ದಬಂಗ್ 3 ಸುದೀಪ್ ಲುಕ್ ಔಟ್!

ಬೆಂಗಳೂರು: ಸಲ್ಮಾನ್ ಖಾನ್ ಚುಲ್​ಬುಲ್ ಪಾಂಡೆಯಾಗಿ ಕಾಣಿಸಿಕೊಳ್ಳಲಿರುವ ‘ದಬಂಗ್ 3’ ಸಿನಿಮಾ ಡಿಸೆಂಬರ್ 20ಕ್ಕೆ ಬಿಡುಗಡೆ ಆಗಲಿದೆ. ಈಗಾಗಲೇ ಸಲ್ಲು ಲುಕ್ ಹೇಗಿರಲಿದೆ ಎಂಬುದು ಗೊತ್ತಿದ್ದರೂ, ಫಸ್ಟ್ ಲುಕ್ ಟೀಸರ್ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಗೊಳಿಸಿದ್ದರು ಸಲ್ಮಾನ್. ಈಗ ಈ ಚಿತ್ರದ ಖಳನಾಯಕ ಕಿಚ್ಚ ಸುದೀಪ್ ಲುಕ್ ರಿವೀಲ್ ಆಗಿದೆ. ದಸರಾ ಹಬ್ಬದ ಪ್ರಯುಕ್ತ ‘ದಬಂಗ್ 3’ ತಂಡ ಸುದೀಪ್ ಅಭಿಮಾನಿಗಳಿಗೆ ಅಚ್ಚರಿಯ ಉಡುಗೊರೆ ನೀಡಿದೆ.

ಇಲ್ಲಿಯವರೆಗೂ ಸುದೀಪ್ ಲುಕ್ ಬಗ್ಗೆ ಗೌಪ್ಯತೆ ಕಾಯ್ದುಕೊಂಡು ಬಂದಿದ್ದ ನಿರ್ದೇಶಕ ಪ್ರಭುದೇವ, ಭರ್ಜರಿಯಾಗಿಯೇ ಅವರ ಪಾತ್ರವನ್ನು ಹೆಣೆದಿದ್ದಾರೆ. ಬಿಡುಗಡೆಯಾಗಿರುವ ಲುಕ್​ನಲ್ಲಿ ಧಗಧಗಿಸುವ ಬೆಂಕಿಯ ಮುಂದೆ ಸೂಟು ಧರಿಸಿ, ಕೈಯಲ್ಲಿ ಕನ್ನಡಕ ಹಿಡಿದು ಗಂಭೀರ ಲುಕ್ ಬೀರಿದ್ದಾರೆ ಸುದೀಪ್. ಈ ರಗಡ್ ಲುಕ್​ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಸಲ್ಮಾನ್, ‘ವಿಲನ್ ಎಷ್ಟು ಬಲಿಷ್ಠನಾಗಿರುತ್ತಾನೋ ಅವನ ಜತೆ ಕಾದಾಡುವುದು ಅಷ್ಟೇ ಮಜವಾಗಿರುತ್ತದೆ’ ಎಂಬ ಕ್ಯಾಪ್ಶನ್ ನೀಡಿದ್ದಾರೆ.

ಬಲ್ಲಿ ಸಿಂಗ್ ಹೆಸರಿನ ಖಡಕ್ ವಿಲನ್ ಅವತಾರದಲ್ಲಿ ಸಲ್ಲುಮಿಯಾ ವಿರುದ್ಧ ತೊಡೆತಟ್ಟಲಿರುವ ಸುದೀಪ್, ಶರ್ಟ್​ಲೆಸ್ ಫೈಟ್ ಸನ್ನಿವೇಶದಲ್ಲೂ ಕಾದಾಡಿರುವುದು ಚಿತ್ರದ ಮತ್ತೊಂದು ಹೈಲೈಟ್. ‘ದಬಾಂಗ್ 3’ ಸಿನಿಮಾ ಈಗಾಗಲೇ ಬಹುತೇಕ ಕೊನೇ ಹಂತದ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಡಿಸೆಂಬರ್​ಗೆ ಸಿನಿಮಾ ತೆರೆಕಾಣುತ್ತಿರುವುದರಿಂದ ಅಷ್ಟೇ ಚುರುಕಾಗಿ ಪ್ರಮೋಷನ್ ಕೆಲಸದಲ್ಲೂ ಸಲ್ಮಾನ್ ಬಿಜಿಯಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಪ್ರೊಫೈಲ್ ಹೆಸರನ್ನು ಚುಲ್​ಬುಲ್ ಪಾಂಡೆ ಎಂದು ಬದಲಿಸಿಕೊಂಡಿದ್ದಾರೆ. ಈ ಮೂಲಕ ಚಿತ್ರದಲ್ಲಿನ ಒಂದೊಂದೇ ಪಾತ್ರಗಳ ಪರಿಚಯ ಮಾಡಿಕೊಡುತ್ತಿದ್ದಾರೆ. ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ನಿಖಿಲ್ ದ್ವಿವೇದಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸೋನಾಕ್ಷಿ ಸಿನ್ಹಾ ಸಲ್ಮಾನ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳಿನಲ್ಲೂ ಈ ಸಿನಿಮಾ ತೆರೆಗೆ ಬರಲಿರುವುದರಿಂದ ಚಿತ್ರದ ಬಗೆಗಿನ ನಿರೀಕ್ಷೆ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *