ಕಿಚ್ಚನ ಆಲ್ ಇಂಡಿಯಾ ಟೂರ್

ಸ್ಯಾಂಡಲ್​ವುಡ್ ಮಾತ್ರವಲ್ಲದೆ ಬಹುಭಾಷೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ ‘ಕಿಚ್ಚ’ ಸುದೀಪ್. ಕನ್ನಡದಲ್ಲಿ ‘ಪೈಲ್ವಾನ್’, ‘ಕೋಟಿಗೊಬ್ಬ 3’, ತೆಲುಗಿನಲ್ಲಿ ‘ಸೈರಾ ನರಸಿಂಹ ರೆಡ್ಡಿ’, ಹಿಂದಿಯಲ್ಲಿ ‘ದಬಂಗ್ 3’ ಹೀಗೆ ದೇಶದ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಅವರು ಬಿಜಿ ಆಗಿದ್ದಾರೆ. ಆ ಎಲ್ಲ ಕೆಲಸಗಳ ನಡುವೆಯೇ ವಿಜಯವಾಣಿ ಜತೆ ಮಾತನಾಡಿರುವ ಸುದೀಪ್, ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಂಬರುವ ಸಿನಿಮಾಗಳು, ಫಿಟ್ನೆಸ್ ಬಗೆಗಿನ ಕಾಳಜಿ, ನಿರ್ದೇಶನದ ಪ್ಲ್ಯಾನ್ ಮುಂತಾದ ಅನೇಕ ವಿಚಾರಗಳ ಬಗ್ಗೆ ಅವರಾಡಿದ ಮಾತುಗಳು ಇಲ್ಲಿವೆ…

| ಮದನ್, ಬೆಂಗಳೂರು,

  • ಏಕಕಾಲಕ್ಕೆ ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದೀರಿ ಯಾಕೆ?

‘ಕೋಟಿಗೊಬ್ಬ 3’ ಚಿತ್ರಕ್ಕೆ ಶೇ.70 ಭಾಗ ಕೆಲಸ ಮುಗಿದಿದೆ. ಆ ಚಿತ್ರಕ್ಕೆ ಸಾಕಷ್ಟು ಸೆಟ್ ನಿರ್ಮಾಣ ಆಗಬೇಕಿತ್ತು. ಹಾಗಾಗಿ ನನಗೆ ಒಂದಷ್ಟು ಸಮಯ ಸಿಕ್ಕಿತು. ಆ ಗ್ಯಾಪ್​ನಲ್ಲೇ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡೆ. ಇಲ್ಲದಿದ್ದರೆ ಏಕಕಾಲಕ್ಕೆ ಎರಡೆರಡು ಚಿತ್ರಗಳಲ್ಲಿ ತೊಡಗಿಕೊಳ್ಳುವವನು ನಾನಲ್ಲ. ಅದೃಷ್ಟ ಎಂದರೆ ‘ಪೈಲ್ವಾನ್’ ಮಾಡುವಾಗ ಬೇರೆ ಸಿನಿಮಾಗಳು ನನಗೆ ಅಡ್ಡಿ ಬರಲಿಲ್ಲ. ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಸ್ವಲ್ಪ ಕೆಲಸ ಇತ್ತು. ಆದರೂ ಬೇಗ ಮುಗಿಸಿಕೊಟ್ಟೆ. ಇದೇ ಮೊದಲ ಬಾರಿಗೆ ಇಷ್ಟೆಲ್ಲ ಸಿನಿಮಾಗಳನ್ನು ಒಟ್ಟೊಟ್ಟಿಗೆ ಮಾಡಿರುವುದು. ‘ದಬಂಗ್ 3’ ಶೂಟಿಂಗ್ ಇನ್ನೂ ಸ್ವಲ್ಪ ಬಾಕಿ ಇದೆ.

  • ‘ಪೈಲ್ವಾನ್’ ಚಿತ್ರದಲ್ಲಿ ನಟಿಸಬೇಕು ಎಂಬ ಹಂಬಲ ಹುಟ್ಟಿದ್ದು ಹೇಗೆ?

ಹೀಗೇ ಒಂದು ಸಂಜೆ ಎಲ್ಲರೂ ಕುಳಿತು ಮಾತನಾಡುವಾಗ ಈ ರೀತಿ ಒಂದು ಸಿನಿಮಾ ಮಾಡಬೇಕು ಎಂಬ ವಿಷಯ ಪ್ರಸ್ತಾಪ ಆಯಿತು. ಅದನ್ನು ನಿರ್ದೇಶಕ ಕೃಷ್ಣ ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ನಾನಂದುಕೊಂಡಿರಲಿಲ್ಲ. ಕೆಲವೇ ದಿನಗಳ ನಂತರ ಬಂದು ‘ಪೈಲ್ವಾನ್’ ಕಥೆ ಹೇಳಿದರು. ಅಲ್ಲಿವರೆಗೂ ಜಿಮ್ ಕಡೆಗೆ ತಲೆಹಾಕದೆ ಆರಾಮಾಗಿ ಇದ್ದವನು ನಾನು. ಹಾಗಾಗಿ ಮೊದಲು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ. ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ. ನಂತರ ಮೂರು ದಿನ ಆಲೋಚನೆ ಮಾಡಿ, ಒಂದು ನಿರ್ಧಾರಕ್ಕೆ ಬಂದೆ. ನಾನು ಈಗಿರುವ ಸಂದರ್ಭದಲ್ಲಿ ಬಾಡಿ ಬಿಲ್ಡ್ ಮಾಡಬೇಕೆಂದರೆ ಎಷ್ಟು ಸಮಯ ಬೇಕಾಗಬಹುದು ಎಂಬ ಲೆಕ್ಕಾಚಾರ ಹಾಕಿದೆ. ಅದಕ್ಕೆಲ್ಲ ನಿರ್ದೇಶಕರು ಸಮಯ ನೀಡಿದ ಬಳಿಕವೇ ಒಪ್ಪಿಕೊಂಡೆ. ನಮ್ಮ ಸಿನಿಮಾದಲ್ಲಿ ಬಹುಭಾಷಾ ನಟ ಕಬೀರ್ ದುಹಾನ್ ಸಿಂಗ್ ಇದ್ದಾರೆ. ಅವರ ಜತೆ ನನ್ನನ್ನು ಜನರು ಹೋಲಿಕೆ ಮಾಡುವುದು ಸಹಜ. ಹಾಗಾಗಿ ಇದನ್ನು ತುಂಬ ಗಂಭೀರವಾಗಿ ತೆಗೆದುಕೊಂಡು ಪಾತ್ರಕ್ಕೆ ಬೇಕಾದಂತೆ ದೇಹ ಹುರಿಗೊಳಿಸಿಕೊಂಡೆ.

  • ಇಷ್ಟು ವರ್ಷಗಳಲ್ಲಿ ಜಿಮ್ೆ ಹೋಗಬೇಕು ಎಂದು ಯಾವಾಗಲೂ ಅನಿಸಿರಲಿಲ್ಲವೇ?

ಖಂಡಿತವಾಗಿಯೂ ಇಲ್ಲ. ಯಾರೋ ಮಾಡುತ್ತಾರೆ ಎಂದು ಮಾಡುವವನು ನಾನಲ್ಲ. ಇಂದಿಗೂ ಜಿಮ್ ಎಂದರೆ ಅಷ್ಟು ಇಷ್ಟ ಇಲ್ಲ. ಆದರೆ ಈಗ ಅದು ಅಡಿಕ್ಟ್ ಆಗಿದೆ. ಆದ್ದರಿಂದ ತುಂಬ ಖುಷಿಯಿಂದ ವರ್ಕೌಟ್ ಮಾಡುತ್ತಿದ್ದೇನೆ. ‘ದಿ ವಿಲನ್’ ಸಿನಿಮಾ ಮುಗಿದಾಗ 89 ಕೆಜಿ ಇದ್ದೆ. ಈಗ 73 ಕೆಜಿಗೆ ತೂಕ ಇಳಿಸಿಕೊಂಡಿದ್ದೇನೆ. ನನಗೆ ಇದು ದೊಡ್ಡದು. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ಅವರಿಗೆ ಹೋಲಿಸಿದರೆ ಶೇ.20 ಭಾಗ ಕೂಡ ನಾನಿಲ್ಲ. ಶುರುಮಾಡಿ ಒಂದೇ ವರ್ಷದಲ್ಲೇ ಇಷ್ಟು ರಿಸಲ್ಟ್ ಪಡೆದಿರುವುದು ನನಗೆ ದೊಡ್ಡದು. ಕೆಲವರು ತುಂಬ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ನಾನೂ ಹಾಗೆಯೇ ಆಗಬೇಕು ಎಂದು ಬಯಸುತ್ತೇನೆ.

  • ಸುಮ್ಮನೇ ನಟಿಸುವುದಕ್ಕೂ ಹೀಗೆ ದೇಹ ಹುರಿಗೊಳಿಸಿಕೊಂಡು ಕ್ಯಾಮರಾ ಎದುರಿಸುವುದಕ್ಕೂ ಏನಾದರೂ ವ್ಯತ್ಯಾಸ ಎನಿಸಿದೆಯೇ?

ಹೌದು ತುಂಬ ವ್ಯತ್ಯಾಸ ಇದೆ. ದೇಹ ಹುರಿಗೊಳಿಸಿಕೊಂಡಾಗ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಯಾವುದೇ ಕಾಸ್ಟ್ಯೂಮ್ ಇದ್ದರೂ ನೇರ ಸೆಟ್​ನಲ್ಲೇ ಹಾಕಿಕೊಳ್ಳಬಹುದು. ಇಲ್ಲದಿದ್ದರೆ, ಮೊದಲು ಕಾಸ್ಟ್ಯೂಮ್ ತರಿಸಿಕೊಂಡು, ಅದನ್ನು ಚೆಕ್ ಮಾಡಿ ಹೇಗೆ ಕಾಣಿಸುತ್ತೇನೆ ಎಂಬುದನ್ನು ನೋಡಿಕೊಳ್ಳಬೇಕಿತ್ತು. ಈಗ ಆ ಚಿಂತೆ ಇಲ್ಲ. ಆದರೆ ಇದರಿಂದ ಸಮಸ್ಯೆ ಕೂಡ ಇದೆ. ವರ್ಕೌಟ್ ಮಾಡಿದ ಬಳಿಕ ಸರಿಯಾಗಿ ವಿಶ್ರಾಂತಿ ಪಡೆದುಕೊಂಡಿಲ್ಲ ಎಂದರೆ ತುಂಬ ಬಳಲಿದವರಂತೆ ಕಾಣುತ್ತೀರಿ. ಕಣ್ಣಿನಲ್ಲಿ ಎನರ್ಜಿ ಇರುವುದೇ ಇಲ್ಲ. ಸರಿಯಾದ ಸಮಯಕ್ಕೆ ಊಟ ಮಾಡಬೇಕು, ಸರಿಯಾಗಿ ನಿದ್ದೆ ಮಾಡಬೇಕು.

  • ಪರಭಾಷಾ ಚಿತ್ರರಂಗದಲ್ಲಿ ನಿಮಗೆ ಇತ್ತೀಚೆಗೆ ಬೇಡಿಕೆ ಹೆಚ್ಚಿದೆ…

ಅದು ಯಾಕೆ ಎಂದು ನನಗೆ ಗೊತ್ತಿಲ್ಲ. ಆದರೆ ಸುದೀಪ್ ಬೇಕು ಎಂದು ಯಾರೂ ಸುಮ್ಮನೇ ಹೇಳುವುದಿಲ್ಲ. ಅದಕ್ಕೆ ಒಂದು ಕಾರಣ ಇದ್ದೇ ಇರುತ್ತದೆ. ಅದೇನೆಂಬುದನ್ನು ನಾನು ಹುಡುಕುವ ಪ್ರಯತ್ನ ಮಾಡಿಲ್ಲ. ನನಗೆ ಆಫರ್ ನೀಡುವುದಕ್ಕೂ ಮುನ್ನ ಅವರು ಅನೇಕ ಸಲ ಅಲೋಚನೆ ಮಾಡಿರುತ್ತಾರೆ. ಎಲ್ಲದಕ್ಕೂ ಬಿಜಿನೆಸ್ ಒಂದೇ ಕಾರಣ ಆಗುವುದಿಲ್ಲ. ಕನ್ನಡದ ಮಾರುಕಟ್ಟೆ ದೇಶಾದ್ಯಂತ ವಿಸ್ತರಿಸುವ ಮುನ್ನವೇ ಬಾಲಿವುಡ್, ಟಾಲಿವುಡ್ ನಿರ್ದೇಶಕರು ನನನ್ನು ಆಯ್ಕೆ ಮಾಡಿಕೊಂಡಿದ್ದರು. ‘ಈಗ’, ‘ಫೂಂಕ್’ ತುಂಬ ವರ್ಷಗಳ ಹಿಂದೆಯೇ ಬಂದುಹೋಗಿದ್ದವು.

  • ಬೇರೆ ಯಾವೆಲ್ಲ ನಿರ್ದೇಶಕರು ನಿಮ್ಮ ಕಾಲ್​ಶೀಟ್​ಗಾಗಿ ಬೇಡಿಕೆ ಇಟ್ಟಿದ್ದಾರೆ?

ಹಿಂದಿ, ತಮಿಳು ಮತ್ತು ತೆಲುಗು ಚಿತ್ರರಂಗದಿಂದ ಹಲವು ಚಿತ್ರಗಳಿಗಾಗಿ ಆಫರ್ ಬರುತ್ತಿವೆ. ಬಹಳ ವರ್ಷಗಳ ಹಿಂದೆಯೇ ‘ಥನಿ ಒರುವನ್’ ಚಿತ್ರದಲ್ಲಿ ನಾನೇ ನಟಿಸಬೇಕಿತ್ತು. ಅದರ ನಿರ್ದೇಶಕ ಮೋಹನ್ ರಾಜ ನನ್ನ ಆಪ್ತ ಗೆಳೆಯ. ಒಂದೂವರೆ ವರ್ಷ ಅವರ ಜತೆ ‘ಥನಿ ಒರುವನ್’ ಬಗ್ಗೆ ಚರ್ಚೆ ಮಾಡಿದ್ದುಂಟು. ಕಾರಣಾಂತರ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಈಗ ಮತ್ತೆ ‘ಥನಿ ಒರುವನ್ 2’ ಜತೆ ಇನ್ನೆರಡು ಸ್ಕ್ರಿಪ್ಟ್ ಆಯ್ಕೆ ಮಾಡಿಕೊಂಡು ನನ್ನ ಜತೆ ಸಿನಿಮಾ ಮಾಡಲು ಅವರು ಯೋಜನೆ ರೂಪಿಸುತ್ತಿದ್ದಾರೆ. ಆ ವಿಚಾರವಾಗಿ ಮೊನ್ನೆತಾನೇ ಮತ್ತೆ ಮಾತುಕತೆ ನಡೆಸಿದ್ದೇವೆ. ಅದಲ್ಲದೆ, ಹಿಂದಿ-ಕನ್ನಡದಲ್ಲಿ ಒಂದು ಬಯೋಪಿಕ್ ಮಾಡುವಂತೆ ಬಾಲಿವುಡ್​ನಿಂದ ಆಫರ್ ಬಂದಿದೆ.

  • ನಿಮ್ಮ ಮಗಳು ಸಾನ್ವಿಗೆ ಚಿತ್ರರಂಗಕ್ಕೆ ಬರಬೇಕೆಂಬ ಆಸಕ್ತಿ ಇದೆಯೇ?

ಅವಳಿಗೆ ಈಗಿನ್ನೂ 14 ವರ್ಷ. ಪೇಂಟಿಂಗ್ ಅಂದರೆ ಸಿಕ್ಕಾಪಟ್ಟೆ ಆಸಕ್ತಿ ಅವಳಿಗೆ. ಸಿನಿಮಾ ಬಗ್ಗೆ ಆಲೋಚನೆ ಮಾಡಲು ಅವಳಿಗಿನ್ನೂ ಚಿಕ್ಕ ವಯಸ್ಸು. ಸದ್ಯಕ್ಕೆ ಗಿಟಾರ್ ನುಡಿಸುವುದು ಮತ್ತು ಗಾಯನದಲ್ಲೂ ಆಸಕ್ತಿ ತೋರಿಸುತ್ತಿದ್ದಾಳೆ. ಅವಳೇ ನಮ್ಮನೆಯ ಬೆಸ್ಟ್ ವಿಮರ್ಶಕಿ. ಮುಖದ ಮೇಲೆ ಹೊಡೆದಂತೆ ಹೇಳುತ್ತಾಳೆ. ಹಾಗಾಗಿ ಅವಳ ಬಳಿ ವಿಮರ್ಶೆ ಕೇಳಿ ನಿದ್ದೆ ಹಾಳುಮಾಡಿಕೊಳ್ಳುವ ಬದಲು ಸುಮ್ಮನಿರುವುದೇ ಒಳ್ಳೆಯದು ಅಂತ ಅವಳನ್ನು ನಾನು ಕೇಳುವುದೇ ಇಲ್ಲ. ಹ್ಹಹ್ಹಹ್ಹ..

  • ಮತ್ತೆ ನಿರ್ದೇಶನ ಮಾಡುವ ಬಗ್ಗೆ ಏನಾದರೂ ಪ್ಲ್ಯಾನ್ ಮಾಡಿದ್ದೀರಾ?

ಎಷ್ಟೋ ನಿರ್ದೇಶಕರು ನನಗಾಗಿಯೇ ಕಥೆ ಬರೆಯುತ್ತಿದ್ದಾರೆ. ಅವರಿಗೆಲ್ಲ ನಾನು ನಟನಾಗಿ ಸಹಕಾರ ಕೊಡಬೇಕಿದೆ. ನಾನೇ ಒಬ್ಬ ಚಿತ್ರಕಾರನಾಗಿ ಪೇಂಟಿಂಗ್ ಮಾಡುವ ಬದಲು ಬೇರೆಯವರ ಪೇಂಟಿಂಗ್​ನಲ್ಲಿ ನಾನೇ ಬಣ್ಣವಾಗುವುದು ಒಳಿತು ಎನಿಸುತ್ತಿದೆ. ನಿರ್ದೇಶನ ಎಂಬುದು ಒಂದು ಅಡಿಕ್ಷನ್. ಪುಣ್ಯಕ್ಕೆ ಒಳ್ಳೊಳ್ಳೆಯ ನಿರ್ದೇಶಕರು ನನಗಾಗಿ ಸಿನಿಮಾ ಮಾಡಬೇಕೆಂದು ಆಸೆ ಇಟ್ಟುಕೊಂಡಿದ್ದಾರೆ. ಅವರಿಗೆ ಅವಕಾಶ ಮಾಡಿಕೊಡೋಣ.

Leave a Reply

Your email address will not be published. Required fields are marked *