ವಿಜಯಪುರ: ಮನಸ್ಸು ಮತ್ತು ದೇಹ ಶುದ್ಧಿಯಾಗಿದ್ದರೆ ಮಾತ್ರ ಉನ್ನತ ಬದುಕು ಸಾಗಿಸಲು ಸಾಧ್ಯ ಎಂದು ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್‌ನ ಬಿ.ಎಂ. ಪಾಟೀಲ ಗುರೂಜಿ ಹೇಳಿದರು.
ನಗರದ ಕನಕದಾಸ ಬಡಾವಣೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದರ್ಶನ ಕ್ರಿಯಾ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳಿಂದ ಜೀವನದಲ್ಲಿ ಸಾಧನೆ ಮಾಡಲು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಲಹೆ ನೀಡಿದರು.
ಪರಿಶುದ್ಧ ಗಾಳಿಯೀ ಮನುಷ್ಯನ ಅರೋಗ್ಯಕ್ಕೆ ಪ್ರಮುಖ ಜೀವಾಳ. ಉಸಿರಾಟದ ಮೂಲಕ ಶುದ್ಧ ಅಮ್ಲಜನಕ ಸೇವಿಸಬೇಕು. ದೀರ್ಘ, ಸರಳ ಉಸಿರಾಟದ ಪ್ರಕ್ರಿಯೆ ಮೂಲಕ ಶರೀರದಲ್ಲಿ ಪ್ರಾಣಶಕ್ತಿ ಸಂಚಲನವಾದಾಗ ಮನುಷ್ಯ ಕ್ರಿಯಾಶೀಲನಾಗುತ್ತಾನೆ. ಇದು ಆರ್ಟ್ ಆಫ್ ಲೀವಿಂಗ್‌ನ ಸಂಸ್ಥಾಪಕ ರವಿಶಂಕ ಗುರೂಜಿ ಅವರು ತಿಳಿಸಿದ ಸುದರ್ಶನ ಕ್ರಿಯೆ ಮೂಲಕ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂದರು.
ಅತಿಥಿ ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಪ್ರತಿನಿತ್ಯ ಸುದರ್ಶನ ಕ್ರಿಯೆ ಅಳವಡಿಸಿಕೊಂಡರೆ ನಿರಾಳವಾಗಿ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದರು.
ಡಾ. ವಿಜಯ ಮಹಾಂತ ದೇಸಾಯಿ, ಈರಣ್ಣ ಬಡಿಗೇರ, ಭಾಗ್ಯಾ ಬಿರಾದಾರ, ಹೇಮಲತಾ ಅಬ್ಬಿಗೇರ ಅನುಭವ ಹಂಚಿಕೊಂಡರು. ಚಂದ್ರಶೇಖರ ಸಿಂದೂರ ಸ್ವಾಗತಿಸಿದರು. ಮುದಕಪ್ಪ ಚವ್ಹಾಣ ನಿರೂಪಿಸಿದರು. ಸಹನಾ ಪಾಟೀಲ ವಂದಿಸಿದರು.
ಶಿಬಿರದಲ್ಲಿ ಬಸವರಾಜ ಬಡಿಗೇರ, ರಮೇಶ ಆಡಿನ, ಲಿಂಗಪ್ಪ ಮಸೂತಿ, ಡಾ. ಸಾವಿತ್ರಿ ಬಾಗೇವಾಡಿ, ಬಸಲಿಂಗಮ್ಮ ಮಸೂತಿ ಮತ್ತಿತರರಿದ್ದರು.