ಸುಕೋ ಬ್ಯಾಂಕ್ ಸಾವಿರ ಕೋಟಿ ವ್ಯವಹಾರ

ಹುಬ್ಬಳ್ಳಿ: ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್ ತನ್ನ ಆರ್ಥಿಕ ವರ್ಷದ ಗುರಿಯಾದ ಸಾವಿರ ಕೋಟಿ ರೂ. ವಹಿವಾಟನ್ನು 2 ತಿಂಗಳ ಮೊದಲೇ ಸಾಧಿಸಿ ಉತ್ತರ ಮತ್ತು ಮಧ್ಯ ಕರ್ನಾಟಕದ ಅಗ್ರಗಣ್ಯ ಬ್ಯಾಂಕ್ ಆಗಿದೆ. ಬೆಳ್ಳಿ ಹಬ್ಬ ವರ್ಷದ ಸಂಭ್ರಮದಲ್ಲಿರುವ ಸುಕೋ ಬ್ಯಾಂಕ್ 577 ಕೋಟಿ ರೂ. ಠೇವಣಿ ಹೊಂದಿ 424 ಕೋಟಿ ರೂ. ಸಾಲ ನೀಡಿದ್ದು, ಒಟ್ಟು 1,001 ಕೋಟಿ ರೂ. ವ್ಯವಹಾರವನ್ನು ಮಾರ್ಚ್ ಅಂತ್ಯಕ್ಕೆ ಮೊದಲೇ ಸಾಧಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದ್ದಾರೆ.

ಸುಕೋ ಸೋಲಾರ್ ಶಕ್ತಿ: ಬೆಳ್ಳಿ ಹಬ್ಬದ ಆಚರಣೆ ಭಾಗವಾಗಿ ಸುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ವಿದ್ಯುತ್ ಕಡಿತ ಮತ್ತು ವಿದ್ಯುತ್ ದರ ಏರಿಕೆ ವಿರುದ್ಧ ರಕ್ಷಣೆ ನೀಡಲು ಸುಕೋ ಸೋಲಾರ್ ಶಕ್ತಿ ಎಂಬ ವಿಶೇಷ ಸಾಲ ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ನೋಂದಾಯಿತರಾಗಿರುವ ಸೌರಶಕ್ತಿ ಉಪಕರಣಗಳ ಸರಬರಾಜುದಾರರು ಮಾರುಕಟ್ಟೆ ದರಕ್ಕಿಂತ ಶೇ.20 ಕಡಿಮೆ ಬೆಲೆಗೆ ಉಪಕರಣಗಳನ್ನು ನೀಡುತ್ತಾರೆ. ಸುಕೋ ಬ್ಯಾಂಕ್ ಒಟ್ಟು ಯೋಜನೆಯ ಶೇ.80 ಸಾಲ ಸೌಲಭ್ಯ ನೀಡುತ್ತದೆ. ಅಂದರೆ ಗ್ರಾಹಕರು ಪ್ರತಿ ಕಿಲೋ ವ್ಯಾಟ್​ಗೆ 872 ರೂ. ಮಾಸಿಕ ಕಂತು ಪಾವತಿಸಿ, ಮುಂದಿನ 25 ವರ್ಷಗಳ ಕಾಲ ವಿದ್ಯುತ್ ಸ್ವಾತಂತ್ರ್ಯ ಅನುಭವಿಸಬಹುದು. ಇದು ಸುಕೋ ಬ್ಯಾಂಕ್ ಬೆಳ್ಳಿಹಬ್ಬದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿರುವ ದೊಡ್ಡ ಉಡುಗೊರೆ. ರಾಜ್ಯದ 11 ಜಿಲ್ಲೆಗಳಲ್ಲಿ 28 ಶಾಖೆಗಳ ಮೂಲಕ ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ನಗು ಮೊಗದ ಸೇವೆ ನೀಡುತ್ತ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೋಹಿತ್ ಮಸ್ಕಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.