ವೀರ ಮದಕರಿಗೆ ಅಂಟಿದ ಜಾತಿಯ ಕಳಂಕ ಸುಟ್ಟು ಬೂದಿ ಮಾಡುವುದೇ ಕಿಚ್ಚನ ಈ ಕಿಚ್ಚು

ಬೆಂಗಳೂರು: ಇತಿಹಾಸ ಪುರುಷ ಮದಕರಿ ನಾಯಕನ ಜೀವನ ಚರಿತ್ರೆ ಕುರಿತು ಸ್ಯಾಂಡವುಡ್​ನಲ್ಲಿ ನಿರ್ಮಾಣವಾಗುತ್ತಿರುವ ವೀರ ಮದಕರಿ ಸಿನಿಮಾದ ಸುತ್ತ ಹುಟ್ಟಿಕೊಂಡಿರುವ ವಿವಾದದ ಕುರಿತು ಕಿಚ್ಚ ಸುದೀಪ್​ ಕೊನೆಗೂ ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಅವರು ಟ್ವಿಟರ್​ ಮೂಲಕ ಪ್ರಕಟಿಸಿದ್ದಾರೆ.

ರಾಕ್​ಲೈನ್​ ವೆಂಕಟೇಶ್​ ಅವರ ಇಷ್ಟದ ಚಿತ್ರ ಮಾಡುತ್ತಿದ್ದಾರೆ. ಕನಸಿದ ಪಾತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ಮಾಧ್ಯಮಗಳಲ್ಲಿ ನಡೆಯುತ್ತಿರುವ ವರದಿಗಳನ್ನು ಗೌರವಿಸುತ್ತೇನೆ. ಆದರೆ, ಚರ್ಚೆಗಳು ಅನಗತ್ಯ. ಎರಡೂ ಸಿನಿಮಾಗಳೂ ಮೂಡಿಬರಲಿ. ಇತಿಹಾಸ ಪುರುಷನಿಗೆ ನಾವೊಂದು ಗೌರವ ಸಲ್ಲಿಸೋಣ ಎಂಬುದು ಅವರ ಪತ್ರದ ತಿರುಳು.

ಹಾಗಿದ್ದರೆ ಟ್ವಿಟರ್​ನಲ್ಲಿ ಅವರು ಬರೆದಿರುವ ಪತ್ರದಲ್ಲಿ ಏನಿದೆ ನೀವೇ ನೋಡಿ.

ಈಗ ಚಾನೆಲ್ಲುಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವoತಿದೆ.
ವಿಷಯ ಸರಳವಾಗಿದೆ… ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನಿಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನಿಮಾ ನಾನು ಮುಂದುವರಿಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ.

ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ.
ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್ ಲೈನ್ ವೆಂಕಟೇಶ್ ರವರು ಹಾಗೂ ಚಾನೆಲ್ ರವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ, ಇದು ನನಗೆ ಚರ್ಚೆಯ ವಿಷಯವೇ ಅಲ್ಲ. ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ.

ಸಿನಿಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನಿಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಏರಡು ಚಿತ್ರಗಳು ಮಾಡಿ ಅವರಿಗೆ ಗೌರವಿಸೋಣ.
ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗೂ ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಜನಪರವಾಗಿರಲೆಂದು ನನ್ನ ಈ ಎರಡು ಮಾತುಗಳೇ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ.

ಪ್ರೀತಿಯಿಂದ
ನಿಮ್ಮವ
ಕಿಚ್ಚ.

ಎಲ್ಲ ಧರ್ಮಗಳನ್ನು ಬೆಸೆಯುವ ಸುಂದರ ಧರ್ಮ ಸಿನಿಮಾ

ಇನ್ನೊಂದೆಡೆ ಮತ್ತೊಂದು ಟ್ವೀಟ್​ನಲ್ಲಿ ಅವರು ಅಭಿಮಾನಿಗಳಲ್ಲಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. “ವೀರ ಮದಕರಿ ಚಿತ್ರದ ಕುರಿತು ಸದ್ಯ ನಡೆಯುತ್ತಿರುವ ಚರ್ಚೆಗಳು ಅನಗತ್ಯ. ಸಿನಿಮಾವನ್ನು ಸಿನಿಮಾವಾಗಿರಲಿ ಬಿಡಿ. ಸಿನಿಮಾದಲ್ಲಿ ಎಲ್ಲರೂ ನಂಬಿಕೆ ಇಡಬೇಕು. ಸಿನಿಮಾ ಎಂಬುದು ಎಲ್ಲ ಜಾತಿ, ಧರ್ಮಗಳನ್ನು ಒಂದೇ ವೇದಿಕೆಯಡಿ ಬೆಸೆಯುವ ಸುಂದರವಾದ ಧರ್ಮ. ನನ್ನ ಈ ಮಾತು ನನ್ನೆಲ್ಲ ಸ್ನೇಹಿತರು ಅಭಿಮಾನಿಗಳಿಗೆ ಅನ್ವಯಿಸುತ್ತದೆ,” ಎಂದು ಅವರು ಹೇಳಿದ್ದಾರೆ.