ಬೇಲೂರು: ಗುರುವಿಗೆ ಗೌರವ ಕೊಟ್ಟು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಯಾರು ನಡೆಯುತ್ತಾರೊ ಅಂತಹವರು ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ನೇರಲಕಟ್ಟೆ ಪ್ರೌಢಶಾಲೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸಂಕಲ್ಪ ಅಭಿಪ್ರಾಯಪಟ್ಟರು.
ತಾಲೂಕಿನ ನೇರಲಕಟ್ಟೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಹಳೇ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಗುರುಗಳ ಪಾತ್ರ ಹಿರಿದು. ಹಾಗಾಗಿ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರನಿಗೆ ಹೋಲಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಬೇಕು. ಜತೆಗೆ ನೀವು ದೊಡ್ಡ ವ್ಯಕ್ತಿಗಳಾಗಿ ಉನ್ನತ ಹುದ್ದೆಗಳಲ್ಲಿ ರಾರಾಜಿಸಲು ಶಿಕ್ಷಕರು ಕಾರಣ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇಲೂರು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ತಮ್ಮಣ್ಣಗೌಡ ಮಾತನಾಡಿ, ಈ ಶಾಲೆಯ ಹಳೇ ವಿದ್ಯಾರ್ಥಿಗಳು 35 ಶಿಕ್ಷಕರನ್ನು ಆಹ್ವಾನಿಸಿ, ಗೌರವ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಜತೆಗೆ ಬಹುತೇಕ ಮರೆತೇ ಹೋಗಿದ್ದ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳ ಮುಖವನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳು ವೇದಿಕೆಯಾಗಲಿವೆ ಎಂದರು.
ಕುವೆಂಪು, ಡಾ.ಅಂಬೇಡ್ಕರ್, ಗಾಂಧಿ, ಬೀಚಿ, ಅರಿಸ್ಟಾಟಲ್, ಸಾಕ್ರಟೀಸ್, ಕನ್‌ಫ್ಯೂಷಿಯಸ್ ಹೀಗೆ ಸಾಮಾನ್ಯ ವ್ಯಕ್ತಿಗಳನ್ನು ಮಹಾನ್ ವ್ಯಕ್ತಿಗಳನ್ನಾಗಿ ರೂಪಿಸಿದ್ದು ಶಿಕ್ಷಣ ನೀಡಿದ ಗುರುಗಳು ಎಂದರು.
ಕಾರ್ಯಕ್ರಮದಲ್ಲಿ ನೇರಲಕಟ್ಟೆ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಾಗೂ ವರ್ಗಾವಣೆಗೊಂಡ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗೌರವಿಸಲಾಯಿತು. ಹಳೇ ವಿದ್ಯಾರ್ಥಿಗಳ ಸಂಘದ ಭರತ್, ಶ್ರೀಧರ್, ಶಮಿತ್, ದುರ್ಗ ಪ್ರಸಾದ್, ನಾಗರಾಜ್, ಪ್ರಕಾಶ್, ಸುನೀಲ್, ಸಂದೀಪ್ ಇತರರಿದ್ದರು.