ಶಿವಮೊಗ್ಗ: ಸಾಧಕ ಪುರುಷನ ಹಿಂದೆ ಕುಟುಂಬ ಇರುವಂತೆ ಒಬ್ಬ ಮಹಿಳಾ ವಕೀಲರ ಹಿಂದೆ ಇಡೀ ಸಮಾಜ ಇದ್ದಾಗ ಮಾತ್ರ ಆಕೆ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣುವುದಕ್ಕೆ ಸಾಧ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಒಕ್ಕೂಟ, ಶಿವಮೊಗ್ಗ ಜಿಲ್ಲಾ ಮಹಿಳಾ ನ್ಯಾಯಾವಾದಿಗಳ ಸಮಿತಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕುಟುಂಬ ಮತ್ತು ವೃತ್ತಿ ಬದುಕನ್ನು ಒಟ್ಟಾಗಿ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ಸಹಜವಾಗಿ ಮಹಿಳೆಯರ ಮೇಲಿದೆ. ಎರಡನ್ನೂ ಸಮನಾಗಿ ಸರಿದೂಗಿಸಿದ್ದೆ ಆದಲ್ಲಿ ಬದುಕಿನಲ್ಲಿ ಯಶಸ್ವಿಯಾಗುತ್ತಾಳೆ. ಕುಟುಂಬ ಮತ್ತು ವೃತ್ತಿಯನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ತುಂಬಾ ಕಷ್ಟ. ಯಾವುದಕ್ಕೆ ಮಹತ್ವ ಕೊಡಬೇಕು ಎಂಬುದನ್ನು ನಿರ್ಧಾರ ಮಾಡುವುದರ ಮೇಲೆ ಬದುಕು ರೂಪುಗೊಳ್ಳುತ್ತದೆ ಎಂದರು.
ಅಖಿಲ ಭಾರತ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಶೀಲಾ ಅನೀಶ್ ಮಾತನಾಡಿ, ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿದ್ದಾರೆ. ಆದರೆ ಅದೇ ಸಾಧನೆಯಲ್ಲ. ಆಯಾ ಕ್ಷೇತ್ರದಲ್ಲಿ ಮುಂದುವರಿದು ಯಶಸ್ಸಿನ ಮೆಟ್ಟಿಲೇರಬೇಕು. ಕುಟುಂಬದ ಬೆಂಬಲ ಇಂದಿನ ಜೀವನಕ್ಕೆ ಅತ್ಯಗತ್ಯವಾಗಿದೆ. ಇದರಿಂದ ದೇಶದಲ್ಲಿ ಮಹಿಳೆಯರು ಯಾವುದೇ ಆತಂಕವಿಲ್ಲದೆ ವೃತ್ತಿಯಲ್ಲಿ ಮುಂದುವರಿಸಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ಮಹಿಳಾ ನ್ಯಾಯಾವಾದಿಗಳ ಸಮ್ಮೇಳನ ಸಮಿತಿ ಅಧ್ಯಕ್ಷೆ ಸರೋಜ ಪಿ. ಚಂಗೊಳ್ಳಿ ಪ್ರಸ್ತಾವಿಕ ಮಾತನಾಡಿ, ಆರಂಭದಲ್ಲಿ 6 ಜಿಲ್ಲೆಗಳ ಸಮ್ಮೇಳನ ಮಾಡಲು ನಿರ್ಧರಿಸಲಾಗಿತ್ತು. ಅಂತಿಮವಾಗಿ 20 ಜಿಲ್ಲೆಗಳ ಸಮ್ಮೇಳನ ಇದಾಗಿದೆ ಎಂದರು.
ಬೆಂಗಳೂರು ಅಖಿಲ ಭಾರತ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮರುಳಾಸಿದ್ದರಾಧ್ಯ, ರಾಜ್ಯ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಸವರೆಡ್ಡಿ ಮದಿನೂರು, ಹಿರಿಯ ನ್ಯಾಯವಾದಿ ರಮಾ, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರಸ್ವಾಮಿ, ಸಮಿತಿ ಕಾರ್ಯದರ್ಶಿ ಎಚ್.ಎಂ.ರೇಣುಕಮ್ಮ ಉಪಸ್ಥಿತರಿದ್ದರು.
ವಾಸ್ತವತೆ, ಕಾನೂನು ತಿಳಿದರೆ ಅವಕಾಶ
ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಉಮಾ ಮಾತನಾಡಿ, ಮಹಿಳಾ ನ್ಯಾಯವಾದಿಗಳು ವಾಸ್ತವತೆ(ಫ್ಯಾಕ್ಟ್)ಮತ್ತು ಕಾನೂನು ತಿಳಿದುಬಂದರೆ ನ್ಯಾಯಾಧೀಶರ ಎದುರು ವಾದ ಮಾಡಲಿಕ್ಕೆ ಖಂಡಿತ ಅವಕಾಶ ಸಿಗಲಿದೆ. ಕಾನೂನನ್ನು ಪರಿಪೂರ್ಣವಾಗಿ ತಿಳಿಯದಿದ್ದರೂ ಪರವಾಗಿಲ್ಲ. ಆದರೆ ಫ್ಯಾಕ್ಟ್ ಇದ್ದರೆ ಯಾವ ನ್ಯಾಯಾಲಯದಲ್ಲಿ ಬೇಕಾದರೂ ಅವಕಾಶ ಸಿಗಲಿದೆ. ಮುಖ್ಯವಾಗಿ ಹಿಂಜರಿಕೆ, ನಾಚಿಕೆ ಬದಿಗಿಟ್ಟು ಕೆಲಸ ಮಾಡಬೇಕು. ಅಡೆ-ತಡೆ, ಕುಹುಕು ಮಾತುಗಳಿಗೆ ಕಿವಿಗೊಡಬಾರದು. ಧೈರ್ಯವಾಗಿ ಕೆಲಸ ಮಾಡುವತ್ತ ಗಮನ ಹರಿಸಬೇಕು ಎಂದರು.