ಇತರರನ್ನು ಗೌರವಿಸದವರಿಗೆ ಯಾವುದೇ ಧರ್ಮವಿರುವುದಿಲ್ಲ: ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ಗೆ ಬಿಹಾರ ಸಿಎಂ ತಿರುಗೇಟು

ಪಟನಾ: ವಿವಾದಾತ್ಮಕ ಟ್ವೀಟ್​ ಮಾಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ಗೆ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ತಿರುಗೇಟು ನೀಡಿದ್ದು, ಇತರರ ಗಮನ ಸೆಳೆಯಲು ಅನಗತ್ಯ ಹೇಳಿಕೆ ನೀಡುವವರು ಯಾವುದೇ ಧರ್ಮವನ್ನು ಹೊಂದಿರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ರಮಜಾನ್​ ಹಿನ್ನೆಲೆಯಲ್ಲಿ ನಿನ್ನೆ(ಮಂಗಳವಾರ) ನಡೆದ ಇಫ್ತಾರ್​ ಕೂಟದಲ್ಲಿ ಭಾಗವಹಿಸಿದ್ದ ನಿತೀಶ್​ ಕುಮಾರ್​​, ರಾಮ್​ ವಿಲಾಸ್​ ಪಾಸ್ವಾನ್​ ಹಾಗೂ ಬಿಜೆಪಿಯ ಸುಶೀಲ್​ ಮೋದಿ ಕುರಿತು ಟ್ವೀಟ್​ ಮಾಡಿದ್ದ ಗಿರಿರಾಜ್​ ಸಿಂಗ್​, ಆಶ್ಚರ್ಯ ವ್ಯಕ್ತಪಡಿಸಿ, ಇದೇ ರೀತಿಯ ಉತ್ಸಾಹವನ್ನು ನವರಾತ್ರಿಗೂ ತೋರುತ್ತಾರೆಯೇ ಎಂದು ಕಾಲೆಳೆದಿದ್ದರು. ಇದನ್ನು ಗಮಿನಿಸಿದ ಬಿಜೆಪಿ ಮುಖ್ಯಸ್ಥ ಅಮಿತ್​ ಷಾ ಗಿರಿರಾಜ್​ ಸಿಂಗ್​ಗೆ ಎಚ್ಚರಿಕೆ ನೀಡಿ, ಈ ರೀತಿಯಾದ ಹೇಳಿಕೆ ನೀಡದೆ ಸುಮ್ಮನಿರುವಂತೆ ಹೇಳಿದ್ದರು.

ಇದೀಗ ಗಿರಿರಾಜ್​ ಸಿಂಗ್​ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ನಿತೀಶ್​ ಕುಮಾರ್​, ಅವರು ಏನು ಹೇಳಿದರೋ ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮಾಧ್ಯಮಗಳ ಗಮನ ಸೆಳೆದು ಪ್ರಚಾರಗಿಟ್ಟಿಸಿಕೊಳ್ಳಲು ಕೆಲವು ಜನರು ಸದಾ ಇಂತಹ ಅನಗತ್ಯ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಪರಸ್ಪರ ಗೌರವ ಹಾಗೂ ಪ್ರೀತಿ ತೋರಬೇಕೆಂದು ಎಲ್ಲ ಧರ್ಮಗಳೂ ಬೋಧಿಸಿವೆ. ಯಾರನ್ನೂ ಗೌರವಿಸದ ಇಂತಹ ಜನರು ಯಾವುದೇ ಧರ್ಮವನ್ನು ಹೊಂದಿರುವುದಿಲ್ಲ ಎಂದು ಗಿರಿರಾಜ್​ ಸಿಂಗ್​ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಇಂದು(ಬುಧವಾರ) ಮುಸ್ಲಿಂ ಪಾವಿತ್ರ್ಯ ರಮಜಾನ್ ಹಿನ್ನೆಲೆಯಲ್ಲಿ ಬಿಹಾರ ರಾಜಧಾನಿ ಪಟನಾದಲ್ಲಿನ ಮಸೀದಿಯೊಂದರಲ್ಲಿ ಮುಸ್ಲಿಂ ಟೋಪಿ ಧರಿಸಿ ಪಾರ್ಥನೆ ಸಲ್ಲಿಸಿದ ನಿತೀಶ್​ ಕುಮಾರ್​ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ತಲಾ 17 ಸ್ಥಾನಗಳನ್ನು ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿತ್ತು. ಉಳಿದ ಸ್ಥಾನಗಳನ್ನು ಸಣ್ಣ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದರು. ಬಿಜೆಪಿ ಎಲ್ಲ 17 ಸ್ಥಾನಗಳಲ್ಲೂ ಹಾಗೂ ಜೆಡಿಯು 16 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ, ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯುಗೆ ಪ್ರಾಮುಖ್ಯತೆ ನೀಡದಿದ್ದಕ್ಕೆ ಬಿಜೆಪಿ ವಿರುದ್ಧ ನಿತೀಶ್​ ಅಸಮಾಧಾನ ಹೊಂದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *