ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಕೊಪ್ಪರಿಗೆ ಏರುವುದರ ಮೂಲಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಆರಂಭವಾಯಿತು. ಮುಂಜಾನೆ 8.10ರ ಧನುರ್ ಲಗ್ನ ಮುಹೂರ್ತದಲ್ಲಿ ಕೊಪ್ಪರಿಗೆ ಏರಿಸಲಾಯಿತು. ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ವಿವಿಧ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಆರಂಭದಲ್ಲಿ ಪ್ರಧಾನ ಅರ್ಚಕರು ರಾಮ ಲಕ್ಷ್ಮಣ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಗಳ ಮೇಲೆ ಅನ್ನದಾನದ ಸಂಕೇತವಾದ ಕೊಪ್ಪರಿಗೆಗಳನ್ನು ಏರಿಸಲಾಯಿತು. ಕೊಪ್ಪರಿಗೆಗಳಲ್ಲಿ ಅನ್ನ ಬೆಂದ ಬಳಿಕ ಪೂಜೆ ಸಲ್ಲಿಸಲಾಯಿತು. ಶನಿವಾರದಿಂದ ವಿಶೇಷ ಕೊಪ್ಪರಿಗೆ ಅನ್ನದ ಪ್ರಸಾದ ಬೋಜನ ಭಕ್ತರಿಗೆ ವಿತರಣೆಯಾಗಲಿದೆ. ಕ್ಷೇತ್ರದಲ್ಲಿ ಶನಿವಾರ ಸಹಸ್ರಾರು ಭಕ್ತರು ಕೊಪ್ಪರಿಗೆ ಅನ್ನ ಪ್ರಸಾದ ಸ್ವೀಕರಿಸಿದರು. ಕೊಪ್ಪರಿಗೆ ಏರಿದ ನಂತರ ಇಳಿಯುವ ತನಕ ಭಕ್ತರು ಕೊಪ್ಪರಿಗೆಗೆ ಅಕ್ಕಿ ಸಮರ್ಪಣೆ ಮಾಡಲಿದ್ದಾರೆ.
ಸರ್ಪ ಸಂಸ್ಕಾರ ಇಲ್ಲ: ಚಂಪಾ ಷಷ್ಠಿ ಜಾತ್ರೆ ಪ್ರಯುಕ್ತ ಶನಿವಾರದಿಂದ ಡಿ.26ರಂದು ಕೊಪ್ಪರಿಗೆ ಇಳಿಯುವವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಇಲ್ಲ. 27ರ ಬಳಿಕ ಈ ಸೇವೆ ಆರಂಭವಾಗಲಿದೆ. ಇತರ ಸೇವೆಗಳು ಎಂದಿನಂತೆ ನಡೆಯಲಿವೆ. ಚಂಪಾ ಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠಾಪನೆ ಸೇವೆಗಳೂ ನಡೆಯುವುದಿಲ್ಲ. ಲಕ್ಷದೀಪ ಅಮಾವಾಸ್ಯೆಯಂದು ಹಾಗೂ ಮಾರ್ಗಶಿರ ಶುದ್ಧ ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಹಾಭಿಷೇಕ ಸೇವೆ ಇರುವುದಿಲ್ಲ. ಈ ದಿನಗಳಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನೆರವೇರುವುದಿಲ್ಲ. ಪಂಚಮಿ ದಿನ ಮಧ್ಯಾಹ್ನ ಮತ್ತು ರಾತ್ರಿ ಪ್ರಾರ್ಥನೆ ಇಲ್ಲ. ಷಷ್ಠಿ ದಿನ ಮಧ್ಯಾಹ್ನ ಪ್ರಾರ್ಥನೆ ಇಲ್ಲ, ರಾತ್ರಿ ಪ್ರಾರ್ಥನೆ ಇದೆ.
ಮಹಾರಥೋತ್ಸವ ಸೇವೆಗೆ ಅವಕಾಶ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.20ರಂದು ವಾರ್ಷಿಕ ಚಂಪಾ ಷಷ್ಠಿ ಮಹಾರಥೋತ್ಸವ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಮಾಸ್ಕ್ ಧರಿಸಿ ಪಾಲ್ಗೊಳ್ಳಬೇಕು. ಒಂದು ಸೇವೆಗೆ ಇಬ್ಬರಿಗೆ ಮಾತ್ರ ಬ್ರಹ್ಮರಥ ಎಳೆಯುವ ಪಾಸ್ ನೀಡಲಾಗುವುದು. 60 ವರ್ಷ ಮೇಲ್ಪಟ್ಟವರಿಗೆ ಹಾಗೂ 18 ವರ್ಷಕ್ಕಿಂತ ಕೆಳಗಿನವರಿಗೆ ಬ್ರಹ್ಮರಥ ಎಳೆಯಲು ಅವಕಾಶವಿಲ್ಲ. ಕೋವಿಡ್-19 ರೋಗ ಲಕ್ಷಣ ಇರುವ ಸೇವಾರ್ಥಿಗಳಿಗೆ ರಥಬೀದಿ ಪ್ರವೇಶ ನಿಷೇಧಿಸಿದೆ ಎಂದು ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ. ಸೇವೆ ಮಾಡಲಿಚ್ಛಿಸುವ ಭಕ್ತರು ದೇವಳದ ಬ್ಯಾಂಕ್ ಆಫ್ ಬರೋಡಾ ಖಾತೆಗೆ (ಸಂಖ್ಯೆ 70570100004176)ಬಿಎಆರ್‌ಬಿಒವಿಜೆಎಸ್‌ಯುಬಿಆರ್ ಐಎಫ್‌ಎಸ್‌ಸಿ ಕೋಡ್ ಬಳಸಿ ಸೇವೆ ಒಂದರ ಸೇವಾ ಶುಲ್ಕ 25 ಸಾವಿರ ರೂ. ಆರ್‌ಟಿಜಿಎಸ್, ನೆಫ್ಟ್ ಅಥವಾ ನಗದು ಮೂಲಕ ದೇವಳಕ್ಕೆ ಜಮೆ ಮಾಡಿ ವಿವರವನ್ನು ದೇವಳಕ್ಕೆ ಇ-ಮೇಲ್ ಸಂದೇಶ ಅಥವಾ ದೇವಳದ ಮೊಬೈಲ್ ಸಂಖ್ಯೆ 9686254831ಯನ್ನು ಸಂಪರ್ಕಿಸಿ ತಿಳಿಸುವಂತೆ ದೇವಳದ ಆಡಳಿತಾಧಿಕಾರಿ ತಿಳಿಸಿದ್ದಾರೆ.