ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನಕ್ಕೆ ಬೆಂಬಲ ಸೂಚಿಸಿದ ನಟ ಸುದೀಪ್, ಭಾರತಿ ವಿಷ್ಣುವರ್ಧನ್‌ ಮಠಕ್ಕೆ ಭೇಟಿ

ತುಮಕೂರು: ಸಿದ್ಧಗಂಗಾ ಶ್ರೀಗಳ ಆರೋಗ್ಯ ಚೇತರಿಕೆ ಕಂಡು ಖುಷಿಯಾಗಿದೆ. ಶ್ರೀಗಳಿಗೆ ಭಾರತರತ್ನ ಕೊಡಬೇಕೆಂಬುದಕ್ಕೆ ನನ್ನ ಬೆಂಬಲವಿದೆ ಎಂದು ನಟ ಸುದೀಪ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಟ ಹರೀಶ್ ನೇತೃತ್ವದಲ್ಲಿ ಸಿದ್ಧವಾಗಿರುವ ಗೋಲ್ಡ್ ಕ್ರಾಫ್ಟ್ ಜಿಮ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಗಳಿಗೆ ಭಾರತ ರತ್ನ ಕೊಡುವುದು ಶ್ಲಾಘನೀಯ ಕೆಲಸ. ಇಂಥ ನಡೆದಾಡುವ ದೇವರಿಗೆ ಭಾರತ ರತ್ನ ಸಿಗಬೇಕು. ಎಂತೆಂಥ ಸಾಮಾನ್ಯ ವ್ಯಕ್ತಿಗಳಿಗೆಲ್ಲ ಭಾರತರತ್ನ ಕೊಡುತ್ತಾರೆ. ಆದರೆ ನಡೆದಾಡುವ ದೇವರಿಗೆ ಕೊಡಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದರು.

ಮಠಕ್ಕೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಭೇಟಿ

ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಶ್ರೀಗಳ ದರ್ಶನಕ್ಕೆ ಸಿದ್ಧಗಂಗಾ ಮಠಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಇವರೊಂದಿಗೆ ಅಳಿಯ ಅನಿರುದ್ಧ್‌ ಕೂಡ ಇದ್ದರು.

ಬಳಿಕ ಮಾತನಾಡಿ ಬಹಳ ದಿನದಿಂದ ಶ್ರೀಗಳನ್ನು ನೋಡಬೇಕು ಎನ್ನುವ ಆಸೆ ಇತ್ತು. ನನಗೆ ಸಿದ್ಧಗಂಗಾ ಮಠಕ್ಕೆ ನಂಟಿದೆ. 10 ವರ್ಷದವಳಿದ್ದಾಗ ನಮ್ಮ ತಂದೆ ಕರೆದುಕೊಂಡು ಬರುತ್ತಿದ್ದರು. ನನಗೂ ಸಿದ್ಧಗಂಗಾ ಮಠಕ್ಕೂ 60 ವರ್ಷದ ನಂಟಿದೆ. ನಮ್ಮ ಯಜಮಾನರು ಇದ್ದಾಗ ಅವರ ಪಾದ ಪೂಜೆ ಮಾಡಿದ್ದೆವು. ಅವರ ಶ್ರಮ, ಶ್ರದ್ಧೆ ನಮಗೆಲ್ಲಾ ಬರಬೇಕು ಎಂದು ತಿಳಿಸಿದರು.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕು. ಆದರೆ ಶ್ರೀಗಳಿಗೆ ಇನ್ನೂ ಯಾಕೆ ಕೊಟ್ಟಿಲ್ಲ ಎನ್ನುವುದು ಗೊತ್ತಿಲ್ಲ. ಇಂತಹ ಪೂಜ್ಯರಿಗೆ ಕೊಡಬೇಕು. ಅವರು ಇದ್ದಾಗಲೇ ಭಾರತರತ್ನ ಕೊಡಬೇಕು. ಆಗಲೇ‌ ನಮಗೆಲ್ಲ ಸಂತೋಷವಾಗುತ್ತದೆ. ಸ್ವಾಮಿಜಿ ಅವರ ಮನೋಸ್ಥೈರ್ಯ ತುಂಬಾ ಪ್ರಬಲವಾಗಿದೆ. ಅವರು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)