More

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ : ಪ್ರೋತ್ಸಾಹಧನ ಅದಲು ಬದಲು

    ಧಾರವಾಡ : ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಪ್ರತಿಯೊಬ್ಬ ರೈತರಿಗೂ ಅನುಕೂಲವಾಗುತ್ತಿದೆ. ಆದರೆ, ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿಯ ಅಚಾತುರ್ಯದಿಂದ ಪ್ರೋತ್ಸಾಹಧನ ಅದಲು ಬದಲಾಗಿ ರೈತರು ಕಚೇರಿಗಳಿಗೆ ಅಲೆದಾಡುವಂತಾಗಿದೆ.

    ತಾಲೂಕಿನ ಲಕಮಾಪುರ ಗ್ರಾಮದ ರೈತ ಸಂಕಪ್ಪ ಹುಬ್ಬಳ್ಳಿ ಅವರು ತಾಲೂಕಿನ ಮರೇವಾಡ ಗ್ರಾಮ ವ್ಯಾಪ್ತಿಯಲ್ಲಿ 3 ಎಕರೆ ಜಮೀನು ಹೊಂದಿದ್ದಾರೆ. 2019ರ ಜೂನ್​ನಲ್ಲಿ ಪಿಎಂ ಕಿಸಾನ್ ಯೋಜನೆಗೆ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿದ್ದರು. ಆಗ ತನ್ನ ಜಮೀನಿನ ಪಹಣಿ ಪತ್ರ, ಯಾದವಾಡ ಗ್ರಾಮದ ಸಿಂಡಿಕೇಟ್ ಬ್ಯಾಂಕ್​ನ ಪಾಸ್​ಬುಕ್, ಆಧಾರ್ ಕಾರ್ಡ್ ನೀಡಿದ್ದರು. ಇಲಾಖೆಯ ಅಂಕಿ-ಅಂಶದಲ್ಲಿ ಅವರಿಗೆ ತಲಾ 2,000 ರೂ.ಗಳ 2 ಕಂತು ಜಮೆಯಾಗಿದೆ. ಆದರೆ, ಬ್ಯಾಂಕ್ ಖಾತೆ ಪರಿಶೀಲಿಸಿದರೆ ಹಣ ಜಮೆಯೇ ಆಗಿಲ್ಲ.

    ರೈತ ಸಂಕಪ್ಪ ತನ್ನದೇ ಪಾಸ್​ಬುಕ್ ನೀಡಿದ್ದರೂ ರೈತರ ವಿವರ ದಾಖಲಿಸುವಾಗ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ ಸಂಕಪ್ಪನ ಬ್ಯಾಂಕ್ ಖಾತೆಗೆ ಜಮೆಯಾಗುವ 4,000 ರೂ. ತಾಲೂಕಿನ ನರೇಂದ್ರ ಗ್ರಾಮದ ರೈತರೊಬ್ಬರ ಬ್ಯಾಂಕ್ ಖಾತೆಗೆ ಹೋಗಿದೆ. ಈ ಬಗ್ಗೆ ವಿಚಾರಿಸಲು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಯನ್ನು ಭೇಟಿಯಾಗಿ ಎಂದು ಹೇಳಿ ಕಳುಹಿಸಿದ್ದಾರೆ. ತಾಂತ್ರಿಕ ಸಿಬ್ಬಂದಿಯನ್ನು ಕೇಳಿದಾಗ, ಎಲ್ಲ ಬ್ಯಾಂಕ್ ಖಾತೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಂದಿದ್ದರು. ತನ್ನ ಎಲ್ಲ ಖಾತೆಗಳನ್ನು ನೋಡಿದರೂ ಹಣ ಮಾತ್ರ ಜಮೆಯಾಗಿಲ್ಲ. ನೊಂದ ರೈತ ಸಂಕಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಡಿ. 13ರಂದು ಮನವಿ ಸಲ್ಲಿಸಿ, ಎಲ್ಲ ದಾಖಲೆಗಳನ್ನು ಮತ್ತೊಮ್ಮೆ ನೀಡಿದ್ದಾರೆ. ಆದರೆ ಈವರೆಗೂ ಆತನ ಖಾತೆಗೆ ಹಣ ಜಮೆಯಾಗಿಲ್ಲ.

    ದಾಖಲೆಗಳಲ್ಲಿ ಜು. 6 ಹಾಗೂ ಅ. 3ರಂದು ತಲಾ 2,000 ರೂ. ಜಮೆಯಾಗಿದೆ ಎಂದು ತೋರಿಸುತ್ತಿದೆ. ಆದರೆ, ಹಣ ನನ್ನ ಖಾತೆಗೆ ಬಾರದೆ ನರೇಂದ್ರ ಗ್ರಾಮದ ವ್ಯಕ್ತಿಯೊಬ್ಬರ ಖಾತೆಗೆ ಹೋಗಿದೆ. ಮುಂಬರುವ 3 ಕಂತುಗಳೂ ಇದೇ ರೀತಿಯಾಗುವ ಸಾಧ್ಯತೆ ಇದೆ. ಪ್ರೋತ್ಸಾಹಧನಕ್ಕಾಗಿ ಕೆಲಸ ಬಿಟ್ಟು ಸರ್ಕಾರಿ ಕಚೇರಿಗಳಿಗೆ ಮೇಲಿಂದ ಮೇಲೆ ಅಲೆದಾಡಬೇಕಾಗಿದೆ. | ಸಂಕಪ್ಪ ಹುಬ್ಬಳ್ಳಿ, ಲಕಮಾಪುರ ಗ್ರಾಮದ ರೈತ

    ತಾಂತ್ರಿಕ ದೋಷದಿಂದ ರೈತನ ಖಾತೆಯ ಹಣ ಅದಲು ಬದಲಾಗಿರುವ ಸಾಧ್ಯತೆ ಇದೆ. ಅದನ್ನು ಸರಿಪಡಿಸುವಂತೆ ರೈತ ಸಂಕಪ್ಪ ಹುಬ್ಬಳ್ಳಿ ಮನವಿಪತ್ರ ನೀಡಿದ್ದಾರೆ. ತಾಂತ್ರಿಕ ಸಿಬ್ಬಂದಿ ಅವರ ವಿವರವನ್ನು ಮತ್ತೊಮ್ಮೆ ಅಪ್​ಲೋಡ್ ಮಾಡಿದ್ದಾರೆ. ಶೀಘ್ರವೇ ಹಣ ಜಮೆ ಆಗಲಿದೆ. | ರಾಜಶೇಖರ ಬಿಜಾಪುರ, ಕೃಷಿ ಇಲಾಖೆ ಜಂಟಿ ನಿರ್ದೇಶಕ


    ಮಂಜುನಾಥ ಅಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts