More

  ಹೀಗೊಂದು ಲವ್ ಸ್ಟೋರಿ

  aa kshana

  ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ್ದ ಸೋಮೇಶ್ ಮಹಾನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದರು. ಅವರು ತಮ್ಮ 19 ವರ್ಷ ವಯಸ್ಸಿನ ಒಬ್ಬನೇ ಮಗ ಶಂಕರ್​ನನ್ನು ಡೊನೇಷನ್ ಕೊಟ್ಟು ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದರು. ಸೋಮೇಶ್​ರ ಪತ್ನಿ ಮೀನಾಳಿಗೆ ಮೋಹನ್ ಎಂಬ ಸೋದರನಿದ್ದ. ಆತ ಅದೇ ನಗರದ ಸಮೀಪದ ಒಂದು ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ. ಅವನಿಗೆ ಒಬ್ಬಳೇ ಮಗಳು ರೂಪಾ. ಅವಳು ಶಂಕರ್​ನಿಗಿಂತ ಎರಡು ವರ್ಷ ಚಿಕ್ಕವಳು.

  ಶಂಕರ್ ಹೈಸ್ಕೂಲಿಗೆ ಬಂದ ಸಮಯದಲ್ಲಿ ಸೋಮೇಶ್ ಪದೇಪದೆ ವರ್ಗವಾಗುವ ಕೆಲಸವೊಂದರಲ್ಲಿದ್ದ. ಹೀಗಾಗಿ ಆತ ಶಂಕರ್​ನನ್ನು ಮೋಹನ್​ನ ಮನೆಯಲ್ಲಿಯೇ ಮೂರು ವರ್ಷಗಳ ಕಾಲ ವಿದ್ಯಾಭ್ಯಾಸಕ್ಕಾಗಿ ಬಿಡಬೇಕಾಯಿತು. ಹೀಗಾಗಿ ಶಂಕರ್​ನಿಗೆ ಸೋದರಮಾವ ಮತ್ತವನ ಕುಟುಂಬ ಹತ್ತಿರವಾದರು. ರೂಪಾ ಅವನ ಶಾಲೆಯಲ್ಲಿಯೇ ಓದುತ್ತಿದ್ದ ಕಾರಣ ಇಬ್ಬರೂ ಒಟ್ಟಿಗೆ ಶಾಲೆಗೆ ಹೋಗಿಬರುತ್ತಿದ್ದರು. ಇಬ್ಬರ ನಡುವೆಯೂ ಬಾಲ್ಯದಿಂದಲೇ ಬೆಳೆದಿದ್ದ ಸಲಿಗೆ ಇನ್ನಷ್ಟು ವೃದ್ಧಿಸಿತು. ಅವರಿಬ್ಬರನ್ನೂ ನೋಡಿದ ಸಂಬಂಧಿಕರೆಲ್ಲ ನಿಮ್ಮಿಬ್ಬರದು ಬಹಳ ಉತ್ತಮ ಜೋಡಿ ಎನ್ನುತ್ತಿದ್ದರು. ಇದನ್ನು ಕೇಳಿದ ಕೂಡಲೇ ಇಬ್ಬರೂ ನಾಚುತ್ತಿದ್ದರು, ಸಂತಸಪಡುತ್ತಿದ್ದರು.

  ಹೈಸ್ಕೂಲ್ ಮುಗಿದ ಕೂಡಲೇ ಶಂಕರ್ ತಂದೆಯ ಮನೆಗೆ ವಾಪಸಾಗಿ ಕಾಲೇಜಿಗೆ ಸೇರಿದ. ಪ್ರತಿವಾರವೂ ಆತ ಮಾವನ ಮನೆಗೆ ಹೋಗಿ ರೂಪಾಳ ಜತೆ ಹಲವಾರು ಗಂಟೆಗಳನ್ನು ಕಳೆದು ಬರುತ್ತಿದ್ದ. ಕಾಲಕ್ರಮೇಣ ತಾವಿಬ್ಬರೂ ಗಾಢವಾಗಿ ಪ್ರೇಮಿಸುತ್ತಿರುವುದಾಗಿ ಇಬ್ಬರೂ ಮನಗಂಡರು. ಪರಸ್ಪರ ಅಗಲಿ ಒಂದು ದಿನವೂ ಇರದಂಥ ಪರಿಸ್ಥಿತಿ ಅವರದಾಯಿತು. ಇಬ್ಬರೂ ಪ್ರತಿದಿನವೂ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡತೊಡಗಿದರು. ಶಂಕರ್​ನ ತಂದೆ-ತಾಯಿ ಅವನ ಈ ವರ್ತನೆಗೆ ಪ್ರತಿರೋಧ ತೋರಲಿಲ್ಲ, ಬದಲಿಗೆ ಯುವಜೋಡಿಯನ್ನು ಅವರೂ ಉತ್ತೇಜಿಸತೊಡಗಿದರು.

  ಆದರೆ ಮೋಹನ್​ಗೆ ತನ್ನ ಮಗಳು ಶಂಕರ್​ನನ್ನು ಪ್ರೇಮಿಸುವುದು ಸ್ವಲ್ಪವೂ ಸರಿಬರಲಿಲ್ಲ. ಇನ್ನು ಮುಂದೆ ಶಂಕರ್​ನ ಜತೆಗೆ ಫೋನಿನಲ್ಲಿ ಮಾತನಾಡಬಾರದೆಂದು ಆತ ರೂಪಾಳಿಗೆ ನಿರ್ಬಂಧ ಹೇರಿದ. ಏತನ್ಮಧ್ಯೆ, ಈ ಯುವಜೋಡಿ ಯಾರಿಗೂ ತಿಳಿಯದಂತೆ ಭೇಟಿಯಾಗುತ್ತಲೇ ಇದ್ದರು. ಸೋಮೇಶ್ ಮತ್ತು ಮೀನಾಗೆ ರೂಪಾಳೇ ಸೊಸೆಯಾಗಿ ಬರಬೇಕೆನ್ನುವ ಅಸೆಯಿದ್ದ ಕಾರಣ ಅವರು ಮಗನನ್ನು ಉತ್ತೇಜಿಸುತ್ತಿದ್ದರು. ತನ್ನ ಆದೇಶಕ್ಕೆ ವಿರುದ್ಧವಾಗಿ ರೂಪಾ ಶಂಕರನನ್ನು ಭೇಟಿಯಾಗುತ್ತಿದ್ದುದನ್ನು ಅರಿತ ಮೋಹನ್, ಅವಳನ್ನು ಕಾಲೇಜ್​ನಿಂದ ಬಿಡಿಸಿ ಮನೆಯಲ್ಲಿಯೇ ಇಟ್ಟುಕೊಂಡ. ತಂದೆಯ ಮಾತುಗಳನ್ನು ಸ್ವಲ್ಪ ದಿನಗಳ ಕಾಲ ಪಾಲಿಸಿದ ರೂಪಾ ಆನಂತರ ಮತ್ತೆ ಶಂಕರ್​ನನ್ನು ಭೇಟಿಯಾಗತೊಡಗಿದಳು. ಇದನ್ನು ಅರಿತ ಮೋಹನ್ ಅವಳನ್ನು ಮನೆಯಲ್ಲಿ ಕೂಡಿಹಾಕಿ ಥಳಿಸಿದ. ಆದರೂ ಆಕೆ ಬಗ್ಗದೆ ತಾನು ಮದುವೆಯಾದರೆ ಶಂಕರ್​ನನ್ನೇ ಎಂದಳು. ಹೀಗಾಗಿ ಅವಳು ಕಾಲೇಜಿಗೆ ಹೋಗಿ ಬರುವ ಸಮಯದಲ್ಲಿ ಅವಳ ಜತೆ ಸೇವಕಿಯೊಬ್ಬಳನ್ನು ಮೋಹನ್ ಕಳಿಸತೊಡಗಿದ. ತಾನು ತರಗತಿಗೆ ಹೋದ ಬಳಿಕ ಸೇವಕಿ ಹೊರಟುಹೋಗುತ್ತಿದ್ದುದರಿಂದ ರೂಪಾ ತನ್ನ ಕ್ಲಾಸುಗಳಿಗೆ ಚಕ್ಕರ್ ಹೊಡೆದು ಶಂಕರ್​ನನ್ನು ಭೇಟಿಯಾಗುತ್ತಿದ್ದಳು. ಇದನ್ನು ಅರಿತಾಗ ಮೋಹನ್ ಕೆಂಡಾಮಂಡಲಗೊಂಡ. ‘ಇನ್ನೊಮ್ಮೆ ನೀನು ಶಂಕರ್​ನನ್ನು ಭೇಟಿಯಾಗಿದ್ದು ನನಗೇನಾದರೂ ತಿಳಿದರೆ ನಿನ್ನನ್ನು ಕೊಲೆ ಮಾಡಿ ನಮ್ಮ ಹೊಲದಲ್ಲಿ ನಿನ್ನ ಹೆಣವನ್ನು ಹೂತು ಹಾಕುವೆ, ಹುಷಾರ್’ ಎಂದ. ಮಾರನೆಯ ದಿನದಿಂದಲೇ ಅವಳನ್ನು ಕಾಲೇಜಿನಿಂದ ಬಿಡಿಸಿದ.

  ಈ ಮಾಹಿತಿಯನ್ನು ರೂಪಾ ತನ್ನ ಗೆಳತಿಯ ಮೂಲಕ ಶಂಕರ್​ನಿಗೆ ರವಾನಿಸಿದಳು. ಆತನಿಗೆ ಮುಂದೇನು ಮಾಡಬೇಕೆಂದು ತೋಚದಾಯಿತು. ತಂದೆ-ತಾಯಿಗೆ ಈ ವಿಷಯ ಹೇಳಿ ಅವರ ಸಲಹೆ ಕೇಳಿದ. ಅವರು ತಾವೇ ಮೋಹನ್​ನೊಂದಿಗೆ ಈ ವಿಷಯ ರ್ಚಚಿಸುವುದಾಗಿ ಹೇಳಿದರು. ಒಂದು ದಿನ ರೂಪಾಳ ತಂದೆ-ತಾಯಿ ಲಗ್ನಕ್ಕೆ ಬೇರೆ ಊರಿಗೆ ಹೋಗಿದ್ದಾಗ ರೂಪಾ ಶಂಕರ್​ನ ಕಾಲೇಜಿಗೆ ಬಂದು ಅವನನ್ನು ಭೇಟಿಯಾದಳು. ಆಗ ಶಂಕರ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಅವನ ತಂದೆ-ತಾಯಿ ರೂಪಾಳನ್ನು ಸಂತೈಸಿದರು. ಮೀನಾ ತನ್ನ ಸೋದರನಿಗೆ ಫೋನ್ ಮಾಡಿ, ‘ರೂಪಾ ನನ್ನ ಮನೆಗೆ ಬಂದಿದ್ದಾಳೆ. ನಿನ್ನ ಮಗಳು ಮತ್ತು ನನ್ನ ಮಗ ಪರಸ್ಪರ ಪ್ರೀತಿಸುತ್ತಿದ್ದಾರೆ, ಅವರಿಬ್ಬರನ್ನು ಒಂದು ಮಾಡುವುದು ಹಿರಿಯರಾದ ನಮ್ಮ ಕರ್ತವ್ಯ, ನಾವು ನಿನ್ನ ಮಗಳನ್ನು ಸೊಸೆಯಾಗಿ ಸ್ವೀಕರಿಸಿ, ಮಹಾರಾಣಿಯಂತೆ ನೋಡಿಕೊಳ್ಳುತ್ತೇವೆ, ಈ ಸಂಬಂಧ ಮುರಿಯಬೇಡ’ ಎಂದಳು.

  ಮೋಹನ್ ಏನನ್ನೂ ಮಾತನಾಡಲಿಲ್ಲ. ಸುಮಾರು ಒಂದು ಗಂಟೆಯ ತರುವಾಯ ಆತ ತನ್ನ ಪತ್ನಿಯೊಡನೆ ಶಂಕರ್​ನ ಮನೆಗೆ ಧಾವಿಸಿದ. ಸೋಮೇಶ್ ಮತ್ತು ಮೀನಾರನ್ನು ಬಾಯಿಗೆ ಬಂದಂತೆ ಬೈದ. ಎದುರಿಗೇ ಇದ್ದ ಶಂಕರ್​ನಿಗೆ ಮನಬಂದಂತೆ ಥಳಿಸಿ, ‘ನನ್ನ ಮಗಳ ತಂಟೆಗೇನಾದರೂ ಬಂದರೆ ನಿನ್ನನ್ನು ಕೊಂದು ಬಿಡುವೆ, ಹುಷಾರ್’ ಎನ್ನುತ್ತ ರೂಪಾಳನ್ನು ಎಳೆದುಕೊಂಡು ಹೊರಟು ಹೋದ. ಅವಮಾನಿತರಾದ ಸೋಮೇಶ್ ದಂಪತಿ ತಮ್ಮ ಮಗನಿಗೆ ರೂಪಾಳನ್ನು ಮರೆಯಲು ಸೂಚಿಸಿದರು. ಒಂದು ತಿಂಗಳ ನಂತರ ಶಂಕರ್ ಗೆಳೆಯರೊಡನೆ ಬಸ್ಸಿಗಾಗಿ ಕಾಯುತ್ತ ಬಸ್​ಸ್ಟಾಂಡಿನಲ್ಲಿ ನಿಂತಿದ್ದ. ಅವನ ಎದುರಿಗೆ ಒಂದು ಮಾರುತಿವ್ಯಾನ್ ಬಂದು ನಿಂತಿತು. ಅದರಲ್ಲಿದ್ದ ಒಬ್ಬ ‘ಶಂಕರ್ ಇಲ್ಲಿ ಬಾ, ಈ ಅಡ್ರೆಸ್ ಎಲ್ಲಿ ಬರುತ್ತದೆ ಹೇಳು’ ಎಂದು ಕರೆದ. ಶಂಕರ್ ವ್ಯಾನಿನ ಬಳಿ ಹೊದ ಕೂಡಲೇ ಯಾರೋ ವ್ಯಾನಿನ ಬಾಗಿಲನ್ನು ತೆರೆದು ಅವನನ್ನು ವ್ಯಾನಿನೊಳಗೆ ಎಳೆದುಕೊಂಡು ಬಾಗಿಲು ಹಾಕಿಕೊಂಡರು. ವ್ಯಾನು ಭರ್ರೆಂದು ಮುಂದೆ ಸಾಗಿತು. ಶಂಕರ್​ನ ಸ್ನೇಹಿತರು ಆತ ತನ್ನ ಪರಿಚಯದವರೊಡನೆ ವಿಳಾಸ ತೋರಿಸಲು ಹೋದ ಎಂದೇ ಭಾವಿಸಿದರು.

  ವ್ಯಾನಿನಲ್ಲಿ ಮೋಹನ್ ಸೇರಿ ಐದು ಜನರಿದ್ದರು. ಅವರು ವ್ಯಾನಿನೊಳಗಡೆಯೇ ಶಂಕರ್​ನನ್ನು ಥಳಿಸಿದರು. ವ್ಯಾನ್ 20 ಕಿ.ಮೀ. ದೂರ ಚಲಿಸಿ ಅರಣ್ಯಪ್ರದೇಶವೊಂದರ ಬಳಿ ಬಂದು ನಿಂತಿತು. ‘ನೀನು ರೂಪಾಳ ಸಂಗವನ್ನು ಬಿಡು ಎಂದರೂ ಬಿಟ್ಟಿಲ್ಲ, ಹೀಗಾಗಿ ನಿನಗೆ ಶಿಕ್ಷೆಯಾಗಲೇ ಬೇಕು’ ಎಂದ ಮೋಹನ್, ತನ್ನ ಗೆಳೆಯರ ಜತೆ ಶಂಕರ್​ನನ್ನು ವ್ಯಾನಿನಿಂದ ಹೊರಗೆಳೆದುಕೊಂಡು ಬಂದು ನೆಲಕ್ಕೆ ಕೆಡವಿದ. ಎಲ್ಲರೂ ಶಂಕರ್​ನನ್ನು ಮತ್ತೆ ಥಳಿಸಿದರು. ಮೋಹನ್ ವ್ಯಾನಿನಲ್ಲಿದ್ದ ಒಂದು ಕ್ಯಾನ್ ತಂದು ಅದರಲ್ಲಿದ್ದ ಪೆಟ್ರೋಲ್ ಅನ್ನು ಶಂಕರ್ ಮೇಲೆ ಸುರಿದ. ಯಾರೋ ಕಡ್ಡಿ ಗೀರಿ ಎಸೆದರು. ಕೂಡಲೇ ಪೆಟ್ರೋಲಿನಿಂದ ಒದ್ದೆಯಾಗಿದ್ದ ಶಂಕರ್​ನ ಬಟ್ಟೆಗಳು ಧಗಧಗನೆ ಉರಿಯತೊಡಗಿದವು. ಮೋಹನ್ ಮತ್ತಿತರರು ನಗುತ್ತ ಅಲ್ಲಿಂದ ಹೊರಟುಹೋದರು. ಶಂಕರ್ ನೆಲದ ಮೇಲೆ ಹೊರಳಾಡಿ ಮೈಗೆ ಅಂಟಿದ್ದ ಬೆಂಕಿಯನ್ನು ನಂದಿಸಿಕೊಂಡ. ಆದರೆ ಆಗಲೇ ಮೈ ತುಂಬ ಸುಟ್ಟಿದ್ದರಿಂದ ತೀವ್ರವಾಗಿ ನೋಯುತ್ತಿತ್ತು. ಆದರೂ ಮನಃಸ್ಥಿಮಿತ ಕಳೆದುಕೊಳ್ಳದೆ ತಂದೆಗೆ ವಿಡಿಯೋ ಕಾಲ್ ಮಾಡಿ ನಡೆದ ವಿಷಯವನ್ನು ತಿಳಿಸಿದ.

  ಕೂಡಲೇ ಸೋಮೇಶ್ ತನ್ನ ಗೆಳೆಯನೊಬ್ಬನ ಜೊತೆ ಬೈಕಿನಲ್ಲಿ ಅಲ್ಲಿಗೆ ಧಾವಿಸಿದ. ಶಂಕರ್​ನ ಫೋನಿನ ಲೊಕೇಷನ್ ಆಧಾರದಿಂದ ಅರ್ಧಗಂಟೆಯಲ್ಲಿ ಶಂಕರ್​ನಿದ್ದ ಸ್ಥಳವನ್ನು ತಲುಪಿದ. ಹಾದಿಯಲ್ಲಿ ಹೋಗುವಾಗಲೇ ಆಂಬುಲೆನ್ಸ್​ಗೆ ಕರೆಮಾಡಿ ಸ್ಥಳಕ್ಕೆ ಬರಲು ತಿಳಿಸಿದ. ಸೋಮೇಶ್ ಸ್ಥಳಕ್ಕೆ ಬರುವಷ್ಟರಲ್ಲಿ ಶಂಕರ್ ಮೂರ್ಚೆ ಹೋಗಿದ್ದ. ಅಷ್ಟರಲ್ಲಿ ಆಂಬುಲೆನ್ಸ್ ಅಲ್ಲಿಗೆ ಬಂದಿತು. ಅದರಲ್ಲಿ ಶಂಕರ್​ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ತುರ್ತು ಚಿಕಿತ್ಸಾ ಘಟಕದಲ್ಲಿ ಅವನನ್ನು ಪರೀಕ್ಷಿಸಿದಾಗ ಅವನ ದೇಹಕ್ಕೆ 70% ಸುಟ್ಟಗಾಯಗಳಾಗಿದ್ದು ತಿಳಿಯಿತು. ಮೆಡಿಕೋ ಲೀಗಲ್ ಕೇಸಾದ ಕಾರಣ ಪೊಲೀಸರಿಗೆ ಕರೆ ಹೋಯಿತು.

  ಪ್ರಜ್ಞಾವಸ್ಥೆಗೆ ಬಂದ ನಂತರ ಶಂಕರ್ ಪೊಲೀಸರ ಮುಂದೆ ನಡೆದದ್ದನ್ನು ಹೇಳಿದ. ಮೋಹನ್ ಮತ್ತವನ ಸಂಗಡಿಗರ ಮೇಲೆ ಅಪಹರಣ, ಮಾರಣಾಂತಿಕ ಹಲ್ಲೆ ಹಾಗೂ ಬೆಂಕಿಯಿಂದ ಕೊಲೆ ಮಾಡಲು ಯತ್ನಿಸಿದ ಪ್ರಕರಣ ದಾಖಲಾಯಿತು. ಅದೇ ಸಂಜೆ ಪರಾರಿಯಾಗಿದ್ದ ಮೋಹನ್​ನನ್ನು ಬಂಧಿಸಿದ ಪೊಲೀಸರು ಅವನ ಮಾಹಿತಿಯ ಮೇರೆಗೆ ಉಳಿದ ಆರೋಪಿಗಳನ್ನೂ ಬಂಧಿಸಿದರು. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಮರಣದೊಂದಿಗೆ ಸೆಣಸಿದ ಶಂಕರ್ ನಾಲ್ಕನೆಯ ದಿನ ಅಸುನೀಗಿದ. ಆಗ ದಾಖಲಾದ ಪ್ರಕರಣಕ್ಕೆ ಕೊಲೆಯ ಆರೋಪವನ್ನು ಸೇರಿಸಲಾಯಿತು. ತನಿಖೆ ಮುಗಿದ ನಂತರ ಎಲ್ಲ ಆರೋಪಿಗಳ ಮೇಲೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಪ್ರತಿಯೊಬ್ಬ ಅಪರಾಧಿಗೂ ಜೀವಾವಧಿ ಶಿಕ್ಷೆಯಾಯಿತು. ಇದನ್ನು ಕೇಳಿದ ರೂಪಾಳ ತಾಯಿ ಆತ್ಮಹತ್ಯೆ ಮಾಡಿಕೊಂಡಳು. ಅನಾಥೆಯಾದ ರೂಪಾಳನ್ನು ಶಂಕರ್​ನ ತಂದೆ-ತಾಯಿ ತಮ್ಮ ಮಗಳೆಂದು ಸ್ವೀಕರಿಸಿ ಪಾಲಿಸುತ್ತಿದ್ದಾರೆ. ರೂಪಾ-ಶಂಕರ್​ರ ಇಡೀ ಕುಟುಂಬಕ್ಕೆ ದುರಂತವಾದ ಪ್ರೇಮವನ್ನು ಅಮೆರಿಕದ ಹೆಸರಾಂತ ಗಾಯಕಿ ಸ್ವಿಫ್ಟ್ ಟೇಲರ್ ಹೀಗೆ ಬಣ್ಣಿಸುತ್ತಾಳೆ: ‘ಪ್ರೇಮವು ಅನಿರೀಕ್ಷಿತವಾದದ್ದಲ್ಲದೆ ಅದು ನಿರಾಶಾದಾಯಕವೂ ಹೌದು, ದುರಂತವೂ ಹೌದು, ಹಾಗೂ ಸುಂದರವೂ ಹೌದು’.

  (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

  ದಿನಕ್ಕೆರಡು ಬಾರಿ ಕಾಫಿ ಕುಡಿಯುವ ಅಭ್ಯಾಸ ಇದೆಯಾ?  ಲಿವರ್ ಕಾಯಿಲೆ ಬರುವುದಿಲ್ಲ: ಅಧ್ಯಯನ

  ಖರ್ಜೂರವು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತೆ; ಇದರ ಸೇವನೆಯಿಂದ ಹತ್ತು ಲವು ಲಾಭಗಳಿವೆ..!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts