ಅಭಿಮಾನಿ ಕಲ್ಪನೆಯಲ್ಲಿ ಕಿಚ್ಚನ ಮದಕರಿ ಗೆಟಪ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿರುವ ಹೆಸರು; ಮದಕರಿ ನಾಯಕ. ಚಿತ್ರದುರ್ಗದ ಈ ವೀರನ ಬಗ್ಗೆ ಸುದೀಪ್ ಸಿನಿಮಾ ಮಾಡುತ್ತಾರೆ ಎಂಬುದು ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಸಂತಸಗೊಂಡರು. ಅತ್ತ, ದರ್ಶನ್ ಕೂಡ ಮದಕರಿ ನಾಯಕನ ಜೀವನಾಧರಿಸಿ ತಯಾರಾಗಲಿರುವ ಚಿತ್ರದಲ್ಲಿ ನಟಿಸಲಿದ್ದಾರೆ.

ಸದ್ಯ ಈ ಚಿತ್ರತಂಡಗಳಿಂದ ಯಾವುದೇ ಅಧಿಕೃತ ಫೋಟೋ ಅಥವಾ ಪೋಸ್ಟರ್ ಹೊರಬಂದಿಲ್ಲ. ಆದರೆ ಅದಕ್ಕೂ ಮುನ್ನ ಅಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರಿದೆ. ಮದಕರಿ ನಾಯಕನ ಗೆಟಪ್​ನಲ್ಲಿ ಸುದೀಪ್ ಹೇಗೆ ಕಾಣಬಹುದು ಎಂಬುದನ್ನು ಹಲವರು ಕಲ್ಪಿಸಿಕೊಳ್ಳುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿಯೊಬ್ಬರು ಮದಕರಿಯಂತೆ ಕಾಣುವ ಸುದೀಪ್ ರೇಖಾಚಿತ್ರ ರಚಿಸಿ ಗಮನ ಸೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೋಗೆ ಸಾವಿರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಸ್ವತಃ ಸುದೀಪ್ ಕೂಡ ಫಿದಾ ಆಗಿದ್ದಾರೆ. ಪ್ರಸ್ತುತ ಅವರು ‘ಕೋಟಿಗೊಬ್ಬ 3’, ‘ಪೈಲ್ವಾನ್’, ‘ಸೈರಾ’ ಮುಂತಾದ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ಆ ಬಳಿಕ ಮದಕರಿ ನಾಯಕನ ಕುರಿತ ಚಿತ್ರದ ಕೆಲಸಗಳಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.