More

    ಸುಲಿಗೆ ತಪ್ಪಿಸಲು ನೀಟ್ ಅಕಾಡೆಮಿ ಸ್ಥಾಪನೆ

    ಚಿಕ್ಕಬಳ್ಳಾಪುರ: ಕ್ಷೇತ್ರದ ಯುವ ಜನರ ಶೈಕ್ಷಣಿಕ ಅಭಿವೃದ್ಧಿಗಾಗಿ ಚಿಕ್ಕಬಳ್ಳಾಪುರದಲ್ಲಿ ನೀಟ್ ಅಕಾಡೆಮಿ ಸ್ಥಾಪಿಸಿ ಉಚಿತ ತರಬೇತಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.

    ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರ ಹಮ್ಮಿಕೊಂಡು ಮಾತನಾಡಿ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನಿಸಿದ ಮುದ್ದೇನಹಳ್ಳಿಯು ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಇಂದು ಇವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಕೆಲಸಗಳು ಜೀವಂತವಾಗಿವೆ. ಮಹನೀಯರು ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿದ್ದು, ಇವರ ಆಶಯದಂತೆ ಕ್ಷೇತ್ರದ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲಾಗುತ್ತಿದೆ ಎಂದರು.

    ಯಾರೋ ಬಂದು ಟೀಕಿಸಿದ್ದನ್ನು ನಿಜ ಎನ್ನಲಾಗುವುದು. ಇದಕ್ಕೆ ಉತ್ತರವನ್ನು ಇಲ್ಲಿನ ಅಭಿವೃದ್ಧಿ ಕೆಲಸಗಳು ಹೇಳುತ್ತಿವೆ. ಶಿಕ್ಷಣದ ಹೆಸರಿನಲ್ಲಿ ಸೇವೆ ಸಲ್ಲಿಕೆಯ ಪ್ರಚಾರದಲ್ಲಿರುವವರು ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ಶಿಕ್ಷಣದ ಹೆಸರಿನಲ್ಲಿ ಸುಲಿಗೆಯನ್ನು ತಪ್ಪಿಸಲು, ಚಿಕ್ಕಬಳ್ಳಾಪುರದಲ್ಲಿ ನೀಟ್ ಅಕಾಡೆಮಿ ಸ್ಥಾಪಿಸಿ, ಉಚಿತವಾಗಿ ತರಬೇತಿ ನೀಡಲಾಗುವುದು ಎಂದರು.

    ಈ ಭಾಗದ ಯುವ ಜನರು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪೂರಕವಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಇಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗಾವಕಾಶ ಸೃಷ್ಟಿ ಕೆಲಸ ಮಾಡಿದ್ದಲ್ಲಿ ಮುಂಬರುವ 2028ರ ಚುನಾವಣೆಗೆ ಮತ ಕೇಳಲು ಬರಲ್ಲ. ಕೊಟ್ಟ ಮಾತು ತಪ್ಪಿ ನಡೆಯುವುದಿಲ್ಲ ಎಂದರು. ಕೇವಲ ಮತ ಪಡೆಯಲು ಬಂದವರ ಬಗ್ಗೆ ಎಚ್ಚರವಿರಲಿ ಎಂದ ಅವರು ನಟ ಸುದೀಪ್ ಅವರು ಶನಿವಾರ ಚಿಕ್ಕಬಳ್ಳಾಪುರ ಪ್ರಚಾರಕ್ಕೆ ಬರಲಿದ್ದಾರೆ ಎಂಬ ಮಾಹಿತಿ ನೀಡಿದರು.

    ರೋಲ್ ಮಾಡೆಲ್ ಬೇಕು: ನಾಯಕನಾದವನು ಯುವಕರಿಗೆ ಸ್ಫೂರ್ತಿದಾಯಕನಾಗಿರಬೇಕು. ಇಲ್ಲಿ ಟ್ರೋಲ್ ಮಾಡೆಲ್‌ಗಳು ಮಾತನಾಡುತ್ತಿದ್ದು ಇಂತಹವರ ಬದಲಿಗೆ ರೋಲ್ ಮಾಡೆಲ್ ಬೇಕು. ಚಿಕ್ಕಬಳ್ಳಾಪುರದ ಘನತೆ, ಮಾನ, ಮರ್ಯಾದೆ ತೆಗೆಯುವ ಕೆಲಸವಾಗಬಾರದು ಎಂದ ಸಚಿವರು, ಮತ ಕೇಳಲು ಈಗ ಬರುತ್ತಿರುವವರ ಕೊಡುಗೆ ಕ್ಷೇತ್ರಕ್ಕೆ ಏನು? ಎಂದು ಅವರು ಪ್ರಶ್ನಿಸಿದರು. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕೆಲವರು ಜನರ ಕಷ್ಟ ಕೇಳಲಿಲ್ಲ. ಆಗ ಚುನಾವಣೆ ಇಲ್ಲದ ಕಾರಣ ಬರಲಿಲ್ಲ. ಆದರೆ, ಈಗ ಗೆಲ್ಲಲು ಮತ ಕೇಳುತ್ತಿದ್ದಾರೆ. ಇಂತಹವರಿಗೆ ಜನರ ಯೋಗಕ್ಷೇಮ ಬೇಕಿಲ್ಲ. ಇಂತಹ ಮೋಸಗಾರನನ್ನು ನಂಬಬಾರದು ಎಂದರು. ಈ ಭಾಗಕ್ಕೆ ಕುಡಿಯುವ ನೀರು ಪೂರೈಕೆ, ಶುದ್ಧ ನೀರಿನ ಘಟಕಗಳ ಮಂಜೂರು, ಗುಣಮಟ್ಟದ ರಸ್ತೆ ನಿರ್ಮಾಣ, ಉನ್ನತ ಶಿಕ್ಷಣದ ಸೌಕರ್ಯ, 25 ಕೋಟಿ ರೂ. ವೆಚ್ಚದಲ್ಲಿ ಐಟಿಐ ಕಾಲೇಜು ನಿರ್ಮಾಣ, ಕರೊನಾ ಆತಂಕ ಕಾಡುತ್ತಿದ್ದಾಗ ಜಾತಿಧರ್ಮ ನೋಡದೇ ಎರಡು ಬಾರಿ ಆಹಾರ ಸಾಮಗ್ರಿ ಕಿಟ್ ನೀಡಲಾಗಿದೆ ಎಂದು ತಿಳಿಸಿದರು.

    7ಕ್ಕೆ ಅಮಿತ್ ಷಾ ಪ್ರಚಾರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಮೇ 7ರಂದು ಮಧ್ಯಾಹ್ನ 3ಕ್ಕೆ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಿಂದ ವಾಪಸಂದ್ರದವರೆಗೂ ಕೇಂದ್ರ ಗೃಹ ಸಚಿವರು ರೋಡ್ ಶೋ ನಡೆಸಲಿದ್ದಾರೆ. ಉಕ್ಕಿನ ಮನುಷ್ಯ, ಆಧುನಿಕ ಚಾಣಕ್ಯ ಎಂತಲೇ ಖ್ಯಾತಿ ಪಡೆದಿರುವ ಅಮಿತ್ ಷಾ ಅವರನ್ನು ನೋಡಲು ಹೆಚ್ಚಿನ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು. ಈಗಾಗಲೇ ಡಬಲ್ ಇಂಜಿನ್ ಸರ್ಕಾರದ ಆಡಳಿತವನ್ನು ಜನರು ಬಯಸಿದ್ದಾರೆ. ಪ್ರಣಾಳಿಕೆಯ ಮೂಲಕ ಭಾವನೆಗಳನ್ನು ಕೆರಳಿಸಿರುವ ಕಾಂಗ್ರೆಸ್‌ಗೆ ಪಾಠ ಕಲಿಸಲು ತೀರ್ಮಾನಿಸಿದ್ದಾರೆ ಎಂದರು.

    ಕ್ಷೇತ್ರದಲ್ಲಿ ಹಣ ಹಂಚಿಕೆ ಆರೋಪ: ಕ್ಷೇತ್ರದಲ್ಲಿ ಕಾಂಗ್ರೆಸ್ ಹೊರಗಿನಿಂದ ಜನರನ್ನು ಕರೆಯಿಸಿ, ಮನೆ ಮನೆಗೆ ಎರಡು ಸಾವಿರ ರೂಪಾಯಿಗಳಂತೆ ಮತದಾರರಿಗೆ ಹಂಚುತ್ತಿದ್ದು, ಈ ಬಗ್ಗೆ ದೂರು ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೆಲ ಅಧಿಕಾರಿಗಳು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿರುವ ಅನುಮಾನ ಇದೆ. ಇದರ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

    ಸುಧಾಕರ್ ಪರ ಬ್ರಹ್ಮಾನಂದಂ ಅಬ್ಬರ: ಹಾಸ್ಯನಟ ಬ್ರಹ್ಮಾನಂದಂ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಪರ ಕ್ಷೇತ್ರದಲ್ಲಿ ಪ್ರಚಾರಯಾತ್ರೆ ಮುಂದುವರಿಸಿದ್ದಾರೆ. ಹಾಸ್ಯಭರಿತ ಮಾತುಗಳ ಜತೆಗೆ ಹಾವಭಾವ ಬದಲಾವಣೆ, ಸಿನಿಮಾ ಡೈಲಾಗ್‌ಗಳ ಮೂಲಕ ವೀಕ್ಷಕರನ್ನು ಖುಷಿಪಡಿಸುತ್ತಿದ್ದು, ನೆಚ್ಚಿನ ನಟನನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ತಾಲೂಕಿನ ಮಂಡಿಕಲ್ಲು, ಕಮ್ಮಗುಟ್ಟಹಳ್ಳಿ ಸೇರಿದಂತೆ ವಿವಿಧೆಡೆ ತೆರೆದ ವಾಹನದಲ್ಲಿ ಶುಕ್ರವಾರ ತೆರಳಿದ ಬ್ರಹ್ಮಾನಂದಂ, ಕಳೆದ ಮೂರು ಚುನಾವಣೆಗಳ ಮಾದರಿಯಲ್ಲಿ ಈ ಬಾರಿ ಸುಧಾಕರ್ ಅವರನ್ನು ಹೆಚ್ಚಿನ ಮತಗಳ ಅಂತರದೊಂದಿಗೆ ಗೆಲ್ಲಿಸಲು ಮನವಿ ಮಾಡಿದರು. ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಒಳ್ಳೆಯ ಜನಪ್ರತಿನಿಧಿ. ಉತ್ತಮ ಜನ ಸೇವೆಯ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿದುಕೊಂಡು ಪ್ರಚಾರ ಕೈಗೊಳ್ಳುತ್ತಿದ್ದು, ಈ ಹಿಂದೆ ಕ್ಷೇತ್ರಕ್ಕೆ ಬಂದು ಮತಯಾಚಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆಯಾಗಿ ಗೆಲುವು ಸಿಕ್ಕಿರುವುದು ಖುಷಿಯ ವಿಚಾರ ಎಂದರು.
    ಬ್ರಹ್ಮಾನಂದಂ ನೋಡುವುದರ ಜತೆಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

    ಕಾಂಗ್ರೆಸ್‌ಗೆ ಜನರೇ ಬಹಿಷ್ಕಾರ ಹಾಕ್ತಾರೆ!: ಕಾಂಗ್ರೆಸ್ ಯಾರನ್ನೂ ನಿಷೇಧಿಸಲು ಸಾಧ್ಯವಿಲ್ಲ. ರಾಜ್ಯದ ಜನರೇ ಆ ಪಕ್ಷವನ್ನು ಬಹಿಷ್ಕರಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲೇವಡಿ ಮಾಡಿದರು. ತಾಲೂಕಿನ ನಂದಿಯಲ್ಲಿ ಮಾತನಾಡಿ, ದೇಶ ದ್ರೋಹಿ ಸಂಘಟನೆಗಳೊಂದಿಗೆ ದೇಶ ಭಕ್ತ ಸಂಘಟನೆ ಬಜರಂಗದಳ ಸೇರಿಸುವ ಮೂಲಕ ಅಪಚಾರ ಎಸಗಿರುವ ಕಾಂಗ್ರೆಸ್ ಅನ್ನು ರಾಜ್ಯದ ಜನರೇ ಈ ಚುನಾವಣೆಯಲ್ಲಿ ಬಹಿಷ್ಕರಿಸಲಿದ್ದಾರೆ ಎಂದು ಹೇಳಿದರು.

    ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಲಿಲ್ಲ, ಒಳ ಮೀಸಲಾತಿ ನೀಡಲಿಲ್ಲ, 60 ವರ್ಷದಿಂದ ಅನ್ಯಾಯ ಮಾಡಿದವರು ಇವರು, ಆದರೆ ಮೀಸಲಾತಿ ಹೆಚ್ಚಿಸಿ, ಒಳ ಮೀಸಲಾತಿ ನೀಡಿದ್ದು ಬಿಜೆಪಿ ಡಾ.ಕೆ.ಸುಧಾಕರ್, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts