ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಹೆಸರಲ್ಲಿ ವಿಜಯ್‌ ದೇವರಕೊಂಡಗೆ ಪತ್ರ!

ಬೆಂಗಳೂರು: ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಹೆಸರಲ್ಲಿ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡಗೆ ಪತ್ರ ಬರೆಯಲಾಗಿದೆ.

ನಕಲಿ ಲೆಟರ್​​ಹೆಡ್​​ ಬಳಸಿ ಕೃಷ್ಣ ಎಂಬವರು ಆ್ಯಪ್‌ವೊಂದಕ್ಕೆ ರಾಯಭಾರಿ ಆಗುವಂತೆ ಕೋರಿ ನಕಲಿ ಪತ್ರ ಬರೆದಿದ್ದಾರೆ. ಸುಧಾಮೂರ್ತಿ ಪ್ರಾಯೋಜಕತ್ವದಲ್ಲಿ ಹೊಸ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಿದ್ದು, ತಾವು ಅದರ ರಾಯಭಾರಿ ಆಗಬೇಕೆಂದು ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ಅವರ ಸಹಿಯನ್ನು ನಕಲು ಮಾಡಿ ಆರೋಪಿ ದೇವರಕೊಂಡಗೆ ಸ್ಪೀಡ್​​ಪೋಸ್ಟ್​ ಮಾಡಿದ್ದ.

ಆದರೆ ಪತ್ರದಲ್ಲಿ ವಿಜಯ್ ವಿಳಾಸ ಸರಿಯಾಗಿ ಬರೆಯದಿದ್ದ ಹಿನ್ನೆಲೆಯಲ್ಲಿ ಪತ್ರವು ವಿಜಯ್ ಕಚೇರಿ ತಲುಪಿಲ್ಲ. ಮತ್ತೆ ಇನ್ಫೋಸಿಸ್​ ವಿಳಾಸಕ್ಕೆ ವಾಪಸ್​​ ಬಂದಿದೆ. ಪತ್ರ, ನಕಲಿ ಸಹಿ ನೋಡಿ ಇನ್ಫೋಸಿಸ್​ ಸಿಬ್ಬಂದಿಗೆ ಅಚ್ಚರಿಗೊಳಗಾಗಿದ್ದು, ಇನ್ಫೋಸಿಸ್​ ಉದ್ಯೋಗಿ ನಿವೃತ್ತ ಲೆ. ಕರ್ನಲ್ ರಮೇಶ್ ದೂರು ದಾಖಲಿಸಿದ್ದಾರೆ.

ಜಯನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಯನಗರ ಪೊಲೀಸರಿಂದ ಆರೋಪಿಗಾಗಿ ಹುಡುಕಾಟ ನಡೆದಿದೆ. (ದಿಗ್ವಿಜಯ ನ್ಯೂಸ್)