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಗುಂಡ್ಲಗುರ್ಕಿ, ಸಬ್ಬೇನಹಳ್ಳಿ, ಕಾಮಶೆಟ್ಟಿಹಳ್ಳಿಯಲ್ಲಿ ಅಭಿವೃದ್ಧಿಯ ಹೆಜ್ಜೆ ಗುರುತು ಇದೆ ಎಂದರು.

    ಮಂಚನಬಲೆಯ ಸಮೀಪದಲ್ಲಿರುವ ದಿಬ್ಬೂರಿನಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಕ್ಷೇತ್ರದ ಪ್ರತಿಯೊಬ್ಬರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು 800 ಕೋಟಿ ರೂಪಾಯಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಿದೆ. ಮುಂದಿನ ತಿಂಗಳಿನಿಂದ ಸೇವೆಗೆ ಸಮರ್ಪಣೆಯಾಗಲಿದೆ ಎಂದರು.

    ಈ ಹಿಂದೆ 800 ಕೋಟಿ ರೂ. ವೆಚ್ಚದ ಯೋಜನೆಯನ್ನು ಈ ಕ್ಷೇತ್ರಕ್ಕೆ ತಂದ ಉದಾಹರಣೆಯೇ ಇಲ್ಲ. ಎಚ್.ಎನ್.ವ್ಯಾಲಿ ಯೋಜನೆ 1,400 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಿದ ಪರಿಣಾಮ ಕೃಷಿಕರಿಗೆ ಅನುಕೂಲವಾಗಿದೆ. ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿದೆ ಎಂದರು.

    ಮಾಜಿ ಶಾಸಕಿ ಅನಸೂಯಮ್ಮ ನಟರಾಜನ್, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಮುನೇಗೌಡ, ಪ್ರಸಾದ್, ವೆಂಕಟನಾರಾಯಣಪ್ಪ, ಮಂಚನಬಲೆ ಶ್ರೀಧರ್, ಬಿ.ವಿ.ಕೃಷ್ಣಪ್ಪ, ನಾರಾಯಣಸ್ವಾಮಿ ಮತ್ತಿತರರು ಇದ್ದರು.

    ಜಾತಿ ನೋಡದೆ ನಿವೇಶನ: ಜಾತಿ ಧರ್ಮ ನೋಡದೆ ಪಾರದರ್ಶಕತೆಯಿಂದ ನಿವೇಶನ ವಿತರಿಸಲಾಗಿದೆ. ಹಾಗೆಯೇ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಚುನಾವಣೆ ನಂತರ ಬಾಕಿ ಉಳಿದಿರುವ ಬಡವರಿಗೂ ನಿವೇಶನಗಳ ಹಂಚಿಕೆಯಾಗಲಿದೆ ಎಂದು ಸುಧಾಕರ್ ಹೇಳಿದರು.

    ಮೋದಿಯಿಂದ ಮತ ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಬಿಜೆಪಿ ಉತ್ಸಾಹ ಹೆಚ್ಚಾಗಿದೆ. ನೂರಕ್ಕೆ ನೂರು ಸ್ವಂತ ಬಲದ ಮೇಲೆ ಆಡಳಿತ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಆಗಮನದಿಂದ ರಾಜ್ಯದಲ್ಲಿ ಶೇ.5 ಕ್ಕೂ ಹೆಚ್ಚು ಶೇಕಡವಾರು ಮತ ಹೆಚ್ಚಳವಾಗಲಿದೆ. ಕೇವಲ ಗ್ರಾಪಂನಿಂದಲೇ ಸಹಸ್ರಾರು ಜನ ಸೇರುತ್ತಿದ್ದಾರೆ. ಕಾರ್ಯಕರ್ತರ ಹುರುಪು ನೋಡಿದರೆ ರಾಜ್ಯದಲ್ಲಿ ದಾಖಲೆ ಮಟ್ಟದ ಸ್ಥಾನ ಗಳಿಸುವುದು ಗ್ಯಾರಂಟಿ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

    ಕೊಟ್ಟ ಮಾತಿನಂತೆ ನಡೆ: ಕೊಟ್ಟ ಮಾತಿನಂತೆ ಎರಡೇ ವರ್ಷದಲ್ಲಿ ಈ ಭಾಗದ 7 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೊಳವೆ ಬಾವಿಗಳು ಮಾತ್ರವಲ್ಲ, ತೆರೆದ ಬಾವಿಗಳಲ್ಲಿಯೂ ನೀರು ಕಂಡು ಬರುತ್ತಿದೆ. ಈ ಗ್ರಾಪಂ ವ್ಯಾಪ್ತಿಯಲ್ಲಿ 7 ಕೆರೆಗಳನ್ನು ತುಂಬಿಸಲಾಗುತ್ತಿದೆೆ. ಶಿಡ್ಲಘಟ್ಟ ಕೆರೆಗೆ ನೀರು ಹೋಗುತ್ತಿದೆ, ಬೇಸಿಗೆಯಲ್ಲಿಯೂ ಕೊಳವೆ ಬಾವಿಗಳಲ್ಲಿ ನೀರು ಜಿನುಗುತ್ತಿದೆ ಎಂದ ಸಚಿವರು, ಹೈನುಗಾರರಿಗೆ ಪ್ರೋತ್ಸಾಹಧನ 7 ರೂ.ಗೆ ಹೆಚ್ಚಿಸಲಾಗುತ್ತದೆ. ಪ್ರತಿ ಮನೆಗೆ ಪ್ರತಿ ದಿನ ನಂದಿನಿ ಹಾಲು ಅರ್ಧ ಲೀಟರ್ ನೀಡಲಾಗುವುದು. ಆಸ್ಪತ್ರೆ ಮೇಲ್ದರ್ಜೆಗೇರಿಸಿರುವುದರಿಂದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಚಿಕಿತ್ಸೆಗಳು ಇಲ್ಲಿಯೇ ಸಿಗುತ್ತಿವೆ ಎಂದು ಹೇಳಿದರು.

    100 ಕೋಟಿ ರೂ. ವೆಚ್ಚದ ದೇವಾಲಯ: ಕಾಡದಿಬ್ಬೂರು ಗ್ರಾಮದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ದೇವಾಲಯ ನಿರ್ಮಾಣವಾಗಲಿದೆ. ಈಗಾಗಲೇ ಭೂಮಿ ಪೂಜೆ ನೆರವೇರಿಸಿದ್ದು, ಜನರು ಮತವನ್ನು ಮಾತುಗಾರನ ಬದಲಿಗೆ ಕೆಲಸಗಾರನಿಗೆ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts