Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ನದಿಗಳಲ್ಲಿ ದಿಢೀರ್ ಇಂಗಿದ ನೀರು ಎಚ್ಚರಿಕೆ ಗಂಟೆ

Sunday, 16.09.2018, 5:00 AM       No Comments

ಮಂಗಳೂರು/ಉಡುಪಿ: ಉಭಯ ಜಿಲ್ಲೆಗಳ ನೇತ್ರಾವತಿ, ಕುಮಾರಧಾರಾ, ಸ್ವರ್ಣಾ ಸಹಿತ ಬಹುತೇಕ ನದಿ, ಉಪನದಿಗಳು, ಹೊಳೆ, ತೊರೆ, ಬಾವಿಗಳ ಸಹಿತ ಜಲಮೂಲ ಬರಿದಾಗುತ್ತಿರುವುದು ಊಹೆಗೂ ನಿಲುಕದ ವಿದ್ಯಮಾನವಾಗಿದ್ದು, ಪರಿಸರ ವಾದಿಗಳು, ನಾಗರಿಕರು ಆತಂಕದಿಂದಿದ್ದಾರೆ.
ಸುಬ್ರಹ್ಮಣ್ಯ ಪರಿಸರವನ್ನು ಹಲವು ದಿನಗಳ ಕಾಲ ದ್ವೀಪವಾಗಿ ಮಾರ್ಪಡಿಸಿದ್ದ ಕುಮಾರಧಾರಾ ಹಾಗೂ ಗುಂಡ್ಯ ಹೊಳೆಗಳ ಜಲಮಟ್ಟ ಈ ಅವಧಿಯಲ್ಲಿ ಇಷ್ಟು ಕುಸಿದಿರುವುದು ದಶಕಗಳಲ್ಲೇ ಕಂಡಿಲ್ಲ ಎನ್ನುತ್ತಾರೆ ಸ್ಥಳೀಯರು.
ಉಡುಪಿ ನಗರ ನಿವಾಸಿಗಳಿಗೆ ಕುಡಿಯುವ ನೀರಿನ ಮೂಲ ಸ್ವರ್ಣಾ ನದಿ ಬತ್ತಲಾರಂಭಿಸಿದೆ. ಪುತ್ತಿಗೆಯಲ್ಲಿ ಬಂಡೆಕಲ್ಲುಗಳು ಗೋಚರವಾಗುತ್ತಿವೆ. ಹೆಬ್ರಿ ಭಾಗದಲ್ಲಿ ಜನವರಿ ಫೆಬ್ರವರಿವರೆಗೂ ಭರ್ತಿಯಾಗಿಯೇ ಹರಿಯುತ್ತಿದ್ದ ಸೀತಾನದಿಯಲ್ಲೂ ಕಲ್ಲು, ಬಂಡೆ, ತಳ ಗೋಚರವಾಗುತ್ತಿದೆ.
ಭಾರಿ ಮಳೆಗೆ ಇದೇ ನದಿಗಳು ನೆರೆ ಸೃಷ್ಟಿಸಿದ್ದವು ಎಂಬುವುದನ್ನು ಸದ್ಯದ ಪರಿಸ್ಥಿತಿ ಕಂಡರೆ ನಂಬಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ವೇಗದಲ್ಲಿ ನೀರು ಬತ್ತಲು ಆರಂಭಿಸಿದೆ ಎಂದು ನದಿಪಾತ್ರದ ವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಬಾವಿಗಳಲ್ಲೂ ನೀರು ಇಳಿಕೆ: ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿರುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದು ಎಂದೇ ಎಲ್ಲರೂ ಭಾವಿಸಿದ್ದರು. ಅಲ್ಲದೆ, ಮಳೆಗಾಲ ಮುಗಿಯುವವರೆಗೆ ಇದೇ ರೀತಿ ಮಳೆಯಾದರೆ ಭೂಮಿ ಉಳಿಯದು ಎಂದೂ ಹೇಳಿದವರಿದ್ದರು. ಆದರೆ ಕೇವಲ 20 ದಿನದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನದಿ, ಹೊಳೆ, ತೊರೆಗಳಲ್ಲಿ ನೀರಿನ ಹರಿವು ಕ್ಷೀಣಗೊಂಡಿರುವುದು ಮಾತ್ರವಲ್ಲ, ಕುಡಿಯುವ ನೀರಿನ ಬಾವಿಗಳಲ್ಲೂ ನೀರು ಕೆಳ ಸರಿಯುತ್ತಿದೆ. ಬಹುತೇಕ ನದಿ ಹಾಗೂ ಬಾವಿಗಳಲ್ಲಿ ಡಿಸೆಂಬರ್- ಜನವರಿ ತಿಂಗಳಲ್ಲಿ ಇರಬೇಕಾದ ನೀರಿನ ಮಟ್ಟಕ್ಕೆ ಪ್ರಸ್ತುತ ಇಳಿದಿದೆ.

ಸುಳ್ಯದ ಪಯಸ್ವಿನಿಯೂ ಕ್ಷೀಣ: ಜೋಡುಪಾಲದಲ್ಲಿ ಜಲಪ್ರಳಯದಿಂದ ಭೂಕುಸಿತ, ಪ್ರಾಣಹಾನಿ, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಬಳಿಕ ಪಯಸ್ವಿನಿ ನದಿಯಲ್ಲಿ ಕೆಸರು ಮಣ್ಣು, ಕಲ್ಲು ಮಿಶ್ರಿತ ನೀರು ಹರಿದಿತ್ತು. ಈಗ ಇಲ್ಲಿ ಅಪಾಯಕಾರಿಯಾದ ರೀತಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. 1974ರ ಬಳಿಕ ಪಯಸ್ವಿನಿಯಲ್ಲಿ ಈ ಬಾರಿ ಗರಿಷ್ಠ ಮಟ್ಟದ ನೆರೆ ನೀರು ಹರಿದಿದೆ. ಹಳ್ಳ- ಕೊಳ್ಳಗಳು ತುಂಬಿ ತುಳುಕಿದ್ದರೂ, ಮಳೆ ಬಿಟ್ಟ ಕೆಲವೇ ದಿನಗಳಲ್ಲಿ ಇಡೀ ಊರಿನಲ್ಲಿ ಜಲಮಟ್ಟ ಕುಸಿತವಾಗಿದೆ. ಏಕಾಏಕಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯ ಮೆಡಿಕಲ್ ಕಾಲೇಜೊಂದರ ಪ್ರತಿನಿಧಿ ಕೆ.ಜಗದೀಶ್ ಶೆಟ್ಟಿ.
ಪಯಸ್ವಿನಿ ನದಿ ಮಡಿಕೇರಿ ತಾಲೂಕಿನ ಭಾಗಮಂಡಲದ ಪಶ್ಚಿಮ ದಿಕ್ಕಿನಲ್ಲಿ ಉಗಮಗೊಂಡು ಜೋಡುಪಾಲದ ಮೂಲಕ ಅರಂತೋಡು, ಸುಳ್ಯ, ಪೈಚಾರ್, ಚಾಲ್ಸೂರು, ಪಂಜಿಕಲ್ಲು, ಮುರೂರು ಹಾದು ಮುಡೂರಿನಲ್ಲಿ ಕೇರಳ ರಾಜ್ಯ ಪ್ರವೇಶಿಸುತ್ತದೆ.

ಎಲ್ಲಿ ಹೋಯಿತು ಒರತೆ?: ಮಳೆಗಾಲದಲ್ಲಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಒರತೆ ನೀರು ಅಧಿಕವಾಗಿರುತ್ತದೆ. ಈ ಬಾರಿಯಂತೂ ಭಾರಿ ಮಳೆಗೆ ಬೆಟ್ಟಗುಡ್ಡಗಳ ತುತ್ತ ತುದಿಯಲ್ಲೂ ಒರತೆ ಕಾಣಿಸಿಕೊಂಡಿತ್ತು. ಪಶ್ಚಿಮಘಟ್ಟಗಳಲ್ಲಿ ಬಿರುಕು ಕಾಣಿಸಿಕೊಂಡು, ಅದರಲ್ಲಿ ನೀರು ಬಂದದ್ದೂ ಇದೆ. ಆದರೆ ಈಗ ಒರತೆ ದಿಢೀರ್ ಬಂದ್ ಆಗಿದೆ. ಇದೇ ಕಾರಣದಿಂದ ನದಿಗಳಲ್ಲಿ ನೀರೂ ಇಳಿಕೆಯಾಗಿದೆ. ಭೂಗರ್ಭದಲ್ಲಿ ಆಗಿರುವ ಯಾವುದೋ ಬದಲಾವಣೆ ಇದಕ್ಕೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆಯಾದರೂ ಇದು ಅಧ್ಯಯನದಿಂದಷ್ಟೇ ಏನೆಂದು ಖಚಿತವಾಗಬೇಕಿದೆ.

ಅಂತರ್ಜಲ ಕುಸಿತ ನಿಜ: ದಕ್ಷಿಣ ಕನ್ನಡದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿರುವ ವಿಷಯವನ್ನು ಜಿಲ್ಲೆಯ ಅಂತರ್ಜಲ ಇಲಾಖೆ ವರದಿ ಕೂಡ ಸಮರ್ಥಿಸಿದೆ. ಇಲಾಖೆ ಶನಿವಾರ ಪೂರ್ಣಗೊಳಿಸಿದ ತಿಂಗಳ ಅಂಕಿಅಂಶದಲ್ಲಿ ಅಧ್ಯಯನ ನಡೆಸಿದ ಎಲ್ಲ ಕಡೆ ಅಂತರ್ಜಲ ಮಟ್ಟ ಕುಸಿತವಾಗಿರುವುದು ಸ್ಪಷ್ಟವಾಗಿದೆ. ಸುಳ್ಯದಲ್ಲಿ ಜಲಮಟ್ಟ 2.45 ಮೀಟರ್ ಕೆಳಗೆ ಹೋಗಿದೆ. ಕಳೆದ ತಿಂಗಳು ಇದೇ ಪ್ರದೇಶದಲ್ಲಿ ಜಲಮಟ್ಟ 1.96 ಮೀಟರ್ ಕೆಳಗೆ ಇತ್ತು. ಸಂಪಾಜೆ, ಜಾಲ್ಸೂರು, ಗುತ್ತಿಗಾರು ಸಹಿತ ವಿವಿಧೆಡೆ ನೀರಿನ ಮಟ್ಟ ಪರಿಶೀಲನೆ ನಡೆಸಲಾಗಿದೆ. ಯಾವ ಕಾರಣದಿಂದ ಜಲ ಮಟ್ಟ ಕುಸಿದಿದೆ ಎನ್ನುವ ಕುರಿತು ಪರಿಶೀಲನೆ ಬಳಿಕ ತಿಳಿಯಬೇಕಾಗಿದೆ ಎಂದು ಜಿಲ್ಲಾ ಅಂತರ್ಜಲ ಇಲಾಖೆ ಉಪ ನಿರ್ದೇಶಕಿ ಸುಮತಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕೇರಳ ದುರಂತದ ಪುನರಾವರ್ತನೆ: ಇತ್ತೀಚೆಗೆ ಜಲಪ್ರಳಯ ಸಂಭವಿಸಿ ನೂರಾರು ಜೀವಗಳು ಬಲಿಯಾದ ಕೇರಳದ ವಿವಿಧೆಡೆ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದ್ದು, ಕೇರಳ ಸರ್ಕಾರ ಈ ಬಗ್ಗೆ ಅಧ್ಯಯನಕ್ಕೆ ಕ್ರಮ ಕೈಗೊಂಡಿದೆ. ನದಿಗಳಲ್ಲಿ ದಿಢೀರ್ ನೀರು ಕಡಿಮೆಯಾಗಿರುವುದು, ಅಂತರ್ಜಲ ಮಟ್ಟ ಕುಸಿತದ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಿ ವರದಿ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ. ಈ ರೀತಿಯ ಎಚ್ಚರಿಕೆ ಕ್ರಮಗಳನ್ನು ಅವಿಭಜಿತ ಜಿಲ್ಲೆಯಲ್ಲಿ ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ, ಸರ್ಕಾರ ಗಮನಿಸಬೇಕಾಗಿದೆ.

ನಿಮ್ಮೂರಲ್ಲಿ ಹೇಗಿದೆ?: ಜಲಮೂಲಗಳು ಬತ್ತುತ್ತಿರುವ ವಿದ್ಯಮಾನದ ಬಗ್ಗೆ ನೀವೇನಂತೀರಿ? ನಿಮ್ಮೂರಿನ ನದಿ, ತೊರೆಗಳು ಅಸಹಜವಾಗಿ ಬತ್ತುತ್ತಿದ್ದರೆ ಅದರ ಫೋಟೋ ತೆಗೆದು (ಸೆಲ್ಫಿ ಬೇಡ) ನಮಗೆ ಕಳುಹಿಸಿ. ನದಿಯ ಹೆಸರು, ಸ್ಥಳ, ನಿಮ್ಮ ಅಭಿಪ್ರಾಯ ಜತೆಗಿರಲಿ.
ವಾಟ್ಸಪ್: 8884411682  ಇಮೇಲ್: [email protected]

ಜಲಮೂಲಗಳು ಮೂರು ತಿಂಗಳು ಮುಂದಿನ ಸ್ಥಿತಿ ತಲುಪಿವೆ. ಮಣ್ಣಿನಲ್ಲಿ ನೀರಿನ ಒರತೆ ಪ್ರಮಾಣ ಸಂಪೂರ್ಣ ಕುಗ್ಗಿದೆ. ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡಿರುವುದು ಇದಕ್ಕೆ ಕಾರಣ. ಸಾಮಾನ್ಯವಾಗಿ ಮಳೆಯಾದಾಗ ನದಿ, ಕೆರೆ, ಬಾವಿಗಳಲ್ಲಿ ನೀರು ಇಂಗಿ ಅಂತರ್ಜಲ ವೃದ್ಧಿಸುತ್ತದೆ. ಈಗಿನ ಸ್ಥಿತಿ ನೋಡುವಾಗ ಮಳೆ ಕಡಿಮೆಯಾದಂತೆ ಭೂಮಿಯ ಒಳಪದರದ ಮಣ್ಣು ಒಣಗುತ್ತಾ ಬಂದಿದ್ದು, ಅಂತರ್ಜಲ ಮಟ್ಟ ಕುಗ್ಗಿ ದೊಡ್ಡ ಗ್ಯಾಪ್ ಸೃಷ್ಟಿಯಾಗಿದೆ. ಸದ್ಯಕ್ಕೆ ಎಂಥ ದೊಡ್ಡ ಮಳೆಯಾದರೂ ಅಂತರ್ಜಲ ವೃದ್ದಿಗೆ ನೀರನ್ನು ಶೇಖರಿಸಿಕೊಳ್ಳಲು ಭೂಮಿಗೆ ಸಾಧ್ಯವಾಗುವುದಿಲ್ಲ.
|ಉದಯ ಶಂಕರ್, ಭೂಗರ್ಭ ಶಾಸ್ತ್ರಜ್ಞ, ಉಡುಪಿ

ಭೂಮಿಯ ನೈಸರ್ಗಿಕ ರಚನೆಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಿದರೆ ಈ ರೀತಿಯ ಸಮಸ್ಯೆ ಸೃಷ್ಟಿಯಾಗುತ್ತದೆ. ಪಶ್ಚಿಮ ಘಟ್ಟವು ಕೆಂಪು ಮಣ್ಣನ್ನು ಹೊಂದಿದ್ದು, ಇವು ನೀರನ್ನು ಸುಲಭದಲ್ಲಿ ಹೀರಿಕೊಳ್ಳುತ್ತದೆ. ಎತ್ತಿನಹೊಳೆ, ಶಿರಾಡಿ ರಸ್ತೆ ಅಭಿವೃದ್ಧಿ ಸಹಿತ ವಿವಿಧ ಯೋಜನೆ ಮತ್ತು ಮನುಷ್ಯನ ವೈಯುಕ್ತಿಕ ಆವಶ್ಯಕತೆಗಳಿಗೆ ಭೂಮಿಯ ಬೆಟ್ಟ, ಏರು- ತಗ್ಗು ಪ್ರದೇಶಗಳನ್ನು ಅಲ್ಲಲ್ಲಿ ಕತ್ತರಿಸಲಾಗುತ್ತದೆ. ಜತೆಗೆ ಗಿಡ ಮರಗಳನ್ನು ಎಲ್ಲೆಂದರಲ್ಲಿ ಕಡಿಯಲಾಗುತ್ತದೆ. ಗುಡ್ಡ ಕಡಿದ ಜಾಗದಲ್ಲಿ ರಕ್ಷಣಾ ಗೋಡೆ ನಿರ್ಮಿಸಲಾಗುವುದಿಲ್ಲ. ಪರಿಣಾಮ ನೀರಿನಿಂದ ತೇವಗೊಂಡಿದ್ದ ಮಣ್ಣು ದೊಡ್ಡ ಪ್ರಮಾಣದಲ್ಲಿ ಕುಸಿದು ಜಾರುತ್ತದೆ. ಇಂಗುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಸಾಕಷ್ಟು ಮಳೆಯಾದರೂ ಇಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಲು ಇದು ಮುಖ್ಯ ಕಾರಣ.
|ಪ್ರೊ.ಎಸ್.ಜಿ.ಮಯ್ಯ, ತಜ್ಞರು, ಎನ್‌ಐಟಿಕೆ

ನಮ್ಮ ತೋಟದ ಬದಿಯ ತೋಡಿನಲ್ಲಿ ಭಯಾನಕವೋ ಎನ್ನುವಂತೆ ನೀರಿನ ಹರಿವು ನಿಂತಿದೆ- ನಿಲ್ಲುವ ಹಂತಕ್ಕೆ ಬಂದಿದೆ. ಯಾವಾಗಲೂ ನವೆಂಬರ್‌ನಲ್ಲೂ ಹರಿವು ಇರುತ್ತದೆ. ಇಡೀ ಭೂಮಿಯೇ ಮುಳುಗಿ ತೇಲಾಡುವಂತೆ ಮಳೆ ಮೊನ್ನೆ ಮೊನ್ನೆ ತನಕ ಬಂದಿದ್ದರೂ ಈಗ ನೇತ್ರಾವತಿಯೂ ಕಂಗಾಲಾದಂತೆ ಕಾಣುತ್ತಿದೆ. ನಮ್ಮ ಪರಿಸರದ ಬೆಳ್ಳಾರೆಯ ಗೌರಿ ಹೊಳೆ, ಮಾಡಾವು ಹೊಳೆಗಳೆಲ್ಲವೂ ಇದೇ ಸ್ಥಿತಿಯಲ್ಲಿವೆ. ಎಲ್ಲಿ ಹೋಯಿತು ಅಷ್ಟೂ ಮಳೆ ನೀರು?
|ಸುರೇಶ್ಚಂದ್ರ ಟಿ.ಆರ್, ಕೃಷಿಕ, ಕಲ್ಮಡ್ಕ, ಸುಳ್ಯ

Leave a Reply

Your email address will not be published. Required fields are marked *

Back To Top