More

    ಹಿತ್ತಲ ಗಿಡವೇ ಮದ್ದು; ಸಾಬೀತು ಮಾಡಿದ ಕಾಡಂಚಿನ ಗ್ರಾಮಗಳ ಮಹಿಳಾಮಣಿಗಳು

    ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಗ್ರಾಮಗಳ ಮಹಿಳಾಮಣಿಗಳು ಸುಳ್ಳು ಮಾಡಿದ್ದಾರೆ. ಇಲ್ಲಿರುವವರೆಗೆ ಅವರ ಮನೆಯ ಸುತ್ತಮುತ್ತಲು ಇರುವ ಸಸ್ಯಗಳೇ ಆರೋಗ್ಯ ವರ್ಧಿಸುವ ಹಾಗೂ ಅನಾರೋಗ್ಯ ಹೋಗಲಾಡಿಸುವ ಔಷಧಗಳು.

    ಭಾಗಶಃ ಅರಣ್ಯ ಪ್ರದೇಶಗಳಿಂದ ಕೂಡಿರುವ ಹನೂರು ತಾಲೂಕಿನಲ್ಲಿ ಸುಮಾರು 400 ಗ್ರಾಮಗಳಿವೆ. ಕಾಡಂಚಿನಲ್ಲಿ 82 ಗಿರಿಜನರ ಹಾಡಿಗಳಿವೆ. ಆರೋಗ್ಯದಲ್ಲಿ ಏರುಪೇರಾದಾಗ ಆಸ್ಪತ್ರೆಗೆ ದೌಡಾಯಿಸಿ ನೂರೆಂಟು ಪರೀಕ್ಷೆ, ಹತ್ತಾರು ಮಾತ್ರೆಗಳನ್ನು ಸೇವಿಸುವ ಇಂದಿನ ದಿನಗಳಲ್ಲಿ, ಇಲ್ಲಿಯ ಜನರು ಆರೋಗ್ಯ ರಕ್ಷಣೆಗಾಗಿ ಅಡುಗೆ ಮನೆಯಲ್ಲಿಯೇ ಔಷಧ ಕಂಡುಕೊಳ್ಳುತ್ತಿದ್ದಾರೆ.

    ಶೀತ, ಕೆಮ್ಮು, ಜ್ವರ, ಹೊಟ್ಟೆನೋವು, ದಡಾರ, ಭೇದಿ, ಅಲರ್ಜಿ, ಅಸ್ತಮಾ, ಕಾಮಾಲೆ, ಕೈ, ಕಾಲು ಮುರಿತ ಹಾಗೂ ಇನ್ನಿತರ ರೋಗ-ರುಜಿನಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ಈ ಭಾಗದ ಮಹಿಳೆಯರು ಮನೆಯ ಹಿತ್ತಲಿನಲ್ಲಿ ಬೆಳೆಸಿದ ಗಿಡಗಳಿಂದ ಔಷಧ ತಯಾರಿಸಿಕೊಳ್ಳುತ್ತಾರೆ. ಔಷಧ ತಯಾರಿಕೆಯಲ್ಲಿ ಮಹಿಳೆಯರೇ ಮುಂದು ಎನ್ನುವುದು ವಿಶೇಷ.

    ಯಾವ ಬಗೆಯ ಸಸ್ಯಗಳು ಯಾವೆಲ್ಲಾ ಕಾಯಿಲೆಗಳನ್ನು ವಾಸಿ ಮಾಡುತ್ತವೆ ಎಂಬ ಬಗ್ಗೆ ಇವರು ಚೆನ್ನಾಗಿ ಅರಿತಿದ್ದಾರೆ. ಆದರೆ ಇವರು ತಯಾರಿಸುವ ಔಷಧಗಳಿಗೆ ಯಾವ ಸಸ್ಯಗಳನ್ನು ಬಳಸಲಾಗಿದೆ, ಮದ್ದನ್ನು ಹೇಗೆ ಸಿದ್ಧ ಪಡಿಸಲಾಗಿದೆ ಎಂದು ಕೇಳಿದರೆ ಅವರು ಅದರ ಗುಟ್ಟುಬಿಟ್ಟುಕೊಡುವುದಿಲ್ಲ.

    ಇಂದಿನ ದಿನಗಳಲ್ಲಿ ಇಂಗ್ಲಿಷ್ ಔಷಧಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದರೂ, ಇಲ್ಲಿಯ ಮನೆ ಮದ್ದುಗಳು ಮಾತ್ರ ಈ ಪ್ರದೇಶದ ಗ್ರಾಮಸ್ಥರ ಸಂಜೀವಿನಿಯಾಗಿದೆ. ಸಸ್ಯಗಳ ಬಗ್ಗೆ ಆಳವಾದ ಜ್ಞಾನವುಳ್ಳ ಹಳೆಯ ತಲೆಮಾರಿನವರು ತಮ್ಮ ಮುಂದಿನ ಪೀಳಿಗೆಯವರಿಗೆ ಇವುಗಳ ಅರಿವು ಮೂಡಿಸಿರುವುದರಿಂದ ಇಂದಿಗೂ ಆ ಪರಂಪರೆ ಮುಂದುವರೆದುಕೊಂಡು ಬಂದಿರುವುದೇ ವಿಶೇಷ.

    ಉಚಿತ ಚಿಕಿತ್ಸೆ

    ಈ ಭಾಗದಲ್ಲಿ ಮನೆ ಮದ್ದಿನ ಚಿಕಿತ್ಸೆ ನೀಡುವ ಕೆಲವರು ಹಣ, ಧಾನ್ಯಗಳನ್ನು ಪಡೆದುಕೊಂಡರೆ, ಇನ್ನು ಕೆಲವರು ಏನನ್ನೂ ಬಯಸದೇ ಉಚಿತ ಚಿಕಿತ್ಸೆ ನೀಡುವುದರ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಈ ಚಿಕಿತ್ಸೆ ತಲೆಮಾರುಗಳಿಂದ ರೂಢಿಸಿಕೊಂಡು ಬಂದಿದ್ದು, ಇದುವರೆಗೂ ಯಾವುದೇ ಅಡ್ಡ ಪರಿಣಾಮ ಬೀರಿಲ್ಲ. ಹೀಗಾಗಿ ಇದರ ಮಹತ್ವವನ್ನು ಅರಿತವರು ಇಂದಿಗೂ ಆಸ್ಪತ್ರೆಗೆ ಹೋಗದೆ ಮನೆ ಮದ್ದಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ನಮ್ಮ ಮನೆಯಲ್ಲಿ ಮೂರು ತಲೆಮಾರುಗಳಿಂದ ನಾಟಿ ಔಷಧಿಯ ಮೂಲಕ ಬಹುತೇಕ ಎಲ್ಲ ಬಗೆಯ ರೋಗಗಳಿಗೆ ಚಿಕಿತ್ಸೆ ನೀಡುತ್ತ ಬರಲಾಗಿದೆ. ನಮ್ಮ ಹಿರಿಯರಿಂದ ಈ ಔಷಧ ಪದ್ಧತಿಯನ್ನು ನಾನೂ ಕಲಿತುಕೊಂಡಿದ್ದು, ಸುಮಾರು 20 ವರ್ಷಗಳಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದೇನೆ.

    | ಮಾದಮ್ಮ ನಾಟಿ ಔಷಧ ತಜ್ಞೆ, ಹನೂರು.

    | ಎಸ್.ಲಿಂಗರಾಜು ಮಂಗಲ ಹನೂರು  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts