ಯಶಸ್ಸಿಗೆ ಇಲ್ಲ ಅಂಕಗಳ ಹಂಗು

ಪರೀಕ್ಷೆಯಲ್ಲಿ ಗಳಿಸುವ ಅಂಕ ಮುಂದಿನ ತರಗತಿಗೆ ಹೋಗಲು ಮಾನದಂಡವೇ ಹೊರತು ಅದು ಭವಿಷ್ಯವನ್ನು ನಿರ್ಧರಿಸಲಾರದು. ದೊಡ್ಡ ಮಟ್ಟದ ಯಶಸ್ಸು ಗಳಿಸಿದವರ ಪೈಕಿ ಹಲವರು ಹೆಚ್ಚಿಗೆ ಅಂಕ ಪಡೆದೇ ಆ ಮಟ್ಟಕ್ಕೆ ಏರಿದವರಲ್ಲ. ಆದರೆ ಅವರ ಸಾಧನೆಯಿಂದ ಅನುಕರಣೀಯರಾಗಿದ್ದಾರೆ. ಕಡಿಮೆ ಅಂಕ ಪಡೆದರೂ ಬದುಕಿನಲ್ಲಿ ನೀವು ಯಶಸ್ವಿಯಾಗಿದ್ದರೆ ಅದರ ಬಗ್ಗೆ ಬರೆದು ಕಳಿಸಿ ಎಂದು ವಿಜಯವಾಣಿ ನೀಡಿದ ಕರೆಗೆ ನೂರಾರು ಮಂದಿ ಸ್ಪಂದಿಸಿದ್ದಾರೆ. ಆ ಪೈಕಿ ಆಯ್ದ ಕೆಲವರ ಯಶೋಗಾಥೆಗಳು ಇಲ್ಲಿವೆ.

‘ದಡ್ಡ ನೀನೇನು ಮಾಡುವೆ?’ ಎಂದಿದ್ದರಾಗ!

ಓದೋದು, ಬರಿಯೋದು ಎಂದರೆ ನನಗೆ ಅಷ್ಟಕಷ್ಟೇ. ನನ್ನ ಇಂಟರೆಸ್ಟ್ ಇದ್ದುದು ಚಿತ್ರ ಬಿಡಿಸೋದು, ಪೇಟಿಂಗ್ ಇತ್ಯಾದಿ ಕಲೆಗಳತ್ತ. ಅದಕ್ಕೇನೇ ಎಸ್​ಎಸ್​ಎಸ್​ಸಿಯಲ್ಲಿ ಫೇಲಾಗಿಬಿಟ್ಟೆ. ಮನೆಗೆ ಹೋದಾಗ ಅಪ್ಪ ಹೇಳಿದ್ದು ಒಂದೇ ಮಾತು, ‘ನಿನಗೆ ಓದು ತಲೆಗೆ ಹತ್ತುವುದಿಲ್ಲ. ಯಾವುದಾದರೂ ಗ್ಯಾರೇಜ್​ಗೆ ಸೇರಿಸ್ತೀವಿ, ಅಲ್ಲಿ ಕೆಲ್ಸ ಮಾಡು ಅಂತ’. ದಾರಿ ಕಾಣದೇ ‘ಹ್ಞೂಂ’ ಅಂದಿದ್ದೆ. ಆದರೆ ನನ್ನ ಅಣ್ಣ ನನ್ನಲ್ಲಿರುವ ಕಲೆ ಗುರುತಿಸಿದ್ದ. ಮರುವರ್ಷ ಕಷ್ಟಪಟ್ಟು ಓದಿ ಅಂತೂ ಎಸ್​ಎಸ್​ಎಲ್​ಸಿ ಪಾಸು ಮಾಡಿದ ತಕ್ಷಣ ಅಣ್ಣ ನನ್ನನ್ನು ಬಿಎಫ್​ಎಗೆ (ಬ್ಯಾಚಲರ್ ಆಫ್ ಫೈನ್ ಆರ್ಟ್ಸ್) ಸೇರಿಸಿದ.

ಇದರಲ್ಲಿ ಓದುವ ಹಾಗೂ ಬರೆಯುವ ಗೋಜು ಅಷ್ಟೊಂದು ಇರಲ್ಲ. ಇಲ್ಲಿ ನನ್ನಂಥವರಿಗೆ ಇಷ್ಟವಾಗುವ ಚಿತ್ರಕಲೆ, ಫೋಟೋಗ್ರಫಿ, ಸ್ಕ್ರೀನ್ ಪೇಂಟಿಂಗ್… ಇಂಥ ಅನೇಕ ವಿಭಾಗಗಳಿವೆ. ಕಡಿಮೆ ಅಂಕವಿದ್ದರೂ, ಹೆಚ್ಚಿನ ಶುಲ್ಕವೂ ಇಲ್ಲದೇ, ಉತ್ತಮ ಉದ್ಯೋಗಾವಕಾಶ ಕಲ್ಪಿಸುವ ಕೋರ್ಸ್ ಇದು. ಅಲ್ಲಿಂದ ನನ್ನ ಬದುಕಿನ ದಿಕ್ಕೇ ಬದಲಾಯಿತು. ನನ್ನಿಷ್ಟದ ವಿಷಯ ಸಿಕ್ಕಿತ್ತು. ಎರಡು ವರ್ಷಗಳ ‘ಅಪ್ಲೈಡ್ ಆರ್ಟ್ಸ್’ ಕೋರ್ಸ್ ಉತ್ತಮ ಅಂಕದೊಂದಿಗೆ ಮುಗಿಸಿದೆ. ಈಗ ಒಳ್ಳೆಯ ಉದ್ಯೋಗ ಹಿಡಿದು ನನ್ನ ಕುಟುಂಬದಲ್ಲಿಯೇ ಎಲ್ಲಕ್ಕಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದೇನೆ. ‘ನೀನು ಮಹಾ ದಡ್ಡ, ಕುಟುಂಬಕ್ಕೆ ಏನು ಮಾಡುವೆ?’ ಎಂದವರ ಮುಂದೆ ಉತ್ತಮ ಸಾಧನೆ ಮಾಡಿ ತಲೆ ಎತ್ತಿ ನಿಂತಿದ್ದೇನೆ. ಎಲ್ಲ ನನ್ನ ಅಣ್ಣನ ಕೃಪೆ.

| ವಿಶ್ವ ಪಾಟೀಲ್, ಬೆಂಗಳೂರು

ಕವಿಯಾಗಿ ಗುರುತಿಸಿಕೊಂಡಿರುವೆ

ನಾನು ಎಸ್​ಎಸ್​ಎಲ್​ಸಿ ಫೇಲಾದ ವಿದ್ಯಾರ್ಥಿ. ಹಾಗೆಂದು ಎಂದಿಗೂ ಎದೆಗುಂದಿರಲಿಲ್ಲ. ಬಾಲ್ಯದಿಂದಲೇ ನನ್ನನ್ನು ಸಾಹಿತ್ಯ ಲೋಕ ಆವರಿಸಿತ್ತು. ಅದನ್ನೇ ನನ್ನ ಭವಿಷ್ಯವಾಗಿಸಿಕೊಂಡೆ. ಈವರೆಗೆ ಬರೆದಿರುವ ಕಥೆಗಳಿಗೆ ಲೆಕ್ಕವಿಲ್ಲ, ಪ್ರಕಟಗೊಂಡಿರುವ ಲೇಖನಗಳು ಸಾವಿರಕ್ಕೂ ಅಧಿಕ. ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಕವನ ಬರೆಯುತ್ತ 365 ದಿನಗಳಲ್ಲಿ 365 ಕವನಗಳನ್ನು ಬರೆಯುವ ವಿನೂತನ ಪ್ರಯತ್ನವನ್ನೂ ಮಾಡಿದ್ದೇನೆ. ಪ್ರತಿಯೊಂದು ಕವನವೂ ಸಾವಿರಾರು ಮಂದಿಯಿಂದ ಮೆಚ್ಚುಗೆ ಪಡೆದಿವೆ. ‘ಸೂರ್ಯನಿಗೆ ಬೇಕಂತೆ ಕಂದೀಲು’ ಎಂಬ ಕವನ ಸಂಕಲನ ನನಗೆ ಸಾಕಷ್ಟು ಪ್ರಸಿದ್ಧಿಯನ್ನೂ ತಂದುಕೊಟ್ಟಿದೆ. ಶಾಲೆಯ ಪಠ್ಯದಲ್ಲಿ ಹಿಂದಿದ್ದರೇನಂತೆ? ಈಗ ಕವಿಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದೇನೆ. 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕರೆದು ಸನ್ಮಾನಿಸಿವೆ. ಇದಕ್ಕಿಂತ ಹೆಚ್ಚು ಗೌರವ ಬೇಕೆ?

| ಪಲುಗುಲ ನಾಗರಾಜ, ರಾಯಚೂರು

ಹವ್ಯಾಸಕ್ಕೆ ನಾಂದಿ ಹಾಡಿದ ನಪಾಸು

ಮನೆಯಲ್ಲಿ ಚಿಕ್ಕವಯಸ್ಸಿನಿಂದಲೇ ಓದು, ಬರಹಕ್ಕೆ ನನ್ನನ್ನು ಪಕ್ಕಾ ಮಾಡಿದ ಸೋದರತ್ತೆ, ನಾಲ್ಕು ವರ್ಷದವಳಿದ್ದಾಗಲೇ ಅಪ್ಪನಿಗೆ ಒತ್ತಾಯಿಸಿ ಸುಳ್ಳು ಜಾತಕ ಬರೆಸಿ ಒಂದನೇ ತರಗತಿಗೆ ಸೇರಿಸುವಲ್ಲಿ ಯಶಸ್ವಿಯಾಗಿಬಿಟ್ಟರು. ಅವರ ಮಾರ್ಗದರ್ಶನದಲ್ಲಿ ಎಲ್ಲಿಯೂ ಅಡೆ ತಡೆಯಾಗದಂತೆ ಎಲ್ಲ ತರಗತಿಗಳಲ್ಲೂ ಪಾಸಾಗಿ, ಸಲೀಸಾಗಿ ಮುಂದಿನ ತರಗತಿಗೆ ಅರ್ಹಳಾಗುತ್ತಾ ಹೋದೆ. ಹತ್ತನೆಯ ತರಗತಿಯಲ್ಲಿ 67% ತೆಗೆದೆ. ನನ್ನ ಮಗಳು ನನ್ನ ಹೆಮ್ಮೆ ಎಂದು ಅಪ್ಪ ಹೊಗಳಿದ್ದೇ ಹೊಗಳಿದ್ದು. ನನ್ನನ್ನು ಡಾಕ್ಟರ್ ಮಾಡಿಸಬೇಕೆಂದು ಅಪ್ಪ ವಿಜ್ಞಾನದ ವಿಷಯ ಕೊಡಿಸಿದರು. ದ್ವಿತೀಯ ಪಿಯುಸಿಯಲ್ಲೂ ಫಸ್ಟ್ ಕ್ಲಾಸ್. ಅಹಂ ಇನ್ನೂ ಹೆಚ್ಚಿತು. ಬಿಎಸ್ಸಿಯಲ್ಲಿ ಪಿ.ಸಿ.ಎಂ ವಿಷಯ ತೆಗೆದುಕೊಂಡೆ. ಅತಿಯಾಗಿದ್ದ ಆತ್ಮವಿಶ್ವಾಸದ ಫಲವೋ ಗೊತ್ತಿಲ್ಲ, ಫಿಜಿಕ್ಸ್​ನಲ್ಲಿ ಫೇಲಾಗಿಬಿಟ್ಟೆ. ಜೀವಮಾನದಲ್ಲೇ ಫೇಲ್ ಹೆಸರು ಕೇಳದ ನನಗೆ, ಅಹಂಕಾರಕ್ಕೆ ಸಹಜವಾಗಿ ಬಲವಾಗಿಯೇ ಪೆಟ್ಟು ಬಿತ್ತು. ಖಿನ್ನತೆಯಿಂದ ಕುಗ್ಗಿಹೋದವಳನ್ನು ನನಗೆ ಅಪ್ಪ ‘ಜಗತ್ತು ಮುಳುಗಿ ಹೋಗುವುದಿಲ್ಲ, ಮತ್ತೆ ಕಟ್ಟಿ ಪಾಸು ಮಾಡಿಕೋ’ ಎಂದು ಧೈರ್ಯ ತುಂಬಿದರು. ಇಂಗ್ಲಿಷ್, ಕನ್ನಡ ಟೈಪಿಂಗ್​ಗೆ ಸೇರಿಸಿದರು. ಫೇಲಾದ ಕಾರಣ, ಚಿತ್ರದುರ್ಗದಲ್ಲಿನ ಕೃಷ್ಣರಾಜೇಂದ್ರ ಲೈಬ್ರರಿಗೆ ಮೆಂಬರ್ ಆಗಿ ಪುಸ್ತಕ ಓದುವ ಗೀಳು ಹತ್ತಿಸಿಕೊಂಡೆ.

ನಂತರ ಪದವಿಯನ್ನೂ ಫಸ್ಟ್ ಕ್ಲಾಸಿನಲ್ಲೇ ಪಾಸು ಮಾಡಿದೆ. ಆದರೆ ನನ್ನ ಕೈಹಿಡಿದದ್ದು ಸಾಹಿತ್ಯದ ಹುಚ್ಚು. ಲೈಬ್ರರಿಯ ಒಡನಾಟವಾದ್ದರಿಂದ ಸಾಹಿತ್ಯ ದಿಗ್ಗಜರ ಪುಸ್ತಕಗಳನ್ನು ಓದುವ ಭಾಗ್ಯ ಸಿಕ್ಕಿತು. ಅದರಿಂದಲೇ ಇಂದು ಬರವಣಿಗೆಯಲ್ಲಿ ಆಸಕ್ತಿ ಮೂಡಿದೆ. ಇದರಿಂದ ಹೆಸರನ್ನೂ ಸಂಪಾದಿಸಿದ್ದೇನೆ. ಒಳ್ಳೆಯ ಸ್ನೇಹವಲಯವನ್ನೂ ಸಂಪಾದಿಸಿಕೊಂಡಿದ್ದೇನೆ.

| ನಳಿನಿ. ಟಿ. ಭೀಮಪ್ಪ, ಧಾರವಾಡ

ದುಡಿಯುತ್ತಲೇ ಕಲಿತೆ, ಯಶಸ್ವಿಯೂ ಆದೆ

ಗಣಿತ ಎಂದರೆ ನನಗೆ ಕಬ್ಬಿಣದ ಕಡಲೆ! ಎಸ್​ಎಸ್​ಎಲ್​ಸಿಯಲ್ಲಿ ಮರು ಪರೀಕ್ಷೆ ಬರೆದರೂ ಗಣಿತದಲ್ಲಿ ಫೇಲ್ ಆದೆ. ನಾನು ಪಾಸ್ ಆಗೋದಿಲ್ಲ ಎಂದು ನನ್ನ ಪಾಲಕರು ಗೂಡಂಗಡಿಗೆ, ದಿನಕ್ಕೆ 15 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿಸಿದರು. ನಂಗೆ ನನ್ನ ಬಗ್ಗೆ ತುಂಬಾ ಕೀಳರಿಮೆ ಉಂಟಾಯಿತು. ಸ್ನೇಹಿತರು ಕಾಲೇಜ್​ಗೆ ಹೋಗುವುದು ನೋಡಿದಾಗ ಹೊಟ್ಟೆ ಚುರ್ ಎನ್ನುತ್ತಿತ್ತು. ಅಂಗಡಿಯಲ್ಲಿ ಕೆಲಸ ಮಾಡಿ ಹಣ ಕೂಡಿಟ್ಟು ಓದಿ ಮೂರನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಆದೆ. ಕಾಲೇಜ್​ಗೂ ಸೇರಿದೆ. ಅತ್ಯಂತ ಶ್ರದ್ಧೆಯಿಂದ ಓದಿ ಪ್ರಥಮ ದರ್ಜೆಯಲ್ಲಿ ಪಿಯುಸಿ ತೇರ್ಗಡೆಯಾದೆ. ರಜೆಯಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡಿ ಅದರ ಹಣದಿಂದ ಡಿಗ್ರಿಯನ್ನೂ ಮುಗಿಸಿದೆ. ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿ ನನ್ನ ವ್ಯಕ್ತಿತ್ವವನ್ನು ಬೆಳೆಸಿ ಒಬ್ಬ ಉತ್ತಮ ವಿದ್ಯಾರ್ಥಿಯಾಗಿ , ತರಗತಿ ನಾಯಕನಾಗಿ, ಡಿಗ್ರಿಯನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿದೆ. ರಜೆಯಲ್ಲಿ ಮತ್ತೆ ಮೇಸ್ತ್ರಿಗೆ ಹೆಲ್ಪರ್ ಆಗಿ ಸೇರಿ ಹಣ ಸಂಪಾದಿಸಿ ಸ್ನಾತಕೋತ್ತರ ಪದವಿ ಸೇರಿ ಮನೋರೋಗ ಮತ್ತು ವೈದ್ಯಕೀಯ ವಿಷಯದಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದೆ. ಕಾಲೇಜ್​ಗೆ ಅಧ್ಯಕ್ಷನೂ ಆದೆ. ಕಳೆದ ಆರು ವರ್ಷಗಳಿಂದ ಉಡುಪಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮನೋರೋಗ ವಿಭಾಗದಲ್ಲಿ ಆಪ್ತ ಸಮಾಲೋಚಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜತೆಗೆ, ಬೇರೆ ಬೇರೆ ಶಾಲಾ ಕಾಲೇಜು, ಸಮುದಾಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದೇನೆ. ಸೋಲೇ ಗೆಲುವಿನ ಮೆಟ್ಟಿಲು ಎಂದುಕೊಂಡು ಪ್ರಯತ್ನ ಪಟ್ಟರೆ ಗುರಿ ಮುಟ್ಟಲು ಸಾಧ್ಯ ಎನ್ನುವುದಕ್ಕೆ ನಾನೇ ಉದಾಹರಣೆ.

| ಲೋಹಿತ್ ಕೆ ., ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

ವಿಜ್ಞಾನದಲ್ಲಿ ಸೋತೆ, ಜೀವನದಲ್ಲಿ ಗೆದ್ದೆ!

ವಿಜ್ಞಾನ ತೆಗೆದುಕೊಂಡರೆ ಮಾತ್ರ ಒಳ್ಳೆಯ ಉದ್ಯೋಗ ಮಾಡಬಹುದು ಎಂಬ ಯೋಚನೆಯಿಂದ ಚೆನ್ನಾಗಿಯೇ ಓದಿದ್ದೆ. ಆದರೆ ಶೇ. 68 ಅಂಕ ಬಂದು ಕನಸಿನ ಗೋಪುರ ಕಳಚಿತ್ತು. ತಂದೆ-ತಾಯಿಯ ನಿರೀಕ್ಷೆ ಹುಸಿ ಮಾಡಿದ್ದಕ್ಕೆ, ಊರ ಜನರಿಗೆ ಮುಖ ತೋರಿಸಲಾಗದೆ ಸ್ನೇಹಿತರ ರೂಮಿನಲ್ಲಿ ಉಳಿದುಕೊಂಡುಬಿಟ್ಟಿದ್ದೆ. ನಂತರ ಭಯದಿಂದ ಮನೆಗೆ ಹೋದಾಗ ನನ್ನಪ್ಪ ಅಮ್ಮ ‘ಚಿಂತೆ ಮಾಡಬೇಡ, ಅನೇಕ ಅವಕಾಶಗಳಿವೆ. ಪ್ರಯತ್ನ ನಿಲ್ಲಿಸಬೇಡ’ ಎಂದರು. ಈ ಮಾತು ಆತ್ಮವಿಶ್ವಾಸ ತಂದುಕೊಟ್ಟಿತು. ಕಲಾ ವಿಭಾಗ ಸೇರಿದೆ. ಪಿಯುಸಿ ಹಾಗೂ ಟಿಸಿಎಚ್ ಮುಗಿಸಿದೆ. ಅದೃಷ್ಟ ಕೈಕೊಟ್ಟಿತ್ತು. ಸಿಇಟಿಯಲ್ಲಿ ವಿಫಲನಾದೆ. ನಂತರ ಪೊಲೀಸ್, ಎಸ್​ಡಿಎ ಮತ್ತು ಎಫ್​ಡಿಎ ಪರೀಕ್ಷೆ ಬರೆದರೂ ಸೋತೆ. ಸರ್ಕಾರಿ ಹುದ್ದೆಯ ಕನಸು ನುಚ್ಚು ನೂರಾದಂತೆ ಭಾಸವಾಯಿತು. ಪುನಃ ಪೊಲೀಸ್ ಕಾನ್​ಸ್ಟೆಬಲ್ ಪರೀಕ್ಷೆ ಬರೆದೆ. ಇನ್ನೊಂದೆಡೆ ಸಿಇಟಿಯನ್ನೂ ಬರೆದೆ. ಅದೇನಾಶ್ಚರ್ಯ! ಸಿಇಟಿಯಲ್ಲಿ ಹಾವೇರಿ ಜಿಲ್ಲೆಗೆ ಫಸ್ಟ್ ಬಂದು ಶಿಕ್ಷಕ ಹುದ್ದೆ ಗಿಟ್ಟಿಸಿಕೊಂಡರೆ, ಅತ್ತ ಕಾನ್​ಸ್ಟೆಬಲ್ ಪರೀಕ್ಷೆಯಲ್ಲೂ ತೇರ್ಗಡೆಯಾದೆ. ‘ಅಚ್ಚರಿ ತಂದ ವಿಷಯ ಎಂದರೆ, ಎಸ್​ಎಸ್​ಎಲ್​ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದ ನನ್ನ ಕ್ಲಾಸ್​ವೆುೕಟ್​ಗಳೆಲ್ಲಾ ಇನ್ನೂ ಮಾರ್ಕ್ಸ್​ಕಾರ್ಡ್ ಹಿಡಿದು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾಗಲೇ ನಾನು ಶಿಕ್ಷಕನಾಗಿಬಿಟ್ಟಿದ್ದೆ. ಕಡಿಮೆ ಅಂಕಗಳು ನನ್ನ ಬದುಕಿನ ಪಥವನ್ನೇ ಬದಲಿಸಿದ್ದವು.

| ಮಲ್ಲಪ್ಪ ಫ. ಕರೆಣ್ಣನವರ, ಹನುಮಾಪುರ, ಹಾವೇರಿ

ಸಾಹಿತ್ಯದ ಗೀಳು ಹಚ್ಚಿಸಿದ ಫೇಲ್

ನಾನು ಎಸ್​ಎಸ್​ಎಲ್​ಸಿಯಲ್ಲಿ ಜಸ್ಟ್ ಪಾಸ್. ಬಿ.ಎಯಲ್ಲಿ ಕಂಪ್ಯೂಟರ್ ಮತ್ತು ಇಂಗ್ಲಿಷ್​ನಲ್ಲಿ ಫೇಲ್. ಅಂತೂ ನಾಲ್ಕು ಬಾರಿ ಪರೀಕ್ಷೆ ಬರೆದು ಇಂಗ್ಲಿಷ್ ಪಾಸ್ ಆಗಿ ಡಿಗ್ರಿ ಮುಗಿಸಿದೆ. ನನ್ನಿಷ್ಟದ ಕನ್ನಡ ಸಾಹಿತ್ಯದಲ್ಲಿಯೇ ಎಂ. ಎ ಪದವಿ, ರಂಗಮಾಧ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದೆ. ಶಿಕ್ಷಕಿಯಾಗುವ ಆಸೆಯೂ ಕೈಗೂಡಲಿಲ್ಲ. ‘ಬಯಲು’ ಎಂಬ ಅಂತರ್ಜಾಲದ ಪತ್ರಿಕೆಯೊಂದರ ಸಂಯೋಜಕಿಯಾಗಿ ಬಹಳಷ್ಟು ಕಲಿತೆ. ನ್ಯೂಸ್ ಚಾನೆಲ್ ಒಂದರಲ್ಲಿ ಯೂಟ್ಯೂಬ್​ಗೆ ವಿಡಿಯೋಗಳನ್ನು ಹಾಕುವ ಕೆಲಸ ಮಾಡಿದೆ. ಫೋಟೋಷಾಪ್ ಕಲಿತೆ. ಹಲವು ಬಾರಿ ಫೇಲಾದರೂ ಸಾಧನೆ ಮಾಡಲು ನೂರಾರು ಮಾರ್ಗಗಳಿವೆ ಎನ್ನುವುದಕ್ಕೆ ನಾನೇ ಉದಾಹರಣೆ. ಒಂದು ಪುಸ್ತಕವನ್ನೂ ಬಿಡುಗಡೆ ಮಾಡಿದ್ದೇನೆ. ಕಥೆಗಳನ್ನು ಬರೆದು ಅವುಗಳಿಗೆ ನಾನೇ ರಂಗರೂಪ ಕೊಡುತ್ತಿದ್ದೇನೆ. ಹೆಚ್ಚು ಅಂಕ ಬಂದಿದ್ದರೆ ನಮ್ಮ ಮನೆಯಲ್ಲಿ ಎಲ್ಲರಂತೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆಗ ಬೇರೆ ಬೇರೆ ವಿದ್ಯೆಗಳನ್ನ ಕಲಿಯೋಕೆ ಆಗ್ತಾ ಇರಲಿಲ್ಲ. ಕಮ್ಮಿ ಅಂಕ ಬಂದಿದ್ರಿಂದಲೇ ಇಷ್ಟೆಲ್ಲಾ ಕಲಿತೆ ಎನ್ನೋ ಹೆಮ್ಮೆ ನಂಗಿದೆ.

| ಮೈಥಿಲಿ ಆರ್., ಬೆಂಗಳೂರು

Leave a Reply

Your email address will not be published. Required fields are marked *